ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಸ್ಟಾರ್ ಬೌಲರ್ ಯಶ್ ದಯಾಳ್ ವಿರುದ್ಧ ಮಹಿಳೆಯೊಬ್ಬರು ವಂಚನೆ ಆರೋಪ ಮಾಡಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಮಾನಸಿಕ, ಭಾವನಾತ್ಮಕ ಹಾಗೂ ದೈಹಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಮಹಿಳೆಯೊಬ್ಬರು ಐಜಿಆರ್‌ಎಸ್ ಮೂಲಕ ಮುಖ್ಯಮಂತ್ರಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಮಹಿಳೆಯ ದೂರಿನ ಕುರಿತು ವರದಿ ನೀಡುವಂತೆ ಇಂದಿರಾಪುರಂ ವೃತ್ತ ನಿರೀಕ್ಷಕ (ಸಿಒ) ಮತ್ತು ಗಾಜಿಯಾಬಾದ್ ಪೊಲೀಸರಿಗೆ ಮುಖ್ಯಮಂತ್ರಿ ಕಚೇರಿ ಸೂಚಿಸಿದೆ. ಜುಲೈ 21ರ ಒಳಗೆ ವರದಿ ನೀಡುವಂತೆ ನಿರ್ದೇಶಿಸಿದೆ.
“ಕಳೆದ ಐದು ವರ್ಷಗಳಿಂದ ಯಶ್ ದಯಾಳ್ ಅವರೊಂದಿಗೆ ಸಂಬಂಧ ಹೊಂದಿದ್ದೇನೆ. ದಯಾಳ್, ಮದುವೆಯ ಭರವಸೆ ನೀಡಿ ನನ್ನ ಮೇಲೆ ಭಾವನಾತ್ಮಕ, ಮಾನಸಿಕ ಹಾಗೂ ದೈಹಿಕವಾಗಿ ಶೋಷಣೆ ಮಾಡಿದ್ದಾರೆ. ಅಲ್ಲದೆ, ನನ್ನನ್ನು ಅವರ ಕುಟುಂಬಕ್ಕೆ ಪರಿಚಯಿಸಿ ಗಂಡನಂತೆ ವರ್ತಿಸಿದ್ದರು. ಇದರಿಂದ ನಾನು ಅವರನ್ನು ಸಂಪೂರ್ಣವಾಗಿ ನಂಬಿದ್ದೆ” ಎಂದು ಯುವತಿ ಹೇಳಿಕೊಂಡಿದ್ದಾರೆ.
ಮೊದಲಿಗೆ ಜೂನ್ 14ರಂದು ದೂರು ದಾಖಲಿಸಿದ್ದೆ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆ, ಮುಖ್ಯಮಂತ್ರಿಗಳ ಕಚೇರಿಗೆ ದೂರು ದಾಖಲಿಸುತ್ತಿದ್ದೇನೆ ಎಂದಿದ್ದಾರೆ.




