ದೇಶದಲ್ಲಿ ತೀವ್ರವಾಗುತ್ತಿರುವ ಆರ್ಥಿಕ ಅಸಮಾನತೆಯ ಬಗ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ವಿಶ್ವ ಅಸಮಾನತೆ ವರದಿ-2026’ರ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಮಾತನಾಡಿರುವ ಅವರು, “ನಿಮ್ಮ ಅಭಿವೃದ್ಧಿ ಮಾದರಿಯು ಕೇವಲ ಆಯ್ದ ಬಂಡವಾಳಶಾಹಿಗಳಿಗಷ್ಟೇ ಮೀಸಲಾಗಿದೆ,” ಎಂದು ಆರೋಪಿಸಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಮಾತನಾಡಿದ ಖರ್ಗೆ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಎಂದಿಗೂ ಸಮಾನತೆಯ ಬಗ್ಗೆ ನಿಜವಾದ ಕಾಳಜಿ ಹೊಂದಿಲ್ಲ. ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುವುದು ಮತ್ತು ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುವುದೇ ಅವರ ಮನಸ್ಥಿತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಇಸ್ರೇಲ್ ಸಂಗದಲ್ಲಿ ‘ಶಿಕಾರಿ’- ಪ್ಯಾಲೆಸ್ತೀನ್ ಜೊತೆ ‘ಪರಾರಿ’; ಕಪಟ ನಾಟಕವಲ್ಲವೇ ಮೋದೀಜಿ?
World Inequality Lab ಪ್ರಕಟಿಸಿರುವ 2026ರ ವರದಿಯನ್ನು ಉಲ್ಲೇಖಿಸಿ ಖರ್ಗೆ ಅವರು ಕೇಂದ್ರದ ಆರ್ಥಿಕ ನೀತಿಗಳನ್ನು ಕಟುವಾಗಿ ಟೀಕಿಸಿದರು.
ಅವರು ನೀಡಿದ ಮಾಹಿತಿಯ ಪ್ರಕಾರ, ಭಾರತದ ಒಟ್ಟು ಸಂಪತ್ತಿನ ಸುಮಾರು ಶೇ. 40ರಷ್ಟು ಭಾಗವು ಕೇವಲ ಮೇಲ್‌ಸ್ತರದ ಶೇ. 1ರಷ್ಟು ಜನರ ಕೈಯಲ್ಲಿ ಕೇಂದ್ರೀಕೃತವಾಗಿದೆ. ದೇಶದ ಕೌಟುಂಬಿಕ ಆಸ್ತಿಯಲ್ಲಿ ಮೂರನೇ ಎರಡರಷ್ಟು ಭಾಗ, ಅಂದರೆ ಶೇ. 65ರಷ್ಟು ಆಸ್ತಿಯು ಮೇಲ್‌ಸ್ತರದ ಶೇ. 10ರಷ್ಟು ಜನರ ಪಾಲಾಗಿದೆ. ಆದಾಯದ ಹಂಚಿಕೆಯಲ್ಲಿಯೂ ಭಾರೀ ತಾರತಮ್ಯವಿದ್ದು, ರಾಷ್ಟ್ರೀಯ ಆದಾಯದ ಶೇ. 58ರಷ್ಟು ಪಾಲನ್ನು ಮೇಲ್‌ಸ್ತರದ ಶೇ. 10ರಷ್ಟು ಜನರು ಕಬಳಿಸುತ್ತಿದ್ದಾರೆ. ಆದರೆ, ದೇಶದ ತಳಮಟ್ಟದ ಶೇ. 50ರಷ್ಟು ಜನರಿಗೆ ಸಿಗುತ್ತಿರುವುದು ರಾಷ್ಟ್ರೀಯ ಆದಾಯದ ಕೇವಲ ಶೇ. 15ರಷ್ಟು ಪಾಲು ಮಾತ್ರ.
ಹಾಗೆಯೇ ತಮ್ಮ ಭಾಷಣದ ತುಣುಕನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಖರ್ಗೆ, “ನಿಮ್ಮ ಬೆಳವಣಿಗೆಯ ಮಾದರಿಯು ಕೇವಲ ನಿಮ್ಮ ನೆಚ್ಚಿನ, ಆಯ್ದ ಬಂಡವಾಳಶಾಹಿಗಳಿಗೆ ಸೇವೆ ಸಲ್ಲಿಸುತ್ತಿದೆ. ಕಷ್ಟಪಟ್ಟು ದುಡಿಯುವ ಜನರ ಹೋರಾಟದ ಬಗ್ಗೆ ನಿಮಗೆ ಕಿಂಚಿತ್ತೂ ಚಿಂತೆ ಇಲ್ಲ. ಇದೇನಾ ನಿಮ್ಮ ‘ವಿಕಸಿತ ಭಾರತ’ದ ದೃಷ್ಟಿಕೋನ?” ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.





