ಕಳೆದ ವಾರ ನವದೆಹಲಿಯಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ-2026’ರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಆರೋಪದ ಮೇಲೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ದೆಹಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಎಐ ಶೃಂಗಸಭೆಯಲ್ಲಿ ಭಾರತ-ಅಮೆರಿಕ ಒಪ್ಪಂದವನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಕಳೆದ ಶುಕ್ರವಾರವಷ್ಟೇ ಪ್ರತಿಭಟನೆ ನಡೆಸಿದ್ದರು.
ಶೃಂಗಸಭೆಯ ಪ್ರತಿಭಟನೆಯ ವೇಳೆ ಮಾತನಾಡಿದ್ದ ಉದಯ್ ಭಾನು ಚಿಬ್, ದೇಶದ ಯುವಕರು ಇನ್ನು ಮುಂದೆ ಮೌನವಾಗಿರುವುದಿಲ್ಲ ಎಂದು ಎಚ್ಚರಿಸಿದ್ದರು. ‘ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ’ ಎಂಬುದು ಕೇವಲ ಘೋಷಣೆಯಲ್ಲ, ಬದಲಿಗೆ ಕೋಟ್ಯಂತರ ನಿರುದ್ಯೋಗಿ ಯುವಕರ ಆಕ್ರೋಶದ ಧ್ವನಿಯಾಗಿದೆ. ಅಮೆರಿಕದೊಂದಿಗಿನ ಈ ವ್ಯಾಪಾರ ಒಪ್ಪಂದವು ನಮ್ಮ ರೈತರು ಮತ್ತು ಸಾರ್ವಜನಿಕರ ಹಿತಾಸಕ್ತಿಗಳಿಗೆ ಬಗೆದ ದ್ರೋಹವಾಗಿದ್ದು, ಇದರಿಂದ ಕೇವಲ ಅಮೆರಿಕಕ್ಕೆ ಮಾತ್ರ ಲಾಭವಾಗಲಿದೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಮ್ಮ ಹಕ್ಕು, ನಾವು ಯುವಕರ ಧ್ವನಿಯನ್ನು ಎತ್ತುವುದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದರು.
”ತಮ್ಮ ಪಕ್ಷವು ಎಐ ಶೃಂಗಸಭೆಗೆ ವಿರೋಧವಾಗಿಲ್ಲ, ಆದರೆ ಭಾರತದ ಹಿತಾಸಕ್ತಿಗಳೊಂದಿಗೆ ಮಾಡಿಕೊಳ್ಳುವ ಯಾವುದೇ ರಾಜಿಯನ್ನು ತಾವು ದೃಢವಾಗಿ ವಿರೋಧಿಸುವುದಾಗಿ ಅವರು ಸ್ಪಷ್ಟಪಡಿಸಿದ್ದರು. ದೇಶದ ರೈತರ ಹಿತಾಸಕ್ತಿಗಳನ್ನು ಕಡೆಗಣಿಸಿದಾಗ, ದೇಶವಿರೋಧಿ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದಾಗ ಮತ್ತು ಯುವಕರನ್ನು ನಿರುದ್ಯೋಗಿಗಳನ್ನಾಗಿ ಇರಿಸಿ ದ್ವೇಷದ ರಾಜಕಾರಣಕ್ಕೆ ತಳ್ಳಿದಾಗ, ನಾವು ಮೌನವಾಗಿರಬೇಕೇ? ಈ ದೇಶ 140 ಕೋಟಿ ನಾಗರಿಕರಿಗೆ ಸೇರಿದ್ದು. ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ ಎಂದ ಮಾತ್ರಕ್ಕೆ ಸಾರ್ವಜನಿಕರು ಮೌನವಾಗಿರಬೇಕು ಎಂದರ್ಥವಲ್ಲ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಉದಯ್ ಅವರು ವಾಗ್ದಾಳಿ ನಡೆಸಿದ್ದರು.
ಇದನ್ನು ಓದಿದ್ದೀರಾ? ಶೋಯೆಬ್ ಖಾನ್ | ಬಿಹಾರದ ಕುಗ್ರಾಮದಿಂದ ಯುಎಇ ವಿಶ್ವಕಪ್ ತಂಡದವರೆಗೆ ರೋಚಕ ಪಯಣ
ಈ ಮಧ್ಯೆ, ಉದಯ್ ಭಾನು ಚಿಬ್ ಬಂಧನವನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದ್ದು, ಹಿರಿಯ ನಾಯಕ ಭೂಪೇಶ್ ಬಘೇಲ್ ಅವರು ಕೇಂದ್ರ ಸರ್ಕಾರವನ್ನು ‘ಸರ್ವಾಧಿಕಾರಿ ಧೋರಣೆ” ಎಂದು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಕುರಿತು ಸುದೀರ್ಘ ಪೋಸ್ಟ್ ಹಾಕಿರುವ ಬಘೇಲ್, ದೆಹಲಿ ಪೊಲೀಸರ ಈ ಕ್ರಮವನ್ನು ಕಾನೂನುಬಾಹಿರ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯುವಜನರು ಧ್ವನಿ ಎತ್ತುವುದು, ಪ್ರಶ್ನೆಗಳನ್ನು ಕೇಳುವುದು ಮತ್ತು ಪ್ರತಿಭಟಿಸುವುದು ಅಪರಾಧವಲ್ಲ, ಅದು ಪ್ರಜಾಪ್ರಭುತ್ವದ ಪ್ರಬಲ ಅಸ್ತ್ರ ಎಂಬುದನ್ನು ಈ ಸರ್ವಾಧಿಕಾರಿ ಸರ್ಕಾರ ಮರೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಯುವ ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಹಿಂಸಾಚಾರ ಅಥವಾ ಪ್ರಚೋದನೆಯಿಲ್ಲದೆ, ಪ್ರಧಾನಮಂತ್ರಿಯವರ ರಾಜಿ ಒಪ್ಪಂದಗಳನ್ನು ಹಾಗೂ ಯುವಜನರ ಹೇಳಲಾಗದ ಸಂಕಟವನ್ನು ಶಾಂತಿಯುತವಾಗಿ ಮುಂದಿಟ್ಟಿದ್ದಾರೆ ಎಂದು ಬಘೇಲ್ ಸಮರ್ಥಿಸಿಕೊಂಡಿದ್ದಾರೆ. ಇದೊಂದು ದಿಟ್ಟ, ನ್ಯಾಯಸಮ್ಮತ ಹಾಗೂ ಪ್ರಜಾಸತ್ತಾತ್ಮಕ ಹೆಜ್ಜೆಯಾಗಿದ್ದು, ಇದನ್ನು ಹತ್ತಿಕ್ಕಲು ಸರ್ಕಾರ ಪೊಲೀಸ್ ದಬ್ಬಾಳಿಕೆಯ ಮೊರೆ ಹೋಗುತ್ತಿದೆ. ಈ ಕ್ರಮವು ಕೇವಲ ಕಾನೂನುಬಾಹಿರವಷ್ಟೇ ಅಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ. ಉದಯ್ ಭಾನು ಚಿಬ್ ಹಾಗೂ ಬಂಧಿತ ಎಲ್ಲಾ ಕಾರ್ಯಕರ್ತರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಅವರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.





