ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯಲ್ಲಿ (NCERT) ನೇಮಕಾತಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹುದ್ದೆಗಳು ಖಾಲಿಯಾಗಿವೆ. ಈ ಸಂಸ್ಥೆಯು ಸತತ ಎರಡು ವರ್ಷಗಳಿಂದ ಯಾವುದೇ ನೇಮಕಾತಿಯನ್ನೇ ನಡೆಸಿಲ್ಲ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಾಹಿತಿ ನೀಡಿದೆ.
ಪಶ್ಚಿಮ ಬಂಗಾಳದ AITC ಸಂಸದ ಸಮಿರುಲ್ ಇಸ್ಲಾಂ ಅವರು ಕೇಳಿದ್ದ ಪ್ರಶ್ನೆಗೆ ಶಿಕ್ಷಣ ಸಚಿವಾಲಯವು ಉತ್ತರಿಸಿದೆ. ಎನ್‌ಸಿಇಆರ್‌ಟಿಯಲ್ಲಿ ಭಾರೀ ಪ್ರಮಾಣದ ಸಿಬ್ಬಂದಿಗಳ ಕೊರತೆ ಇದೆ ಎಂಬುದನ್ನು ಒಪ್ಪಿಕೊಂಡಿದೆ.
NCERT ಮತ್ತು ಅದರ ಘಟಕ ಸಂಸ್ಥೆಗಳಲ್ಲಿ ಒಟ್ಟು 2,844 ಹುದ್ದೆಗಳನ್ನು ಮುಂಜೂರು ಮಾಡಲಾಗಿತ್ತು. ಆದರೆ, ಕೇವಲ 1,219 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದ 1,625 ಹುದ್ದೆಗಳು ಅಂದರೆ, 55% ಹುದ್ದೆಗಳು ನೇಮಕಾತಿಯಾಗದೆ ಖಾಲಿ ಉಳಿದಿವೆ.
NCERT ಅಡಿಯಲ್ಲಿ ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು, ಭೋಪಾಲ್‌ನಲ್ಲಿರುವ ಪಂಡಿತ್ ಸುಂದರ್‌ಲಾಲ್ ಶರ್ಮಾ ಕೇಂದ್ರ ವೃತ್ತಿಪರ ಶಿಕ್ಷಣ ಸಂಸ್ಥೆ, ಕೇಂದ್ರೀಯ ಶಿಕ್ಷಕರ ಶಿಕ್ಷಣ ಸಂಸ್ಥೆ ಹಾಗೂ ಕೇಂದ್ರೀಯ ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆ ಸೇರಿವೆ. ಈ ಎಲ್ಲ ಸಂಸ್ಥೆಗಳಲ್ಲಿ ಒಟ್ಟು 1,625 ಹುದ್ದೆಗಳು ಖಾಲಿ ಉಳಿದಿವೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
ಗಮನಾರ್ಹವಾಗಿ ಗ್ರೂಪ್ ಬಿ ಮತ್ತು ಸಿ ಹುದ್ದೆಗಳು ಹೆಚ್ಚಾಗಿ ಖಾಲಿ ಇವೆ. ಬೋಧಕ ಸಿಬ್ಬಂದಿಗಳ ಕೊರತೆಯೂ ಗಮನಾರ್ಹವಾಗಿದೆ. ಬೋಧಕೇತರ ಹುದ್ದೆಗಳಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ.

ಗ್ರೂಪ್ ಸಿ ಹುದ್ದೆಗಳು ಅತ್ಯಧಿಕ ಖಾಲಿ ಹುದ್ದೆಗಳಿವೆ. ಈ ವಿಭಾಗದಲ್ಲಿ ಪ್ರತಿ ನಾಲ್ಕು ಹುದ್ದೆಗಳಲ್ಲಿ ಸುಮಾರು ಮೂರು ಹುದ್ದೆಗಳು ಖಾಲಿ ಇವೆ. ಗ್ರೂಪ್ ಬಿ ಹುದ್ದೆಗಳು ಇದೇ ಮಾದರಿಯನ್ನು ತೋರಿಸುತ್ತವೆ. ಆದರೆ, ಗ್ರೂಪ್ ಎ ಹುದ್ದೆಗಳಲ್ಲಿ ಖಾಲಿ ಹುದ್ದೆಗಳಲ್ಲಿ ಸಂಖ್ಯೆ ಕೊಂಚ ಕಡಿಮೆ ಇದೆ.
2020–21 ಮತ್ತು 2021–22ರ ಅವಧಿಯಲ್ಲಿ NCERT ಯಾವುದೇ ನೇಮಕಾತಿಯನ್ನು ನಡೆಸಿಲ್ಲ ಎಂದು ಡೇಟಾ ತೋರಿಸುತ್ತದೆ. ಕಳೆದ ಐದು ವರ್ಷಗಳಲ್ಲಿ, NCERT ಅಡಿಯಲ್ಲಿ 229 ಬೋಧಕ ಸಿಬ್ಬಂದಿ ಮತ್ತು 216 ಬೋಧಕೇತರ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. 2022–23ರಲ್ಲಿ, ಕೇವಲ ಒಬ್ಬ ಬೋಧಕೇತರ ಸಿಬ್ಬಂದಿಯನ್ನು ಮಾತ್ರ ನೇಮಿಸಿಕೊಳ್ಳಲಾಗಿದೆ.
ಈ ಲೇಖನ ಓದಿದ್ದೀರಾ?: ದಾರುಣವಾಗಿದೆ ಬಾಲ ನ್ಯಾಯ ವ್ಯವಸ್ಥೆ; ನ್ಯಾಯಕ್ಕಾಗಿ ಕಾಯುತ್ತಿದ್ದಾರೆ 50,000 ಬಾಲಾಪರಾಧಿಗಳು
ದೈನಂದಿನ ಕೆಲಸವನ್ನು ನಿರ್ವಹಿಸಲು, NCERT ಗುತ್ತಿಗೆ ಆಧಾರದ ಸಿಬ್ಬಂದಿಗಳನ್ನು ಹೆಚ್ಚಾಗಿ ಅವಲಂಬಿಸಿದೆ. 2022–23ರಲ್ಲಿ, ಸಂಸ್ಥೆಯು 760 ಗುತ್ತಿಗೆ ನೌಕರರನ್ನು ಒಳಗೊಂಡಿತ್ತು. 2024–25ರಲ್ಲಿ ಗುತ್ತಿಗೆ ಸಿಬ್ಬಂದಿಗಳ ಸಂಖ್ಯೆ ಸುಮಾರು 655 ರಷ್ಟಿತ್ತು ಎಂದು ಸಚಿವಾಲಯದ ಮಾಹಿತಿ ವಿವರಿಸಿದೆ.
ಶಿಕ್ಷಣ ರಾಜ್ಯ ಸಚಿವ ಜಯಂತ್ ಚೌಧರಿ ಸಂಸತ್ತಿನಲ್ಲಿ ನೇಮಕಾತಿ ನಿರಂತರ ಪ್ರಕ್ರಿಯೆ ಎಂದು ಹೇಳಿದ್ದಾರೆ. ಸಂಬಂಧಿತ ನೇಮಕಾತಿ ನಿಯಮಗಳ ನಿಬಂಧನೆಗಳ ಪ್ರಕಾರ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.




