ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಭಾರತವು ಸುಂಕ ರಿಯಾಯಿತಿಗಳನ್ನು ನೀಡಲು ನಿರ್ಧರಿಸಿರುವ ಅಮೆರಿಕದ ಸರಕುಗಳ ಪಟ್ಟಿಯನ್ನು ಕೇಂದ್ರವು ಶನಿವಾರ ಪ್ರಕಟಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, “ಭಾರತವು ಅಮೆರಿಕದ ಕೆಲವು ನಿರ್ದಿಷ್ಟ ಉತ್ಪನ್ನಗಳ ಮೇಲೆ ಶೂನ್ಯ ಸುಂಕವನ್ನು ವಿಧಿಸಲು ಒಪ್ಪಿಕೊಂಡಿದೆ. ಇವುಗಳಲ್ಲಿ ಆಲ್ಕೊಹಾಲ್ಯುಕ್ತ ಪಾನೀಯಗಳು (ವೈನ್ ಮತ್ತು ಸ್ಪಿರಿಟ್ಸ್), ಸೌಂದರ್ಯವರ್ಧಕಗಳು (Cosmetics), ವೈದ್ಯಕೀಯ ಉಪಕರಣಗಳು, ಮತ್ತು ಪಶುಸಂಗೋಪನೆಯಲ್ಲಿ ಬಳಸುವ DDGS (ಒಣಗಿದ ಡಿಸ್ಟಿಲರ್ಸ್ ಧಾನ್ಯಗಳು) ಸೇರಿವೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ತೈಲ ನಿರ್ಬಂಧ; ಇಂಧನ ಭದ್ರತೆ ಸರ್ಕಾರದ ಪ್ರಮುಖ ಆದ್ಯತೆ: ವಿದೇಶಾಂಗ ಸಚಿವಾಲಯ
“ಈ ಉತ್ಪನ್ನಗಳ ಮೇಲಿನ ಸುಂಕ ಕಡಿತದಿಂದ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾಗಲಿದೆ, ಇದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳು ಅಗ್ಗದ ಬೆಲೆಯಲ್ಲಿ ಸಿಗಲಿವೆ” ಎಂದು ಗೋಯಲ್ ತಿಳಿಸಿದ್ದಾರೆ.
ಹಾಗೆಯೇ, “ಅಮೆರಿಕದ ಉತ್ಪನ್ನಗಳಿಗೆ ಅವಕಾಶ ನೀಡಿದ್ದರೂ, ಭಾರತದ ರೈತರ ಹಿತಾಸಕ್ತಿಯನ್ನು ಕಡೆಗಣಿಸಿಲ್ಲ. ಅಕ್ಕಿ, ಗೋಧಿ, ಜೋಳ, ಹಾಲು ಮತ್ತು ಡೈರಿ ಉತ್ಪನ್ನಗಳಂತಹ ಸೂಕ್ಷ್ಮ ಕೃಷಿ ವಲಯಗಳನ್ನು ಈ ಒಪ್ಪಂದದಿಂದ ಹೊರಗಿಡಲಾಗಿದ್ದು, ಇವುಗಳ ಮೇಲೆ ಯಾವುದೇ ರಿಯಾಯಿತಿ ನೀಡಿಲ್ಲ” ಎಂದು ಹೇಳಿದರು.
ಯಾವುದಕ್ಕೆಲ್ಲ ರಿಯಾಯಿತಿ ಇದೆ?
- ಆಲ್ಕೊಹಾಲ್ಯುಕ್ತ ಪಾನೀಯಗಳು: ವೈನ್ ಮತ್ತು ಸ್ಪಿರಿಟ್ಸ್
- ಡಿಡಿಜಿಎಸ್ (ಎಥೆನಾಲ್ ಉತ್ಪಾದನೆಯ ಸಮಯದಲ್ಲಿ ಧಾನ್ಯಗಳ ಉಳಿದಿರುವ ಪೋಷಕಾಂಶ-ಭರಿತ ಉಪಉತ್ಪನ್ನ)
- ಪಶು ಆಹಾರಕ್ಕಾಗಿ ಕೆಂಪು ಜೋಳ
- ಬಾದಾಮಿ, ಗೋಡಂಬಿಯಂತಹ ಮರದಲ್ಲಿ ಬೆಳೆಯುವ ಬೀಜಗಳು
- ಸೋಯಾಬೀನ್ ಎಣ್ಣೆ
- ತಾಜಾ ಮತ್ತು ಸಂಸ್ಕರಿಸಿದ ಹಣ್ಣು
- ಸೌಂದರ್ಯವರ್ಧಕಗಳು
- ಅಜೈವಿಕ ಮತ್ತು ಸಾವಯವ ರಾಸಾಯನಿಕಗಳು
- ಕೆಲವು ವೈದ್ಯಕೀಯ ಸಾಧನಗಳು
- ಕಂಪ್ಯೂಟರ್-ಸಂಬಂಧಿತ ಉತ್ಪನ್ನಗಳು





