ಮೋದಿ ಮತ್ತು ಶಾ ಅವರ ಮೂಗುದಾರವನ್ನು ಹರಿದೊಗೆದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಬಿಜೆಪಿಯ ಏಕೈಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಲೋಕಸಭಾ ಚುನಾವಣೆಯ ಸೋಲಿನ ಹೊಣೆ ಹೊರಿಸಿ ಅವರನ್ನು ಕೆಳಗಿಳಿಸುವ ಊಹಾಪೋಹಗಳಿಗೆ ಇತ್ತೀಚಿನ ದಿನಗಳಲ್ಲಿ ರೆಕ್ಕಪುಕ್ಕಗಳು ಮೂಡಿವೆ.
ರಾಮಮಂದಿರ ರಾಜಕಾರಣದ ಕೇಂದ್ರಬಿಂದುವಾದ ಅಯೋಧ್ಯೆಯಲ್ಲಿ ಸೋತು ಉಂಟಾದ ಮುಖಭಂಗದ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ ಬಿಜೆಪಿ. ಐದು ತಿಂಗಳ ಹಿಂದೆಯಷ್ಟೇ ಭವ್ಯ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ಬಿಜೆಪಿ ನೆರವೇರಿಸಿ ಭಾರೀ ಪ್ರಚಾರ ಪಡೆದಿತ್ತು. ಈ ವಿಷಯವನ್ನು ಬಿಜೆಪಿಯು ಲೋಕಸಭಾ ಚುನಾವಣೆಗಳ ಚರ್ಚೆಯ ವಿಚಾರವನ್ನಾಗಿ ಬಳಸಿತ್ತು. ರಾಮಮಂದಿರ ನಿರ್ಮಾಣ ನಂತರದ ಮೊದಲ ಚುನಾವಣೆಯಲ್ಲಿಯೇ ಅಯೋಧ್ಯೆ ಬಿಜೆಪಿಯನ್ನು ಸೋಲಿಸಿತ್ತು.
ಗುರುವಾರ ಉತ್ತರಪ್ರದೇಶದ ರಾಜಧಾನಿ ಲಖನೌದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯ ಸಮಾಲೋಚನಾ ಸಭೆ ನಡೆಯಿತು. ತಮ್ಮ ಮುಖ್ಯಮಂತ್ರಿ ಗದ್ದುಗೆ ಅಲ್ಲಾಡುತ್ತಿರುವುದನ್ನೂ ಲೆಕ್ಕಿಸದೇ ಯೋಗಿ ಈ ಸಭೆ ಕರೆದಿದ್ದರು. ಉತ್ತರಪ್ರದೇಶದ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಸೀಟುಗಳ ಸಂಖ್ಯೆ 62ರಿಂದ ಕೇವಲ 33ಕ್ಕೆ ಕುಸಿದಿರುವ ಸಂಗತಿ ಈಗಾಗಲೇ ಜನಜನಿತ. ಮೋದಿ ಮತ್ತು ಶಾ ಅವರ ಮೂಗುದಾರವನ್ನು ಹರಿದೊಗೆದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಬಿಜೆಪಿಯ ಏಕೈಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಲೋಕಸಭಾ ಚುನಾವಣೆಯ ಸೋಲಿನ ಹೊಣೆ ಹೊರಿಸಿ ಅವರನ್ನು ಕೆಳಗಿಳಿಸುವ ಊಹಾಪೋಹಗಳಿಗೆ ಇತ್ತೀಚಿನ ದಿನಗಳಲ್ಲಿ ರೆಕ್ಕಪುಕ್ಕಗಳು ಮೂಡಿವೆ.
ಮೋದಿ-ಶಾ ಅವರೊಂದಿಗೆ ಗುರುತಿಸಿಕೊಂಡಿರುವ ಉಪಮುಖ್ಯಮಂತ್ರಿಗಳಾದ ಕೇಶವಪ್ರಸಾದ್ ಮೌರ್ಯ ಮತ್ತು ಬ್ರಿಜೇಶ್ ಪಾಠಕ್ ಇಬ್ಬರೂ ಈ ಸಭೆಗೆ ಬಂದಿರಲಿಲ್ಲ. ಮೌರ್ಯ ಅವರಂತೂ ಯೋಗಿ ವಿರುದ್ಧ ಮುಸುಕಿನ ಯುದ್ಧ ಸಾರಿದ್ದಾರೆ. ಸರ್ಕಾರಕ್ಕಿಂತ ಪಕ್ಷ ದೊಡ್ಡದು ಎಂಬ ಹೇಳಿಕೆಯನ್ನು ಸಭೆಯ ದಿನದಂದೂ ಅವರು ಪುನರುಚ್ಚರಿಸಿದ್ದರು.
ಅಯೋಧ್ಯೆಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಬಿಜೆಪಿ ಹುಡುಕಿರುವ ದಾರಿಯಾದರೂ ಯಾವುದು ಎಂಬುದು ಕುತೂಹಲಕಾರಿ. ಈ ಕುರಿತು ತಿಳಿದುಕೊಳ್ಳೋಣ. ಆದರೆ ಅದಕ್ಕೆ ಮೊದಲು ಅಯೋಧ್ಯೆ ಗೆಲುವು ಬಿಜೆಪಿ ಕೈ ತಪ್ಪಿದ ಕುರಿತು ಕೆಲ ವಿವರಗಳನ್ನು ನೆನಪಿಸಿಕೊಳ್ಳೋಣ.
ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಉತ್ತರಪ್ರದೇಶ ಹಲವು ಅನಿರೀಕ್ಷಿತ ಆಘಾತಗಳನ್ನು ನೀಡಿತ್ತು. ಈ ಪೈಕಿ ಅಯೋಧ್ಯೆಯ ಸೋಲು ಬಿಜೆಪಿಯ ಗಾಯದ ಮೇಲೆ ಉಪ್ಪಿನ ಹರಳುಗಳನ್ನು ಉಜ್ಜಿದಂತಹುದು. ಫೈಜಾಬಾದ್ ಮೀಸಲು ಕ್ಷೇತ್ರವೇನೂ ಅಲ್ಲ. ಈ ಸಾಮಾನ್ಯ ಕ್ಷೇತ್ರದಿಂದ ದಲಿತ ಅಭ್ಯರ್ಥಿಯನ್ನು ಇಳಿಸಿ ಗೆಲ್ಲಿಸಿಕೊಂಡಿತ್ತು ಸಮಾಜವಾದಿ ಪಾರ್ಟಿ.

ಸಮಾಜವಾದಿ ಪಾರ್ಟಿಯ ಅವಧೇಶ್ ಪ್ರಸಾದ್ ಬಿಜೆಪಿ ಅಭ್ಯರ್ಥಿ ಲಲ್ಲೂಸಿಂಗ್ ಅವರನ್ನು 54 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು. ಬಹುಜನ ಸಮಾಜ ಪಾರ್ಟಿಯ ಸಚ್ಚಿದಾನಂದ ಪಾಂಡೆ 46,407 ಮತಗಳನ್ನೂ, ಸಿಪಿಐನ ಅರವಿಂದ್ ಸೇನ್ 15 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದರು. ಬಿ.ಎಸ್.ಪಿ. ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷಗಳು ಒಂದು ವೇಳೆ ‘ಇಂಡಿಯಾ’ ಮೈತ್ರಿಕೂಟದ ಜೊತೆ ಸೇರಿದ್ದಲ್ಲಿ ಅವಧೇಶ್ ಗೆಲುವಿನ ಅಂತರ ಒಂದು ಲಕ್ಷ ಮತಗಳನ್ನು ದಾಟುತ್ತಿತ್ತು.
ಅವಧೇಶ್ ಪ್ರಸಾದ್ ಸಮಾಜವಾದಿ ಪಾರ್ಟಿಯ ಹಿರಿಯ ದಲಿತ ನಾಯಕ. ಈ ಪಕ್ಷ ಹುಟ್ಟಿದಾಗಿನಿಂದ ಜೊತೆಗಿರುವವರು. ಈಗಲೂ ಫೈಜಾಬಾದ್ ಎಂದೂ ಕರೆಯಲಾಗುವ ಈ ಲೋಕಸಭಾ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದವರು. ಇದೇ ಲೋಕಸಭಾ ಕ್ಷೇತ್ರದ ಮಿಲ್ಕೀಪುರ ಮೀಸಲು ವಿಧಾನಸಭಾ ಕ್ಷೇತ್ರದಿಂದ ಒಂಬತ್ತು ಸಲ ಆರಿಸಿ ಬಂದಿರುವವರು. ಐದು ಸಲ ಕ್ಯಾಬಿನೆಟ್ ಮಂತ್ರಿ ಆಗಿದ್ದವರು. ಕಳೆದ ಎರಡೂ ಸಲ ಬಿಜೆಪಿಯ ಲಲ್ಲೂಸಿಂಗ್ ಅವರನ್ನು ಈ ಕ್ಷೇತ್ರ ಗೆಲ್ಲಿಸಿತ್ತು. ಈ ಸಲವೂ ಅವರನ್ನೇ ಹೂಡಿತ್ತು ಬಿಜೆಪಿ. ಅಂದ ಹಾಗೆ ಈ ಲೋಕಸಭಾ ಕ್ಷೇತ್ರದ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳು ಬಿಜೆಪಿ ಶಾಸಕರನ್ನು ಹೊಂದಿವೆ. ಅವಧೇಶ್ ಒಬ್ಬರೇ ಬಿಜೆಪಿಯೀತರ ಪಕ್ಷದವರಾಗಿದ್ದರು.
ಪ್ರತಿಪಕ್ಷಗಳು ಗೆದ್ದರೆ ರಾಮಮಂದಿರದ ಮೇಲೆ ಬುಲ್ಡೋಜರ್ ಹತ್ತಿಸುತ್ತಾರೆ, ರಾಮಮಂದಿರಕ್ಕೆ ಬಾಬ್ರಿ ಬೀಗವನ್ನು ಜಡಿದುಬಿಡುತ್ತಾರೆಂದೂ ಮೋದಿಯವರು ಚುನಾವಣಾ ಭಾಷಣ ಮಾಡಿದ್ದರು. ರಾಮಮಂದಿರದ ವಿಷಯ ಅಯೋಧ್ಯೆಯ ಹೊರಗೆ ಬಿಜೆಪಿಗೆ ಒಂದಷ್ಟು ಪ್ರಮಾಣದಲ್ಲಿ ಬೆಂಬಲವನ್ನು ಗಟ್ಟಿಗೊಳಿಸಿರಬಹುದು. ಆದರೆ ಅಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿ ಸೋತು ಹೋಯಿತು ಕೇಸರಿ ಪಕ್ಷ.
ಲಲ್ಲೂಸಿಂಗ್ ಅವರು ಸಂವಿಧಾನ ಬದಲಿಸುವ ಕುರಿತು ಕಳೆದ ಏಪ್ರಿಲ್ 13ರಂದು ಮಿಲ್ಕೀಪುರದಲ್ಲಿ ಮಾಡಿದ್ದ ಭಾಷಣದ ವಿಡಿಯೋ ಲೋಕಸಭಾ ಚುನಾವಣೆಯ ದಿನಗಳಲ್ಲಿ ತೀವ್ರ ವೈರಲ್ ಆಗಿತ್ತು. ಅಯೋಧ್ಯೆಯ ಈ ಕ್ಷೇತ್ರದ ಶೇ.26ರಷ್ಟು ಮತದಾರರು ದಲಿತರು. ಚಮಾರ್, ರಾವತ್ ಹಾಗೂ ಕೋರಿ ಸಮುದಾಯಗಳಿಗೆ ಸೇರಿದವರು. ಸಂವಿಧಾನ ಬದಲಿಸಿದರೆ ಮೀಸಲಾತಿ ಕೈ ತಪ್ಪಲಿದೆಯೆಂಬ ಶಂಕೆ ಈ ದಲಿತ ಸಮುದಾಯಗಳಲ್ಲಿ ಮೂಡಿತ್ತು. ಅಯೋಧ್ಯೆಯ ರಾಮಮಂದಿರ ಸಂಭ್ರಮೋತ್ಸವಗಳಲ್ಲಿ ಬಲಿಷ್ಠ ಜಾತಿಗಳದೇ ಪಾರುಪತ್ಯ ಕಾರುಬಾರು ನಡೆಯಿತು. ತಮ್ಮನ್ನು ನಿರ್ಲಕ್ಷಿಸಲಾಯಿತು ಎಂಬ ಪರಕೀಯ ಭಾವನೆ ದಲಿತರು, ಹಿಂದುಳಿದವರು ಹಾಗೂ ಬಡಶ್ರಮಿಕರಲ್ಲಿ ನೆಲೆಸಿತ್ತು. ಜೊತೆಗೆ ಈ ಕ್ಷೇತ್ರದ ಮುಸ್ಲಿಮ್ ಮತದಾರರ ಸಂಖ್ಯೆ ಐದು ಲಕ್ಷ. ದಲಿತರು ಮತ್ತು ಮುಸ್ಲಿಮರು ಅಖಿಲೇಶ್ ಅವರ ಸಮಾಜವಾದಿ ಪಾರ್ಟಿಗೆ ಒಲಿದರು.

ಅಯೋಧ್ಯೆಯ ರಾಮಮಂದಿರ ನಿರ್ಮಾಣ ಮತ್ತು ಅಯೋಧ್ಯಾ ಟೌನ್‌ನ ಅಭಿವೃದ್ಧಿಗೇ ಎಲ್ಲ ಗಮನವನ್ನು ನೀಡಿದ ಬಿಜೆಪಿ ಸರ್ಕಾರಗಳು, ಗ್ರಾಮೀಣ ಅಯೋಧ್ಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದವು. ಹೀಗಾಗಿ ಬಿಜೆಪಿ ಈ ಲೋಕಸಭಾ ಚುನಾವಣೆಯಲ್ಲಿ ಗ್ರಾಮೀಣ ಅಯೋಧ್ಯೆಯ ಮುನಿಸನ್ನು ಭರಿಸಬೇಕಾಯಿತು.
ರಾಮಮಂದಿರವನ್ನು ಸುಂದರಗೊಳಿಸುವ ಮತ್ತು ಅಯೋಧ್ಯೆಯ ರಾಮಪಥ ಮತ್ತು ಭಕ್ತಿಪಥಗಳನ್ನು ಅಗಲ ಮಾಡುವ ಯೋಜನೆಯಲ್ಲಿ ಮನೆಮಠ, ಅಂಗಡಿ-ಮುಂಗಟ್ಟುಗಳನ್ನು ಕಳೆದುಕೊಂಡವರಿಗೆ ಸಾಕಷ್ಟು ಪರಿಹಾರ ದೊರೆತಿಲ್ಲ. ಅಂಗಡಿ ಮುಂಗಟ್ಟುಗಳ ಕಳೆದುಕೊಂಡವರಿಗೆ ‘ಅಯೋಧ್ಯಾ ಹಾಟ್’ನಲ್ಲಿ ಬದಲಿ ಸ್ಥಳವೇನೋ ದೊರೆಯಿತು. ಆದರೆ ಅದು ಜನಸಂದಣಿಯಿಲ್ಲದ ಜಾಗ. ವ್ಯಾಪಾರ ಭಣಭಣ.
ಅಯೋಧ್ಯೆಯ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯಾಪಾರ ನಡೆದಿದ್ದು ನೆಲ ಖರೀದಿಸಿರುವವರ ಪೈಕಿ ರಾಜಕಾರಣಿಗಳು, ಅಧಿಕಾರಿಗಳು, ಕಾರ್ಪೊರೇಟ್ ಕಂಪನಿಗಳು, ಧಾರ್ಮಿಕ-ಆಧ್ಯಾತ್ಮಿಕ ಟ್ರಸ್ಟುಗಳದೇ ದೊಡ್ಡ ಸಂಖ್ಯೆ. ಈ ಎಲ್ಲ ಅಂಶಗಳು ಅಯೋಧ್ಯೆಯಲ್ಲಿ ಬಿಜೆಪಿಯ ಸೋಲಿಗೆ ಕಾರಣವಾದವು.

ಈ ನಡುವೆ ಶಾಸಕರು ಸಂಸದರಾಗಿ ಆಯ್ಕೆಯಾಗಿರುವ ಕಾರಣ ವಿಧಾನಸಭೆಯ ಒಂಬತ್ತು ಸ್ಥಾನಗಳು ತೆರವಾಗಿವೆ. ಈ ಪೈಕಿ ಅವಧೇಶ್ ಅವರು ಪ್ರತಿನಿಧಿಸಿದ್ದ ಮಿಲ್ಕೀಪುರ ಮೀಸಲು ವಿಧಾನಸಭಾ ಕ್ಷೇತ್ರವೂ ಸೇರಿದೆ. ಕಾನ್ಪುರದ ಸೀಸಾಮವು ಕ್ಷೇತ್ರ ಬೇರೊಂದು ಕಾರಣಕ್ಕೆ ತೆರವಾಗಿದೆ. ಈ ಕ್ಷೇತ್ರದಿಂದ ಗೆದ್ದಿದ್ದವರು ಸಮಾಜವಾದಿ ಪಾರ್ಟಿ ಶಾಸಕ ಇರ್ಫಾನ್ ಸೋಲಂಕಿ. ಅಗ್ನಿಸ್ಪರ್ಶದ ಕೇಸಿನಲ್ಲಿ ಸಜೆಯಾದ ನಂತರ ಜೈಲಿಗೆ ಹೋಗಬೇಕಾಯಿತು. ಈ ಹಿನ್ನೆಲೆಯಲ್ಲಿ ಅವರ ವಿಧಾನಸಭಾ ಸದಸ್ಯತ್ವವನ್ನು ರದ್ದು ಮಾಡಲಾಯಿತು. ಹೀಗಾಗಿ ಒಟ್ಟು ಹತ್ತು ಕ್ಷೇತ್ರಗಳಿಗೆ ಸದ್ಯದಲ್ಲೇ ಉಪಚುನಾವಣೆಗಳು ನಡೆಯಬೇಕಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಈ 10 ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದದ್ದು ಮೂರನ್ನು ಮಾತ್ರ. ಐದು ಕ್ಷೇತ್ರಗಳು ಸಮಾಜವಾದಿ ಪಾರ್ಟಿಯ ಪಾಲಾಗಿದ್ದವು. ಸಮಾಜವಾದಿ ಪಾರ್ಟಿಯ ಬೆಂಬಲದೊಂದಿಗೆ ರಾಷ್ಟ್ರೀಯ ಲೋಕದಳ ಒಂದು ಸೀಟನ್ನು ಗೆದ್ದಿತ್ತು. ಮತ್ತೊಂದು ಕ್ಷೇತ್ರವನ್ನು ಬಿಜೆಪಿಯ ಮಿತ್ರಪಕ್ಷ ನಿಷಾದ್ ಪಾರ್ಟಿಯ ಪಾಲಾಗಿತ್ತು.
ಇತ್ತೀಚೆಗೆ ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡನ್ನು ಗೆದ್ದಿತ್ತು. ಲೋಕಸಭೆ ಚುನಾವಣೆಯಲ್ಲಿ ಸರಳ ಬಹುಮತವನ್ನೂ ಗೆಲ್ಲಲಾಗದೆ ಹೋದ ಬಿಜೆಪಿಗೆ ಬಿದ್ದಿರುವ ಎರಡನೆಯ ಹೊಡೆತವಿದು.
ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಹತ್ತು ಸ್ಥಾನಗಳಿಗೆ ನಡೆಯುವ ಈ ಉಪಚುನಾವಣೆಗಳನ್ನು ಗೆಲ್ಲಲು ಬಿಜೆಪಿ ತನ್ನ ಎಲ್ಲ ಶಕ್ತಿಯುಕ್ತಿಗಳನ್ನು ಹೂಡಲಿದೆ, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ಆರಂಭವಾಗಿದೆ. ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದವರು ಅವಧೇಶ್ ಪ್ರಸಾದ್. ಶಾಸಕರಾಗಿ ಈವರೆಗೆ ಅವರು ಪ್ರತಿನಿಧಿಸಿದ್ದ ಕ್ಷೇತ್ರ ಮಿಲ್ಕೀಪುರ.
ಅಯೋಧ್ಯೆಯ ಸೋಲಿನ ಸೇಡನ್ನು ಮಿಲ್ಕೀಪುರದ ಗೆಲುವಿನ ಮೂಲಕ ತೀರಿಸಿಕೊಳ್ಳಬೇಕೆಂಬ ಗಟ್ಟಿ ನಿರ್ಧಾರ ಮೂಡಿದೆ. ಯೋಗಿ ನೇತೃತ್ವದ ಸಭೆಯ ಈ ಆಲೋಚನೆಗೆ ಮೋದಿ-ಶಾ ಸಮ್ಮತಿಯ ಮೊಹರು ಬೀಳಬೇಕಿದೆ. ಈ ನಡುವೆ ಮಿಲ್ಕೀಪುರ ವಿಧಾನಸಭಾ ಕ್ಷೇತ್ರದಿಂದ ಅವಧೇಶ್ ಪ್ರಸಾದ್ ಅವರ ಮಗ ಅಜಿತ್ ಅವರನ್ನು ಕಣಕ್ಕೆ ಇಳಿಸಲು ಸಮಾಜವಾದಿ ಪಾರ್ಟಿ ಸಿದ್ಧತೆ ನಡೆಸಿದೆ. ಇಂಡಿಯಾ ಒಕ್ಕೂಟದ ಈ ಅಸ್ತ್ರಕ್ಕೆ ಬಿಜೆಪಿ ಹೂಡಲಿರುವ ಪ್ರತ್ಯಸ್ತ್ರ ಯಾವುದೆಂಬುದು ಕುತೂಹಲಕಾರಿ.
ಏನೇ ಆದರೂ ಮಿಲ್ಕೀಪುರ ಮೀಸಲು ಕ್ಷೇತ್ರ ದೇಶ ರಾಜಕಾರಣದ ಪ್ರತಿಷ್ಠೆಯ ಕಣವಾಗಲಿದೆ. ಅಯೋಧ್ಯೆಯ ಸೇಡನ್ನು ತೀರಿಸಿಕೊಳ್ಳುವ ಬಿಜೆಪಿಯ ಬಯಕೆ ಈಡೇರುವುದೇ ಕಾದು ನೋಡಬೇಕಿದೆ.





