ಹಂಸಲೇಖರು ದಕ್ಷಿಣ ಭಾರತದ ಪ್ರತಿಷ್ಠಿತ ಹಿನ್ನೆಲೆ ಗಾಯಕರೊಂದಿಗೆ ಕೆಲಸ ಮಾಡಿದ್ದಾರೆ. ಅವರ ಸಾರಥ್ಯದಲ್ಲಿ ಕನ್ನಡ ಚಲನಚಿತ್ರ ಸಂಗೀತ ಇತ್ತೀಚಿನ ವರ್ಷಗಳಲ್ಲಿ ಅದ್ಭುತವಾಗಿ ಬೆಳೆದಿದೆ. ಜನಪ್ರಿಯ ಗೀತರಚನಾಕಾರರೂ ಆದ ಹಂಸಲೇಖರು ಕನ್ನಡ ಚಲನಚಿತ್ರ ಸಂಗೀತದ ಧ್ವನಿಯನ್ನು ಬದಲಿಸಿದ ವ್ಯಕ್ತಿಯಾಗಿದ್ದಾರೆ. ಗ್ರಾಮೀಣ ಭಾಗದ ದೇಸಿ ಸಂಸ್ಕೃತಿ ಮತ್ತು ಕಲೆಯ ಪ್ರತಿಭಾವಂತರನ್ನು ರೂಪಿಸುವ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಚಲನಚಿತ್ರ ಸಂಗೀತ ಕ್ಷೇತ್ರದ ಅಭ್ಯುದಯಕ್ಕಾಗಿ ಹಂಸಲೇಖ ಅವರು ನೀಡಿರುವ ಕೊಡುಗೆ ಅಮೂಲ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯನವರ ಸರ್ಕಾರ ಹಂಸಲೇಖ ಅವರಿಂದ ʼದಸರಾ-2023ʼ ಉದ್ಘಾಟನೆ ಮಾಡಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ. ಈ ನಿರ್ಧಾರ ರಾಜ್ಯ ಸರ್ಕಾರದ ಘನತೆಯನ್ನು ಹೆಚ್ಚಿಸಿದೆ.
ಹಂಸಲೇಖ ಕರ್ನಾಟಕ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜೂನ್ 23, 1951ರಂದು ಜನಿಸಿದರು. ತಮ್ಮ 10ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. ಅವರ ಔಪಚಾರಿಕ ಕಲಿಕೆ ಅಪೂರ್ಣಗೊಂಡರೂ ಮೈಸೂರು ವಿಶ್ವವಿದ್ಯಾಲಯದ ದೂರಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಜಾನಪದ ವಿಷಯದಲ್ಲಿ ಎಂಎ ಸ್ನಾತಕೋತ್ತರ ಪದವಿ ಗಳಿಸಿದರು. ಅವರು ಕನ್ನಡ ಬಲ್ಲಾಡ್ ಸಂಸ್ಕೃತಿಯಿಂದ ಪ್ರಭಾವಿತರಾಗಿ ತಮ್ಮ ಸೃಜನಶೀಲ ಸಂಗೀತ ಮತ್ತು ಸಾಹಿತ್ಯ ಸಾಮರ್ಥ್ಯಗಳನ್ನು ರೂಪಿಸಿಕೊಂಡರು.
1980ರ ದಶಕದ ಉತ್ತರಾರ್ಧದಿಂದ ಕನ್ನಡ ಚಲನಚಿತ್ರ ಸಂಯೋಜಕ, ಸಂಗೀತಗಾರ, ಗೀತರಚನೆಕಾರ, ಸಂಭಾಷಣೆ ಬರಹಗಾರ, ಚಿತ್ರಕಥೆ ಬರಹಗಾರ, ಮೊದಲಾದ ಸೃಜನಶೀಲ ಕೆಲಸಗಳಲ್ಲಿ ನಿರತರಾಗಿದ್ದಾರೆ. ಅವರು ದಕ್ಷಿಣ ಭಾರತದ ಅನೇಕ ಹಿನ್ನೆಲೆ ಗಾಯಕರು ಮತ್ತು ಸಂಗೀತ ಸಂಯೋಜಕರ ಮಾರ್ಗದರ್ಶಕರಾಗಿದ್ದಾರೆ. ಹಂಸಲೇಖರು 1990ರ ದಶಕದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಲತಾ ಅವರನ್ನು ವಿವಾಹವಾದರು. ಅವರಿಗೆ ಅಲಂಕಾರ್ ಎಂಬ ಮಗ ಮತ್ತು ನಂದಿನಿ ಎಂಬ ಮಗಳು ಇದ್ದಾರೆ. ಅಲಂಕಾರ್ ತನ್ನ ತಂದೆಯ ಸಂಗೀತ ನಿರ್ದೇಶನ ಕೃಷಿಯಲ್ಲಿ ಮುಂದುವರೆದಿದ್ದರೆ, ಮಗಳು ನಂದಿನಿ ಹಿನ್ನೆಲೆಗಾಯಕಿಯಾಗಿ ಮತ್ತು ಸಮಾಜ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಸಮುದಾಯಗಳ ಯುವಜನತೆಗೆ ಉಚಿತ ಶಿಕ್ಷಣ ಸಂಸ್ಥೆಯನ್ನು ಬೆಂಗಳೂರು ನಗರದಲ್ಲಿ ನಡೆಸುತ್ತಿದ್ದಾರೆ.
ಹಂಸಲೇಖ ಅವರು ಬೆಂಗಳೂರು ನಗರದಲ್ಲಿ ‘ಹಂಸಲೇಖ ಮ್ಯೂಸಿಕ್ ಟ್ರಸ್ಟ್’ ಎಂಬ ಸಂಸ್ಥೆಯನ್ನು 2001ರಲ್ಲಿ ಜಾನಪದ ಮತ್ತು ಸಂಸ್ಕೃತಿಗಳ ರಕ್ಷಣೆಗಾಗಿ ಸ್ಥಾಪಿಸಿದ್ದಾರೆ. ಅವರು ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸಿ ಕಲೆ, ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಗಳನ್ನು ಶಕ್ತಿ ಮೀರಿ ಉತ್ತೇಜಿಸುತ್ತಿದ್ದಾರೆ. ಚರ್ಚೆಗಳು, ವಿಚಾರಸಂಕಿರಣಗಳು, ಸಂಗೀತ ಕಾರ್ಯಕ್ರಮಗಳು ಮತ್ತು ನೃತ್ಯ ಪ್ರದರ್ಶನಗಳ ಮೂಲಕ ಈ ಸಂಸ್ಥೆ ನಾಡಿನ ಸಾರಸ್ವತ ಲೋಕಕ್ಕೆ ವಿಶಿಷ್ಟ ಕೊಡುಗೆಗಳನ್ನು ಹಂಸಲೇಖರ ನಿರ್ದೇಶನದಲ್ಲಿ ನೀಡುತ್ತಿದೆ. ಸದರಿ ಟ್ರಸ್ಟಿನ ಆಶ್ರಯದಲ್ಲಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ, ಪ್ರದರ್ಶಕ ಕಲೆಗಳು ಮತ್ತು ದೇಸಿ ಸಂಗೀತದಲ್ಲಿ ಡಿಪ್ಲೊಮ, ಪದವಿ, ಸ್ನಾತಕೋತ್ತರ ಪದವಿ ಮೊದಲಾದವುಗಳನ್ನು ನೀಡಲಾಗುತ್ತಿದೆ. ಹಂಸಲೇಖರು ಸಂಗೀತ ಕ್ಷೇತ್ರದಲ್ಲಿ ನಾದಬ್ರಹ್ಮ ಎಂದು ಬಿರುದಾಂಕಿತರಾಗಿದ್ದಾರೆ. ಅವರು ಸಾಹಿತ್ಯ ರಚನೆ ಮತ್ತು ಸಂಗೀತ ನಿರ್ಮಾಣ ಶೈಲಿಗಳಲ್ಲಿ ಅದ್ಭುತ ಬದಲಾವಣೆಗಳಿಗೆ ಕಾರಣಕರ್ತರಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಅನೇಕ ಪ್ರತಿಭಾವಂತ ಬರಹಗಾರರು, ಗಾಯಕರು, ಸಂಯೋಜಕರು ಮತ್ತು ಗೀತರಚನೆಕಾರರ ವೃತ್ತಿಪರ ಬದುಕನ್ನು ರೂಪಿಸಿದ ಶ್ರೇಯಸ್ಸು ಇವರದ್ದು.
ಹಂಸಲೇಖ ಅವರು 1980-2023 ಅವಧಿಯಲ್ಲಿ ಕನ್ನಡ ಚಲನಚಿತ್ರೋದ್ಯಮದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಅವರು ಕನ್ನಡದಲ್ಲಿ ಅತಿ ಹೆಚ್ಚು ಬ್ಲಾಕ್ ಬಸ್ಟರ್ ಚಿತ್ರಗಳ ಹಾಡುಗಳಿಗೆ ಗೀತ ರಚನೆಕಾರರಾಗಿ ವಿಶೇಷ ಛಾಪು ಮೂಡಿಸಿದ್ದಾರೆ. ಅವರು ಚಲನಚಿತ್ರ ಸಂಗೀತಕ್ಕೆ ಹೊಸ ಆಯಾಮವನ್ನು ನೀಡಿದ ಚಿತ್ರಕಥೆ ಬರಹಗಾರ, ಸಂಭಾಷಣೆ ಬರಹಗಾರ ಮತ್ತು ವಾದ್ಯಗಾರ ಎಂಬ ಒಳ್ಳೆಯ ಹೆಸರನ್ನು ಪಡೆದಿದ್ದಾರೆ. ಅವರು ಸಮಕಾಲೀನ ಚಿತ್ರರಂಗದಲ್ಲಿ ಜಾನಪದ ಸಂಗೀತವನ್ನು ಸಂಯೋಜಿಸಲು ಮತ್ತು ಪಾಶ್ಚಿಮಾತ್ರ ಸಂಗೀತ ಸಂವೇದನೆಗಳನ್ನು ಮುಖ್ಯವಾಹಿನಿಯ ಸಿನಿಮಾಕ್ಕೆ ಪರಿಚಯಿಸಲು ಹೆಸರುವಾಸಿಯಾಗಿದ್ದಾರೆ. ಅವರು ಸತತ ಹಿಟ್‍ಗಳ ಮೂಲಕ ಕನ್ನಡ ಚಲನಚಿತ್ರರಂಗದಲ್ಲಿ ಹೈಬ್ರಿಡ್ ತಳಿಯ ಸಂಗೀತ ನಿರ್ದೇಶಕರಲ್ಲಿ ಅಗ್ರಮಾನ್ಯರಾಗಿದ್ದಾರೆ.
ಹಂಸಲೇಖರು ದಕ್ಷಿಣ ಭಾರತದ ಪ್ರತಿಷ್ಠಿತ ಗಾಯಕರು ಮತ್ತು ಹಿನ್ನೆಲೆ ಗಾಯಕರೊಂದಿಗೆ ಕೆಲಸ ಮಾಡಿದ್ದಾರೆ. ಅವರ ಸಾರಥ್ಯದಲ್ಲಿ ಕನ್ನಡ ಚಲನಚಿತ್ರ ಸಂಗೀತ ಇತ್ತೀಚಿನ ವರ್ಷಗಳಲ್ಲಿ ಅದ್ಭುತವಾಗಿ ಬೆಳೆದಿದೆ. ಜನಪ್ರಿಯ ಗೀತರಚನಾಕಾರರೂ ಆದ ಹಂಸಲೇಖರು ಕನ್ನಡ ಚಲನಚಿತ್ರ ಸಂಗೀತದ ಧ್ವನಿಯನ್ನು ಬದಲಿಸಿದ ವ್ಯಕ್ತಿಯಾಗಿದ್ದಾರೆ. ಗ್ರಾಮೀಣ ಭಾಗದ ದೇಸಿ ಸಂಸ್ಕೃತಿ ಮತ್ತು ಕಲೆಯ ಸಹಸ್ರಾರು ಪ್ರತಿಭಾವಂತರನ್ನು ರೂಪಿಸುವ ಉದ್ದೇಶವನ್ನು ಹಂಸಲೇಖರು ಹೊಂದಿದ್ದಾರೆ. ಹಂಸಲೇಖರ ವಿರೋಧಿಗಳು ‘ದಲಿತರ ಉದ್ಧಾರಕ್ಕೆ ಹಂಸಲೇಖರ ಕೊಡುಗೆ ಏನು?’ ಎಂದು ಪ್ರಶ್ನಿಸಿರುವುದು ತರವಲ್ಲ. ಹಂಸಲೇಖರ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಬಹುಸಂಖ್ಯಾತ ವಿದ್ಯಾರ್ಥಿಗಳ ಪೈಕಿ ದಲಿತರು ಮತ್ತು ಇತರ ದಮನಿತ ಸಮುದಾಯಗಳಿಗೆ ಸೇರಿದವರು ಎಂಬುದು ಸತ್ಯ. ಹಂಸಲೇಖರು ರಾಜ್ಯೋತ್ಸವ ಪ್ರಶಸ್ತಿ, ಡಾ.ರಾಜಕುಮಾರ್ ಪ್ರಶಸ್ತಿ, ರಾಜ್ಯ ಸರ್ಕಾರದ ಕೆಂಪೇಗೌಡ ಪ್ರಶಸ್ತಿ, ವಿವಿಧ ರಾಜ್ಯಪ್ರಶಸ್ತಿಗಳು, ಬಕ್ರ್ಲಿ ಪ್ರಶಸ್ತಿ, ನಂದಿ ಪ್ರಶಸ್ತಿ, ಮದ್ರಾಸ್ ಚಲನಚಿತ್ರ ಅಭಿಮಾನಿಗಳ ಸಂಘದ ಪ್ರಶಸ್ತಿ, ಎಸ್.ಜಾನಕಿ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರಿಗೆ 2014ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮತ್ತು 2017ರಲ್ಲಿ ಗೀತಂ ವಿಶ್ವವಿದ್ಯಾನಿಲಯ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಅಮೋಘ ಕೊಡುಗೆಗಾಗಿ ಗೌರವ ಡಾಕ್ಟರೇಟ್ ಪದವಿ ನೀಡಿವೆ.

ಹಂಸಲೇಖರು 375ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ ಮತ್ತು 3500ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ ಮತ್ತು ಸಂಯೋಜಿಸಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ಮತ್ತು ಸಾಧನೆಗಳಿಂದ ಗುರುತಿಸಿಕೊಂಡಿರುವ ಅಭಿಜಾತ ಪ್ರತಿಭೆ ಹಂಸಲೇಖ. ಅವರು ಭಾರತೀಯ ಚಲನಚಿತ್ರ ಸಂಗೀತ ಸಂಯೋಜಕ, ದಾರ್ಶನಿಕ ಮತ್ತು ಸಾಧಕರೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಹಂಸಲೇಖರು ಕನ್ನಡ ನಾಡಿನ ಚಲನಚಿತ್ರ ರಂಗಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅವರು ರಂಗಭೂಮಿ, ಪತ್ರಿಕೆಗಳು, ಸಿನಿಮಾ, ಬಾನುಲಿ, ದೂರದರ್ಶನ, ಸಾಮಾಜಿಕ ಮಾಧ್ಯಮ ಮೊದಲಾದವುಗಳೊಂದಿಗೆ ನಿಕಟ ಸಂಪರ್ಕ ಹೊಂದಿ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ನಾಡಿನ ಪ್ರತಿಷ್ಠಿತ ದಿನಪತ್ರಿಕೆಗಳು ಇವರ ವಿಚಾರಧಾರೆಗಳನ್ನು ಹೆಮ್ಮೆಯಿಂದ ಪ್ರಕಟಿಸಿವೆ. ಅವರ ಚಲನಚಿತ್ರ ಸಾಹಿತ್ಯ ಕೂಡ ಸದಭಿರುಚಿ ಮತ್ತು ಸೃಜನಶೀಲತೆಗಳ ಸಮ್ಮಿಶ್ರಣವಾಗಿದೆ. ಅವರು ನಿರ್ದೇಶಿಸಿದ ಕನ್ನಡ ಚಲನಚಿತ್ರ ಸಂಗೀತ ಪ್ರಧಾನವಾಗಿ ಮಾನವೀಯ ಸಂವೇದನೆಯನ್ನು ಹೊಂದಿವೆ. ಅವರು ಬದುಕಿನ ವಾಸ್ತವ ಸತ್ಯಗಳನ್ನು ಪ್ರೇಕ್ಷಕರಿಗೆ ತಮ್ಮ ಚಿತ್ರ ಸಾಹಿತ್ಯ ರಚನೆ ಮೂಲಕ ಮನದಟ್ಟು ಮಾಡಿಕೊಟ್ಟಿರುವ ಪರಿ ಅನನ್ಯವಾದುದು.
ಇದನ್ನು ಓದಿ ಅಲ್ಪಸಂಖ್ಯಾತರು ಭಯಭೀತರಾಗಿದ್ದರೂ ನ್ಯಾಯಾಲಯಗಳು ಮೂಕ ಪ್ರೇಕ್ಷಕರಾಗಿವೆ: ನಿವೃತ್ತ ನ್ಯಾ. ಅಜಿತ್ ಪ್ರಕಾಶ್ ಶಾ
ಹಂಸಲೇಖರು ರಾಜ್ಯ ಮತ್ತು ರಾಷ್ಟ್ರಮಟ್ಟಗಳಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ಅನನ್ಯ ಸಾಧನೆಗಾಗಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಕನ್ನಡ ನಾಡಿನ ಚಿಂತಕರು, ಸಂಘಟಕರು, ಚಿತ್ರಸಂಗೀತ ನಿರ್ದೇಶಕರು ಮೊದಲಾದವರಿಗೆ ಅನುಕರಣೀಯ ವ್ಯಕ್ತಿಯಾಗಿದ್ದಾರೆ. ಕರ್ನಾಟಕ ಸಾರಸ್ವತ ಲೋಕದಲ್ಲಿಯೂ ಅವರ ಸ್ಥಾನ ಉನ್ನತ ಮಟ್ಟದಲ್ಲಿದೆ. ಕನ್ನಡ ಚಲನಚಿತ್ರ ಸಂಗೀತ ನಿರ್ದೇಶನದಲ್ಲಿ ಇವರ ದಾಖಲೆಯನ್ನು ಇದುವರೆಗೂ ಯಾರೂ ಸರಿಗಟ್ಟಿಲ್ಲ.

ಡಾ. ಮಹೇಶ್ ಚಂದ್ರ ಗುರು
ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ




