ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ‘ಆಪ್ತ ಸ್ನೇಹ’ದ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಆದರೆ, ಈ ಸ್ನೇಹದ ಆಳ ಎಷ್ಟರಮಟ್ಟಿಗಿದೆ ಎಂಬುದನ್ನು ಅಮೆರಿಕ ಇತ್ತೀಚಿಗೆ ಹೇರಿರುವ ಸುಂಕ ನೀತಿಯು ಪ್ರಶ್ನಿಸುವಂತೆ ಮಾಡಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನದ ಮೇಲೆ ಶೇ.19ರಷ್ಟು ಸುಂಕ ಹೇರಿ, ಭಾರತದ ಮೇಲೆ ಬರೋಬ್ಬರಿ ಶೇ.50 ರಷ್ಟು ಸುಂಕ ವಿಧಿಸಿರುವುದು ಭಾರತದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕಳೆದ ಆಗಸ್ಟ್ (2025) ತಿಂಗಳಲ್ಲಿ ಟ್ರಂಪ್ ಆಡಳಿತವು ಭಾರತದ ಸರಕುಗಳ ಮೇಲಿನ ಆಮದು ಸುಂಕವನ್ನು ಶೇ. 50ಕ್ಕೆ ಏರಿಸಿತ್ತು. ಇದೇ ವೇಳೆ ನೆರೆಯ ಪಾಕಿಸ್ತಾನದ ಮೇಲಿನ ಸುಂಕವನ್ನು ಶೇ.29ರಿಂದ ಶೇ. 19ಕ್ಕೆ ಇಳಿಸಲಾಗಿತ್ತು. ಈ ತಾರತಮ್ಯದ ನಡೆಗೆ ಕೇವಲ ಆರ್ಥಿಕ ಕಾರಣಗಳಷ್ಟೇ ಅಲ್ಲ, ರಾಜಕೀಯ ಮತ್ತು ವೈಯಕ್ತಿಕ ಪ್ರತಿಷ್ಠೆಯೂ ಕಾರಣ ಎಂಬುದು ರಾಜನ್ ಅವರ ಅಭಿಪ್ರಾಯ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಬೋರ್ಡ್ ಆಫ್ ಪೀಸ್’ಗೆ ಸೇರದ ಭಾರತದ ನಿಲುವು ಸ್ವಾಗತಾರ್ಹ
ಕಳೆದ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಅಲ್ಪಾವಧಿಯ ಸಂಘರ್ಷದ ವೇಳೆ (ಆಪರೇಷನ್ ಸಿಂಧೂರ್), ಕದನ ವಿರಾಮ ಏರ್ಪಡುವಲ್ಲಿ ತಾನು ಮಧ್ಯಸ್ಥಿಕೆ ವಹಿಸಿದ್ದೆ ಎಂದು ಟ್ರಂಪ್ ಹೇಳಿಕೊಂಡಿದ್ದರು. ಪಾಕಿಸ್ತಾನವು ಟ್ರಂಪ್ ಅವರ ಹೇಳಿಕೆಯನ್ನು ಒಪ್ಪಿಕೊಂಡು ಅವರನ್ನು ಹೊಗಳುವ ಮೂಲಕ ಅವರ ಅಹಂ ಅನ್ನು ತೃಪ್ತಿಪಡಿಸಿತು. ಆದರೆ, ಭಾರತವು “ಇದು ದ್ವಿಪಕ್ಷೀಯ ಮಾತುಕತೆಯ ಫಲ, ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇಲ್ಲ” ಎಂದು ಸ್ಪಷ್ಟಪಡಿಸಿತು. ರಾಜನ್ ಅವರ ಪ್ರಕಾರ, ಭಾರತದ ಈ ನಡೆ ಟ್ರಂಪ್ ಅವರ ಅಸಮಾಧಾನಕ್ಕೆ ಕಾರಣವಾಯಿತು. ಪರಿಣಾಮವಾಗಿ, ರಷ್ಯಾದ ತೈಲ ಖರೀದಿಯ ನೆಪವೊಡ್ಡಿ ಭಾರತದ ಮೇಲೆ ಹೆಚ್ಚಿನ ಟ್ಯಾರಿಫ್ ಹೇರಲಾಯಿತು. ಇದರಿಂದ ಕಳೆದ ಐದು ತಿಂಗಳಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಪ್ರಮಾಣದಲ್ಲಿ ಸುಮಾರು ಶೇ. 30ರಷ್ಟು ಕುಸಿತ ಕಂಡಿದ್ದು, ಇದು ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ.
ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಶಾಶ್ವತ ಗೆಳೆಯರೂ ಇಲ್ಲ, ಶಾಶ್ವತ ಶತ್ರುಗಳೂ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ‘ಹೌಡಿ ಮೋದಿ’ ಅಥವಾ ‘ನಮಸ್ತೆ ಟ್ರಂಪ್’ನಂತಹ ಅದ್ದೂರಿ ಕಾರ್ಯಕ್ರಮಗಳು ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗಿದ್ದು, ಅಂತಿಮವಾಗಿ ಪ್ರತಿಯೊಂದು ರಾಷ್ಟ್ರವೂ ತನ್ನ ಲಾಭ-ನಷ್ಟದ ಲೆಕ್ಕಾಚಾರದಲ್ಲಿಯೇ ವ್ಯವಹರಿಸುತ್ತದೆ ಎಂಬುದಕ್ಕೆ ಈ ಟ್ಯಾರಿಫ್ ಸಮರವೇ ಸಾಕ್ಷಿ. ರಾಜನ್ ಹೇಳುವಂತೆ, ಇದು ಭಾರತಕ್ಕೆ ಒಂದು ಎಚ್ಚರಿಕೆಯ ಕರೆಗಂಟೆಯಾಗಬೇಕಿದೆ.





