ಸಂವಿಧಾನ ಜಾರಿಯಾಗುವುದಕ್ಕೂ ಮೊದಲು ಹಿಂದೂ ಧರ್ಮದ ಮೇಲೆ ಪೇಜಾವರ ಸೇರಿದಂತೆ ಉಡುಪಿ ಮಠಗಳ ದೌರ್ಜನ್ಯ ಹೇಗಿತ್ತು ಎಂಬುದನ್ನು ನೋಡಲು ಹಳೇ ಇತಿಹಾಸವನ್ನೊಮ್ಮೆ ಓದಬೇಕು.
‘ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು’ ಎಂದು ಉಡುಪಿ ಮಠದ ಪೇಜಾವರ ವಿಶ್ವಪ್ರಸನ್ನ ತೀರ್ಥರು ಆಗ್ರಹಿಸಿರುವುದು ಬಹುಸಂಖ್ಯಾತ ಹಿಂದೂಗಳ ಬಗೆಗೆ ಅವರಿಗಿರುವ ಅಸಹನೆಯನ್ನು ತೋರಿಸುತ್ತದೆ. ಇಲ್ಲಿಯವರೆಗೂ ಕೇವಲ ಮುಸ್ಲಿಮರ ಬಗೆಗೆ ಅಸಹಿಷ್ಣುತೆ ಪ್ರದರ್ಶಿಸುತ್ತಿದ್ದ ಪೇಜಾವರ ವಿಶ್ವೇಶತೀರ್ಥರು ಇದೀಗ ದಿಢೀರನೆ ಮುಸ್ಲಿಮರ ವಿಷಯವನ್ನು ಕೈಬಿಟ್ಟು ತಮ್ಮ ಸಮಾನಾಗಿ ನಿಲ್ಲುವ, ಕೂರುವ ಹಿಂದೂ ಧರ್ಮದ ಬಹುಸಂಖ್ಯಾತರ ಬಗೆಗೆ ಆಕ್ರೋಶಗೊಂಡಿದ್ದಾರೆ. ಆ ಕಾರಣಕ್ಕಾಗಿಯೇ ‘ನಮಗೆ ಗೌರವ ಕೊಡುವ ಸಂವಿಧಾನ ಬರಬೇಕು’ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ ಎಂಬುದನ್ನು ಹಿಂದುತ್ವ ಸಂಘಟನೆಗಳಲ್ಲಿರುವ ಹಿಂದುಳಿದ, ದಲಿತ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕು.
ಇಂದು ಅಂದರೆ, ನವೆಂಬರ್ 26 ಸಂವಿಧಾನ ಅಂಗೀಕಾರ ದಿನ. ನವೆಂಬರ್ 24 ರಂದೇ ಪೇಜಾವರ ಶ್ರೀಗಳು ಸಂವಿಧಾನ ಬದಲಿಸುವ ಬಗ್ಗೆ ಮಾತನಾಡಿದ್ದಾರೆ. ಯಾಕೆಂದರೆ, ನಮ್ಮ ರಾಷ್ಟ್ರದಲ್ಲಿ ಸಂವಿಧಾನ ಜಾರಿಯಾದ ಬಳಿಕ ಉಡುಪಿ ಶ್ರೀಕೃಷ್ಣ ಮಠದ ಹಲವು ಸಂಪ್ರದಾಯಗಳನ್ನು ಬದಲಿಸಲಾಗಿದೆ. ಅಸ್ಪೃಶ್ಯತೆ ಆಚರಣೆ, ಜೀತ ಪದ್ಧತಿ, ಮಠದ ಗೇಣಿ ಪದ್ಧತಿಗಳನ್ನು ಸಂಪೂರ್ಣ ತೊಡೆದು ಹಾಕಲಾಗಿದೆ. ಈ ಹಿಂದೆ ರಾಜರುಗಳು ಊರಿಗೂರನ್ನೇ ಮಠದ ಸ್ವಾಮೀಜಿಗಳಿಗೆ ಇನಾಮಾಗಿ ಕೊಡುತ್ತಿದ್ದರು. ರೈತರು ದುಡಿದು ಪುಕ್ಕಟೆಯಾಗಿ ಉಡುಪಿ ಮಠದ ಖಜಾನೆ ತುಂಬಿಸಬೇಕಿತ್ತು. ದಲಿತ, ಕೆಳವರ್ಗಗಳು ಮಠದಲ್ಲಿ ‘ಧಾರ್ಮಿಕ ಜೀತ’ ಮಾಡಬೇಕಿತ್ತು. ಈಗ ಪುಕ್ಕಟೆ ಕೆಲಸಗಾರರ ಸೌಲಭ್ಯ ನಿಂತು ಬಿಟ್ಟಿದೆ. ‘ಜಾತಿಗಳ ಬಹಿಷ್ಕಾರ’ದ ಆದೇಶ ನೀಡುತ್ತಿದ್ದ ಸ್ವಾಮೀಜಿಗೆ ಸಂವಿಧಾನ ಜಾರಿಯಾದ ಬಳಿಕ ಪೂಜೆ, ಕಾಣಿಕೆ ಸಂಗ್ರಹ, ಆಶೀರ್ವಚನ ಹೊರತಾದ ಅಧಿಕಾರಗಳಿಲ್ಲ.
ಸಂವಿಧಾನ ಜಾರಿಯಾಗುವುದಕ್ಕೂ ಮೊದಲು ಹಿಂದೂ ಧರ್ಮದ ಮೇಲೆ ಪೇಜಾವರ ಸೇರಿದಂತೆ ಉಡುಪಿ ಮಠಗಳ ದೌರ್ಜನ್ಯ ಹೇಗಿತ್ತು ಎಂಬುದನ್ನು ನೋಡಲು ಹಳೇ ಇತಿಹಾಸವನ್ನೊಮ್ಮೆ ಓದಬೇಕು.
ದಿನಾಂಕ 21.08.1930 ರಲ್ಲಿ ನಡೆದ ಘಟನೆ. ದಾವಣಗೆರೆಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ನಾರ್ಣಪ್ಪ ಎಂಬ ಸ್ಮಾರ್ತ ಬ್ರಾಹ್ಮಣರಿದ್ದರು. ಸ್ಮಾರ್ತ ಬ್ರಾಹ್ಮಣರಾಗಿದ್ದ ಅವರು ಶಂಕರಾಚಾರ್ಯರ ಮತಕ್ಕೆ ಧಾರಳವಾಗಿ ಸಹಾಯ ಮಾಡುತ್ತಿದ್ದರಿಂದ ಆಗಿನ ಪುತ್ತಿಗೆ ಮಠದ ಸ್ವಾಮೀಜಿಗಳು ‘ನಾರ್ಣಪ್ಪನವರ ಮತದವರು ಬ್ರಾಹ್ಮಣರಲ್ಲವೆಂದು, ಅವರ ಮತಸ್ಥರಿಂದ ನೀರು ಸಹ ಕುಡಿಯಬಾರದು. ಊರಿನ ಜನರು ಅವರಿಗೆ ಯಾವುದೇ ಸಹಕಾರ ನೀಡಬಾರದು’ ಎಂದು ಆದೇಶ ಹೊರಡಿಸಿದರು. ಆಗ ಮಧ್ಯಪ್ರವೇಶ ಮಾಡಿದ ಆಗಿನ ಪೇಜಾವರ ಮಠದ ವಿಶ್ವಮಾನ್ಯ ತೀರ್ಥ ಸ್ವಾಮಿಗಳು “ಕನ್ನಡ ಜಿಲ್ಲೆಯ ಕಲ್ಲಮಣ್ಣೂರು ಗ್ರಾಮದಲ್ಲಿ ವಾಸ ಮಾಡುವ ಮಂಜುನಾಥಯ್ಯನ ಮಕ್ಕಳು ಅನಂತಪ್ಪ ಮತ್ತು ಸುಬ್ಬಣ್ಣ ಎಂಬವರೂ, ಮಿಜಾರು ಗ್ರಾಮದ ನಾರಾಯಣ, ಮಹದೇವ, ವೆಂಕಣ್ಣ, ಶ್ರೀನಿವಾಸ, ಜನಾರ್ದನ ಮೊದಲಾದವರು ತೋಟಿಗರೆಂದೂ, ಅವರಿಗೆ ಗುರುಗಳಿಲ್ಲವೆಂದು ಅವರು ಬ್ರಾಹ್ಮಣರ ಪಂಕ್ತಿಯಲ್ಲಿ ಕುಳಿತು ಭೋಜನ ಮಾಡಲು ಅರ್ಹರಲ್ಲ’ ಎಂದು ದಿನಾಂಕ 21.08.1930ರಲ್ಲಿ ತನ್ನ ರಾಯಸವನ್ನು ಕೊಟ್ಟು ಕಳುಹಿಸಿದರು. (ಆಧಾರ : ಚಿತ್ತಲ್ ದುರ್ಗ ಸ್ಪೆಷಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಕೋರ್ಟ್ ಕ್ರಿಮಿನಲ್ ಕೇಸ್ 143 /1930-31 ಮತ್ತು ಶಿವಮೊಗ್ಗ ಜಿಲ್ಲಾ ಸೆಷನ್ ಕೋರ್ಟ್ CA, No. 03/ 1934-35 ಮತ್ತು CA. No. 04/ 1934-35).
ಈ ರೀತಿ ಹಿಂದೂ ಸಮಾಜದ ಯಾರನ್ನು ಬೇಕಿದ್ದರೂ ಪೇಜಾವರ ಮಠಾಧೀಶರು ಬಹಿಷ್ಕರಿಸಬಹುದಿತ್ತು. ತನ್ನ ಪಂಥವಲ್ಲದ ಬ್ರಾಹ್ಮಣರನ್ನೂ ಬಹಿಷ್ಕರಿಸುತ್ತಿದ್ದರು, ದೌರ್ಜನ್ಯ ನಡೆಸುತ್ತಿದ್ದರು. ಇಂತಹ ನೂರಾರು ಕೇಸುಗಳು ಉಡುಪಿ ಮಠದಲ್ಲಿದೆ.
ಈ ಕೇಸುಗಳು ಏನನ್ನು ಸೂಚಿಸುತ್ತದೆ ಎಂದರೆ, ಸಂವಿಧಾನ ಜಾರಿಯಲ್ಲಿ ಇಲ್ಲದ ದಿನಗಳಲ್ಲಿ ಪೇಜಾವರ ಮಠದವರು ಮುಸ್ಲಿಮರ ವಿರುದ್ದವೋ, ಕ್ರಿಶ್ಚಿಯನ್ನರ ವಿರುದ್ದವೋ ಅಥವಾ ಮುಸ್ಲಿಂ ರಾಜರ ವಿರುದ್ದವೋ, ಕ್ರಿಶ್ಚಿಯನ್ ಧರ್ಮದ ಬ್ರಿಟಿಷರ ವಿರುದ್ಧವೋ ಹೋರಾಟ ನಡೆಸಿಲ್ಲ. ಉಡುಪಿ ಮಠದ ಹೋರಾಟಗಳೆಲ್ಲವೂ ಇದ್ದಿದ್ದು ಹಿಂದೂ ಧರ್ಮದ ಬಂಟರು, ಬಿಲ್ಲವರು, ಮೂಲ್ಯರು, ದಲಿತರ ವಿರುದ್ಧವೇ ಆಗಿತ್ತು. ಅದರಲ್ಲೂ ಕೂಡಾ ಸ್ಮಾರ್ತ/ಸ್ಥಾನಿಕ ಬ್ರಾಹ್ಮಣರ ವಿರುದ್ಧ ಇದೇ ಉಡುಪಿ ಮಠದ ಮಾಧ್ವ ಸ್ವಾಮೀಜಿಗಳು ಹೈದರ್, ಟಿಪ್ಪು, ಬ್ರಿಟಿಷ್ ಅಧಿಕಾರಿಗಳನ್ನು ದಾರಿ ತಪ್ಪಿಸಿ ದೌರ್ಜನ್ಯ ನಡೆಸಿದರು.

ಈಗಲೂ “ಸಂವಿಧಾನ ಬದಲಾಗಬೇಕು ಮತ್ತು ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು” ಎಂದರೆ ಅದು ಮಾಧ್ವ ಬ್ರಾಹ್ಮಣರನ್ನು ಗೌರವಿಸುವ ಸಂವಿಧಾನ ಬೇಕು ಎಂದರ್ಥ. ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎನ್ನುವ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳ ಹೇಳಿಕೆಗೆ ವಿಶಾಲ ಅರ್ಥ ಇದೆ. ಮೀಸಲಾತಿಗಳನ್ನು ರದ್ದು ಮಾಡಬೇಕು ಎನ್ನುವುದು ಇದರ ಮೊದಲ ಉದ್ದೇಶ. ಬ್ರಾಹ್ಮಣರನ್ನು ಹೊರತುಪಡಿಸಿದ ವ್ಯಕ್ತಿಗಳು ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಲ್ಲಿ ಇರುವುದು ಬ್ರಾಹ್ಮಣರ ಗೌರವಕ್ಕೆ ಚ್ಯುತಿ ಬಂದಂತೆ ಎಂಬುದು ಪೇಜಾವರರ ಸ್ಪಷ್ಟ ಆಲೋಚನೆಯಾಗಿದೆ. ವೇದ ಪಾರಂಗತ ಬ್ರಾಹ್ಮಣ ಮಠಾಧೀಶನೊಬ್ಬ ದಲಿತ, ಹಿಂದುಳಿದ ವರ್ಗದ ನ್ಯಾಯಾಧೀಶನಿಂದ ನ್ಯಾಯ ಹೇಳಿಸಿಕೊಳ್ಳುವುದನ್ನು ಅವರಿಗಿನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕಾಗಿಯೇ ಪೇಜಾವರರು ‘ನಮ್ಮನ್ನು ಗೌರವಿಸುವ ಸಂವಿಧಾನ ಬೇಕು’ ಎಂದು ಹೇಳಿ ಸುಮ್ಮನಾಗುವುದಿಲ್ಲ. ‘ಹಿಂದೂ ಧರ್ಮವನ್ನು ಗೌರವಿಸುವ ಪಕ್ಷ ಅಧಿಕಾರಕ್ಕೆ ಬರಬೇಕು. ಸನಾತನ ಮಂಡಳಿಯನ್ನು ಸ್ಥಾಪಿಸಬೇಕು. ಮಠ, ದೇಗುಲಗಳ ಆಸ್ತಿ, ವ್ಯವಹಾರದ ಸಂಪೂರ್ಣ ಜವಾಬ್ದಾರಿಯನ್ನು ಸಾಧು ಸಂತರಿಗೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ಮಠದ ಆಸ್ತಿ ವಿವಾದಗಳನ್ನು ಬಗೆಹರಿಸಿಕೊಳ್ಳಲು ಸಂವಿಧಾನ ಬದ್ಧ ನ್ಯಾಯಾಂಗ ವ್ಯವಸ್ಥೆಯನ್ನು ಬಳಸಿಕೊಳ್ಳಲು ಪೇಜಾವರರು ಸಿದ್ದರಿಲ್ಲ ಎಂದರ್ಥ.
ಇದನ್ನೂ ಓದಿ ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡಬೇಕು: ಚಂದ್ರಶೇಖರ ಸ್ವಾಮೀಜಿ ದ್ವೇಷ ಭಾಷಣ
‘ನಮ್ಮನ್ನು ಗೌರವಿಸುವ ಸಂವಿಧಾನ ಬೇಕು’ ಎಂದರೆ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಸ್ಪೃಶ್ಯತೆ, ದೌರ್ಜನ್ಯ, ಲಿಂಗ ತಾರತಮ್ಯ, ಪಂಕ್ತಿ ಬೇಧಗಳು, ಮಡೆಸ್ನಾನಗಳು, ದಲಿತ ಹಿಂದುಳಿದ ವರ್ಗಗಳಿಗೆ ದೇವಸ್ಥಾನ ಪ್ರವೇಶ ನಿರಾಕರಣೆಗಳು ಜಾರಿಯಲ್ಲಿಡಬೇಕು ಎಂದರ್ಥ. ಈಗ ಜಾರಿಯಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನ ಎಲ್ಲರಿಗೂ ಘನತೆಯ ಬದುಕು ನೀಡಿದೆ. ಎಲ್ಲರಿಗೂ ಘನತೆಯ ಬದುಕು ಎಂದರೇ ಯಾರ ಮೇಲೂ ಅಲ್ಲ, ಯಾರೂ ಕೀಳೂ ಅಲ್ಲ ಎಂದರ್ಥ. ಇದನ್ನು ಹಲವು ದಶಕಗಳಿಂದ ಅನಿವಾರ್ಯವಾಗಿ ಸಹಿಸಿಕೊಂಡಿರುವ ಪೇಜಾವರರಂತಹ ಕರ್ಮಠರು ಈಗೀಗ ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಹಾಗಾಗಿ ಇದು ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿಗಳಲ್ಲಿ ಇರುವ ಬಹುಸಂಖ್ಯಾತ ಹಿಂದೂಗಳ ಬಗೆಗಿನ ಅಸಹಿಷ್ಣುತೆಯೇ ಹೊರತು ಇನ್ನೇನೂ ಅಲ್ಲ!

ನವೀನ್ ಸೂರಿಂಜೆ
ಪತ್ರಕರ್ತ, ಲೇಖಕ




