ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೇಗ / MNREGA) ಎಂಬ ಬಡವರಿಗೆ ಉದ್ಯೋಗದ ಹಕ್ಕನ್ನು ನೀಡುವ ಕಾನೂನೊಂದು ಜಾರಿಯಾಗಿ ಇಪ್ಪತ್ತು ವರ್ಷಗಳು ಕಳೆದಿವೆ. 2005ರಲ್ಲಿ ಜಾರಿಗೆ ಬಂದ ಈ ಕಾಯ್ದೆಯ ಒಟ್ಟಾರೆ ಸತ್ವ ಹಾಗೂ ಅನುಷ್ಠಾನದ ಸಾಧಕ-ಭಾದಕಗಳ ಕುರಿತು ಅನೇಕ ಅರ್ಥಶಾಸ್ತ್ರಜ್ಞರು ಸಂಶಯ ವ್ಯಕ್ತಪಡಿಸಿದ್ದರು. ಇವುಗಳ ನಡುವೆಯೂ ಸಂಸತ್ತಿನಲ್ಲಿ ಎಲ್ಲ ಪಕ್ಷಗಳೂ ಏಕಮತದಿಂದ ಒಪ್ಪಿಗೆ ನೀಡಿದ್ದವು. ಜಾರಿಗೆ ಬಂದ ಬಳಿಕ ಹಲವು ಅಡಚಣೆಗಳನ್ನು ದಾಟಿ ಮನರೇಗಾ ನಡೆದು ಬಂದ ಹಾದಿಯು, ದೊಡ್ಡ ದೇಶವೊಂದರಲ್ಲಿ ದೀರ್ಘಕಾಲದವರೆಗೆ ಉದ್ಯೋಗ ಖಾತರಿ ಕಾಯ್ದೆಯೊಂದನ್ನು ಯಶಸ್ವಿಯಾಗಿ ನಡೆಸಬಹುದು ಎಂಬುದಕ್ಕೆ ಮಾದರಿಯಾಗಿ ನಿಂತು ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ.
ಗ್ರಾಮೀಣ ಭಾರತದ ಆರ್ಥಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಮನರೇಗ (MGNREGA) ಒಂದು ಕಲ್ಯಾಣ ಯೋಜನೆಯಾಗಿ ದಲಿತರು ಮತ್ತು ಗ್ರಾಮೀಣ ಮಹಿಳೆಯರಿಗೆ ಗೌರವ, ಭದ್ರತೆ, ಆರ್ಥಿಕ ಸ್ವಾವಲಂಬಿ ಭಾವನೆ ಜತೆಗೆ ಹಕ್ಕು ನೀಡಿದ ಐತಿಹಾಸಿಕ ಕಾಯ್ದೆ. ಕೆಲಸ ಕೇಳಿದರೆ ಕೆಲಸ ನೀಡಲೇಬೇಕೆಂಬ ಕಾನೂನುಬದ್ಧ ಖಾತರಿಯೊಂದಿಗೆ ಬಂದ ಈ ಯೋಜನೆ, ಶತಮಾನಗಳಿಂದ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಗೆ ಹೊಸ ಆಶಾಕಿರಣವಾಗಿದ್ದದ್ದು ದಿಟ.
ಗ್ರಾಮೀಣ ಪ್ರದೇಶಗಳಲ್ಲಿನ ಬಹುತೇಕ ದಲಿತರು ಇಂದಿಗೂ ಭೂಹೀನ ಕಾರ್ಮಿಕರು. ಖಾಸಗಿ ಕೃಷಿ ಕೆಲಸಗಳು ಋತುಮಾನದ ಮೇಲೆ ಅವಲಂಬಿತವಾಗಿದ್ದರಿಂದ, ವರ್ಷಪೂರ್ತಿ ಆದಾಯದ ಭದ್ರತೆ ಅವರಿಗೆ ಇರಲಿಲ್ಲ. ಮೇಲಾಗಿ, ಕೂಲಿ ಕಡಿತ, ತಡ ಪಾವತಿ ಮತ್ತು ಜಾತಿ ಆಧಾರಿತ ಅವಮಾನಗಳು ಸಾಮಾನ್ಯವಾಗಿದ್ದವು. ಇಂಥ ಪರಿಸ್ಥಿತಿಯಲ್ಲಿ ಮನರೇಗ ದಲಿತ ಕಾರ್ಮಿಕರಿಗೆ ನೇರವಾಗಿ ಸರ್ಕಾರದೊಂದಿಗೆ ಕೆಲಸ ಮಾಡುವ ಅವಕಾಶ ನೀಡಿತು. ಪಂಚಾಯತ್ ಮಟ್ಟದಲ್ಲಿ ನಡೆಯುವ ಸಾರ್ವಜನಿಕ ಕೆಲಸಗಳಲ್ಲಿ ಅವರು ಸಮಾನ ಕೂಲಿಗೆ ಕೆಲಸ ಮಾಡಿದರು. ಇದು ಕೇವಲ ಆದಾಯವನ್ನಷ್ಟೇ ಅಲ್ಲ, ಸಾಮಾಜಿಕ ಗೌರವವನ್ನೂ ಹೆಚ್ಚಿಸಿತ್ತು. ಯೋಜನೆಯಡಿ ಕೆಲಸದ ಕೂಲಿಯು ನಿಗದಿತ ಕನಿಷ್ಠ ವೇತನದ ಮೇಲೆ ನಿರ್ಧರಿತವಾಗುತ್ತಿತ್ತು. ಇದರಿಂದ, ಖಾಸಗಿ ಭೂಮಾಲೀಕರ ಮೇಲೆ ದಲಿತ ಕಾರ್ಮಿಕರ ಅವಲಂಬನೆ ಕಡಿಮೆಯಾಯಿತು. ʼಕೆಲಸ ಬೇಕಾದರೆ ನಮ್ಮ ಶರತ್ತು ಒಪ್ಪಬೇಕುʼ ಎಂಬ ಭೂಮಾಲೀಕರ ಧೋರಣೆಗೆ ಇದು ದೊಡ್ಡ ಹೊಡೆತ ನೀಡಿತು. ಅನೇಕ ಗ್ರಾಮಗಳಲ್ಲಿ ಮನರೇಗ ಕೂಲಿ ಖಾಸಗಿ ಕೃಷಿ ಕೂಲಿಯನ್ನು ಹೆಚ್ಚಿಸಲು ಕಾರಣವಾಯಿತು. ಇದರಿಂದ ದಲಿತ ಕಾರ್ಮಿಕರ ದನಿ ಗ್ರಾಮೀಣ ಆರ್ಥಿಕತೆಯಲ್ಲಿ ಪ್ರತಿಧ್ವನಿಸತೊಡಗಿತು.

ಗ್ರಾಮೀಣ ಮಹಿಳೆಯರ ದೃಷ್ಟಿಯಿಂದ ಮನರೇಗ ಇನ್ನಷ್ಟು ಮಹತ್ವದ್ದಾಗಿತ್ತು. ಕಾಲದಿಂದಲೂ ಸಂಪ್ರದಾಯಿಕವಾಗಿ ಮಹಿಳೆಯರ ಕೆಲಸ ಮನೆಗಷ್ಟೇ ಸೀಮಿತವಾಗಿದ್ದಂತ ಗ್ರಾಮೀಣ ಭಾರತದಲ್ಲಿ, ಮನರೇಗ ಮಹಿಳೆಯರನ್ನು ಸಾರ್ವಜನಿಕ ಕೆಲಸದ ಸ್ಥಳಕ್ಕೆ ಕೈಹಿಡಿದು ಕರೆತಂದಿತು. ಕೆಲಸದ ಸ್ಥಳಗಳು ಮನೆಗೆ ಹತ್ತಿರವಾಗಿರುವುದು, ಮಕ್ಕಳ ಆರೈಕೆಗೆ ವ್ಯವಸ್ಥೆ, ಮತ್ತು ಪುರುಷ–ಮಹಿಳೆ ಸಮಾನ ಕೂಲಿ ಎಂಬ ನಿಯಮಗಳು ಮಹಿಳೆಯರಿಗೆ ಉದ್ಯೋಗದಲ್ಲಿ ಪಾಲ್ಗೊಳ್ಳಲು ಧೈರ್ಯ ನೀಡಿದವು. ಅನೇಕ ರಾಜ್ಯಗಳಲ್ಲಿ ಮನರೇಗದ ಒಟ್ಟು ಕಾರ್ಮಿಕರಲ್ಲಿ ಮಹಿಳೆಯರ ಪಾಲು ಶೇ.50ಕ್ಕಿಂತ ಹೆಚ್ಚಾಗಿತ್ತು. ಮನರೇಗದ ಮೂಲಕ ಮಹಿಳೆಯರು ಮೊದಲ ಬಾರಿಗೆ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು, ನೇರವಾಗಿ ಕೂಲಿ ಹಣ ಪಡೆಯಲು ಆರಂಭಿಸಿದರು. ಇದು ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸಿತು. ಮಕ್ಕಳ ಶಿಕ್ಷಣ, ಆಹಾರ, ಆರೋಗ್ಯ ಖರ್ಚುಗಳಲ್ಲಿ ಮಹಿಳೆಯರ ಮಾತಿಗೆ ಮೌಲ್ಯ ಹೆಚ್ಚಾಯಿತು. ಅನೇಕ ಗ್ರಾಮೀಣ ಮಹಿಳೆಯರಿಗೆ ಇದು ಸ್ವಾವಲಂಬನೆಯ ಮೊದಲ ಅನುಭವವಾಗಿತ್ತು.
ಕಾನೂನಿನ ಪ್ರಕಾರ, ಕೆಲಸ ಹಂಚಿಕೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು ಹಾಗೂ ಕನಿಷ್ಠ ಮೂರನೇ ಭಾಗದ ಲಾಭಾರ್ಥಿಗಳು ಮಹಿಳೆಯರೇ ಆಗಿರಬೇಕು ಎಂದು ಹೇಳಲಾಗಿದೆ. ಆದರೆ ಬಹುತೇಕ ರಾಜ್ಯಗಳಲ್ಲಿ ಇದಕ್ಕಾಗಿ ಯಾವುದೇ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವೇ ಇರಲಿಲ್ಲ. ಮಹಿಳೆಯರ ಭಾಗವಹಿಸುವಿಕೆ ಸ್ವಯಂಪ್ರೇರಿತವಾಗಿಯೇ ಆ ಮಟ್ಟ ತಲುಪಿತ್ತು. 2008–09ರಲ್ಲಿ ಮನರೇಗ ದೇಶವ್ಯಾಪಿ ಜಾರಿಗೆ ಬಂದಾಗಲೇ, ರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ಪಾಲು ಸುಮಾರು ಶೇ.50ರಷ್ಟಿತ್ತು. ನಂತರ ವರ್ಷದಿಂದ ವರ್ಷಕ್ಕೆ ಇದು ಹೆಚ್ಚಾಗುತ್ತಲೇ ಬಂದಿದೆ. ಇಂದು ಮಹಿಳೆಯರ ಪಾಲು ಶೇ.60ರ ಹತ್ತಿರ ತಲುಪಿತ್ತು. ಇನ್ನೂ ಹೆಚ್ಚುತ್ತಿರುವುದು ಗಮನಾರ್ಹ.
ಮುಂದುವರೆದು, ಜಾತಿ ಮತ್ತು ಲಿಂಗದ ಆಧಾರದಲ್ಲಿ ದಲಿತ ಗ್ರಾಮೀಣ ಮಹಿಳೆಯರು ಎದುರಿಸುತ್ತಿದ್ದ ಶೋಷಣೆಗೆ ಮನರೇಗ ಒಂದು ರಕ್ಷಣಾ ಕವಚದಂತೆ ಕೆಲಸ ಮಾಡಿತು. ಸಾರ್ವಜನಿಕ ಕೆಲಸಗಳಲ್ಲಿ ಸಮಾನ ಸಾಲಿನಲ್ಲಿ ನಿಂತು ಕೆಲಸ ಮಾಡುವ ಅನುಭವವು ಸಾಮಾಜಿಕ ಅಂತರಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡಿತು. ಕೆಲಸದ ಹಕ್ಕು ಕಾನೂನುಬದ್ಧವಾಗಿದ್ದರಿಂದ, ತಿರಸ್ಕಾರ ಅಥವಾ ಅವಮಾನ ಎದುರಾದಾಗ ಪ್ರಶ್ನಿಸುವ ಧೈರ್ಯವೂ ಮಹಿಳೆಯರಲ್ಲಿ ಮೂಡಿತು.
ಆರ್ಥಿಕ ಸಂಕಷ್ಟದ ಸಮಯಗಳಲ್ಲಿ, ವಿಶೇಷವಾಗಿ ಬರ, ಪ್ರವಾಹ ಅಥವಾ ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ, ಮನರೇಗ ಗ್ರಾಮೀಣ ಬಡವರಿಗೆ ಜೀವಾಳವಾಯಿತು. ವಲಸೆ ಹೋಗಿದ್ದ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳಿ ಕನಿಷ್ಠ ಆದಾಯವನ್ನಾದರೂ ಪಡೆದು ಬದುಕು ಸಾಗಿಸಲು ಸಾಧ್ಯವಾಯಿತು. ಈ ಸಮಯದಲ್ಲಿ ದಲಿತರು ಮತ್ತು ಮಹಿಳೆಯರೇ ಮನರೇಗದ ಪ್ರಮುಖ ಲಾಭಾಂಶ ಪಡೆದ ಫಲಾನುಭವಿಗಳಾಗಿದ್ದರು. ಛತ್ತೀಸ್‌ಗಢದಂತಹ ಬಡ ರಾಜ್ಯಗಳಿಂದ ಹಿಡಿದು ತಮಿಳುನಾಡಿನಂತಹ ಆರ್ಥಿಕವಾಗಿ ಕೊಂಚ ಉತ್ತಮ ಸ್ಥಿತಿಯ ರಾಜ್ಯಗಳಲ್ಲಿಯೂ, ಬಿಹಾರ, ಗುಜರಾತ್, ಕರ್ನಾಟಕ ರಾಜ್ಯಗಳಲ್ಲೂ ಮನರೇಗಾ ತನ್ನ ಕೈ ಚಾಚಿತ್ತು. ಹೊರನೋಟಕ್ಕೆ ಇದು ಒಳ್ಳೆಯ ಬೆಳವಣಿಗೆಯಂತೆ ಕಂಡರೂ ಇದನ್ನು ಮನರೇಗ ವೇತನಗಳು ಸ್ಥಿರವಾಗಿರುವ (ಹೆಚ್ಚಳವಾಗದ) ಸ್ಥಿತಿಯ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಇಂದು ದೇಶದ ಅನೇಕ ಭಾಗಗಳಲ್ಲಿ ಮನರೇಗ ವೇತನಗಳು ಮಾರುಕಟ್ಟೆಯ ಕೂಲಿಗಿಂತ ಕಡಿಮೆಯಾಗಿವೆ. ಇಂತಹ ಸಂದರ್ಭಗಳಲ್ಲಿ, ಕಾರ್ಮಿಕ ಮಾರುಕಟ್ಟೆಗೆ ಸುಲಭವಾಗಿ ಪ್ರವೇಶ ಇಲ್ಲದವರು, ಮುಖ್ಯವಾಗಿ ಮಹಿಳೆಯರು ಮತ್ತು ಹಿರಿಯರು ಮನರೇಗ ಕೆಲಸದತ್ತ ಹೆಚ್ಚು ಆಕರ್ಷಿತರಾಗುತ್ತಾರೆ.
ಮನರೇಗ ಯೋಜನೆಯಲ್ಲಿ ಹಿಂದುಳಿದ ವರ್ಗಗಳಾದ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯಗಳ ಭಾಗವಹಿಸುವಿಕೆ ಗಮನಾರ್ಹವಾಗಿದೆ. 2011ರ ಜನಗಣತಿ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.16.6 ಎಸ್‌ಸಿಗಳು ಮತ್ತು ಶೇ.8.6ರಷ್ಟು ಎಸ್‌ಟಿಗಳು ಈ ಯೋಜನೆಯ ಪಾಲು ಹೊಂದಿದ್ದಾರೆ. ಆದರೆ ಮನರೇಗ ಅಡಿಯಲ್ಲಿ ಸೃಜಿಸಲಾದ ಒಟ್ಟು ಉದ್ಯೋಗ ದಿನಗಳಲ್ಲಿ ಇವರ ಪಾಲು ಇದಕ್ಕಿಂತಲೂ ಹೆಚ್ಚಿನದಾಗಿದೆ. ಅಂದರೆ, ಈ ಯೋಜನೆಯಿಂದ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳು ತಮ್ಮ ಜನಸಂಖ್ಯಾ ಪಾಲಿಗಿಂತ ಹೆಚ್ಚು ಲಾಭ ಪಡೆದಿವೆ. ಮಹಿಳೆಯರ ಪಾಲಿನಂತೆ, ಎಸ್‌ಸಿ–ಎಸ್‌ಟಿ ಸಮುದಾಯಗಳ ಪಾಲು ವರ್ಷದಿಂದ ವರ್ಷಕ್ಕೆ ಒಂದೇ ರೀತಿಯಲ್ಲಿ ಏರುತ್ತಾ ಅಥವಾ ಇಳಿಯುತ್ತಾ ಬಂದಿಲ್ಲ. ಕಾಲಕಾಲಕ್ಕೆ ಈ ಪಾಲಿನಲ್ಲಿ ಏರುಪೇರಾಗುತ್ತಲೇ ಬಂದಿದೆ. ಆದರೂ ಒಟ್ಟಾರೆ ನೋಡಿದರೆ, ಹಿಂದುಳಿದ ಸಮುದಾಯಗಳಿಗೆ ಮನರೇಗ ಒಂದು ಪ್ರಮುಖ ಆರ್ಥಿಕ ಆಧಾರವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಇವರ ಜೀವನೋಪಾಯಕ್ಕೆ ನಿರಂತರ ಬೆಂಬಲ ನೀಡಿರುವುದನ್ನು ಈ ಅಂಕಿಅಂಶಗಳು ತೋರಿಸುತ್ತವೆ. ಈ ಮಾಹಿತಿಯನ್ನು ಕೇರಳ ರಾಜ್ಯಸಭಾ ಸದಸ್ಯ, ಖ್ಯಾತ ಪತ್ರಕರ್ತ ಜಾನ್ ಬ್ರಿಟ್ಟಾಸ್ ಅವರು ʼದ ಇಂಡಿಯನ್ ಎಕ್ಸ್‌ಪ್ರೆಸ್ʼನಲ್ಲಿ ಹಂಚಿಕೊಂಡಿದ್ದಾರೆ.
ಮನರೇಗಾ ಗ್ರಾಮೀಣ ಜನರಿಗೆ ಕೆಲಸ ಕೇಳುವ ಹಕ್ಕು ನೀಡಿದ ಕಾನೂನು. ಕಾರ್ಮಿಕರು ಬೇಡಿಕೆ ಇಟ್ಟಾಗಲೇ ಕೆಲಸ ಕೊಡಬೇಕೆಂಬುದು ಇದರ ಆತ್ಮ. ಆದರೆ ಮನರೇಗಾ ಬದಲಿಗೆ ತರಲಾಗಿರುವ ವಿಬಿ–ಜಿ ರಾಮ್ ಜಿ ಮಸೂದೆ ಈ ಹಕ್ಕನ್ನೇ ಕಿತ್ತುಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೊಸ ಮಸೂದೆಯಲ್ಲಿ ಕೆಲಸ ಬೇಡಿಕೆಯ ಆಧಾರದಲ್ಲಿ ಸಿಗುವುದಿಲ್ಲ; ಎಲ್ಲಿ, ಎಷ್ಟು ಕೆಲಸ ಕೊಡಬೇಕು ಎಂಬುದನ್ನು ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆ. ಇದರಿಂದ ಗ್ರಾಮ ಪಂಚಾಯತಿಗಳ ಅಧಿಕಾರ ಕುಗ್ಗಿ, ಜನರ ನೇರ ಪಾಲ್ಗೊಳ್ಳುವಿಕೆ ಕೊನೆಗೊಳ್ಳುತ್ತದೆ. ಹೊಸ ಮಸೂದೆ ನಿರ್ಧಾರಾಧಿಕಾರವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕೈಗಿಟ್ಟು, ಹಣಕಾಸಿನ ಹೊರೆಗಳನ್ನು ಮಾತ್ರ ರಾಜ್ಯಗಳ ಮೇಲೆ ಹಾಕುತ್ತದೆ. ಮನರೇಗಾದಲ್ಲಿ ಕಾರ್ಮಿಕ ವೇತನದ ಪ್ರಮುಖ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊತ್ತಿದ್ದರೆ, ವಿಬಿ–ಜಿ ರಾಮ್ ಜಿಯಲ್ಲಿ ರಾಜ್ಯಗಳು ಹೆಚ್ಚಿನ ಹಣ ನೀಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ರಾಜ್ಯಗಳು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಹಿಂಜರಿಯುವ ಸಾಧ್ಯತೆ ಇದೆ. 100 ದಿನಗಳಿಂದ 125 ದಿನಗಳಿಗೆ ಉದ್ಯೋಗ ಹೆಚ್ಚಿಸುವ ಘೋಷಣೆಯೂ ಕಾಗದದ ಮಾತಾಗುವ ಭೀತಿ ತಜ್ಞರಿಗಿದೆ.

ಬೆಲ್ಜಿಯಂ ಮೂಲದ ಭಾರತೀಯ ಅರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ಅವರು ಹೊಸದಾಗಿ ತರಲಾಗುತ್ತಿರುವ ಮಸೂದೆಯು, ಮನರೇಗಾ ಕಾಯಿದೆಯ ಸುಧಾರಣೆಯಲ್ಲ, ಬದಲಾಗಿ ಅದರ ಮೂಲ ಸತ್ವವನ್ನು ಕಸಿಯುವ ಹುನ್ನಾರ ಎಂದು ಎಚ್ಚರಿಸುತ್ತಿದ್ದಾರೆ. ʼಉದ್ಯೋಗ ಖಾತರಿಯ ಮಾತು ಇದೆ, ಆದರೆ ಆ ಖಾತರಿ ಅನ್ವಯಿಸುವುದಕ್ಕೆ ಯಾವುದೇ ಖಾತರಿ ಇಲ್ಲʼ ಎನ್ನುವುದು ಅವರ ವಾದ. ಜನರು ಕೆಲಸ ಕೇಳಿದರೆ ಸಿಗದ ಸ್ಥಿತಿಗೆ ದೇಶ ಮತ್ತೆ ಹಿಂತಿರುಗಿದರೆ, ಅದು ಮನರೇಗಾ ಮೊದಲು ಇದ್ದ ಅನಿಶ್ಚಿತ ಉದ್ಯೋಗ ದಿನಗಳತ್ತ ಹಿಂದಿರುಗಿದಂತಾಗುತ್ತದೆ ಎಂಬುದು ಅವರ ಆತಂಕ.
ಇದನ್ನೂ ಓದಿ: ಮನರೇಗಾ ಬದಲಿಗೆ ವಿಬಿ-ಜಿ ರಾಮ್ ಜಿ ಮಸೂದೆ: ಉದ್ಯೋಗ ಖಾತ್ರಿ ಯೋಜನೆಯ ಬದಲಾವಣೆಗಳೇನು?
ಮನರೇಗಾ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಎನ್ನುವುದಕ್ಕಿಂತ ಅದು ದಲಿತರು, ಮಹಿಳೆಯರು ಮತ್ತು ಅಂಚಿನಲ್ಲಿದ್ದ ಸಮುದಾಯಗಳಿಗೆ ಕೆಲಸ ಕೇಳುವ ಧೈರ್ಯ, ಸಮಾನ ಕೂಲಿ, ಮತ್ತು ಗೌರವಯುತ ಬದುಕಿನ ಹಕ್ಕು ನೀಡಿದ ಸಾಮಾಜಿಕ ಕ್ರಾಂತಿಯಾಗಿತ್ತು. ಮಹಿಳೆಯರನ್ನು ಸಾರ್ವಜನಿಕ ಬದುಕಿನೊಳಗೆ ತಂದು ನಿಲ್ಲಿಸಿದ್ದು, ಸಂಕಷ್ಟದ ಸಮಯದಲ್ಲಿ ಬಡವರ ಬದುಕಿಗೆ ಜೀವಾಳವಾದದ್ದು ಇದರ ಅಸಲಿಯ ಸಾಧನೆ. ಇಂತಹ ಹಕ್ಕಿನ ಸ್ವರೂಪವನ್ನು ಕಿತ್ತು ಅದನ್ನು ಕೇಂದ್ರಾಧಿಪತ್ಯದ ಯೋಜನೆಯಾಗಿ ಪರಿವರ್ತಿಸುವ ವಿಬಿ–ಜಿ ರಾಮ್ ಜಿ ಮಸೂದೆ, ಉದ್ಯೋಗ ಖಾತರಿಯ ಮೂಲ ತತ್ವವನ್ನೇ ದುರ್ಬಲಗೊಳಿಸುವ ಅಪಾಯವನ್ನು ಹೊತ್ತು ತಂದಿದೆ.
ಭಾರತದಂತಹ ಅಸಮಾನತೆಗಳ ಸಮಾಜದಲ್ಲಿ ಯಾವುದೇ ಹಕ್ಕನ್ನು ದುರ್ಬಲಗೊಳಿಸುವ ಪ್ರಯತ್ನ, ದಲಿತರು ಮತ್ತು ಗ್ರಾಮೀಣ ಮಹಿಳೆಯರ ಬದುಕಿನ ಭದ್ರತೆಯನ್ನೇ ಪ್ರಶ್ನಾರ್ಥಕಗೊಳಿಸುತ್ತದೆ. ಮನರೇಗಾವನ್ನು ಬದಲಿಸುವ ಬದಲು, ಅದನ್ನು ಬಲಪಡಿಸುವುದು, ವಿಸ್ತರಿಸುವುದು ಮತ್ತು ಕಾಲಘಟ್ಟದ ಸವಾಲುಗಳಿಗೆ ತಕ್ಕಂತೆ ಸುಧಾರಿಸುವುದೇ ನಿಜವಾದ ಸುಧಾರಣೆ. ಇಲ್ಲವಾದರೆ, ಹೇರಲು ಹೊರಟಿರುವ ಈ ಹೊಸ ಮಸೂದೆ ಗ್ರಾಮೀಣ ಭಾರತದ ಭವಿಷ್ಯವನ್ನು ಅಸ್ಥಿರಗೊಳಿಸುವ ಅಪಾಯವಿದೆ.
ಮಾಹಿತಿ ಕೃಪೆ: ʼThe Indian Expressʼ
ʼScroll.inʼ
‘IDEAS FOR INDIA’





