ಭತ್ತ ಬೆಳೆಯುವ ಈ ವಿಧಾನಕ್ಕೆ ಕೆಸರುಗದ್ದೆ(Puddling) ಎಂಬ ಹೆಸರಿದೆ. ಗದ್ದೆ ಮಾಡಬೇಕಾಗಿರುವ ಭೂ ಹಿಡುವಳಿಯನ್ನು ಹಣ್ಣುಗಾಯಿ ನೀರುಗಾಯಿ ಆಗುವಂತೆ ಉಳುಮೆ ಮಾಡಿ, ನೀರನ್ನು ತುಂಬುಗಟ್ಟಿ, ಮತ್ತೆ ಮತ್ತೆ ಉಳುಮೆ ಮಾಡುತ್ತಲೇ ಇದ್ದು, ನಾಟಿ ಮಾಡಲಿರುವ ಮುನ್ನಾ ದಿನವೂ ಉಳುಮೆ ಮಾಡಿ ಹಲುಬೆ ದಿಂಡನ್ನು ತಿರುಗಾ ಮುರುಗಾ ಮಾಡಿ ನೀರು ಗದ್ದೆಯ ಎಲ್ಲ ಮೂಲೆ ಮುಡುಕುಗಳಲ್ಲೂ ಸಮನಾಗಿ ನಿಲ್ಲುವಂತೆ ಸಮಗಟ್ಟಲಾಗುವುದು – ಹಿಂಗೆಲ್ಲ ಅನೇಕ ಸಲ ನೀರುಗಟ್ಟಿಸಿ ಉತ್ತ ನಂತರ ಒಂದು ವಾರ ಹಂಗೇ ಬಿಡಲಾಗುತ್ತದೆ; ಈ ಹಂಗೇ ಬಿಡಲಾಗುವುದಕ್ಕೆ ‘ಮಾಗ ಹಾಕುವುದು’ ಎಂಬ ಒಳ್ಳೆಯ ಹೆಸರು ಕಟ್ಟಲಾಗಿದೆ.
ವಾಸ್ತವಿಕವಾಗಿ, ಈ ಮಾಗ ಹಾಕುವ ಏಳು ದಿನಗಳ ಅವಧಿಯಲ್ಲಿ ಕೆಸರಿನ ಅಡಿಗೆ ತುಳಿಯಲಾದ ನಾರು ಬೇರು, ಕಳೆಗಳೆಲ್ಲವೂ ಕೊಳೆತು ಮಣ್ಣು ನಾರುನಾರಾಗುತ್ತದೆ. ಮಣ್ಣು ಹಿಂಗೆ ನಾರುಗಟ್ಟಿದ ಮೇಲೆ ಮತ್ತೆ ಉಳುಮೆ ಮಾಡಿ ಹಲುಬೆ ದಿಂಡು ಹೊಡೆದು ಮತ್ತೆ ಸಮಗಟ್ಟಿ ಭತ್ತದ ಪಯಿರನ್ನು ನಾಟಿ ಮಾಡುವ ಕಾರ್ಯ ಶುರುವಾಗುತ್ತದೆ.

ನಾರು ಬೇರು ಕಳೆಗಳೆಲ್ಲವೂ ಆಮ್ಲಜನಕದ ಗೈರಿನಲ್ಲಿ ಕೊಳೆಯುವುದರಿಂದ ಮಣ್ಣಿನ ತಳಭಾಗದಲ್ಲಿ ಮಿಥೇನ್ ಅನಿಲ ಉತ್ಪಾದನೆಯಾಗುತ್ತಿರುತ್ತದೆ. ಭತ್ತ ಬೆಳೆಯುತ್ತ ಹೋದಂತೆ ಈ ಮಿಥೇನ್ ಅನಿಲ ಭತ್ತದ ಪಯಿರಿನ ‘ಏರೆಂಕೈಮಾ’ ಎಂಬ ಹೆಸರಿನ ಟೊಳ್ಳು ಕೋಶಗಳಿಗೆ ರವಾನೆಯಾಗಿ, ಪಯಿರಿನ ಗರಿಗಳ ಹಿಂಭಾಗದಲ್ಲಿ ಸ್ಥಿತಿಸ್ಥಾಪಕ ತತ್ವದ ಪ್ರಕಾರ ಕಾರ್ಯ ನಿರ್ವಹಿಸುವ ‘ಸ್ಟೊಮಾಟೊ’ ಅಂತಾ ಕರೆಯಲಾಗಿರುವ ಕವಾಟಗಳ ಮೂಲಕ ವಾತಾವರಣಕ್ಕೆ ಹೊಮ್ಮುತ್ತದೆ. ಈ ಮಿಥೇನ್ ಅನಿಲವು, ಮೋಟಾರು ವಾಹನಗಳಿಂದ ಹೊಮ್ಮುವ ಕಾರ್ಬನ್ ಡಯಾಕ್ಸೈಡ್/ ಮಾನಾಕ್ಸೈಡಿಗಿಂತಲೂ 25 ಪಟ್ಟು ಬೇಗ ಮತ್ತು 25 ಪಟ್ಟು ಹೆಚ್ಚು ಬಿಸಿಯಾಗುತ್ತದೆ (methane is 25 times more Global Warming Potential/ GWP than Carbon dioxide/ monoxide – IPCC report)
ಕರ್ನಾಟಕದ ಮಂಡ್ಯ, ಕೊಪ್ಪಳ ಜಿಲ್ಲೆಯ ಗಂಗಾವತಿ, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ, ತುಂಗಭದ್ರ ಅಣೆಯ ಅಚ್ಚುಕಟ್ಟು ಪ್ರದೇಶದ ಎಲ್ಲೇ ನಿಂತರೂ ಮೂಗಿಗೆ ಬಡಿಯುವ ಕಮಟು ವಾಸನೆಯ ಮೂಲವೇ ಈ ಕೆಸರುಗದ್ದೆಗಳಿಂದ ಹೊಮ್ಮುತ್ತಿರುವ ಮಿಥೇನ್ ಅನಿಲ/ ಮಳೆ ಸುರಿಯುತ್ತಿರುವಾಗಲೂ ಒಂದು ತರದ ಮುಗ್ಗು ಸೆಕೆ ಇದೆ ಎಂದಾದರೆ ಅದಕ್ಕೆ ಈ ಮಿಥೇನ್ ಅನಿಲವೇ ಕಾರಣ.

‘ಹಸಿರು ಕ್ರಾಂತಿ’ಗೆ (Green revolution) ಮುಂಚಿನ ದಿನಗಳಲ್ಲಿ ಭತ್ತ ಬೆಳೆಯುವ ಈ ಕೆಸರುಗದ್ದೆ ವಿಧಾನ ನಮ್ಮಲ್ಲಿ ಇರಲಿಲ್ಲ. ಹಸಿರು ಕ್ರಾಂತಿಯ ನಂತರವೇ ಹುಟ್ಟಿಕೊಂಡ ಈ ವಿಧಾನಕ್ಕೆ ‘ಜಪಾನಿ ನಾಟಿ’ ಎಂಬ ಹೆಸರು ಕೂಡ ಚಾಲ್ತಿಯಲ್ಲಿತ್ತು.
ಈ ಕೆಸರುಗದ್ದೆಯ ಇನ್ನೊಂದು ಮಗ್ಗುಲೆಂದರೆ ಇದಕ್ಕೆ ಸೋಂಕುವ ‘ಬೆಂಕಿ ರೋಗ’, ಮೊದಲಿಗೆ ಇಲ್ಲದ ಭತ್ತದ ಬೆಂಕಿರೋಗ ಶುರುವಾಗಿದ್ದು ಕೂಡ ಕೆಸರುಗದ್ದೆ ಮಾಡಿ ಭತ್ತ ಬೆಳೆಸುವ ಜಪಾನಿ ಷೋಕಿ ಶುರುವಾದ ಮೇಲೆ. ಕೀಟ ಶಾಸ್ತ್ರಜ್ಞರು ಹೇಳುವ ಪ್ರಕಾರ ಪರಿಸರ ವ್ಯವಸ್ಥೆಯಲ್ಲಿ ‘ಕಂದು ಜಿಗಿ ಹುಳ’ (Brown plant hopper) ಎಂಬ ಜೀವವೊಂದಿದೆ. ಮೊದಲಿಗೆ ಅದು ಶುಂಠಿ ಹುಲ್ಲಿನಲ್ಲೊ ಎಲ್ಲೋ ಒಂದ್ಕಡೆ ಜೀವನ ಮಾಡಿಕಂಡಿತ್ತು. ಯಾವಾಗ ಫಿಲಿಪೈನ್ಸ್ ದೇಶದಲ್ಲಿ ಸಾವಿರಾರು ಎಕರೆ ಭೂಮಿ ಕೆಸರುಗದ್ದೆಯಾಗಿ ಮಾರ್ಪಾಟಾಯಿತೊ ಆಗ ಭತ್ತದ ಬೆಳೆಗೆ ಅಮರಿಕೊಂಡಿತು. ಕೆಸರುಗದ್ದೆಯ ನಿಂತ ನೀರಿನ ಮೇಲಾಡಿಕೊಂಡಿರುವ ಈ ಕಂದು ಜಿಗಿ ಹುಳು ಭತ್ತದ ಪಯಿರನ್ನು ಕೊರೆದು ಅದರ ನಟ್ಟ ನಡುಭಾಗದಲ್ಲಿ ಮೊಟ್ಟೆಗಳನಿಟ್ಟು ಮರಿ ಮಾಡಿಕೊಳ್ಳುತ್ತದೆ. ಆಗ ಭತ್ತದ ಪಯಿರಿಗೆ ಪೋಷಕಗಳನ್ನು ಸಾಗಿಸುವ ಗ್ಸೈಲೆಮ್ (Xylem) ನಳಿಕೆಗಳು ಊನಗೊಂಡು ಭತ್ತದ ಪಯಿರುಗಳು ಸುಟ್ಟಂತೆ ಕಾಣುತ್ತವೆ – ಇದು ಬೆಂಕಿ ರೋಗದ ಕತೆ.

ಹಂಗಾದರೆ, ‘ನಾವು ಭತ್ತ ಬೆಳೆಯುವುದು ಬೇಡವ, ಭತ್ತ ಬೆಳೆಯದೇ ಮಕ್ಕಳಿಗೆ ಉಣಲು ಅನ್ನ ಕೊಡಬೇಡವ’ ಎಂಬ ಪ್ರಶ್ನೆ ಈಗ ಎದುರಾಗಬಹುದು.
ವಾಸ್ತವಿಕವಾಗಿ, ಕೆಸರುಗದ್ದೆ ಮಾಡಿ ಹಿಡುವಳಿವಾರು ಎಷ್ಟು ಭತ್ತ ಬೆಳೆಯಬಹುದೋ ಅಷ್ಟೇ ಪ್ರಮಾಣದ ಭತ್ತವನ್ನು ಕೆಸರುಗದ್ದೆ ಮಾಡದೆಯೂ ಬೆಳೆದುಕೊಳ್ಳಬಹುದಾದ ಅನೇಕ ವಿಧಾನಗಳು ಭಾರತದಲ್ಲಿ ಇದ್ದವು. ಭತ್ತದ ಜೊತೆಬೆಳೆಯಾಗಿ ಅಕ್ಕಡಿ ಬೆಳೆಯುವ ಪದ್ದತಿಯೂ ಇತ್ತು. ಒಂದು ಸಲ ಸಾವಯವ ಬೇಸಾಯಗಾರ ನಾಡೋಜ ನಾರಾಯಣರೆಡ್ಡಿಯವರ ತೋಟ ನೋಡಲು ಹೋಗಿದ್ದೆ ಅದು ಅಕ್ಟೋಬರ್ ತಿಂಗಳ ಮೂರನೆಯ ವಾರ, ಅವರ ಭತ್ತದ ಗದ್ದೆಯ ಪಯಿರಿನ ತೆನೆಗಳಾಗಲೇ ಹಾಲು ತುಂಬಿ ಕೊರಳು ಬಾಗಿಸುತಿದ್ದವು.
ಆಗ ನಾರಾಯಣರೆಡ್ಡಿಯವರು, ‘ಪಯಿರು ಹಾಲುದುಂಬುವ ಕಾಲಕ್ಕೆ ಭತ್ತದ ಗದ್ದೆಗೆ ಆಗಾಗ ನೀರು ಕೊಟ್ಟರೂ ಸಾಕು, ಭತ್ತಕ್ಕೆ ಬೇರೆ ಬೆಳೆಗಳಿಗೆ ಬೇಕಿರುವಂತೆ ತೇವ ಮಾತ್ರ ಸಾಕು, ನೀರು ತುಂಬುಗಟ್ಟುವ ಅಗತ್ಯವೇ ಇಲ್ಲ’ ಎಂದಿದ್ದರು.
– ಎಲ್.ಸಿ ನಾಗರಾಜ್




