ನಾವು ಕೋವಿ ಹಿಡಿಯಬೇಕೇ ಅಥವಾ ಲೇಖನಿ ಹಿಡಿಯಬೇಕೆ? : ಒಂದು ಜಿಜ್ಞಾಸೆ

Date:

ಕೋವಿ ಹಿಡಿದವ ನೋಡಿದ ಗೊರಿಲ್ಲಾ ಮತ್ತು ತದೇಕಚಿತ್ತದಿಂದ ಗಮನಿಸುತ್ತಾ ಲೇಖನಿಯಿಂದ ಟಿಪ್ಪಣಿ ಮಾಡಿಕೊಂಡವ ನೋಡಿದ ಗೊರಿಲ್ಲಾಗಳಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಲೇಖನಿ ಹಿಡಿದವನಿಗೆ ಇದ್ದ ತಾಳ್ಮೆ, ಸಂಯಮ ಕೋವಿ ಹಿಡಿದವನಿಗೆ ಇರಲಿಲ್ಲ. ಕೋವಿ ಹಿಡಿದವನ, ಶ್ರೇಷ್ಠತೆ ನಂಬಿದವನ ಬಹುದೊಡ್ಡ ವ್ಯಸನ ಸುಳ್ಳು, ಭಯ, ಹಿಂಸೆ ಮತ್ತು ಆಕ್ರಮಣ. ಲೇಖನಿ ಹಿಡಿದವನ ಗುರಿ ಅರ್ಥ ಮಾಡಿಕೊಳ್ಳುವುದಾಗಿತ್ತು, ಸತ್ಯದ ಹುಡುಕಾಟವಾಗಿತ್ತು, ಅರಿವಿನ ದಾರಿಯಾಗಿತ್ತು. ನಾವು ಹಿಡಿಯಬೇಕಾದುದೇನು…?  

ಅದು ಪಶ್ಚಿಮ ಆಫ್ರಿಕಾದ ದಟ್ಟ ಅಡವಿ. ಬಿಳಿಯ ಅನ್ವೇಷಕರು ಅಲ್ಲಿಗೆ ಮೊದಲ ಬಾರಿ ಕಾಲಿಟ್ಟಾಗ ಆಶ್ಚರ್ಯ ಕಾದಿತ್ತು. ಅವರೆಂದೂ ನೋಡಿರದ ದೈತ್ಯ ಮತ್ತು ಬಲಶಾಲಿ ಮಂಗ ಒಂದು ಅವರ ಕಣ್ಣಿಗೆ ಬಿದ್ದಿತ್ತು. ಬೃಹತ್ ತೋಳುಗಳು, ಭಾರಿ ಗಾತ್ರದ ದೇಹ, ಚೂಪಾದ ಕೋರೆ ಹಲ್ಲುಗಳು, ಬಲಿಷ್ಠ ದವಡೆ, ಆವೇಶ ಭರಿತವೆಂಬಂತಿರುವ ಅಭಿವ್ಯಕ್ತಿ. ಆ ದಿನಗಳಲ್ಲಿ ಹೀಗಿರುವ ದೈತ್ಯ ಜೀವಿಯನ್ನು ಕಂಡ ಬಿಳಿಯರಿಗೆ ಅದನ್ನು ಬಹುಬೇಗ ಕೊಲ್ಲುವ ಆಲೋಚನೆ ಬಿಟ್ಟು ಬೇರೇನೂ ಹೊಳೆದಿರಲಿಲ್ಲ. ಹೀಗೆ ಗಂಭೀರ ಗೊರಿಲ್ಲಾಗಳ ಸಾಮೂಹಿಕ ಕಗ್ಗೊಲೆಗಳೇ ನೆಡೆದು ಹೋಯಿತು.

ಅಸಲಿಗೆ ದಟ್ಟಡವಿಯಲ್ಲಿ ಬಿಳಿಯರು ಗೊರಿಲ್ಲಾಗಳ ಮೇಲೆ ಗುಂಡು ಹಾರಿಸುವಾಗ, ಇಡೀ ಕುಟುಂಬ ತನ್ನ ಕಣ್ಣೆದುರೇ ಬಲಿಯಾಗುವುದನ್ನು ಕಂಡು, ಗುಂಡೇಟಿನಿಂದ ನೆತ್ತರು ಸುರಿಸುತ್ತಿದ್ದ ಪುಟಾಣಿ ಮರಿಗಳನ್ನು ನೋಡಿ ದೈತ್ಯ ಬೆಳ್ಳಿ ಬೆನ್ನಿನ ಗಂಡು ಗೊರಿಲ್ಲಾ ಕೋಪದಿ ಅರಚುತ್ತಾ ಗುಂಡು ಹಾರಿಸುವವರ ಕಡೆಗೆ ನುಗ್ಗುತಿತ್ತು. ಬಂದೂಕಿನ ನಳಿಗೆಯನ್ನು ಕಚ್ಚಿ ಪುಡಿ ಪುಡಿ ಮಾಡಿ ಕೈಗೆ ಸಿಕ್ಕ ಮನುಷ್ಯನನ್ನು ಸಿಗಿದು ಹಾಕುತಿತ್ತು. ಬದುಕುಳಿದು ಉಗ್ರ ರೂಪ ಕಂಡ ಬಿಳಿಯ ಯಾತ್ರಿಕರು ಗೊರಿಲ್ಲಾಗಳ ಕ್ರೌರ್ಯ, ರಕ್ತ ದಾಹ ಮತ್ತು ಹಿಂಸಾ ಪ್ರವೃತ್ತಿಯ ಕುರಿತು ಭಯಾನಕ ಕತೆಗಳನ್ನ ಹೆಣೆದರು. ಎಂದೂ ಗೊರಿಲ್ಲಾಗಳನ್ನು ಅಡವಿಯಲ್ಲಿ ನೋಡಿರದ ಜನರಿಗೆ, ಗೊರಿಲ್ಲಾ ಕ್ರೂರ, ನಿಷ್ಕರುಣೆಯ ಭಯಾನಕ ಮೃಗವಾಯಿತು.

ಕ್ರೂರ ಮೃಗದ ಘೋರ ಚಿತ್ರ ನೂರಾರು ವರ್ಷಗಳ ಕಾಲ ಹಾಗೆ ಉಳಿಯಿತು. ಜನರು ಅಡವಿಯಲ್ಲಿ ಗೊರಿಲ್ಲಾ ಎದುರಾದಾಗ ಥಟ್ಟನೆ ಗುಂಡು ಹಾರಿಸುತ್ತಿದ್ದರು. ಕಳೆದ ಅರವತ್ತು ವರುಷಗಳಿಂದ ಈಚೆಗೆ ಪ್ರಾಣಿಶಾಸ್ತ್ರಜ್ಞರು ಆಫ್ರಿಕಾದ ಕಾಡಿಗೆ ಕಾಲಿಟ್ಟು ಜಾಗರೂಕತೆಯಿಂದ ಗೊರಿಲ್ಲಾಗಳ ಬದುಕನ್ನು ಅಧ್ಯಯನ ಮಾಡಿದ ಮೇಲೆ ಹಲವು ನಿಜಾಂಶಗಳು ಹೊರಬಿದ್ದವು. ಪ್ರಾಣಿಶಾಸ್ತ್ರಜ್ಞರು ಕೋವಿ ಹಿಡಿದಿರಲಿಲ್ಲ ಬದಲಿಗೆ ಅವರ ಬಳಿ ಕ್ಯಾಮೆರಾ ಮತ್ತು ಟಿಪ್ಪಣಿ ಮಾಡಿಕೊಳ್ಳಲು ಲೇಖನಿ- ಪುಸ್ತಕಗಳಿದ್ದವಷ್ಟೇ. ಯಾವುದೇ ಪೂರ್ವಗ್ರಹೀ ಆಲೋಚನೆಗಳಿಲ್ಲದೆ, ಮನಸಿನಲ್ಲಿ ಕೇಡಿಲ್ಲದೆ ಅವರು ಗೊರಿಲ್ಲಾಗಳನ್ನು ಅಡವಿಯಲ್ಲಿ ನೋಡತೊಡಗಿದರು. ಅವರು ದೂರದಲ್ಲಿ ಸುಮ್ಮನೆ ಕುಳಿತು ದಿನಗಟ್ಟಲೆ ಗೊರಿಲ್ಲಾಗಳನ್ನು ವೀಕ್ಷಿಸಿದರು. ಅವು ಅಡವಿಯಲ್ಲಿ ಮುಂದೆ ಮುಂದೆ ಸಾಗಿದಂತೆ ಹಿಂಬಾಲಿಸಿದರು. ಗೊರಿಲ್ಲಾಗಳ ದೈನಂದಿನ ಬದುಕು ಟಿಪ್ಪಣಿ ಮಾಡಿಕೊಳ್ಳುತ್ತಾ ಹೋದಂತೆ ಒಂದು ಅಗಾಧ ಗಾತ್ರದ ಗೊರಿಲ್ಲಾ ಡೈರಿ ಸಿದ್ದವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಡೈರಿಗಳಲ್ಲಿ ಗೊರಿಲ್ಲಾಗಳ ವಾಸ್ತವ ಚಿತ್ರಣವಿತ್ತು. ಗೊರಿಲ್ಲಾಗಳು ಆಕ್ರಮಣಕಾರಿಯಾದ ಪ್ರಾಣಿಗಳಲ್ಲ ಅವು ನಾಚಿಕೆ ಸ್ವಭಾವದವು ಎಂಬ ಸತ್ಯ ಬಯಲಾಗಿತ್ತು. ನಾವು ಶಾಂತಿ ಸಂಯಮದಿಂದ ವರ್ತಿಸಿದರೆ ಅವು ಕೂಡ ಶಾಂತಿಯಿಂದಲೇ ಇರುತ್ತವೆ ಎಂಬ ಹೊಸ ಸತ್ಯ, ಗೊರಿಲ್ಲಾಗಳು ವಿನಾಕಾರಣ ಮನುಷ್ಯರ ಮೇಲೆರಗಿ ಸಿಗಿದು ಹಾಕುತ್ತವೆ ಎಂಬ ಪ್ರಚಲಿತ ವಿಷಯವನ್ನು ಹಸಿ ಹಸಿ ಸುಳ್ಳೆಂದು ಸಾಬೀತು ಪಡಿಸಿತ್ತು. ಕುಟುಂಬ ಅಪಾಯದಲ್ಲಿದ್ದಾಗ ಮಾತ್ರ ಬೆಳ್ಳಿ ಬೆನ್ನಿನ ಗಂಡು ಗೊರಿಲ್ಲಾ ಆಕ್ರಮಣ ಮಾಡುತ್ತದೆ, ರಕ್ಷಣೆಗೆಂದು ಮಾತ್ರ ಗೊರಿಲ್ಲಾಗಳು ಆಕ್ರಮಣ ಮಾಡುತ್ತವೆಯೆಂಬ ಪುರಾವೆಗಳನ್ನು ವಿಜ್ಞಾನಿಗಳು ಲೋಕದ ಮುಂದಿಟ್ಟರು. ಕ್ರೂರಿಗಳು ಮನುಷ್ಯರೇ ಹೊರತು ಗೊರಿಲ್ಲಾಗಳಲ್ಲವೆಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದರು.

ನೋಡಲು ಕ್ರೂರಿಯಂತಿದ್ದ ಗೊರಿಲ್ಲಾಗಳು ತಿನ್ನುತ್ತಿದ್ದುದು ಬರಿ ಎಲೆಗಳನ್ನು. ಲಕ್ಷಾಂತರ ವರುಷಗಳಿಂದ ಎಲೆ, ಕಾಂಡಗಳನ್ನು ತಿನ್ನುತ್ತಾ ಅಡವಿಯಲ್ಲಿ ಬದುಕಿದ ಗೊರಿಲ್ಲಾ ಕ್ರಮೇಣ ದೈತ್ಯವಾಯಿತು. ಎಲೆ ಮತ್ತು ಕಾಂಡಗಳು ತೀರಾ ಸಾಧಾರಣ ಆಹಾರಗಳು. ಗೊರಿಲ್ಲಾಗಳು ಬದುಕಲು ಬೆಳಕಿನ ಕಿರಣವಿರುವ ದಿನದ ಹನ್ನೆರಡು ಗಂಟೆಗಳಲ್ಲಿ ಆರರಿಂದ ಏಳು ಗಂಟೆಗಳು ಎಲೆ ತಿನ್ನುವುದರಲ್ಲೇ ಕಳೆಯಬೇಕಾಯಿತು. ನಿರಂತರ ಎಲೆಗಳಿಗಾಗಿ ಮಾಡುವ ತೀವ್ರ ಹುಡುಕಾಟ ಅದರ ಜೀವನಶೈಲಿ ಮತ್ತು ದೇಹವನ್ನು ರಚಿಸಿತು.

ಕಾಂಡಗಳನ್ನು ಸಿಗಿದು ಅಗೆಯಲು ದವಡೆಗಳು ಬಲಿಷ್ಠವಾದವು. ಬಲಿಷ್ಠ ದವಡೆಗಳಿಗಾಗಿ ಸ್ನಾಯುಗಳು ವಿಕಸನಗೊಂಡವು, ಭಾರಿ ಸ್ನಾಯುಗಳಿಗೆ ಅಂಟಿಕೊಳ್ಳಲು ಭಾರಿ ಮೂಳೆಗಳು ಬೆಳೆದವು, ಹಲ್ಲುಗಳು ದೊಡ್ಡದಾಗಿ ಚೂಪಾದವು, ತಲೆಯ ಗಾತ್ರ ವೃದ್ಧಿಯಾಗಿ ಹೆಲ್ಮೆಟ್ ಧರಿಸಿದಂತೆ ಭಾಸವಾಯಿತು. ಈ ಹೆಲ್ಮೆಟ್ ಗಾತ್ರದ ತಲೆ ಬುರುಡೆ, ಚೂಪಾದ ಹಲ್ಲು, ದವಡೆ, ಮೂಳೆ, ಸ್ನಾಯುಗಳೆಲ್ಲವೂ ಆಹಾರದಿಂದ, ಆಹಾರಕ್ಕಾಗಿ ವಿಕಸನಗೊಂಡಿದ್ದೆ ಹೊರತು ಮನುಷ್ಯರನ್ನು ಹಿಡಿದು ಕೊಲ್ಲಲು ಅಲ್ಲ.

ಈ ದೈತ್ಯ ಗಾತ್ರದ ಗೊರಿಲ್ಲಾಗಳು ಚಿಂಪಾಂಜಿಗಳಂತೆ ಮರವನ್ನು ಹತ್ತಲಾರವು. ಚಿಂಪಾಂಜಿಗಳು ಮರಗಳನ್ನು ಸರಾಗವಾಗಿ ಏರಿ ಹಣ್ಣು ಹಂಪಲುಗಳನ್ನೂ ಕಿತ್ತು ತಿಂದರೆ, ಗೊರಿಲ್ಲಾಗಳು ಬರಿಯ ಎಲೆ, ಕಾಂಡಗಳನ್ನು ತಿಂದೆ ತೃಪ್ತಿಪಡುತ್ತವೆ. ಎಲೆಗಳಿಂದಲೇ ಹಾಸಿಗೆ ಮಾಡಿಕೊಂಡು ಗೊರಿಲ್ಲಾಗಳು ಮಲಗುತ್ತವೆ. ದಿನಕ್ಕೊಂದು ಹೊಸ ಹಾಸಿಗೆ ಮಾಡಿಕೊಳ್ಳುವುದರಿಂದ ಕ್ರಿಮಿ ಕೀಟಗಳ ಭಾದೆ ಇವಕ್ಕಿಲ್ಲ. ಗಂಡು ಗೊರಿಲ್ಲಾ ತನ್ನ ಕುಟುಂಬದ ಮೇಲೆ ಸದಾ ನಿಗಾ ಇಡುತ್ತದೆ. ಕಾಡಿನ ಚಿರತೆಗಳಾಗಿರಬಹುದು, ಅಥವಾ ಹೆಬ್ಬಾವಾಗಿರಬಹುದು, ಗಂಡು ಗೊರಿಲ್ಲಾವನ್ನು ಕೆಣಕುವ ಧೈರ್ಯ ಮಾಡುವುದಿಲ್ಲ.

ಹರೀಶ್ ಗಂಗಾಧರ್1
ಗೊರಿಲ್ಲಾ

ಹೆಣ್ಣು ಗೊರಿಲ್ಲಾ ತನ್ನ ಮರಿಗಳು ದೊಡ್ಡವಾಗುವವರೆಗೂ ಅಂದರೆ ಸುಮಾರು ನಾಲ್ಕು ವರುಷ ಎದೆಯಾಲು ಉಣಿಸುತ್ತದೆ. ಈ ಸಮಯದಲ್ಲಿ ಹೆಣ್ಣು ಗೊರಿಲ್ಲಾ ಗರ್ಭ ಧರಿಸುವುದಿಲ್ಲ ಕೂಡ. ಮರಿಗಳು, ಕುಟುಂಬ ಏಕೆ ಮುಖ್ಯವಾಗುತ್ತದೆ, ಗಂಡು ಗೊರಿಲ್ಲಾ ಕುಟುಂಬದ ಮೇಲೆ ಎಷ್ಟು ಕಾಳಜಿವಹಿಸುತ್ತದೆ, ಕುಟುಂಬ ಪ್ರಾಣಾಪಾಯದಲ್ಲಿದ್ದಾಗ ಮಾತ್ರ ಏಕಷ್ಟು ಕೆರಳುತ್ತದೆ ಎಂಬ ವಿಷಯ ಕೋವಿ ಹಿಡಿದವರಿಗೆ ಅರ್ಥವೇ ಆಗಿರಲಿಲ್ಲ.

ಮರಿಗಳು ಬೆಳೆದ ಮೇಲೂ ಅವುಗಳನ್ನು ಕುಟುಂಬದಿಂದ ಹೊರ ದಬ್ಬುವ ಕೆಲಸ ಗಂಡು ಅಥವಾ ಹೆಣ್ಣು ಗೊರಿಲ್ಲಾ ಮಾಡುವುದಿಲ್ಲ. ಸ್ವಯಿಚ್ಛೆಯಿಂದ ಹೊರ ನಡೆದ ಮರಿಗಳು ಪ್ರತ್ಯೇಕ ಕುಟುಂಬ ಕಟ್ಟಿಕೊಳ್ಳುತ್ತವೆ. ಗಂಡು ಗೊರಿಲ್ಲಾಕ್ಕೆ ಸಾಮಾನ್ಯವಾಗಿ ಮೂರರಿಂದ ನಾಲ್ಕು ಹೆಣ್ಣು ಗೊರಿಲ್ಲಾಗಳೊಡನೆ ಸಂಬಂಧವಿದ್ದು, ಅವೆಲ್ಲಾ ಒಟ್ಟಿಗೆ ಜೀವಿಸುತ್ತವೆ. ಹೆಣ್ಣು ಗೊರಿಲ್ಲಾಗಳ ಆದ್ಯತೆ ಗಂಡು ಗೊರಿಲ್ಲಾ ಮತ್ತು ತನ್ನ ಮರಿಗಳು ಮಾತ್ರ. ಈ ಕುಟುಂಬಗಳಲ್ಲಿ ಜೂನಿಯರ್ ಅಥವಾ ಸೀನಿಯರ್ ಸಂಗಾತಿಗಳೆಂಬ ಶ್ರೇಣಿಗಳಿಲ್ಲಾ ಸರ್ವರಿಗೂ ಸಮಬಾಳು ಸಮಪಾಲು.

ಪರಮ ಶಾಂತ ಸ್ವರೂಪಿಯಾದ ಗಂಡು ಗೊರಿಲ್ಲಾ ಕೆರಳುವುದು ಮತ್ತೊಂದು ಗಂಡು ಗೊರಿಲ್ಲಾ ಎದುರಾದಾಗ ಮಾತ್ರ. ಆಗಲು ನೇರ ಸಂಘರ್ಷಕ್ಕೆ ಇಳಿಯದೆ ಎದೆ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸುತ್ತವೆ, ಕಾಲು ಕೆರದುಕೊಂಡು ಅಬ್ಬರಿಸುತ್ತವೆ, ಗಿಡ ಮರಗಳನ್ನು ಬೇರುಸಮೇತ ಕೀಳುತ್ತವೆ, ಸಸ್ಯ ಸಂತತಿಯನ್ನು ಹಾಳುಗೆಡಹುತ್ತವೆ, ಘರ್ಜಿಸುತ್ತವೆ, ಕೂಗಾಡುತ್ತವೆ, ಬೊಗಳುತ್ತವೆ… ಇಂತಹ ಸಂದರ್ಭಗಳಲ್ಲಿ ಇಡೀ ಅಡವಿ ನಡುಗಿದರು ಕಲಹದಿಂದ ನೆತ್ತರು ಹರಿವುದು ಅಪರೂಪ.

ಇದನ್ನು ಓದಿದ್ದೀರಾ?: ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆಯಲ್ಲಿ ರಾಮ, ರಾಮಾಯಣ, ರಾಮರಾಜ್ಯ, ಮಂದಿರಗಳು…

ಒಂದೂವರೆ ಮೀಟರ್ ಉದ್ದ ಮತ್ತು 180 ಕೆಜಿ ತೂಕವಿರುವ ಗೊರಿಲ್ಲಾಗಳು ಕಲಹ ಗದ್ದಲಗಳಿಲ್ಲದೆ, ಶಾಂತ ಸ್ವಭಾವದಿಂದ ಜೀವನ ಸಾಗಿಸಿದರು ಅವು ಅವನತಿಯ ಅಂಚಿನಲ್ಲಿವೆ. ಕಾಡು ನಾಶವಾಗಿ ಬೇಸಾಯದ ಭೂಮಿಯಾದ್ದರಿಂದ, ಕಟ್ಟುಕತೆಗಳು ಗಟ್ಟಿಯಾಗಿ ಜನರ ಮನಸಲ್ಲಿ ಉಳಿದಿದ್ದರಿಂದ ಗೊರಿಲ್ಲಾಗಳ ಸಂತತಿ ಬಹುಬೇಗ ಕಣ್ಮರೆಯಾಗಲಿದೆ.

ಕೋವಿ ಹಿಡಿದು ಅಡವಿಗೆ ನುಗ್ಗಿದ ಬಿಳಿಯರ ಬಾಯಲ್ಲಿ ಹರಿದಾಡಿದ ಕತೆಗಳು ಮುಂದೆ ‘ಕಿಂಗ್ ಕಾಂಗ್’ನಂತಹ ಯಶಸ್ವಿ ಹಾಲಿವುಡ್ ಚಿತ್ರಗಳಾದವು. ಗುಂಡಿನ ಸುರಿಮಳೆಗೈದರು ಸಾಯದ ಗೊರಿಲ್ಲಾ ಆ ಚಿತ್ರದಲ್ಲಿದುದು ಒಂದು ಸೋಜಿಗವೇ ಸರಿ.

ಕೋವಿ ಹಿಡಿದವ ನೋಡಿದ ಗೊರಿಲ್ಲಾ ಮತ್ತು ತದೇಕಚಿತ್ತದಿಂದ ಗಮನಿಸುತ್ತಾ ಲೇಖನಿಯಿಂದ ಟಿಪ್ಪಣಿ ಮಾಡಿಕೊಂಡವ ನೋಡಿದ ಗೊರಿಲ್ಲಾಗಳಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಲೇಖನಿ ಹಿಡಿದವನಿಗೆ ಇದ್ದ ತಾಳ್ಮೆ, ಸಂಯಮ ಕೋವಿ ಹಿಡಿದವನಿಗೆ ಇರಲಿಲ್ಲ. ಕೋವಿ ಹಿಡಿದವನ ಗುರಿ ಆಕ್ರಮಿಸುವುದಾಗಿತ್ತು, ಕೊಲ್ಲುವುದಾಗಿತ್ತು, ಎಲ್ಲಾ ಜೀವಿಗಳಿಗಿಂತ ಮನುಷ್ಯ ಶ್ರೇಷ್ಠನೆಂದು ಸಾರುವುದಾಗಿತ್ತು. ಕೋವಿ ಹಿಡಿದವನ, ಶ್ರೇಷ್ಠತೆ ನಂಬಿದವನ ಬಹುದೊಡ್ಡ ವ್ಯಸನ ಸುಳ್ಳು, ಭಯ, ಹಿಂಸೆ ಮತ್ತು ಆಕ್ರಮಣ. ಲೇಖನಿ ಹಿಡಿದವನ ಗುರಿ ಅರ್ಥ ಮಾಡಿಕೊಳ್ಳುವುದಾಗಿತ್ತು, ಸತ್ಯದ ಹುಡುಕಾಟವಾಗಿತ್ತು, ಅರಿವಿನ ದಾರಿಯಾಗಿತ್ತು. ನಾವು ಕೋವಿ ಹಿಡಿಯಬೇಕೇ ಅಥವಾ ಲೇಖನಿ ಹಿಡಿಯಬೇಕೆ?

WhatsApp Image 2025 11 17 at 5.29.17 PM
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...