ಸಂವಿಧಾನದ ಪ್ರಸ್ತಾವನೆ: ಯಾವುದು ಅಧಿಕೃತ, ಯಾವುದು ಸರಿ?

Date:

ಸರ್ಕಾರವು ವಿವಿಧ ಸಂದರ್ಭಗಳಲ್ಲಿ ಪ್ರಕಟಿಸಿರುವ ಪ್ರಸ್ತಾವನೆಯ ಕನ್ನಡ ಆವೃತ್ತಿಗಳನ್ನೊಮ್ಮೆ ಒಟ್ಟಿಗೇ ಇಟ್ಟು ನೋಡಿದರೆ ಅವುಗಳ ನಡುವೆ ಕಂಡು ಬರುವ ವ್ಯತ್ಯಾಸವು ನಮಗೆ ದಂಗುಬಡಿಸುತ್ತದೆ. ಒಂದೊಂದರಲ್ಲಿ ಒಂದೊಂದು ರೀತಿಯ ಪದಪ್ರಯೊಗವನ್ನು ಕಾಣುತ್ತೇವೆ.

ಸಂವಿಧಾನವು ಅಪಾಯದಲ್ಲಿದೆ, ಅದನ್ನು ಕಾಪಾಡುವುದು ಎಲ್ಲಾ ಪ್ರಜ್ಞಾವಂತ ನಾಗರಿಕರ ಮತ್ತು ಜನಮುಖಿ ಸರ್ಕಾರಗಳ ಅದ್ಯ ಕರ್ತವ್ಯ ಎನ್ನುವುದು ಹೆಚ್ಚು ಹೆಚ್ಚು ಮಹತ್ವವನ್ನು ಪಡೆಯುತ್ತಿದೆ. ಸಂವಿಧಾನದ ಮೂಲ ತತ್ವಗಳ ಕುರಿತು ಜನಪ್ರಿಯ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸಲು ಸಂವಿಧಾನದ ಪ್ರಸ್ತಾವನೆಯನ್ನು ಒಂದು ಸಾಧನವನ್ನಾಗಿ ಬಳಸಿಕೊಳ್ಳಬೇಕು ಎಂಬುದು ಸಮಂಜಸವೇ ಆಗಿದೆ. ಹಾಗೆ ನೋಡಿದರೆ, ಪ್ರತಿ ವರ್ಷ ನವೆಂಬರ್ 26ನ್ನು ‘ರಾಷ್ಟ್ರೀಯ ಸಂವಿಧಾನ ದಿನ’ವನ್ನಾಗಿ ಆಚರಿಸಬೇಕು ಎಂದು ನರೇಂದ್ರ ಮೋದಿಯವರು 2015ರಲ್ಲಿ ಘೋಷಿಸಿದಾಗಿನಿಂದ, ರಾಜ್ಯ ಸರ್ಕಾರವೂ ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆಯ ಭಿತ್ತಿಚಿತ್ರವನ್ನು ಎದ್ದುಕಾಣುವಂತೆ ಪ್ರದರ್ಶಿಸಬೇಕು, ಬೆಳಗಿನ ಸಮಾವೇಶದ ಹೊತ್ತಿನಲ್ಲಿ ಮಕ್ಕಳ ಕೈಯಲ್ಲಿ ಪ್ರಸ್ತಾವನೆಯನ್ನು ಓದಿಸಬೇಕು ಎಂಬುದನ್ನು ಕಡ್ಡಾಯಗೊಳಿಸಿದೆ. ಈಗಿರುವ ಸರ್ಕಾರವೂ ಅದನ್ನು ಪುನರುಚ್ಚರಿಸಿದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ ಸರ್ಕಾರವು ಎಲ್ಲಾ ಸರ್ಕಾರಿ ಮತ್ತು ಅರೆಸರ್ಕಾರಿ ಕಚೇರಿಗಳಲ್ಲಿ ಪ್ರಸ್ತಾವನೆಯ We the People ಅನ್ನು ಹಾಕುವುದನ್ನು ಕಡ್ಡಾಯಗೊಳಿಸಿದೆ. ಈ ನಿಟ್ಟಿನಲ್ಲಿ ಈಗಿನ ಸರ್ಕಾರದ ಒಂದು ಪ್ರಮುಖ ಸಾಧನೆಯೆಂದರೆ 2023ರ ಅಂತರರಾಷ್ಟ್ರೀಯ ಜನತಂತ್ರ ದಿನವಾದ ಸೆಪ್ಟೆಂಬರ್ 15ರಂದು ಕರ್ನಾಟಕ ಸರ್ಕಾರದ ನೇತೃತ್ವದಲ್ಲಿ ಮಕ್ಕಳೂ ಸೇರಿದ ಹಾಗೆ 2.28 ಕೋಟಿ ಜನ ಪ್ರಸ್ತಾವನೆಯನ್ನು ಓದಿ ಸಂವಿಧಾನಕ್ಕೆ ತಮ್ಮ ಬದ್ಧತೆಯನ್ನು ತೋರಿದರು. ಆದರೆ, ಓದಿದ್ದು ಯಾವ ಪ್ರಸ್ತಾವನೆ?

ಸರ್ಕಾರವು ಪ್ರಕಟಿಸಿದ ಸಂವಿಧಾನದ 1976 ಮತ್ತು 2019ರ ಕನ್ನಡ ಆವೃತ್ತಿ, ಶಾಲೆಗಳಲ್ಲಿ ಪ್ರದರ್ಶಿಸಲೆಂದು ಶಿಕ್ಷಣ ಇಲಾಖೆ ಒದಗಿಸಿದ ಮಾದರಿ, ಕಳೆದ ವರ್ಷ ರಾಜ್ಯ 2.28 ಕೋಟಿ ಜನ ಓದಿದ ಆವೃತ್ತಿ, ವಿಧಾನ ಸೌಧದಲ್ಲಿ ಈಗಿನ ಸಭಾಧ್ಯಕ್ಷರಾದ ಯು.ಟಿ.ಖಾದರ್‌ ಅವರ ಕಚೇರಿಯಲ್ಲಿರುವ ಚಿತ್ರ. ವಿಧಾನಸೌಧದ ಮೂರನೇ ಮಹಡಿಯ ಗೋಡೆಯ ಮೇಲೆ ಪ್ರಸ್ತಾವನೆಯ ಇಂಗ್ಲಿಷ್ ಮತ್ತು ಕನ್ನಡ ಫಲಕ, ಇತ್ತೀಚೆಗೆ, ಜುಲೈ 2024ರಂದು ವಿಧಾನಸಭೆಯ ವಿನೂತನ ಪಶ್ಚಿಮ ದ್ವಾರದ ಬಳಿ ಸುಂದರವಾದ ಚೌಕಟ್ಟಿನಲ್ಲಿ ಅಳವಡಿಸಲಾಗಿರುವ ಪ್ರಸ್ತಾವನೆ- ಪ್ರಸ್ತಾವನೆ ಒಂದು, ಮಾದರಿ ಹಲವು.

ಯಾವುದು ಅಧಿಕೃತ, ಯಾವುದು ಸರಿ
ಒಮ್ಮೆ ನೀವೇನಾದರೂ ಸರ್ಕಾರವು ವಿವಿಧ ಸಂದರ್ಭಗಳಲ್ಲಿ ಪ್ರಕಟಿಸಿರುವ ಪ್ರಸ್ತಾವನೆಯ ಕನ್ನಡ ಆವೃತ್ತಿಗಳನ್ನೊಮ್ಮೆ ಒಟ್ಟಿಗೇ ಇಟ್ಟು ನೋಡುವುದಾದರೆ, ಮುಖ್ಯವಾಗಿ ಆರಂಭದ ಭಾಗದಲ್ಲಿ, ಅವುಗಳ ನಡುವೆ ಕಂಡು ಬರುವ ವ್ಯತ್ಯಾಸವು ನಿಮಗೆ ದಂಗುಬಡಿಸುತ್ತದೆ. ಒಂದೊಂದರಲ್ಲಿ ಒಂದೊಂದು ರೀತಿಯ ಪದಪ್ರಯೊಗವನ್ನು ಕಾಣುತ್ತೇವೆ. ಒಂದೊಂದಾಗಿ ನೋಣೋಣ.

ಪೀಠಿಕೆ ೧

ತೀರಾ ಇತ್ತೀಚೆಗೆ ಜುಲೈ 15ರಂದು ಸ್ವತಃ ಮುಖ್ಯಮಂತ್ರಿಯವರು ಅನಾವರಣಗೊಳಿಸಿದ ಪ್ರಸ್ತಾವನೆಯನ್ನು ನೋಡೋಣ. ಇದರ, ‘ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ’ ಎಂದಿರುವ ಪದಪುಂಜವನ್ನು ಆವರಣದಲ್ಲಿ ಇಡಲಾಗಿದೆ; ಇದಿನ್ನೂ ಸಾಧಿಸಲಿಲ್ಲವೆಂದೇ? ಇಲ್ಲಿ ಆವರಣ ಚಿಹ್ನೆ ಬಳಸಿರುವ ಉದ್ದೇಶವೇನು? ಇಲ್ಲಿ ಆಗಿರುವ ಪ್ರಮಾದವೆಂದರೆ, ಸಂವಿಧಾನದ 2019ರ ಕನ್ನಡ ಆವೃತ್ತಿಯಲ್ಲಿನ ಪ್ರಸ್ತಾವನೆಯಲ್ಲಿ ಈ ರೀತಿ ಆವರಣವನ್ನು ಹಾಕಿ, ಅದಕ್ಕೆ (1) ಎಂದು ನಮೂದಿಸಿ ಅಡಿಟಿಪ್ಪಣಿಯನ್ನು ಕೊಡಲಾಗಿದೆ. ಈ ಸುಂದರವಾದ ಪ್ರಸ್ತಾವನೆಯನ್ನು ರೂಪಿಸಿದವರು ಮಕ್ಕೀಕಾ ಮಕ್ಕಿ ಆವರಣವನ್ನೂ ಬಳಸಿಕೊಂಡಿದ್ದಾರೆ!

1949 ನವೆಂಬರ್ 26ರಂದು ಸಂವಿಧಾನ ರಚನಾ ಸಭೆಯಲ್ಲಿ ಅಂಗೀಕಾರವಾದ ಸಂವಿಧಾನವು ಮೂಲ ಇಂಗ್ಲಿಷ್‍ನಲ್ಲಿದೆ. ಅದರ ಅಧಿಕೃತ ಹಿಂದಿ ಅವೃತ್ತಿಯನ್ನೂ 1950ರ ಜನವರಿ 26ರಂದು ಜಾರಿಗೆ ತರಲಾಯಿತು. ಕನ್ನಡ ಆವೃತ್ತಿಯನ್ನು ಕರ್ನಾಟಕ ರಾಜಭಾಷಾ (ವಿಧಾಯಿ) ಆಯೋಗ ತಯಾರಿಸಿದೆ. ಆಗಿನಿಂದ ಹಿಡಿದು ಈ ವರೆಗಿನ ವಿವಿಧ ಅನುವಾದಗಳಲ್ಲಿ, ಮುಖ್ಯವಾಗಿ, ಇಂಗ್ಲಿಷಿನ We the People’,
‘Democratic’ ಮತ್ತು ‘Secular’ ಎಂಬ ಪದಗಳಿಗೆ ಒಂದೊಂದು ಆವೃತ್ತಿಯಲ್ಲಿ ಒಂದೊಂದು ಕನ್ನಡ ಪರ್ಯಾಯ ಪದಗಳನ್ನು ಬಳಸಿರುವುದು ಕಂಡುಬರುತ್ತದೆ. ಪದಗಳು ಯಾವುದಾದರೇನು ನಾವು ಸರಿಯಾಗಿ ಅರ್ಥ ಮಾಡಿಕೊಂಡರಾಯಿತು ಎಂದು ಕೆಲವರು ವಾದಿಸುತ್ತಾರೆ. ಆದರೆ, ಮನೋಭಾಷಾ ವಿಜ್ಞಾನದ ಪ್ರಕಾರ, ‘ನಾವು ಬಳಸುವ ಪದಗಳು ನಮ್ಮ ಮನೋಭಾವನ್ನು ಬಿಂಬಿಸುತ್ತವೆ,’ ಎನ್ನುವ ಹಾಗೆಯೇ, ‘ನಾವು ಬಳಸುವ ಪದಗಳು ನಮ್ಮ ಮನೋಭಾವವನ್ನು ರೂಪಿಸುತ್ತವೆ’ ಕೂಡ. ಪದಗಳ ಆಯ್ಕೆ ನಮ್ಮ ಉದ್ದೇಶವನ್ನು ತೋರಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಪೀಠಿಕೆ ೨

‘ವಿ ದ ಪೀಪಲ್’ನಿಂದಲೇ ಆರಂಭಿಸೋಣ. ಪೀಪಲ್ ಎನ್ನುವುದನ್ನು ‘ಪ್ರಜೆಗಳಾದ ನಾವು’ ಎಂದು ಅನುವಾದಿಸಿರುವುದೇ ಹೆಚ್ಚು. ಮಹಾರಾಷ್ಟ್ರದ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಫೆಬ್ರವರಿ 23ರಂದು ಮಾಡಿದ ಉಪನ್ಯಾಸದಲ್ಲಿ ಸುಪ್ರೀಮ್ ಕೊರ್ಟಿನ ಮುಖ್ಯ ನ್ಯಾಯಾಧೀಶರಾದ ಡಿ.ವೈ.ಚಂದ್ರಚೂಡ್‍ ಅವರು ಪ್ರಸ್ತಾವನೆಯ ಬಗ್ಗೆ ಮಾತಾಡುತ್ತ, ‘ಇದು ಭಾರತದ ಜನರು, ‘ಪ್ರಜೆ’ಗಳ ಸ್ಥಿತಿಯಿಂದ ‘ನಾಕರಿಕರ’ ಸ್ಥಿತಿಗೆ ಆದ ಪರಿವರ್ತನೆಯನ್ನು ಸೂಚಿಸುತ್ತದೆ.’ ಎನ್ನುತ್ತಾರೆ. ‘ಪ್ರಜೆ’ ಎಂದರೆ, ‘ಒಬ್ಬ ಆಳರಸನ ಅಧೀನದಲ್ಲಿರುವ ಪರತಂತ್ರ ವ್ಯಕ್ತಿ’ ಎಂದರ್ಥ. ಆದ್ದರಿಂದ, ‘ಭಾರತದ ಪ್ರಜೆಗಳಾದ ನಾವು’ ಎಂದು ಹೇಳುವುದು ಹಳೆಯ ಊಳಿಗಮಾನ್ಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಸಾರ್ವಭೌಮ ರಾಷ್ಟ್ರದಲ್ಲಿ ಈಗ ರಾಜರೂ ಇಲ್ಲ, ಆದ್ದರಿಂದ ನಾವು ಪ್ರಜೆಗಳೂ ಅಲ್ಲ. ನಾವು ‘ಜನ’. ಹಿಂದಿ ಪ್ರಸ್ತಾವನೆಯಲ್ಲಿ ‘ಲೋಗ್’ ಎಂಬ ಪದವಿದೆ.

ಅದನ್ನು ಅನುಸರಿಸಿ ‘ಡೆಮೊಕ್ರಟಿಕ್’ ಎನ್ನುವ ಪದಕ್ಕೆ ಹಿಂದಿಯಲ್ಲಿ ‘ಲೋಕತಂತ್ರಾತ್ಮಕ್’ ಎಂದಿದೆ, ಆದರೆ ಕನ್ನಡದಲ್ಲಿ, 1976ರ ಆವೃತ್ತಿಯಲ್ಲಿ ’ಲೋಕತಂತ್ರಾತ್ಮಕ’, ಎಂಬ ಪದವಿದ್ದರೂ, ನಂತರದ ಅನುವಾದಗಳಲ್ಲಿ ಅದು, (‘ಭಾರತದ ಜನಗಳಾದ ನಾವು’ ಎಂದು ಆರಂಭಿಸಿದ್ದರೂ ಮುಂದೆ, ಜನಸತ್ತಾತ್ಮಕ ಎಂದಿರುವ ಬದಲಿಗೆ) ‘ಪ್ರಜಾಸತ್ತಾತ್ಮಕ’ ಆಗಿದೆ. ನಾವು ‘ಡೆಮೊ’ ಎಂಬ ಪದವನ್ನು ‘ಜನ’ ಎಂದು ಅನುವಾದಿಸುವುದಾದರೆ, ‘ಡಿಮೋಕ್ರಸಿ’ಗೆ ‘ಜನಸತ್ತಾತ್ಮಕ’ ಇದ್ದರೆ ಒಳ್ಳೆಯದು, ‘ಜನತಂತ್ರಾತ್ಮಕ’, ‘ಲೋಕತಂತ್ರಾತ್ಮಕ’ ಇನ್ನೂ ಒಳ್ಳೆಯದು.

ಇನ್ನು, ಇಂಗ್ಲಿಷಿನ, ‘ಸೆಕ್ಯುಲರ್’ ಎನ್ನುವ ಪದ. ಇದಂತೂ ಇನ್ನೂ ಹಲವು ಅವತಾರಗಳನ್ನು ತಾಳಿದೆ. ಕೇಂಬ್ರಿಜ್ ಅಡ್ವಾನ್ಸ್ಡ್ ಲರ್ನರ್ಸ್ ಡಿಕ್ಷನರಿ ಪ್ರಕಾರ, ‘secular’ ಎಂದರೆ ‘not connected with religious or spiritual matters’, ‘nothaving any connection with religion’ ಎಂದಿದೆ. ಇನ್ನು, ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟುವಿನಲ್ಲಿ ಇದರ ಅರ್ಥ: ‘ಲೌಕಿಕ, ಜಾತ್ಯತೀತ, ಮತಧರ್ಮಾತೀತ; ರಾಷ್ಟ್ರನೀತಿ, ಆಡಳಿತ ವ್ಯವಸ್ಥೆಯಲ್ಲಿ ಧರ್ಮದ ಪ್ರವೇಶ ಕೂಡದು ಎನ್ನುವ; ಧಾರ್ಮಿಕ ಕ್ಷೇತ್ರ, ಮಠ, ಮಸೀದಿ, ಚರ್ಚು ಇತ್ಯಾದಿಗಳಿಗೆ ಸಂಬಂಧಿಸದೇ ಇರುವ’ ಎಂದಿದೆ.

ಪೀಠಿಕೆ ೩

ವಿಧಾನ ಸೌಧ 3ನೇ ಮಹಡಿಯ ಗೋಡೆಯ ಮೇಲಿರುವ ಪ್ರಸ್ತಾವನೆಯಲ್ಲಿ ‘ಜಾತ್ಯತೀತ’ ಎಂಬ ಪದವನ್ನು ಬಳಸಲಾಗಿದೆ. ಉಳಿದವರೂ ಇದನ್ನು ಹೆಚ್ಚು ಜನಪ್ರಿಯವಾಗಿ ಬಳಸುತ್ತಿದ್ದಾರೆ. ಆದರೆ, ಹಿಂದಿ ಅವತರಣಿಕೆಯಲ್ಲಿ ಇದಕ್ಕೆ ‘ಪಂಥ್ ನಿರಪೇಕ್ಷ್’ ಎಂಬ ಬಳಸಲಾಗಿದೆ, ಸೆಕ್ಯುಲರ್ ಎಂಬ ಪದಕ್ಕೆ ಇದು ಹೆಚ್ಚು ಸೂಕ್ತ. ಆದರೆ, ಸಂವಿಧಾನದ 2019ರ ಅಧಿಕೃತ ಆವೃತ್ತಿಯಲ್ಲಿ, ಶಿಕ್ಷಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಪ್ರಕಟಿಸಿರುವ ಪ್ರಸ್ತಾವನೆಗಳಲ್ಲಿ, ಮತ್ತು ಜುಲೈ 15ರಂದು ವಿಧಾನ ಸಭೆಯ ಪಶ್ಚಿಮ ದ್ವಾರದ ಬಳಿ ಅನಾವರಣಗೊಳಿಸಲಾದ ಪ್ರಸ್ತಾವನೆಯಲ್ಲಿ, ‘ಸರ್ವಧರ್ಮ ಸಮಭಾವದ’ ಎಂದಿದೆ. ಎಷ್ಟೇ ಧಾರಾಳವಾಗಿ ಯೋಚಿಸಿದರೂ, ಸೆಕ್ಯುಲರ್ ಎನ್ನುವುದನ್ನು ಸರ್ವಧಮ ಸಮಭಾವ ಎಂದು ಅರ್ಥ ಮಾಡಿಕೊಳ್ಳಲು ಹೇಗೆ ಸಾಧ್ಯ? ಸೆಕ್ಯುಲರ್ ಎಂಬ ಪದದಿಂದಲೇ ದಿಗಿಲುಗೊಳ್ಳುವ ಮನೋವೃತ್ತಿಗಳು ಮಾತ್ರ ಈ ರೀತಿ ಸಾರಿಸುವ ಕೆಲಸ ಮಾಡಬಹುದಷ್ಟೆ.

ಭಾರತ ಸಂವಿಧಾನದ ಅನುಚ್ಛೇದ 25, ದೇಶದ ಪ್ರತಿಯೊಬ್ಬ ನಾಗರಿಕರಿಗೆ ತಮ್ಮ ‘ಅಂತಃಸಾಕ್ಷಿ, ಅಥವಾ ತಮ್ಮ ಆಯ್ಕೆಯ ಯಾವುದೇ ಧರ್ಮವನ್ನು ನಂಬುವ, ಆಚರಿಸುವ ಮತ್ತು ಪ್ರಚಾರ ಮಾಡುವ’ ಹಕ್ಕನ್ನು ನೀಡುತ್ತದೆ. ಇದು ವ್ಯಕ್ತಿಗಳು, ಅವರ ಸಮುದಾಯಗಳು, ಅವರ ಸಂಸ್ಥೆಗಳಿಗೆ ಅನ್ವಯ. ಆದರೆ ರಾಷ್ಟ್ರಕ್ಕೆ ತನ್ನದೇ ಆದ ಧರ್ಮವಿಲ್ಲ. ಅದು, ‘ಮತಧರ್ಮ ನಿರಪೇಕ್ಷ’ವಾದದ್ದು. ಆದ್ದರಿಂದ ಸೆಕ್ಯುಲರ್ ಎಂಬುದನ್ನು ಈ ರೀತಿಯಲ್ಲಿಯೇ ಅರ್ಥ ಮಾಡಿಕೊಳ್ಳಬೇಕು.

ಮುಂದುವರೆದು, ಪ್ರಜ್ಞಾವಂತ ಮಹಿಳೆಯರು ಪ್ರಸ್ತಾವನೆಯಲ್ಲಿರುವ, ‘‘Fraternity’ ಎಂಬ ಪದವನ್ನು ‘ಭ್ರಾತೃಭಾವನೆ’, ‘ಭ್ರಾತೃತ್ವʼ ಎಂಬ ಪುಲ್ಲಿಂಗ ಭಾವವನ್ನು ತೋರುವ ಪದದ ಬದಲಿಗೆ, ‘ಬಂಧುತ್ವ’ ಎಂಬ ಲಿಂಗ ನಿರಪೇಕ್ಷ ಪದವನ್ನು ಬಳಸಬೇಕು ಎಂದೂ ಒತ್ತಾಯಿಸುತ್ತಾರೆ. ಹಾಗೆ ನೋಡಿದರೆ, ಹಿಂದಿ ಅನುವಾದದಲ್ಲಿ ಫೆಟರ್ನಿಟಿಯನ್ನು, ‘ಬಂಧುತಾ’ ಎಂದೇ ಬಳಸಲಾಗಿದೆ.

ಪೀಠಿಕೆ ೪೫

ಪ್ರಸ್ತಾವನೆಯು ಸಂವಿಧಾನದ ಓದಿಗೊಂದು ಕೈದೀವಿಗೆ. ಸಂವಿಧಾನ ಸಾಕ್ಷರತೆಯ ಆಂದೋಲನಗಳಲ್ಲಿ ನಾವು ಪ್ರಸ್ತಾವನೆಯಿಂದಲೇ ಕಲಿಕೆಯನ್ನು ಆರಂಭಿಸುತ್ತೇವೆ. ಹಲವು ಸಮೂಹಗಳು, ಪ್ರಸ್ತಾವನೆಯ ಹಲವು ರೂಪಗಳಲ್ಲಿ ಲಕ್ಷಾಂತರ ಪ್ರತಿಗಳನ್ನು ವಿತರಿಸಿವೆ. ಈಗ ಇದು ಅಮೆರಿಕನ್‍ನಂಥ ವೇದಿಕೆಗಳಲ್ಲಿ ಮಾರಾಟಕ್ಕೂ ಲಭ್ಯ ಇವೆ. ಆದರೆ, ಈಗಲೂ ನಮ್ಮ ಸರಕಾರಕ್ಕೆ ಒಂದು ಸಮಾನ ಸ್ವರೂಪದ (ಪೀಠಿಕೆ/ಪೂರ್ವ ಪೀಠಿಕೆ ಅಲ್ಲ) ಪ್ರಸ್ತಾವನೆಯನ್ನು ರೂಪಿಸಿ, ‘ಅಧಿಕೃತ’ ಎಂಬ ಛಾಪನ್ನು ಕೊಡಲಾಗಿಲ್ಲ. ಆದ್ದರಿಂದ, ಸರಕಾರವು ಕಾನೂನು ಇಲಾಖೆ, ಭಾಷಾಂತರ ಇಲಾಖೆ ಪ್ರತಿನಿಧಿಗಳು, ಸಂವಿಧಾನ ಮತ್ತು ಭಾಷಾ ತಜ್ಞರ ಒಂದು ಚಿಕ್ಕ ಸಮಿತಿಯನ್ನು ರಚಿಸಿ ಅವರಿಗೆ ಈ ತುರ್ತು ಜವಾಬ್ದಾರಿಯನ್ನು ವಹಿಸಿಕೊಡುವುದು ಸೂಕ್ತ.

ವಿಧಾನ ಸೌಧದಲ್ಲಿಲ್ಲವೇಕೆ?
ಇದೇ ಹೊತ್ತಿನಲ್ಲಿ ಇನ್ನೊಂದು ಪ್ರಶ್ನೆ. ಸಂವಿಧಾನದ ಪ್ರತೀಕವಾದ ಪ್ರಸ್ತಾವನೆಯ ಭಿತ್ತಿ ಚಿತ್ರವನ್ನು ಇಡೀ ರಾಜ್ಯದ ಶಾಲಾಕಾಲೇಜುಗಳು, ಸರಕಾರಿ, ಅರೆಸರ್ಕಾರಿ ಸಂಸ್ಥೆಗಳಲ್ಲಿ ಪ್ರದರ್ಶಿಸುವುದು ಕಡ್ಡಾಯ ಎಂದು ಸರ್ಕಾರವು ವಿವಿಧ ಹಂತಗಳಲ್ಲಿ ಆದೇಶಗಳನ್ನು ಮಾಡಿದೆ. ಆದರೆ, ಈ ನಿಯಮ ವಿಧಾನಸೌಧದ ಕಚೇರಿಗಳಿಗೆ ಅನ್ವಯಿಸುವುದಿಲ್ಲವೇಕೆ? ಈಗಲೂ ರಾಷ್ಟ್ರ ನಾಯಕರ ಫೋಟೋಗಳ ಜೊತೆಯಲ್ಲಿ, ಮುಖ್ಯ ಮಂತ್ರಿಗಳ ಅನುಮತಿಯೊಂದಿಗೆ ಬಸವಣ್ಣನವರ ಫೋಟೋವನ್ನೂ ಕೂಡ ಎಲ್ಲಾ ಕಚೇರಿಗಳಲ್ಲಿ ಹಾಕಲಾಗಿದೆ. ಇನ್ನು ಕೆಲವು ಅಧಿಕಾರಿಗಳು ತಮ್ಮ ಟೇಬಲುಗಳು ಮೇಲೆ, ಕಂಪ್ಯೂಟರ್ ಪಕ್ಕ ತಮ್ಮ ತಮ್ಮ ಮನೆದೇವರ ಫೋಟೋಗಳನ್ನೂ ಬೇಕಾದರೆ ಇಟ್ಟುಕೊಳ್ಳುತ್ತಾರೆ. ಆದರೆ, ಎಲ್ಲ ಕಡೆ ರಾರಾಜಿಸುವ ಪ್ರಸ್ತಾವನೆಗೆ ಮಾತ್ರ ವಿಧಾನ ಸೌಧದ ಕಚೇರಿಗಳಲ್ಲಿ ಜಾಗವಿಲ್ಲ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಇಬ್ಬರು ಮತ್ತು ಈಗಿನ ಅಧ್ಯಕ್ಷರಿಗೆ ಪ್ರಸ್ತಾವನೆಯ ಕನ್ನಡ ಆವೃತ್ತಿಯ ಪೋಟೋವನ್ನು ಉಡುಗೊರೆ ರೂಪದಲ್ಲಿ ಕೊಟ್ಟು ಇದನ್ನು ನಿಮ್ಮ ಕಚೇರಿಯಲ್ಲಿ ಹಾಕಿಕೊಳ್ಳಿ ಎಂದು ವಿನಂತಿಸಿದಾಗ, ಅವರು ಅಧಿಕೃತ ಅನುಮತಿಯ ಕೊರತೆಯಿಂದಾಗಿ ಇನ್ನೂವರೆಗೂ ಹಾಕಿಕೊಂಡಿಲ್ಲ. ಪ್ರಸ್ತಾವನೆಯ ಫೋಟೋವನ್ನು ಹಾಕಿಕೊಳ್ಳುವ ಕುರಿತು ಅನುಮತಿ ಇಷ್ಟೊಂದು ಕಷ್ಟವೇ? ಸಂವಿಧಾನದ ಸಂರಕ್ಷಣೆಯಲ್ಲಿ ಕಟಿಬದ್ಧರಾಗಿರುವ ಕರ್ನಾಟಕ ಸರಕಾರ ಮತ್ತು ಮುಖ್ಯಮಂತ್ರಿಗಳು ಈ ಚಿಕ್ಕಪುಟ್ಟ ವ್ಯತ್ಯಯಗಳನ್ನು ಸರಿಪಡಿಸಿ, ಸಂವಿಧಾನಕ್ಕೆ ನ್ಯಾಯ ಒದಗಿಸಲಿ.

WhatsApp Image 2025 11 17 at 4.13.46 PM
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...