‘ವಚನ ದರ್ಶನ’ದ ನೆಪದಲ್ಲಿ ಹಿಂದುತ್ವದ ರಾಡಿ ಎಬ್ಬಿಸುತ್ತಿದೆಯೇ RSS?

Date:

ಸನಾತನ ವೈದಿಕ ಧರ್ಮದಲ್ಲಿ ಹೊಸತನಕ್ಕೆ ಮುಕ್ತ ಅವಕಾಶವಿದೆ. ಟೀಕೆ ಟಿಪ್ಪಣಿಗಳಿಗೆ ಬಾಗಿಲು ತೆರೆದಿದೆ” ಎಂಬ ಸುಳ್ಳನ್ನು ಬಿತ್ತಲಾಗುತ್ತಿದೆ. ಆ ಮುಕ್ತ ಅವಕಾಶವಿದ್ದಿದ್ದರೆ ಬಹುಶಃ ಡಾ. ಕಲಬುರಗಿ, ಗೌರಿ ಲಂಕೇಶ್, ಪಾನ್ಸರೆ, ದಾಬೋಲ್ಕರ್ ಅವರ ಹತ್ಯೆಗಳು ನಡೆಯುತ್ತಿರಲಿಲ್ಲ

ಇತ್ತೀಚೆಗೆ ವೇದ ಮತ್ತು ಲಿಂಗತತ್ವದ ಸಮನ್ವಯಕಾರರೆಂದು ಬಿಂಬಿಸುವ ಮನುವಾದಿಗಳ ಪ್ರಯತ್ನ ಮುಂದುವರೆದಿದೆ. ಅದರ ಜೊತೆಗೆ ಕರ್ನಾಟಕ ಸರಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಮೇಲೆ ಸಂಘ-ಪರಿವಾರ ಅತ್ಯಂತ ಹೆಚ್ಚು ಚಿಂತೆಗೊಳಗಾದಂತೆ ಕಾಣುತ್ತಿದೆ. ಅದರಿಂದ ಘಾಸಿಗೊಂಡು ಸಾವರಿಸಿಕೊಳ್ಳಲು ರಾಷ್ಟ್ರೀಯ ಸ್ವಯಂಸೇವಕ ಸಂಘವು “ವಚನ ದರ್ಶನ” ಎನ್ನುವ ಪುಸ್ತಕವನ್ನು ನೆಪವಾಗಿಟ್ಟುಕೊಂಡು ರಾಜ್ಯಾದ್ಯಂತ ಹಿಂದುತ್ವದ ರಾಡಿ ಎಬ್ಬಿಸುತ್ತಿದೆ. ಕೇವಲ 40-50ಸಾವಿರ ರೂಪಾಯಿಗಳಲ್ಲಿ ಈ ಪುಸ್ತಕದ ಬಿಡುಗಡೆಗೆ ಕನಿಷ್ಠ ಪ್ರತಿ ಜಿಲ್ಲೆಯಲ್ಲಿ 5-6 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ. ಇದು ಜನರನ್ನು ದಾರಿತಪ್ಪಿಸುವ ಹಾಗೂ ಸತ್ಯವನ್ನು ತಿರುಚುವ ಒಂದು ಹುಸಿ ಪ್ರಯತ್ನವಾಗಿದೆ. ಇಡೀ ಬಸವಾದಿ ಶರಣರ ಲಿಂಗಾಯತ ಧರ್ಮ ಸಿದ್ಧಾಂತವನ್ನು ಹಾಗೂ ಧರ್ಮದ ಜನಾಂಗವನ್ನು ಸನಾತನ ವೈದಿಕತೆಯ ಕರಾಳ ಕಪಿಮುಷ್ಟಿಯಲ್ಲಿರಿಸುವ ಹುನ್ನಾರ ಹೊಂದಿದೆ.

ಸನಾತನ ವೈದಿಕ ಧರ್ಮದಲ್ಲಿ ಹೊಸತನಕ್ಕೆ ಮುಕ್ತ ಅವಕಾಶವಿದೆ ಹಾಗೂ ಟೀಕೆ ಟಿಪ್ಪಣಿಗಳಿಗೆ ಬಾಗಿಲು ತೆರೆದಿದೆ ಎಂಬ ಸುಳ್ಳನ್ನು ಬಿತ್ತಲಾಗುತ್ತಿದೆ. ಆ ಮುಕ್ತ ಅವಕಾಶವಿದ್ದಿದ್ದರೆ ಬಹುಶಃ ಡಾ. ಕಲಬುರಗಿ, ಗೌರಿ ಲಂಕೇಶ್, ಪಾನ್ಸರೆ, ದಾಬೋಲ್ಕರ್ ಅವರ ಹತ್ಯೆಗಳು ನಡೆಯುತ್ತಿರಲಿಲ್ಲ ಹಾಗೂ ಸನಾತನ ವೈದಿಕ ಧರ್ಮ ಬುದ್ಧ- ಬಸವಣ್ಣನವರ ವಿಚಾರಗಳನ್ನು ಅಳವಡಿಸಿಕೊಂಡು ಬೆಳೆಯುತ್ತಿತ್ತು. ಅವನ್ನು ಅನುಸರಿಸದೆ ಸನಾತನ ಧರ್ಮವು ಇಂದು ಮನುವಿನ ಸಿದ್ಧಾಂತದ ಕೊಚ್ಚೆಯಲ್ಲಿ ಕೊಳೆಯುತ್ತಿದೆ. ತನ್ನ ಯಥಾಸ್ಥಿತಿವಾದದ ಕೆಸರಿನಲ್ಲಿಯೇ ಹೊರಳಾಡುತ್ತಿದೆ. ಬಸವಾದಿ ಶರಣರು ಶತಮಾನಗಳಿಂದ ನಡೆದು ಬಂದ ವೈದಿಕ ಸಂಪ್ರದಾಯವನ್ನು ತೀಕ್ಷ್ಣವಾದ ಶಬ್ದಗಳಲ್ಲಿ ಟೀಕಿಸಿದ್ದಲ್ಲದೆ ಒಂದು ಪರ್ಯಾಯ ಜೀವನ ಮಾರ್ಗವನ್ನುˌ ಪ್ರತಿ ಕಾಲದಲ್ಲೂ ಪ್ರಸ್ತುತವಾಗುವ ನವಸಮಾಜದ ಪರಿಕಲ್ಪನೆಯನ್ನು ಕೊಟ್ಟಿದ್ದಾರೆ. 12ನೇಯ ಶತಮಾನದಲ್ಲಿ ಬಸವಾದಿ ಶರಣರು ಸತ್ಯದ ಪಥ, ಸಮಾನ ಬದುಕು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಾನು ಇಚ್ಛಿಸಿದ ಧರ್ಮವನ್ನು ಆಚರಿಸುವ, ಮುಕ್ತವಾಗಿ ಬದುಕುವ, ಸರ್ವರಿಗೂ ಒಂದೇ ನ್ಯಾಯ (Common Civil Code)ದ ನವಸಮಾಜದ ತತ್ವವನ್ನು ಪ್ರತಿಪಾದಿಸಿದೆ. ಸನಾತನ ವೈದಿಕ ಧರ್ಮ ಹೊಸತನಕ್ಕೆ ತೆರೆದುಕೊಂಡಿದ್ದರೆ 12ನೇ ಶತಮಾನದಲ್ಲಿ ಶರಣರ ಹತ್ಯೆಗೆ ಮುಂದಾಗುತ್ತಿರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸನಾತನಿಗಳು ಹೊಸತನವನ್ನು ಒಪ್ಪಿಕೊಳ್ಳುವುದಾದಲ್ಲಿ 12ನೇಯ ಶತಮಾನದಲ್ಲಿ ಶರಣರು ಬರೆದ ಅಸಂಖ್ಯಾತ ವಚನ ರಾಶಿಯನ್ನು ಸುಟ್ಟು ಹಾಕುತ್ತಿರಲಿಲ್ಲ. ಬಸವಾದಿ ಶರಣರ ಟೀಕೆ ಟಿಪ್ಪಣಿಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕಾರ ಮಾಡುತ್ತಿದ್ದರು. ಸನಾತನಿಗಳು ಮುಕ್ತತೆಯನ್ನು ಒಪ್ಪುವದಿರಲಿ ಬಸವಾದಿ ಶರಣರ ಹೊಸ ಧರ್ಮವನ್ನು ತನ್ನ ಪಾಡಿಗೆ ಬೆಳೆಯುವ ಅವಕಾಶವನ್ನು ಕೊಡಲಿಲ್ಲ. ಹರಳಯ್ಯನ ಮಗನ ವಿವಾಹ ವಿಪ್ರ ಮಧುವರಸರ ಮಗಳ ಜೊತೆ ನಡೆದಿದ್ದನ್ನು ವಿರೋಧಿಸಿ ಅವರಿಗೆ ಮರಣದಂಡನೆಯ ಶಿಕ್ಷೆ ನೀಡಿದ್ದರ ಕಾರಣ “ಶರಣರ ಜೀವನಕ್ರಮ, ಸಿದ್ದಾಂತ, ಆಚರಣೆಗಳು ವೈದಿಕ ಸಂಪ್ರದಾಯಕ್ಕಿಂತ ವಿಭಿನ್ನವಾಗಿದ್ದವು” ಎಂಬುದಾಗಿತ್ತು. ಅಂದರೆ ಬಸವಾದಿ ಶರಣರು ಪ್ರತಿಪಾದಿಸಿದ ಲಿಂಗತತ್ವವು ಸನಾತನಿಗಳ ವೇದತತ್ವಕ್ಕೆ ವಿರೋಧವಾಗಿತ್ತು ಎಂದರ್ಥ ಅಲ್ಲವೆ? ಬಸವಣ್ಣನವರಾಗಲಿ, ಶರಣರಾಗಲಿ ವೇದದ ಯಾವ ಅಂಶವನ್ನು ಒಪ್ಪಿಕೊಂಡಿದ್ದರು ಎಂಬುದು ಸನಾತನಿಗಳು ಸ್ಪಷ್ಟಪಡಿಸಲಿ. ಸನಾತನಿಗಳ ಬಹುದೇವೋಪಾಸನೆಯನ್ನು ಶರಣರು ಒಪ್ಪಿಕೊಂಡಿರಲಿಲ್ಲ. ವೇದಪುರುಷರೆಂದು ಹಾಗೂ ಗೋತ್ರಪುರುಷರೆಂದು ಹೇಳುವ ಮಹರ್ಷಿಗಳನ್ನು ಒಪ್ಪಿಕೊಂಡಿರಲಿಲ್ಲ. ವೇದಗಳಲ್ಲಿನ ಹೀನ ಕರ್ಮಕಾಂಡ ಒಪ್ಪಿಕೊಂಡಿರಲಿಲ್ಲ.

rss shakha

ಮೊದಲನೆಯದಾಗಿ ಸನಾತನಿಗಳ ದೇವತೆಗಳಾದ ಇಂದ್ರ, ವರುಣ, ಅಗ್ನಿ, ಮಿತ್ರ, ವಾಯು ಮುಂತಾದ ಯಾವ ದೇವತೆಗಳನ್ನು ಕೂಡಾ ಶರಣರು ಮಾನ್ಯ ಮಾಡಿರಲಿಲ್ಲ. ಅದಕ್ಕೆ ಶರಣರು ಬರೆದ ವಚನಗಳೇ ಸಾಕ್ಷಿಯಾಗಿವೆ. ಎರಡನೆಯದಾಗಿ, ಗೋತ್ರಪುರುಷರೆಂದು ಬಣ್ಣಿಸಲ್ಪಡುವ ಕಶ್ಯಪ, ಅತ್ರಿ, ಭಾರದ್ವಾಜ, ಶಾಂಡಿಲ್ಯ ಬ್ರಘು, ಗೌತಮ, ವಶಿಷ್ಠ, ಉಪಮನ್ಯು ಮುಂತಾದ ಮಹರ್ಷಿಗಳನ್ನು ಶರಣರು ಮಾನ್ಯ ಮಾಡಿರಲಿಲ್ಲ. ಸನಾತನಿಗಳ ಜನವಿರೋಧಿ ಋಷಿ ಸಂಸ್ಕೃತಿಯನ್ನು ಶರಣರು ದಿಕ್ಕರಿಸಿ ನೆಲಮೂಲದ ಕೃಷಿ ಸಂಸ್ಕೃತಿಯನ್ನು ಮಾನ್ಯ ಮಾಡಿದ್ದರು. ಸನಾತನಿಗಳ ವೇದಗಳು ಯಾರನ್ನು ದಶ್ಯೂˌ ರಾಕ್ಷಸˌ ದಾನವˌ ಶೂದ್ರರೆಂದು ತಿರಸ್ಕರಿಸಲ್ಪಟ್ಟಿದರೊ ಅದೇ ಸಮುದಾಯಗಳಿಗೆ ಸೇರಿದ ಶರಣ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಶಿವನಾಗಿಮಯ್ಯ, ಉರಿಲಿಂಗಪೆದ್ದಿ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಶ್ವಪಚಯ್ಯ, ಅಲ್ಲಮಪ್ರಭುಗಳು, ಆಯ್ದಕ್ಕಿ ಮಾರಯ್ಯ, ನುಲಿಯ ಚಂದಯ್ಯ, ಹೂಗಾರ ಮಾದಯ್ಯ, ಮಾದಾರ ಧೂಳಯ್ಯ, ಕುರುಬ ಗೋಲ್ಲಾಳ, ಸತ್ಯಕ್ಕ, ಕಾಳವ್ವೆ, ಹಡಪದ ಲಿಂಗಮ್ಮ ಮುಂತಾದವರನ್ನು ಬಸವಣ್ಣನವರು ಗೋತ್ರಪುರುಷರೆಂದು ಹೇಳಿದ್ದಾರೆ.

ಈ ಶರಣರೇ ತನ್ನ ಹೆತ್ತ ತಂದೆ ತಾಯಿ ಎಂದು ಹಾಗೂ ತಾನು ಅವರ ಇವರ ತೊತ್ತಿನ ಮಗನೆಂದು ಹೇಳಿದ್ದಾರೆ. “ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ, ಚಿಕ್ಕಯ್ಯ ನಮ್ಮಯ್ಯ, ಅಣ್ಣನ್ನು ನಮ್ಮ ಕಿನ್ನರಿ ಬ್ರಮ್ಮಯ್ಯ. ಕುಲತಿಲಕ ನಮ್ಮ ಮಾದಾರಚೆನ್ನಯ್ಯ” ಎನ್ನುವ ಬಸವಣ್ಣನವರ ವಚನವೇ ಇದಕ್ಕೆ ಸಾಕ್ಷಿಯಾಗಿದೆ. ಮುಂದುವರೆದು ಬಸವಣ್ಣನವರು “ಮಾದಾರ ಚೆನ್ನಯ್ಯನು ತಿಂದು ಉಗುಳಿದ ತಾಂಬೂಲವನ್ನು ಸೇವಿಸಿ ಬದುಕುವೆನಯ್ಯ” ಎಂದು ಹೇಳಿದ್ದಾರೆ. ಅಪ್ಪಿ ತಪ್ಪಿಯೂ ಶರಣರು ಸನಾತನಿಗಳ ಗೋತ್ರಪುರುಷರನ್ನು ಹಾಗೂ ಮಹರ್ಷಿಗಳನ್ನು ಒಪ್ಪಿಕೊಂಡಿಲ್ಲ. ಬಸವಣ್ಣನವರು ತಮ್ಮ ವಚನದಲ್ಲಿ “ಭಕ್ತಿ ಇಲ್ಲದ ಬಡವ ನಾನಯ್ಯ, ಕಕ್ಕಯ್ಯನ ಮನೆಯಲ್ಲೂ ಬೇಡಿದೆ, ಚೆನ್ನಯ್ಯನ ಮನೆಯಲ್ಲೂ ಬೇಡಿದೆ, ದಾಸಯ್ಯನ ಮನೆಯಲ್ಲೂ ಬೇಡಿದೆ, ಎಲ್ಲ ಪುರಾತನರು ನೆರೆದು ಭಕ್ತಿಯ ಬಿಕ್ಷೆಯನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ” ಎಂದಿದ್ದಾರೆ. “ವೇದಗಳು ಗಡಗಡ ನಡುಗಿದವುˌ ಶಾಸ್ತ್ರಗಳು ಕೈಜಾರಿ ಬಿದ್ದವು” ಎಂದು ವೇದಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಮೂರನೆಯದಾಗಿˌ ಶರಣರು ವೈದಿಕರ ಕರ್ಮಸಿದ್ಧಾಂತ, ಸ್ವರ್ಗನರಕ, ಪುನರ್ಜನ್ಮ, ಯಜ್ಞ ಯಾಗ, ಹೋಮ ಹವನ, ಜಪ ತಪ, ಜಾತಕ ಸೂತಕ, ಪಂಚಾಂಗ ಜ್ಯೋತಿಷ್ಯಗಳನ್ನು ಖಡಾಖಂಡಿತವಾಗಿ ದಿಕ್ಕರಿಸಿದ್ದಾರೆ. ಗಾಯತ್ರಿ ಮಂತ್ರ, ಗೀತಾ ಪಠಣ ಮುಂತಾದವುಗಳನ್ನು ಟೀಕಿಸಿ ಸಾಮಾನ್ಯ ಜನರಿಗೆ ಅರ್ಥವಾಗುವ ಆಡು ನುಡಿ ಕನ್ನಡದಲ್ಲಿ ವಚನಗಳನ್ನು ಬರೆದು ಹೊಸ ಧರ್ಮವನ್ನು ಬೋಧಿಸಿದ್ದಾರೆ. ವೇದ ಉಪನಿಷತ್ತುಗಳಲ್ಲಿನ ತಿರುಳನ್ನೇ ಶರಣರು ಬೋಧಿಸಿದ್ದಾರೆಂದು ವಾದಿರುವ ಸಂಘಿಗಳು ಭಗವದ್ಗೀತೆಯ ಜಾತಿಪೋಷಣೆ ಹಾಗೂ ವಚನ ಸಾಹಿತ್ಯದ ಉದಾತ್ತ ತತ್ವಗಳನ್ನು ಅರ್ಥಮಾಡಿಕೊಂಡಿಲ್ಲ ಎಂದಲ್ಲ. ಶರಣರ ತತ್ವಗಳನ್ನು ತಿರುಚುವ ಕೆಲಸಕ್ಕೆ ಸಂಘಿಗಳು ಕೈ ಹಾಕಿದ್ದಾರೆ. ಗೀತೆಯಲ್ಲಿ ಕೃಷ್ಣನು ತನ್ನ ಅವತಾರದ ಉದ್ದೇಶ ಅಧರ್ಮ ನಾಶ ಮಾಡಿ ಧರ್ಮ ಸ್ಥಾಪನೆ ಮಾಡುವುದಾಗಿ ಹೇಳಿದ್ದಾನಂತೆ. ಹಾಗಾದರೆ ಅಧರ್ಮ ಎಂದರೆ ಯಾವುದು? ಗೀತೆಯ ಅಧ್ಯಾಯ1 ಶ್ಲೋಕ 41ರಿಂದ 45ರಲ್ಲಿ ಅಧರ್ಮ ಎಂದರೆ ಏನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇದೆ. ಆ ಶ್ಲೋಕಗಳಲ್ಲಿ ಸ್ವಯಂ ಕೃಷ್ಣನು ಅರ್ಜುನನಿಗೆ ವರ್ಣಸಂಕರವೇ ಅಧರ್ಮ ಎಂದು ಹೇಳಿದ್ದಾನೆ. ವರ್ಣಸಂಕರವೆಂದರೆ ಚಾತುರ್ವರ್ಣ ವ್ಯವಸ್ಥೆಯ ಉಲ್ಲಂಘನೆ.

ಮೇಲ್ಜಾತಿಯ ಹೆಣ್ಣನ್ನು ಕೆಳಜಾತಿ ಗಂಡು ವರಿಸುವಂತಿಲ್ಲ. ಹಾಗೆ ಮಾಡಿದರೆ ಅದು ವರ್ಣಸಂಕರವಾಗುತ್ತದೆ. ಅದುವೇ ಅಧರ್ಮ ಎನ್ನುತ್ತಾನೆ ಕೃಷ್ಣ. ಇಂತಹ ಅಧರ್ಮವನ್ನು ನಾಶ ಮಾಡಿ ವರ್ಣವ್ಯವಸ್ಥೆ ಪುನರ್‌ ಸ್ಥಾಪಿಸುವುದೇ ಧರ್ಮ ಎನ್ನುವ ಗೀತೆಯ ಮರ್ಮವನ್ನು ಶರಣರು ದಿಕ್ಕರಿಸಿದ್ದಾರೆ. ಜಾತಿ ವ್ಯವಸ್ಥೆಯ ನಾಶಕ್ಕೆ ಶರಣರು ಹೋರಾಡಿದ್ದಾರೆ. ಬಸವಣ್ಣನವರು “ಹೊಲೆಗಂಡಲ್ಲದೆ ಪಿಂಡದ ನೆಲಗಾಶ್ರಯವಿಲ್ಲ. ಜಲಬಿಂದು ವ್ಯವಹಾರ ಒಂದೇ ಇರಲು ಕರ್ಣದಲಿ ಜನಿಸಿದವರುಂಟೆ ಜಗದೊಳಗೆˌ” “ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ” ಜಲವೊಂದೆ ಶೌಚಾಚಮನಕ್ಕೆ…” ಎಂದಿದ್ದಾರೆ. ಸಮಗಾರ ಹರಳಯ್ಯನ ಮಗ ಹಾಗೂ ವಿಪ್ರ ಮಧುವರಸನ ಮಗಳ ನಡುವಿನ ಮದುವೆ ಮಾಡುವ ಮೂಲಕ ಜಾತಿನಾಶಕ್ಕೆ ಕಾರಣಕರ್ತರಾದವರು ಬಸವಣ್ಣನವರು. ಅನುಭವ ಮಂಟಪದ ಮಹಾಪೀಠದ ಮೇಲೆ ಶೋಷಿತ ವರ್ಗದ ಅಲ್ಲಮರನ್ನು ಕೂರಿಸಿ ಧರ್ಮದ ಅಧಿಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೆ ವಿಸ್ತರಿಸಿದ್ದಾರೆ. ಬಸವಾದಿ ಶರಣರು ವೈದಿಕ ಪರಂಪರೆಯಾಗಲಿ, ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಆಶ್ರಮಗಳನ್ನು ಪಾಲಿಸಲಿಲ್ಲˌ ವರ್ಣಾಶ್ರಮ ಅನುಸರಿಸಲಿಲ್ಲ.

ವಚನ ದರ್ಶನ

ಹಾಗಾದರೆ, ಶರಣರ ತತ್ವ ಸನಾತನ ಧರ್ಮದ ಮುಂದುವರೆದ ಭಾಗ ಹೇಗಾಗುತ್ತದೆ ಎನ್ನುವುದಕ್ಕೆ ಸಂಘಿಗಳು ಉತ್ತರಿಸಲಿ. ಬೌದ್ದ, ಜೈನ, ಲಿಂಗಾಯತ, ಸಿಖ್‌ ಧರ್ಮ ಪರಂಪರೆಗಳು, ಜ್ಯೋತಿಬಾ ಫುಲೆಯವರ ಸತ್ಯಶೋಧಕ ಸಮಾಜ, ಇವೆಲ್ಲವೂ ವೈದಿಕ ಪರಂಪರೆಗೆ ವಿರುದ್ಧವಾಗಿ ಹುಟ್ಟಿದವು ಎನ್ನುವುದು ನಿರ್ವಿವಾದ. ನಮ್ಮ ದೇಶ ರಾಷ್ಟ್ರಕವಿ ಕುವೆಂಪು ಹೇಳಿರುವ ಹಾಗೆ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಅನೇಕ ಭಾಷೆಗಳುˌ ಬಹುಸಂಸ್ಕೃತಿ ಮೈದಳೆದಿವೆ. ಇದು ನಮ್ಮ ದೇಶದ ವಿಶೇಷತೆ. ಅದಕ್ಕಾಗಿ ನಾವೆಲ್ಲರೂ ಅಭಿಮಾನ ಪಡಬೇಕು ಹಾಗೂ ಅವುಗಳನ್ನು ಯಥಾವತ್ತಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಹಿಂದೆ ತಥಾಗತ ಗೌತಮ ಬುದ್ದರನ್ನು ವಿಷ್ಣುವಿನ ದಶಾವತಾರಗಳಲ್ಲಿ ಒಬ್ಬರೆಂದು ಹೇಳುವ ಮೂಲಕ ಇಡೀ ಬೌದ್ಧ ಧರ್ಮ ವೈದಿಕ ಧರ್ಮದೆಡೆ ಸೇರಿಸಿಕೊಳ್ಳುವ ವಿಫಲ ಪ್ರಯತ್ನ ನಡೆಯಿತು. ಜನ ಒಪ್ಪಬೇಕಲ್ಲ? ಇಂದಿಗೂ ವೈದಿಕ ಪರಂಪರೆಯವರು ತಥಾಗತ ಬುದ್ದರನ್ನು ವಿಷ್ಣುವಿನ ಎಲ್ಲ ಅವತಾರಗಳನ್ನು ಒಪ್ಪಿ ಪೂಜಿಸುವಂತೆ ಬುದ್ದರನ್ನು ಒಪ್ಪುವುದಾಗಲಿ, ಪೂಜಿಸುವುದಾಗಲಿ ಮಾಡುತ್ತಿಲ್ಲ. ಏಕೆಂದರೆ ಬೌದ್ಧ ಮತ, ವೈದಿಕ ಮತ ಒಂದಕ್ಕೊಂದು ವಿಭಿನ್ನವಾಗಿವೆ. ಇಂದಲ್ಲ ನಾಳೆ, ಕೊನೆಗೆ ಸತ್ಯವೇ ಉಳಿಯುತ್ತದೆ. ಸತ್ಯವನ್ನು ಮರೆಮಾಚುವ ವಿಫಲ ಪ್ರಯತ್ನ ಮಾಡದೇ ಉದಾತ್ತ ಮನೊಭಾವ ಬೆಳೆಸಿಕೊಳ್ಳೋಣ. ಅದೇ ನಿಜವಾದ ಭಾರತೀಯತೆ.

WhatsApp Image 2025 11 17 at 4.16.15 PM
ಪ್ರೊ. ಸಂಜಯ ಮಾಕಲˌ ಕಲಬುರಗಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...