ಹೊಸ ಓದು | ಕವಿ, ನಾಟಕಕಾರ ರಘುನಂದನ ಅವರ ಎರಡು ಪುಸ್ತಕಗಳ ಕಿರು ಪರಿಚಯ

Date:

ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರ ಕವನ ಸಂಕಲನ ನಾನು ಸತ್ತಮೇಲೆ (ಪ್ರ: ಚಾರುಮತಿ ಪ್ರಕಾಶನ) ಮತ್ತು ಕಾವ್ಯ ಮತ್ತು ಲೋಕಮೀಮಾಂಸೆಯ ಪುಸ್ತಕ ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ ಮತ್ತು ಅದರ ಸುತ್ತ (ಪ್ರ: ಥಿಯೇಟರ್ ತತ್ಕಾಲ್ ಬುಕ್ಸ್), ಈ ಎರಡು ಪುಸ್ತಕಗಳು ಮೇ 12ರಂದು ಬಿಡುಗಡೆಗೊಳ್ಳುತ್ತಿವೆ. ಸ್ಥಳ: ಸುಚಿತ್ರ ಸಭಾಂಗಣ, ಬೆಂಗಳೂರು. ಸಮಯ: ಬೆಳಗ್ಗೆ ಹನ್ನೊಂದು ಗಂಟೆ. ಪುಸ್ತಕಗಳ ಬಿಡುಗಡೆಮಾಡಿ ಮಾತನಾಡುವವರು: ವಿಮರ್ಶಕ ರಾಜೇಂದ್ರ ಚೆನ್ನಿ ಹಾಗೂ ರಂಗನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ.

ನಾನು ಸತ್ತಮೇಲೆ ಕವನ ಸಂಕಲನದ ಅರಿಕೆ
ಈ ಹೊತ್ತಿಗೆಯಲ್ಲಿ ಮೂರು ಪಾಲುಗಳಿವೆ.

ನಾನು ಸತ್ತಮೇಲೆ ಅನ್ನುವ ಹೆಸರಿನಡಿ, ‘ಇವು ಕವಿತೆಗಳು’ ಎಂದು ಸಾಧಾರಣವಾಗಿ ಜನ ಕರೆಯುತ್ತಾರಲ್ಲ, ಅಂಥವುಗಳಾಗಿವೆ ಎಂದು ನಾನು ಬಗೆಯುತ್ತ ಬಂದಿರುವ ಪದ್ಯಗಳಿವೆ.

ಕನ್ನಡಿಸಿದ ಕವಿತೆಗಳು ಅನ್ನುವುದರ ಅಡಿ, ಬೇರೆ ನುಡಿಗಳಿಂದ ಕನ್ನಡಕ್ಕೆ ತಂದ ಪದ್ಯಗಳಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಟದ ಹಾಡು, ಕಬ್ಬ ಅನ್ನುವುದರಡಿ, ನಾನು ಸ್ವತಂತ್ರವಾಗಿ ಬರೆದ ನಾಟಕಗಳಲ್ಲಿನ ಹಾಡು, ಕಬ್ಬಗಳಿವೆ; ಬೇರೆ ನುಡಿಗಳಲ್ಲಿರುವ ನಾಟಕಗಳನ್ನು ಕನ್ನಡಿಸುವಾಗ ಬರೆದವಿವೆ; ಹಾಗೂ ನಾಲ್ಕು ರಂಗಪ್ರಯೋಗಗಳಿಗೆ ಬರೆದ ಪ್ರಸ್ತಾವನೆಯ ದೃಶ್ಯಗಳಿವೆ.

ಅದರಿಂದಾಗಿ, ಈ ಪುಸ್ತಕದಲ್ಲಿ, ಬಿಡಿ ಕವನ ಸಂಕಲನಗಳಲ್ಲಿ ಸಾಧಾರಣವಾಗಿ ಕಂಡುಬರುವ ಪುಟಗಳಿಗಿಂತ ಹೆಚ್ಚಿನ ಸಂಖ್ಯೆಯ ಪುಟಗಳಿವೆಯಲ್ಲದೆ ಇದರ ಗಾತ್ರ ತುಸು ದೊಡ್ಡದೂ ಆಗಿದೆ.

ಸಮಗ್ರ ಕವಿತೆ, ಇಲ್ಲಿಯವರೆಗಿನ ಕವಿತೆ, ಈ ತನಕದ ಕವಿತೆ ಥರದ ಹೆಸರಿರುವ ಹೆಬ್ಬೊತ್ತಿಗೆಗಳನ್ನು ಬಿಟ್ಟರೆ ಕವನ ಸಂಕಲನಗಳಲ್ಲಿ, ಸಾಧಾರಣವಾಗಿ, ನಾಟಕದ ಹಾಡುಗಳಾಗಲಿ, ಈ ಪುಸ್ತಕದಲ್ಲಿರುವ ಬೇರೆ ಕೆಲವು ಬರಹಗಳಂಥವಾಗಲಿ ಇರುವುದಿಲ್ಲ. ಆದರೆ ಇಲ್ಲಿ ನಾಟಕದ ಹಾಡು, ಕಬ್ಬಗಳು ಕೂಡ ಇವೆ. ಕಾರಣ, ಸರಳ: ನಾಟಕವು ಕಾವ್ಯ; ದೃಶ್ಯಕಾವ್ಯ; ನೋಡಲು, ಆಡಲೆಂದು ಬರೆದ ಕಾವ್ಯ; ಕೇಳು, ಓದು, ನೋಡು, ಆಡು, ಕೇಳೋದು-ನೋಡಾಡು ಕಬ್ಬ.

ಪ್ರಾಚೀನ ಗ್ರೀಕ್ ನಾಟಕಕಾರರು ಮತ್ತು ಭಾಸ, ಕಾಳಿದಾಸ ಅವರಿಂದ ಹಿಡಿದು ಶೇಕ್‌ಸ್ಪಿಯರ್, ಇಬ್ಸೆನ್, ಬ್ರೆಖ್ಟ್, ಬೆಕೆಟ್, ಸಂಸ, ಎಂ.ಆರ್. ಶ್ರೀನಿವಾಸಮೂರ್ತಿ, ಜಿ.ಬಿ. ಜೋಶಿ, ವಿಜಯ್ ತೆಂಡೂಲ್ಕರ್, ಗಿರೀಶ ಕಾರ್ನಾಡ ಮತ್ತು ಲಂಕೇಶರವರೆಗೆ ನಿಜಕ್ಕೂ ದೊಡ್ಡ ನಾಟಕಕಾರರೆಲ್ಲ ಕವಿಗಳೇ.

ನಮ್ಮ ದೊಡ್ಡ ಕವಿಗಳಾದ ಬೇಂದ್ರೆ, ಕುವೆಂಪು, ಪುತಿನ ಮತ್ತು ಸಿದ್ಧಲಿಂಗಯ್ಯ ಅವರೆಲ್ಲರೂ ನಾಟಕ ಬರೆದವರೇ ಆಗಿದ್ದಾರೆ. ಅವರಂತಲ್ಲದೆ, ಕವಿತೆಗಳನ್ನು ಮಾತ್ರ ಬರೆದ, ಮತ್ತು ಬರೆಯುತ್ತಿರುವ, ದೊಡ್ಡ ಕವಿಗಳಲ್ಲಿ ಬಹುತೇಕರಿಗೆ ನಾಟಕ ಬರೆಯಬೇಕೆಂಬ ಹಂಬಲವಿತ್ತು, ಅಥವಾ ಇರುತ್ತದೆ. ಪಂಪ, ರನ್ನ, ರಾಘವಾಂಕ, ಕುಮಾರವ್ಯಾಸರ ಕಾವ್ಯದಿಂದ ಶುರು ಮಾಡಿಕೊಂಡು ಇಂದಿನವರೆಗಿನ ದೊಡ್ಡ ಕವಿಗಳೆಲ್ಲರ ಕಾವ್ಯದಲ್ಲಿಯೂ ಹೇರಳವಾದ ನಾಟಕೀಯತೆ ಇದ್ದೇಯಿದೆ.

ಆ ಅಷ್ಟು, ಕಾವ್ಯ ಮತ್ತು ನಾಟಕ ಸಾಹಿತ್ಯವನ್ನು ಕುರಿತ ಮಾತಾಯಿತು.

ಅಷ್ಟರಮೇಲೆ, ಅಟ್ಟವೇರಿ ಆಡಲು ಬೇಕಾಗಿ ರೂಪುಗೊಂಡ ರಂಗಪ್ರಯೋಗವೊಂದು ಒಳ್ಳೆಯ ವಿನ್ಯಾಸ, ನಿರ್ದೇಶನ, ಸಂಗೀತ ಮತ್ತು ಅಭಿನಯದಿಂದ ಕೂಡಿದ್ದರೆ, ಅದರೊಂದು ಆಟವು – ನಾವು ಅದನ್ನು ನೋಡುತ್ತಿರುವಷ್ಟೂ ಹೊತ್ತು – ಅದೆಲ್ಲವನ್ನೂ ಕಾಯ್ದುಕೊಂಡು ಬೆಳಗಿದರೆ, ಆಗ ಆ ಆಟವು ತಾನೂ ಅಕ್ಷರಶಃ, ಮತ್ತು ಸಾಕ್ಷಾತ್, ಕಾವ್ಯವೇ ಆಗಿರುತ್ತದೆ, ಅನುಮಾನ ಬೇಡ. ಹಾಗೆಂದು ಕೇವಲ ಭಾವಿಸಿ ಅಲ್ಲ, ‘ಅದು ಹಾಗೆ! ಹಾಗೆಯೇ!’ ಅನ್ನುವುದು ಗೊತ್ತಿದ್ದು, ಕಂಡಿದ್ದು ಹೇಳುತ್ತಿದ್ದೇನೆ. ಆ ಸತ್ಯವು ಪ್ರತಿ ಪ್ರಯೋಗ, ಪ್ರತಿ ಆಟದ ಪ್ರತಿ ಮಗ್ಗುಲು, ಪ್ರತಿ ಮಜಲು, ಪ್ರತಿ ಕ್ಷಣದಲ್ಲೂ ನೂರಕ್ಕೆ ನೂರು ನಿಜವಾಗಬೇಕು, ಸಾಕ್ಷಾತ್ಕಾರಗೊಳ್ಳಬೇಕು ಎಂದೇ ಕೇಳು-ಓದುಗಬ್ಬಗಳನ್ನೂ ನೋಡು-ಆಡುಗಬ್ಬಗಳನ್ನೂ ಮಾಡುವ, ಆಡುವ ಕಾಯಕದವನಾಗಿ ಹೇಳುತ್ತಿದ್ದೇನೆ. ಮಾಡಿದ್ದು, ಬರೆದದ್ದು, ಆಡಿದ್ದು, ಹಾಡಿದ್ದೆಲ್ಲ ಕಾವ್ಯವನ್ನೇ.

ಇಲ್ಲಿ ಆಟದ ಹಾಡು, ಕಬ್ಬ ಅನ್ನುವೊಂದು ಪಾಲಿರುವುದು ಅದೆಲ್ಲದರಿಂದಾಗಿ. ಅದರಲ್ಲಿ, ನಾಟಕದಲ್ಲಿ ಹಾಡಲೆಂದೇ ಬರೆದ ಬರಹಗಳ ಜೊತೆಗೆ ಅವುಗಳಿಗೆ ಪೂರಕವಾಗುವ ಕಬ್ಬಗಳಿವೆ. ಆ ಹಾಡು, ಕಬ್ಬಗಳಿರುವ ನಾಟಕಗಳಲ್ಲಿ ಯಾವೊಂದೂ ಇನ್ನೂ ಪ್ರಕಟವಾಗಿಲ್ಲ. ಅವುಗಳನ್ನು ತ್ವರೆಯಲ್ಲಿ ಪ್ರಕಟಿಸುವ ಎಣಿಕೆ ಇದೆ.

ಆಟದ ಹಾಡು, ಕಬ್ಬ ಕುರಿತು ಇನ್ನೊಂದಷ್ಟನ್ನು ಆ ಪಾಲು ಶುರುವಾಗುವಲ್ಲಿ ಹೇಳಿದೆ.

ಕನ್ನಡಿಸಿದ ಕವಿತೆಗಳ ಪೈಕಿ, ಹಲವು ನಮ್ಮ ಕಾಲದ ತುರ್ತಾಗಿ – ಅದರಿಂದ ನನ್ನ ತೀವ್ರ ತುರ್ತು ಕೂಡ ಆಗಿ – ಮೈದಾಳಿದಂಥವು.

ಇನ್ನು, ಮೊದಲ ಪಾಲಿನಲ್ಲಿರುವ ಕವನಗಳ ಬಗ್ಗೆ ಹೇಳಬೇಕಿರುವುದು ಇಷ್ಟೆ: ಕೊಟ್ಟುಕೊಂಡು, ತೇದುಕೊಳ್ಳುತ್ತ ಬರೆದವು ಅವು. ಅಗ್ರಪಟ್ಟ ಅವುಗಳಿಗೇ. ‘ಹೋಗು, ಕವಿತೆಯೇ’ ಎಂದು ಅವುಗಳನ್ನು ಬಿಟ್ಟಾಗಿದೆ. ಅವು ಕನ್ನಡ ಜನತೆಯ ಮಡಿಲ ಪಾಲಾಗಲಿ ಎಂಬ ಹಂಬಲವಿದೆ, ಮೊರೆಯಿದೆ, ಅಷ್ಟೆ.

ಕಾವ್ಯದ ಈ ಕಟ್ಟಿನಲ್ಲಿ ಕೆಲವು ಕವಿತೆಗಳಿಗೆ ಸಣ್ಣ ಟಿಪ್ಪಣಿಗಳನ್ನು ಒದಗಿಸಿದೆ; ಕೆಲವನ್ನು ಕುರಿತು ಒಂದಷ್ಟು ದೀರ್ಘವಾದ ಅನುಬಂಧವನ್ನು ಕೂಡ ಕೊಟ್ಟಿದೆ. ಕಾವ್ಯದ ಓದಿಗೆ ಮತ್ತು ಆಸ್ವಾದನೆಗೆ ಇಷ್ಟೆಲ್ಲ ಬೇಕೇ, ಅದನ್ನು ಕವಿಯೇ ಕೊಡಬೇಕೇ ಎಂಬ ಪ್ರಶ್ನೆಗೆ ಆಯಾ ಕವಿತೆ ಮತ್ತು ಟಿಪ್ಪಣಿ ಇಲ್ಲವೆ ಅನುಬಂಧವು ತಾನೇ ಸಮಾಧಾನ ಒದಗಿಸಿ, ಸಾರ್ಥಕವಾಗುತ್ತದೆ ಎಂದುಕೊಂಡಿದ್ದೇನೆ.

***********

ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ ಮತ್ತು ಅದರ ಸುತ್ತ ಪುಸ್ತಕದಲ್ಲಿ ಬೇಂದ್ರೆಯವರ ಉಯ್ಯಾಲೆ ಕವನ ಸಂಕಲನದ ಅಷ್ಟಷಟ್ಪದಿಗಳನ್ನು ಕುರಿತ ಧ್ಯಾನವು ಮಡುಗಟ್ಟಿದೆ. ಆ ಮಡುವಿನ ನಡುವಿಂದ ಹೊರಟು ಅದು, ಕಾವ್ಯಮೀಮಾಂಸೆ, ಲೋಕತತ್ತ್ವ ಜಿಜ್ಞಾಸೆ, ರಾಜಕೀಯ-ಸಾಮಾಜಿಕ ಚಿಂತನೆ, ವಿಜ್ಞಾನಶೋಧದ ಕೆಲವು ಆಯಾಮ… ಇಂಥವುಗಳನ್ನು ಕುರಿತ ಧ್ಯಾನವೂ ಆಗಿ ಉಂಗುರಉಂಗುರ ಹಬ್ಬಿಕೊಳ್ಳುತ್ತ, ಹಾಗೆ ಹಬ್ಬಿಕೊಳ್ಳುವಾಗಲೂ ಆ ನಡುವಿನ ಸೆಳೆತದಲ್ಲಿಯೇ ಇರುತ್ತ, ಕಡೆಗೆ ಅಲ್ಲಿಗೇ, ಮಡುವಿನ ನಡುವಿಗೇ ಮರಳುತ್ತದೆ.

ಈಕೆಳಗೆ, ಮೊದಲು, ಪುಸ್ತಕದ ನಾಟುನುಡಿ, ತಿರುಳ್ನುಡಿ ಎಂಬ ಚಿಕ್ಕ ಅಧ್ಯಾಯವನ್ನು ಇಡಿಯಾಗಿ ಕೊಟ್ಟಿದೆ. ಆಮೇಲೆ, ಅನುಭಾವ, ಅನುಭೂತಿ, ಅಧ್ಯಾತ್ಮ, ಅಧಿಭೂತತೆ: ಸೀಮೆ, ನಿಸ್ಸೀಮೆ ಎಂಬ ಅಧ್ಯಾಯದ ಚಿಕ್ಕ ಭಾಗವನ್ನು ಕೊಟ್ಟಿದೆ.

ನಾಟುನುಡಿ, ತಿರುಳ್ನುಡಿ
ಹಳತರ ತೂಕ, ಹೊಸತರ ಸತುವು

Poetry is memorable speech
ಅದು ಇಂಗ್ಲಿಶ್ ಕವಿ ಆಡೆನ್‍ (Auden) ಆಡಿದ ಮಾತು.

ಬೇಂದ್ರೆಯವರ ಅಷ್ಟಷಟ್ಪದಿಗಳು ಆಡೆನ್ ಹೇಳುವ ಅಂಥ ಮೆಮೊರಬಲ್ ಸ್ಪೀಚ್‍ನಿಂದ ಇಡಿಕಿರಿದಿವೆ. ಲೋಕಾನುಭವ ಮತ್ತು ಜೀವನಾನುಭವದ ಸಾರವನ್ನು ಅಡಕವಾಗಿ ಹೇಳುವ ತಿರುಳ್ನುಡಿ-ಸೂಳ್ನುಡಿ (aphorismಗಳು), ಹಾಗೂ ಒಂದು ವಿಷಯ, ವಿದ್ಯಮಾನವನ್ನು ಕುರಿತ ಷರಾವನ್ನು, ವ್ಯಂಗ್ಯವಾಗಿ, ಅದು ಮನಸ್ಸನ್ನು ಚುಚ್ಚಿ ನಾಟುವಂತೆ ಹೇಳುವ ಚಾಟುನುಡಿ-ನಾಟುನುಡಿ (epigramಗಳು) ಇಲ್ಲಿ ಹೇರಳವಾಗಿವೆ. ಅಂಥ ಹಲವು ಸಾಲು ಮತ್ತು ಮಾತನ್ನು ಇಲ್ಲಿನ ಬೇರೆಬೇರೆ ಅಷ್ಟಷಟ್ಪದಿಗಳಿಂದ ಆಯ್ದು ಈಕೆಳಗೆ ಕೊಟ್ಟಿದೆ:

… … … …… …ಬಗೆಯ ಇಬ್ಬಗೆಯಲ್ಲಿ
ಹುರುಳ ತಿರುಳೊಂದು. ಕಣ್ಣೆರಡು. ಕಾಣಿಕೆ ಎರಡೆ?
(ಅಷ್ಟಷಟ್ಪದಿ)

ಹುಟ್ಟು ಋಷಿಯಲ್ಲದನ ಕಬ್ಬ ಹಬ್ಬವೇ ಜಗಕೆ?
(ರತ್ನಾಕರ)

ಚಣ ಚಣಕು ಪರಿಪೂರ್ಣ ನೀನು ತಣಿದೇ ದಣಿವೆ;
ನನಗೆ ಪೂರ್ಣತೆಯೆಂದೊ, ನಾನು ದಣಿದೇ ತಣಿವೆ.
(ಮುಟ್ಟಿ ನೋಡುವೆನು ಕಾಂಚನಗಂಗೆ)

ಹುಳುಹೊಕ್ಕ ಹೂವನೊಳಹೊಕ್ಕು ಅರಿತವರುಂಟೆ?
(ಮುಡಿಪಿದ ಹೂ)

ಕವಿಶಿಷ್ಯನೆಂಬುವಾ ಕೀರ್ತಿ ಕವಿಗೂ ಮೇಲು.
(ಕವಿಶಿಷ್ಯ)

ರಸವೆ ಸಿಹಿ…
ರಸವು ರಸಬಲ್ಲ ರಸಿಕನದು.
… … … … … … … ಅರಸಿಕಗೆ ಅರುಹಿ
ಇಮ್ಮೆ ಸಾವುದೆ ಮಾಯೆ? … … …… …
(ಅಭಿರುಚಿ)

ಭಾರತಕು ಭಾರತರವಾದ ಜಗದ ರಹಸ್ಯ
ಉಸಿರಲೆಣಸಿದ ವೇದ ವಾದವಾಯಿತು…
(ಅಭಿರುಚಿ)

ನಾಣು ನೆತ್ತರದಾಟ. ಮಧು ಚುಂಬ-
ನವು ಕುನ್ನಿಚಿನ್ನಾಟ. ಸಂತತಿಯ ತಂತು ಋತು-
ಮಾನಗಳ ಮಾಟ. ಅಂತಃಕರಣ ಹುಲು ಡೊಂಬ-
ನೊಲು ಕುಣಿದು ಮಣಿಮಾಟ. ಅತಿಥಿ ರೂಢಿಗೆ ಹೊರತು
ಎನುವ ಮರಣವ ನಾನು ಎಂತು ಬಿಡುವೆನು ಮರೆತು?
(ರಸಿಕ, ವೇದಾಂತಿಗೆ)

ತಮ್ಮ ನೆರಳಿಗೆ ಹೆದರಿ ಮೈಗರೆಯುವರೆ ಹಗಲು?
(ಕೃತಿ)

ದನದ ಜಂಗುಳಿಯಂತೆ ಮನ ತಡೆದು
ನಿಂತಿದೆ, ನಿರಾಯಾಸ ಮೆಲಕು ಹಾಕುತ
(ಒಡನುಡಿ)

ಅರಸನ ಕಂಡು ಪುರುಷನ ಮರೆತೆ / ನೋಡು, ಕಾಮಿನಿಯೆ!
(ಶ್ರೀ ನಾರಾಯಣ)

ತಮ್ಮ ಈ ಕವಿತೆಗಳಲ್ಲಿನ ವಿಚಾರ ಸಾಂದ್ರತೆ, ಬಂಧದ ಬಿಗುವು, ಶೈಲಿಯ ಗಾಂಭೀರ್ಯಗಳಿಂದಾಗಿ ಇವುಗಳಿಗೆ ಶಿಲಾಶಿಲ್ಪ ಕಲೆಯಲ್ಲಿ ಕಾಣುವ ವೈಚಿತ್ರ್ಯವು ದಕ್ಕಿದೆ, ಇವುಗಳಲ್ಲಿ ‘ತಿರುಪಿನ ವೈಚಿತ್ರ್ಯವಿದೆ’ ಎಂದು ಬೇಂದ್ರೆಯವರು ‍ಹೇಳಿದ್ದಾರಲ್ಲವೆ? ನಾವು ಈಗಷ್ಟೆ ಓದಿರುವ ಸಾಲುಗಳಲ್ಲಿ ಅದೆಲ್ಲವೂ ನೂರಕ್ಕೆ ನೂರರಷ್ಟು ಕಾಣುತ್ತದೆ.

ತಿರುಪಿನ ವೈಚಿತ್ರ್ಯ ಅನ್ನುವುದು ಸಾನೆಟ್‍ಗಳಲ್ಲಿ ಸಾಧಾರಣವಾಗಿ ಎರಡು ಬಗೆಯದಾಗಿರುತ್ತದೆ, ಎರಡು ಕಡೆ ಆಗುತ್ತದೆ:

  • ಮೊದಲನೆಯದು, ಕವಿತೆಯ ವಸ್ತುವಿಗೆ ಮತ್ತು ಆ ಕವಿತೆಯು ಬಣ್ಣಿಸಿ ಶೋಧಿಸುತ್ತಿರುವ ಭವಸನ್ನಿವೇಶ ಹಾಗೂ ಭಾವಾವಸ್ಥೆಗೆ ಸಂಬಂಧಿಸಿದ್ದು. ಕವಿತೆಯ ಮೊದಲ ಭಾಗದಲ್ಲಿ, ಸಾಧಾರಣವಾಗಿ ಮೊದಲು ಎಂಟು ಸಾಲುಗಳಲ್ಲಿ, ಆ ವಸ್ತು, ಸನ್ನಿವೇಶ ಹಾಗೂ ಅವಸ್ಥೆಯಿಂದ ಹೊಮ್ಮಿದ ತಲ್ಲಣದ ವರ್ಣನೆ ಮತ್ತು ಜಿಜ್ಞಾಸೆಯ ವಿವರವಿದ್ದು ಕವಿತೆಯ ಒಂಬತ್ತನೆಯ ಸಾಲಿನಿಂದ ಮೊದಲುಗೊಂಡು ಆ ವರ್ಣನೆ, ಜಿಜ್ಞಾಸೆಗಳು ಒಂದು ನಾಟಕೀಯ ತಿರುವನ್ನು ಪಡೆದುಕೊಳ್ಳುತ್ತವೆ. ಆ ತಿರುವು, ಕೆಲವೊಮ್ಮೆ, ಮೊದಲ ಭಾಗದಲ್ಲಿ ಹೇಳಿದ್ದನ್ನು ನಾಟಕೀಯವಾಗಿ ವಿರೋಧಿಸಬಹುದು, ಇಲ್ಲವೆ ಅದರ ಭಾವಕ್ಕೆ ಒಂದು ಸಮಾಧಾನವನ್ನು ಕಂಡುಕೊಳ್ಳುವಂಥದು ಅಥವಾ ತರುವಂಥದು ಆಗಿರಬಹುದು. ಇದು ಆಗಬಹುದಾದ ಒಂದು ಬಗೆಯ ತಿರುವು; ಕವಿತೆಯ ಸರಿಸುಮಾರು ಮಧ್ಯಭಾಗದಲ್ಲಿ ಬರುವಂಥದು.
  • ಹಾಗೆ ಶುರುವಾಗುವ ತಿರುವು, ಕವಿತೆಯ ಕಡೆಕಡೆಯ ಸಾಲುಗಳಲ್ಲಿ (ಸಾಧಾರಣವಾಗಿ ಕಡೆಯ ಎರಡು ಸಾಲುಗಳಲ್ಲಿ) ತೃಪ್ತಿದಾಯಕವಾದೊಂದು ಭಾವಶಮನವನ್ನೂ ತಾತ್ತ್ವಿಕ ತಿಳಿವಿನ ಅವಸ್ಥೆಯನ್ನೂ ಕಂಡುಕೊಳ್ಳಬಹುದು. ಇದು ಎರಡನೆಯ ಬಗೆಯ ತಿರುವು, ಮತ್ತು ಕಟ್ಟಕಡೆಯದು.

ನಾವು ಈಗ ಓದಿದ ಬಹುತೇಕ ಸಾಲುಗಳು ಆ ಎರಡನೆಯ ಬಗೆಯ, ಕಟ್ಟಕಡೆಯ ತಿರುವಿಗೆ ಉದಾಹರಣೆಗಳು.

ಮೇಲೆ ಕಾಣಿಸಿರುವ ಮಾತುಗಳಲ್ಲಿ ಮಾತ್ರವಲ್ಲದೆ, ಈ ಅಷ್ಟಷಟ್ಪದಿಗಳ ಒಟ್ಟು ನುಡಿಗಟ್ಟಿನಲ್ಲಿಯೇ ಬೆರಗುಗೊಳಿಸುವಂಥ ಬಿಗುವು, ಧ್ವನಿಶಕ್ತಿಯಿದೆ, ಸೊಗಸಿದೆ, ತಿರುಪಿನ ವೈಚಿತ್ರ್ಯವಿದೆ. ಪಡಕೊಂಡುಬಂದ ಕಬ್ಬಿಗನಿಂದ ಮಾತ್ರ ಹೊಮ್ಮುವಂಥದು ಅದೆಲ್ಲ. ಸತುವಿರುವ ಕವಿತೆ ಬರೆಯಬೇಕು ಎಂಬ ಆಶೆಯಿರುವ ಯಾವ ಕವಿಯೇ ಆಗಲಿ, ಇಂಥ ಸಾಲುಗಳನ್ನು ಬರೆಯುವ ಶಕ್ತಿ ತನಗೂ ಬರಲಿ, ತಾಯಿ ಅಂಬಿಕೆಯು ಆ ಶಕ್ತಿಯನ್ನು ತನಗೂ ದಯಪಾಲಿಸಲಿ ಎಂದು ವ್ರತಮಾಡುತ್ತ, ಆಕೆಯ ಈ ತನಯನ ಇಂಥ ನುಡಿಗಟ್ಟನ್ನು ಶ್ರದ್ಧೆಯಿಂದ ಅಭ್ಯಸಿಸಬೇಕು.

ಈಗ, ಈಗಷ್ಟೆ ಎತ್ತಿ ತೋರಿದ ಸಾಲುಗಳನ್ನು ಮತ್ತೊಮ್ಮೆ ಓದಿ, ಅವುಗಳ ಸೊಗಸಿನ ಅಭ್ಯಾಸಮಾಡಿ, ಸವಿಯುವ ಕೆಲಸವನ್ನು ಓದುಗರಿಗೆ ಬಿಡುತ್ತೇನೆ.

ಹಳತರ ತೂಕ, ಹೊಸತರ ಸತುವು

ಇಷ್ಟಾಗಿ, ಈ ಅಷ್ಟಷಟ್ಪದಿಗಳ ಭಾಷೆ, ಇಂದಿನ ನಾವು ಆಡುವಂಥದು ಎಂದು ನವ್ಯಕಾವ್ಯದ ಮೀಮಾಂಸೆ ಎತ್ತಿ ಹಿಡಿಯುತ್ತದೆಯಲ್ಲ ಅಂಥ ‘ಆಡುಮಾತು’ ಅಲ್ಲ; ಶುದ್ಧಾಂಗವಾಗಿಯಂತೂ ಅಲ್ಲ.

ಈ ಕವಿತೆಗಳಲ್ಲಿ ಕೆಲವೆಡೆ ಇಹುದು, ಇಹರೇ, ದುಡಿವನು, ಎಣಿಸುವೆ, ನೋಡುವೆನು, ಚಿವುಟುವವು ಮುಂತಾಗಿ ಹಳೆಯ ಮಾದರಿಯ ಕನ್ನಡದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಿವೆ, ಹಾಗೂ ಮೋರೆಯು, ಸೋಜಿಗವು, ಸ್ವಾತಂತ್ರ್ಯದೊಳು, ಅಡಗೆ, ನೋಡುವೆನು, ಮರೆವೆನು, ಕಾಂಬೊಲು ಮುಂತಾಗಿ ಕನ್ನಡದ ಹಳೆಯ ಪದರೂಪಗಳಿವೆ. ಆದರೆ ಉಳಿದಂತೆ ಇಲ್ಲಿನ ನುಡಿಗಟ್ಟು ಇಪ್ಪತ್ತನೆಯ ಶತಮಾನದ ಬರವಣಿಗೆಯಲ್ಲಿ ಬಳಕೆಗೆ ಬಂದ ಹೊಸಗನ್ನಡದ್ದೇ ಆಗಿದೆ.

ಉದಾಹರಣೆಗೆ, ಬಹುತೇಕವಾಗಿ ಇದೆ  ಇಲ್ಲವೆ ಇತು ಅನ್ನುವಂಥವುಗಳಿಂದ ಕೊನೆಗೊಳ್ಳುವ ಆಡುತಿದೆ, ಆಗುತಿದೆ, ನುಂಗುತಿದೆ, ಕುಣಿಸುತಿದೆ, ಕಮರುತಿದೆ ಹಾಗೂ, ಅಡಗಿತು, ಹುಟ್ಟಿತು ತರಹದ ಕ್ರಿಯಾಪದ ರೂಪಗಳಿವೆ ಇಲ್ಲಿ. ಹಾಗಾಗಿ ಇದು ಹಳತುಹೊಸತರ ಪಾಕ.

ಆದರೆ ಇಲ್ಲಿನ ಕವಿತೆಗಳನ್ನು ಎಷ್ಟು ಸಲ ಓದಿದರೂ, ಎಷ್ಟು ಸಲ ಮೆಲುಕುಹಾಕಿದರೂ, ‘ಇಗೋ, ಇಲ್ಲಿಯ ನುಡಿಗಟ್ಟು ಕನ್ನಡದ ಹಳೆಯ ಮಾದರಿಯದ್ದು’, ಮತ್ತು ‘ಇಗೋ, ಇಲ್ಲಿನ ನುಡಿಗಟ್ಟು ಹೊಸ ಮಾದರಿಯದ್ದು’, ಅನ್ನಿಸಿ, ಕವಿತೆಯ ಭಾವ ಮತ್ತು ಅದರ ವಿವಿಧ ಸ್ತರದ ಧ್ವನಿ, ಅರ್ಥಗಳಿಗೆ ಭಂಗ ಬರುವುದಿಲ್ಲ; ಅರುಚಿಕರವಾದದ್ದೇನೋ ನುಸುಳಿತು ಅನ್ನಿಸುವುದಿಲ್ಲ.

ಹಾಗಾಗಿಯೆ ಇದು ಹಳತರ ತೂಕ ಮತ್ತು ಹೊಸತರ ಸತುವಿನ ಹದನಾದ ಪಾಕ ಅನ್ನಿಸುವುದು. ಇಂಥ ಭಾಷೆ, ಇಂಥ ನುಡಿಗಟ್ಟು ಸಿದ್ಧಿಸುವುದು ಬಹಳ ದೊಡ್ಡ ಕವಿಗೆ, ಬಹಳ ದೊಡ್ಡ ಕಸುಬುಗಾರನಿಗೆ ಮಾತ್ರ.

********

ಅನುಭಾವ, ಅನುಭೂತಿ, ಅಧ್ಯಾತ್ಮ, ಅಧಿಭೂತತೆ: ಸೀಮೆ, ನಿಸ್ಸೀಮೆ ಎಂಬ ಅಧ್ಯಾಯದಿಂದ:

ಅನುಭಾವದ ಭ್ರಮೆ, ಸೋಗು ಆಪತ್ಕಾರಿ 

ಆದರೆ, ಮೇಲೆ ಹೇಳಿದ್ದಕ್ಕೆ ವ್ಯತಿರಿಕ್ತವಾಗಿ, ಅಮೂರ್ತ-ಅಲೌಕಿಕ ವಸ್ತುವಿಶೇಷ ಮತ್ತು ಶಕ್ತಿಗಳನ್ನು ಕುರಿತು ತಮಗೆ ಆತ್ಯಂತಿಕ ಶ್ರದ್ಧೆ ಇದೆ ಎಂದು ಭ್ರಮಿಸುವವರು ಇರುತ್ತಾರೆ; ಮತ್ತು ಅಂಥ ಶ್ರದ್ಧೆ ತಮಗಿದೆ ಎಂಬ ಸೋಗು ಹಾಕುವವರು ಇರುತ್ತಾರೆ.

ಹಾಗೆಯೆ, ಲೌಕಿಕ ವಸ್ತುವಿಶೇಷ-ವಿದ್ಯಮಾನಗಳನ್ನು ಕುರಿತಾಗಿ ತಮಗೆ ಆತ್ಯಂತಿಕ ಶ್ರದ್ಧೆಯಿದೆ ಎಂದು ಭ್ರಮಿಸುವವರು, ಇಲ್ಲವೆ ಅಂಥದರ ಸೋಗು ಹಾಕುವವರು, ಕೂಡ ಇರುತ್ತಾರೆ.

ಅವರು ಯಾರದ್ದೂ ನೈಜವಾದ ಜಿಜ್ಞಾಸೆ ಆಗಿರುವುದಿಲ್ಲ, ಮುಗ್ಧವಾದ ಹಗಲುಗನಸೂ ಆಗಿರುವುದಿಲ್ಲ. ಹಾಗಿದ್ದರೂ (ಅವರದ್ದು ಶ್ರದ್ಧೆಯ ಭ್ರಮೆಯೇ, ಇಲ್ಲವೆ ಸೋಗೇ, ಆಗಿದ್ದರೂ) ಆ ಭ್ರಮೆ ಇಲ್ಲವೆ ಸೋಗು, ಅವರ ವ್ಯಕ್ತಿಗತ ಜೀವನ ಮತ್ತು ಕಾರುಬಾರಿಗಷ್ಟೇ ಮಿತಗೊಂಡಿದ್ದರೆ, ಅದು ಲೋಕಕ್ಕೆ ಬಹಳ ವಿಪತ್ಕಾರಿ ಆಗುವುದು ಕಡಿಮೆಯೆ. ಯಾಕೆಂದರೆ ಅವರ ಆ ಭ್ರಮೆ ಅವರ ಮೂರ್ಖತನ ಮತ್ತು ವ್ಯಕ್ತಿತ್ವದ ಇತಿಮಿತಿಯಿಂದ ಆದದ್ದಾಗಿಯೂ, ಅವರ ಸೋಗು ಅವರ ಕ್ಷುದ್ರಲೌಕಿಕ ಸ್ವಾರ್ಥ ಮತ್ತು ಸಣ್ಣತನದಿಂದ ಆದ್ದದ್ದಾಗಿಯೂ ಇರುತ್ತದೆ, ಅಷ್ಟೆ.

ಉದಾಹರಣೆಗೆ, ‘ಕನ್ನಡವೇ (ಇಲ್ಲವೆ ತಮಿಳು, ಇಲ್ಲವೆ ಬಂಗಾಳಿ, ಇಲ್ಲವೆ ರಷ್ಯನ್ ನುಡಿಯೇ) ಸತ್ಯ, ನಿತ್ಯ’ ಎಂಬಂಥ ಧೋರಣೆ ಕೇವಲ ಭ್ರಮೆ, ಇಲ್ಲವೆ ಸೋಗು, ಆಗಿರುವುದು ಇದ್ದೇಯಿದೆಯಲ್ಲವೆ? ಆ ಭ್ರಮೆ ಇಲ್ಲವೆ ಸೋಗಿನವರು ‘ಕನ್ನಡವೇ ನನ್ನುರುಸಿರು. ಕನ್ನಡವೇ ನನ್ನ ಬದುಕು. ತನಿತನಿಯಾದ ಕನ್ನಡ ಮಾತುಗಳನ್ನಲ್ಲದೆ ಬೇರೆ ಯಾವುದೇ ನುಡಿಯನ್ನು ನಾನು ಆಡುವುದಿಲ್ಲ. ಕನ್ನಡಕ್ಕೆ ಬೇಕು ಕನ್ನಡದ್ದೇ ಆದ ಸೊಲ್ಲರಿಮೆ,’ ಮುಂತಾಗಿ ಮುಂತಾಗಿ ಕನವರಿಸಿ, ತಮ್ಮ ನಡೆನುಡಿಯಲ್ಲಿ ಹಾಗೆಯೆ ಇರಲು ಪ್ರಯತ್ನಿಸುವುದನ್ನು ನಾವೆಲ್ಲರೂ ಕಂಡಿದ್ದೇವೆಯಲ್ಲದೆ ನಮ್ಮಲ್ಲಿನ ಕೆಲವರು ಕೆಲಕಾಲವಾದರೂ, ಪ್ರಾಮಾಣಿಕವಾಗಿಯೆ, ಹಾಗೆ ಇರಲು ಕೂಡ ಪ್ರಯತ್ನಿಸಿದ್ದೇವೆಯಲ್ಲವೆ? ಅಂಥ ಧೋರಣೆ, ನಡೆನುಡಿಯನ್ನು ಭ್ರಮೆ ಎಂದು ಗುರುತಿಸೋಣ. ಅಂಥ ಧೋರಣೆ, ಇನ್ನು ಕೆಲವರಲ್ಲಿ ಯಾವುದೋ ಸಂಸ್ಥೆಯ ಪದಾಧಿಕಾರಿಯಾಗಲು ಬೇಕಾದ ಸೋಗು ಆಗಿ ಕಾಣಿಸಿಕೊಳ್ಳುವುದನ್ನು ಕೂಡ ಬಲ್ಲೆವಷ್ಟೆ. ಅಂಥಲ್ಲಿ, ಆ ಭ್ರಮೆಯೋ ಸೋಗೋ ಕೇವಲ ವ್ಯಕ್ತಿಗತವಾಗಿರುವಂಥದು; ದೊಡ್ಡಮಟ್ಟದಲ್ಲಿ ಆಪತ್ಕಾರಿ ಆಗಿರುವಂಥದಲ್ಲ.

ಆದರೆ ಅವರ ಆ ಭ್ರಮೆಯೋ ಸೋಗೋ ತಾನು ಅನುಭಾವ ಎಂಬ ಹೆಸರು ಪಡೆದುಕೊಂಡು ಒಂದು ಪ್ರಭಾವಶಾಲೀ ಸಾಮಾಜಿಕ-ರಾಜಕೀಯ ಸಿದ್ಧಾಂತ ಆಗುವುದಿದೆ. ಅಥವಾ, ಆ ಮಾತನ್ನು ತಿರುಗುಮುರುಗು ಮಾಡಿ ಹೇಳುವುದಾದರೆ, ಅವರ ಭ್ರಮೆಯೋ ಸೋಗೋ ತಾನು ಒಂದು ಪ್ರಭಾವಶಾಲೀ ಸಾಮಾಜಿಕ-ರಾಜಕೀಯ ಸಿದ್ಧಾಂತವಾಗಿ, ಅಲ್ಲಿಂದ ಆಚೆಗೆ ನೆಗೆದು ಸಾಮಾಜಿಕ-ರಾಜಕೀಯ-ಐತಿಹಾಸಿಕ ಅನುಭಾವ ಎಂಬ ಹೆಸರು ಪಡೆದುಕೊಳ್ಳುವುದಿದೆ. ಅದು ಅಂಥದೊಂದು ಸಿದ್ಧಾಂತವಾಗುವುದು, ಆಗಿ ಪ್ರಭಾವಶಾಲಿಯಾಗುತ್ತ ಹೋಗುವುದು ತಾನೇ ತಾನಾಗಿಯೇನೂ ಅಲ್ಲ. ಆ ಸುಳ್ಳಿಗೆ ಅನುಭಾವವೆಂಬ ಹೆಸರನ್ನು ಕೊಟ್ಟು, ಅನುಭಾವದ ಕೆಲವು ಲಕ್ಷಣಗಳ ಅಲಂಕಾರ ಮಾಡಿ, ಅದೊಂದು ಪರಿಪೂರ್ಣ ಸಿದ್ಧಾಂತ ಎಂಬಂತೆ ಬಿಂಬಿಸಿ, ಸಾಕಿ ಬೆಳಸುವುದರ ಹಿಂದೆ ವ್ಯವಸ್ಥಿತವಾದೊಂದು ಯೋಜನೆ ಇರುತ್ತದೆ, ಒಂದು ಕಾರ್ಯಪಡೆ ಇರುತ್ತದೆ; ದೊಡ್ಡ ಬಂಡವಾಳವಿರುತ್ತದೆ; ಸುದ್ದಿ ಮತ್ತಿತರ ಮಾಧ್ಯಮಗಳ ನೆರವು ಇರುತ್ತದೆ. ಅದರಿಂದಾಗಿ ಲೋಕಜೀವನದಲ್ಲಿ ತಲೆದೋರುವ ವಿಕಾರವು ಅಂಥಿಂಥದಲ್ಲ, ಅಷ್ಟಿಷ್ಟಲ್ಲ.

ಅಂಥ ಭ್ರಮಿತರಿಗಾಗಲಿ, ಸೋಗಿನವರಿಗೆ ಆಗಲಿ, ಯಾವುದರಲ್ಲಿಯೂ ನಿಜವಾದ ಶ್ರದ್ಧೆ, ನಿಜವಾದ ಅನುಭಾವ ಅನ್ನುವುದು ಇರುವುದಿಲ್ಲ. ನಿಜವಾಗಿ, ಅವರ ಕಾಳಜಿಯೆಲ್ಲವೂ ಲೌಕಿಕ ವಸ್ತು-ವಿಶೇಷ ಮತ್ತು ಸಂಗತಿಗಳನ್ನು ಕುರಿತದ್ದಾಗಿ, ಲೌಕಿಕ ಅಧಿಕಾರಸಂಪಾದನೆಯ ಕಡೆಗಿರುತ್ತದೆ. ಅಂಥವರು ತಮ್ಮ ಹುಸಿ ಅನುಭಾವವು ಹೇಳುವ ‘ಆದರ್ಶ’ ರಾಜ್ಯವನ್ನು, ‘ಆದರ್ಶ’ ಜೀವನಪದ್ಧತಿಯನ್ನು ಈ ಇಹಲೋಕದಲ್ಲಿ, ಸಾಮಾಜಿಕ-ಜಾಗತಿಕ ಮಟ್ಟದಲ್ಲಿ ಸ್ಥಾಪಿಸಬೇಕು ಎಂದು ಹೊರಟಾಗ ಅದು ಲೋಕ ವಿನಾಶಕಾರಿ ಮತ್ತು ಸಮಾಜ ವಿನಾಶಕಾರಿ ಆಗಿರುತ್ತದೆ. ಕಳೆದ ಶತಮಾನದಲ್ಲಿ, ಮುಸ್ಸೊಲೀನಿಯ ಇಟಲಿ (1919-1945) ಮತ್ತು ಹಿಟ್ಲರ್‌ನ ಜರ್ಮನಿ (1933-1945) ದೇಶಗಳನ್ನು ಹಲವು ವರ್ಷ ಆಳಿದ ಫ್ಯಾಶಿಜ಼ಮ್ ಅಂಥದಕ್ಕೊಂದು ಉದಾಹರಣೆ.

ಮೊದಲು, 1920 ಮತ್ತು 30ರ ದಶಕಗಳ ಜರ್ಮನಿಯ ವಿಷಯ.

1918ರಲ್ಲಿ ಕೊನೆಗೊಂಡ ಮೊದಲನೆಯ ಜಾಗತಿಕ ಮಹಾಯುದ್ಧದಲ್ಲಿ ತಮ್ಮ ತಂದೆನಾಡು ಜರ್ಮನಿಯು ಸೋತದ್ದರಿಂದ ತಮ್ಮ ಪಾಡು ಹೀನಾಯವಾಯಿತೇ ಹೊರತು, ನಿಜಕ್ಕೂ, ತಮಗೆ, ತಮ್ಮ ನಾಡಿಗೆ ದಿವ್ಯಭವ್ಯವಾದೊಂದು ಇತಿಹಾಸವಿದ್ದು, ದಿವ್ಯೋಜ್ವಲವಾದ ಭವಿಷ್ಯವೂ ಇದೆ; ಅದರಂತೆ, ಶುದ್ಧ ಆರ್ಯರಕ್ತದವರಾದ ತಾವು ಜರ್ಮನರು ವಿಶ್ವದ ಅತಿಬಲಿಷ್ಠ ರಾಷ್ಟ್ರವನ್ನು ಕಟ್ಟಿಕೊಂಡು, ಬೇರೆಲ್ಲ ದೇಶಗಳ ಬಗ್ಗುಬಡಿದು, ತಮ್ಮ ದೇಶವನ್ನು ಸಾಮ್ರಾಟ್ ದೇಶವಾಗಿಸಬೇಕಿದೆ; ಅಂಥ ಆ ಬಂಗಾರದ ಭವಿಷ್ಯದತ್ತ ತಮ್ಮನ್ನು ನಡೆಸಲು ಬೇಕಾದದ್ದು ದಿವ್ಯೋತ್ತಮ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ ನಾಯಕತ್ವ ಮಾತ್ರವೇ; ಆತನ ನ್ಯಾಷನಲ್ ಸೋಷಿಯಲಿಸ್ಟ್ ಪಕ್ಷದ ಫ್ಯಾಶಿಸ್ಟ್ ಸಿದ್ಧಾಂತ ಮಾತ್ರವೇ ಎಂದೆಲ್ಲ ಆ ದೇಶದ ಜನರು ನಂಬುವಂತಾಯಿತು.

ಅವರು ಹಾಗೆ ನಂಬುವುದಕ್ಕೆ ಬೇಕಾದ ಸಾಮಾಜಿಕ-ಐತಿಹಾಸಿಕ ನೆಲೆಯೂ ಅಂದಿಗೆ ಹಿಂದಿನ ಸುಮಾರು ಮೂವತ್ತು-ನಲವತ್ತು ವರ್ಷಗಳಿಂದ ಹದವಾಗುತ್ತಿದ್ದು, ಅದರಲ್ಲಿ ಯಹೂದಿ ಜನರ ಮೇಲಿನ ಮತೀಯ ಮತ್ತು ಜನಾಂಗೀಯ ದ್ವೇಷ, ಜರ್ಮನಿಯು ವಿಶ್ವಗುರುವಾಗಿ ಮನ್ನಣೆ ಪಡೆಯಬೇಕೆಂಬ ದುರಭಿಮಾನ, ಕಮ್ಯೂನಿಸ್ಟ್ ಮತ್ತು ಸಮಾಜವಾದಿ ಚಳವಳಿಗಳ ಬಗೆಗಿನ ದ್ವೇಷ ಮುಂತಾದ್ದೆಲ್ಲ ಇತ್ತು. ಅದೆಲ್ಲ ಸೇರಿ ಫ್ಯಾಶಿಸ್ಟ್ ಸಿದ್ಧಾಂತದ ವಿಷಪಾಕವಾಯಿತು.

ಆ ಎಲ್ಲ ವಿದ್ಯಮಾನಗಳಿಗೆ ತಾತ್ತ್ವಿಕವಾದ ಒಂದು ತಳಹದಿಯನ್ನು ಒದಗಿಸಿದ್ದು ಅದೇ ದೇಶದ ಬಹುಪ್ರಭಾವಶಾಲಿ ತತ್ತ್ವಮೀಮಾಂಸಕ ಫ್ರೇಡ್ರೀಖ಼್ ನೀತ್ಚನ ದರ್ಶನ.

ನೀತ್ಚ ದರ್ಶನದ ಎರಡು ಮುಖ್ಯ ಅಂಶಗಳು ಹೀಗಿವೆ:

  • ಮನುಷ್ಯಜೀವಿಯು ತಾನು, ತಾನೇ ತನಗೆ ತೊಡಿಸಿಕೊಂಡಿರುವ ಕಡಿವಾಣಗಳಿಂದ ಬಿಡುಗಡೆ ಹೊಂದಬೇಕು: ದೇವರುದಿಂಡರಲ್ಲಿನ ನಂಬಿಕೆಯನ್ನು ಸಂಪೂರ್ಣ ತೊರೆಯಬೇಕು; ತನ್ನ ನಡತೆ ‘ಮಾನವೀಯ’ ಆದದ್ದಿರಬೇಕು, ನೈತಿಕ ‘ಶುದ್ಧತೆ’ಯಿಂದ ಕೂಡಿದ್ದಿರಬೇಕು ಎಂಬ ಹುಂಬತನವನ್ನು ಬಿಡಬೇಕು. ಆ ಜೀವಿಯು ಕೇವಲ ಮಾನವತೆ ಅನ್ನುವುದನ್ನು ಮೆಟ್ಟಿ ನಿಂತು, ಪರಾಮಾನವ ಆಗಬೇಕು; ಎಲ್ಲೆಯಿಲ್ಲದ ಸಾಧನಾಶಕ್ತಿಯ ಮಾನವ (Supraman) ಆಗಬೇಕು.[1]
  • ಆ ಪರಾಮಾನವತೆ ದಕ್ಕಬೇಕಾದರೆ ಆ ಜೀವಿಯಲ್ಲಿ ಎಲ್ಲೆಯಿಲ್ಲದ ಅಧಿಕಾರಶಕ್ತಿಯ ದಾಹವಿರಬೇಕು. ಆ ದಾಹವನ್ನು ತಣಿಸುತ್ತಲೇ ಹೋಗಲುಬೇಕಾದ, ಎಲ್ಲೆಯಿಲ್ಲದ, ನಿಷ್ಕರುಣ-ನಿರ್ದಾಕ್ಷಿಣ್ಯ ಮನೋಸಂಕಲ್ಪ (Will to Power) ಅನ್ನುವುದನ್ನು ಅದು ಎಲ್ಲೆಯೇ ಇಲ್ಲದಂತೆ ರೂಢಿಸಿಕೊಳ್ಳಬೇಕು. ಆ ಮನೋಸಂಕಲ್ಪವನ್ನು ರೂಢಿಸಿಕೊಳ್ಳಲು ಅದಕ್ಕೆ ಸಾಧ್ಯವಾಗುವುದು, ಅದು ತಾನು ಒಳಿತು ಮತ್ತು ಕೆಡುಕುಗಳ ನಡುವಿನ ಗೆರೆಯನ್ನು ನಿರ್ಲಕ್ಷ್ಯಿಸಿ, ಅಥವಾ ಅಳಿಸಿಹಾಕಿ, ಆತ್ಯಂತಿಕ ನಿರ್ನೈತಿಕತೆಯ ಮನೋಧರ್ಮವನ್ನು ಅಪ್ಪಿಕೊಂಡಾಗ ಮಾತ್ರ.

ಆ ಎರಡು ಅಂಶಗಳ ಮೇಲೆ, ಉಕ್ಕಿನ ಭಲ್ಲೆಗೆ ಚೂಚೂಪು ಮೊನೆ ಇಟ್ಟಂತೆ, ನೀತ್ಚ ಮತ್ತೊಂದು ಅಂಶವನ್ನು ಕೂರಿಸುತ್ತಾನೆ. ಅದರ ಸಾರಾಂಶವನ್ನು ಹೀಗೆ ಮುಂದಿಡಬಹುದು:

ಮನುಷ್ಯರಲ್ಲಿ ಪ್ರತಿಯೊಬ್ಬರೂ, ಎಲ್ಲರೂ, ಪರಾಮಾನವರಾಗಲು ಸಾಧ್ಯವಾಗದು. ಪರಾಮಾನವತೆಯನ್ನು ಗಳಿಸಿಕೊಂಡು ಬೆಳೆಯುತ್ತ ಹೋಗುವ ಅರ್ಹತೆ ಮತ್ತು ಸಾಧ್ಯತೆ — ದೈಹಿಕ-ಮಾನಸಿಕ ಆರೋಗ್ಯ ಮತ್ತು ಆತ್ಮಬಲ — ಹಲಕೆಲವರಲ್ಲಿ ಮಾತ್ರ ಇರುತ್ತದೆ. ಅಂಥವರದ್ದು ಸಾಮಾನ್ಯರಿಂದ ಬೇರೆಯಾದ ವರ್ಣ, ಜಾತಿ, ಹಾಗೂ ವರ್ಗ. ಅವರು ಉಳಿದವರಿಗೆ ಮಾದರಿಯಾಗಬೇಕು; ಆ ಉಳಿದವರು ಆ ಮಾದರಿ ಮಾನವರ – ಆ ಪರಾಮಾನವರ – ಅಡಿಯಾಳುಗಳಾಗಿರಬೇಕು, ಅವರ ಆಣತಿಯಂತೆ ನಡೆಯಬೇಕು. ಆ ಪರಾಮಾನವರ ತಮ್ಮ ‘ಶುದ್ಧತೆ’ಯನ್ನು ಉಳಿಸಿಕೊಳ್ಳಬೇಕು, ‘ಶುದ್ಧ’ ಸಂತಾನವನನ್ನು ಪಡೆಯುತ್ತಹೋಗಬೇಕು. ಅವರು ಕೀಳು ಜನ, ಕೀಳು ವರ್ಣದವರ ಕೂಡಾಟವಾಡಿ ಸಂತಾನವನ್ನು ಪಡೆಯಬಾರದು. ವರ್ಣಸಂಕರ ಕೂಡದು. ಪರಾಮಾನವರು ತಮ್ಮ ಪರಾಮಾನವತೆಯನ್ನು ಕಾಪಾಡಿ, ಉಳಿಸಿ, ಬೆಳೆಸಿಕೊಳ್ಳುತ್ತಿರಬೇಕು.

ಹಿಟ್ಲರ್ ಮತ್ತು ಆತನ ಬಂಟರು ಅಂದಿನ ಜರ್ಮನ್ ಬಂಡವಾಳಶಾಹೀ ಹಾಗೂ ಕಾರ್ಪೊರೆಟ್ ಉದ್ಯಮಿಗಳ ಬೆಂಬಲ ಪಡೆದು ಆ ವಿಷದ ಮೊತ್ತವನ್ನೂ, ಅದರ ಕಹಿ, ಆಳ, ಅಗಲ ಮತ್ತು ಹರಿವನ್ನೂ ವ್ಯವಸ್ಥಿತವಾಗಿ ಹೆಚ್ಚಿಸಿ, ಹೆಚ್ಚಿಸಿ ಆ ದೇಶದ ಜನರಿಗೆ ಉಣಬಡಿಸಿದರು; ಹಲವೊಮ್ಮೆ ಗದರಿ, ಅವರ ಗಂಟಲೊಳಕ್ಕೆ ಸುರಿದರು. ಅದಕ್ಕೆಲ್ಲ ಮಣಿಯದವರು ಒಂದೋ ಆ ದೇಶಬಿಟ್ಟು ವಲಸೆ ಹೋದರು ಇಲ್ಲವೆ ಆ ಫ್ಯಾಶಿಸ್ಟರ ಹಿಂಸೆಗೆ ಬಲಿಯಾಗಿ ಪ್ರಾಣ ತೆತ್ತರು. ಆದರೆ ಜರ್ಮನಿಯ ಬಹುಜನರಲ್ಲಿ, ಆ ವಿಷಪಾಕ ತಾನೊಂದು ಭ್ರಮಾತ್ಮಕ ಅನುಭಾವವೇ ಆಗಿ, ಅವರ ಆ ತಂದೆನಾಡಿನ ಗರಿಮೆ ಮತ್ತು ಹಿಟ್ಲರ್‌ನ ವ್ಯಕ್ತಿತ್ವ ಮತ್ತು ನಾಯಕತ್ವದ ಮಹಿಮೆಯಲ್ಲಿನ ಅಚಲಭಕ್ತಿಯಾಗಿ, ಘೋರವಿಕಾರವಾದ ಫ್ಯಾಶಿಸ್ಟ್ ಉನ್ಮಾದವಾಯಿತು: ಜನಾಂಗೀಯ ನರಮೇಧಕ್ಕೂ, ಎರಡನೇ ಮಹಾಯುದ್ಧಕ್ಕೂ ಕಾರಣವಾಯಿತು. ಆ ಕಡುನಂಜಿನ ಗಷ್ಟು ಜರ್ಮನಿಯ ಮೈಮನಸ್ಸಿನಲ್ಲಿ ಇನ್ನೂ ಅಷ್ಟಿಷ್ಟು ಉಳಿದಿದೆ; ಅಲ್ಲಿರುವ ಅದರ ಕಲೆಯ ಕಪ್ಪು ಈಗಲೂ ಅಳಿದಿಲ್ಲ.

‘ಫ್ಯಾಶಿಸ್ಟ್ ಸಿದ್ಧಾಂತದ ಹಾದಿ ಹೀಗೆ’ ಎಂದು ಹಿಟ್ಲರನಿಗೆ ತೋರಿಸಿಕೊಟ್ಟು, ಕೆಲವು ವಿಷಯಗಳಲ್ಲಿ ಅವನಿಗೆ ಗುರುವಾದವನು ಬೆನಿಟೋ ಮುಸ್ಸೊಲೀನಿ. ಹಿಟ್ಲರನು ಜರ್ಮನಿಯಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಒಂದು ದಶಕಕ್ಕೂ ಮುಂಚೆಯೇ ಇಟಲಿಯ ಸರ್ವಾಧಿಕಾರಿಯಾದವನು ಅವನು. ಆ ಸಿದ್ಧಾಂತಕ್ಕೆ ಫ್ಯಾಶಿಸಮ್ ಎಂಬ ಹೆಸರನ್ನು ಕೊಟ್ಟವನೂ ಅವನೇ. ಅವನ ಪಕ್ಷದ ಹೆಸರೇ ನ್ಯಾಷನಲ್ ಫ್ಯಾಶಿಸ್ಟ್ ಪಾರ್ಟಿ ಎಂದಾಗಿದ್ದು, ಅವನು ಕೂಡ ತನ್ನ ದೇಶದ ಜನರಿಗೆ ಉಣಬಡಿಸಿದ್ದು ಅವರಿಗೆ ದಿವ್ಯಭವ್ಯವಾದ ಪ್ರಾಚೀನ ಇತಿಹಾಸವಿದೆಯಲ್ಲದೆ ದಿವ್ಯೋಜ್ವಲವಾದ ಭವಿಷ್ಯವಿದೆ ಎಂಬ ಸುಳ್ಳು ಮತ್ತು ಭ್ರಮೆಯ ಆನುಭಾವಿಕ ವಿಷಪಾಕವನ್ನೇ.

ಇಟಲಿಯ ಜನರಾದ ತಾವು, ಒಂದು ಕಾಲದಲ್ಲಿ ಇಡೀ ಯೂರೋಪ್ ಭೂಖಂಡ, ಉತ್ತರ ಆಫ್ರಿಕಾ ಹಾಗೂ ಏಷಿಯಾದ ಕೆಲ ಭಾಗವನ್ನು ಆಕ್ರಮಿಸಿಕೊಂಡಿದ್ದ ಪ್ರಾಚೀನ ರೋಮ್ ಸಾಮ್ರಾಜ್ಯದ ವಾರಸುದಾರರು; ಈಗ, ಇಪ್ಪತ್ತನೆಯ ಶತಮಾನದಲ್ಲಿ, ತಾವು ಮತ್ತೆ ಜಗತ್ ಸಾಮ್ರಾಟರಾಗುವ ಶುಭಗಳಿಗೆ ಬಂದೊದಗಿದೆ; ಅವತಾರಪುರುಷನಾದ ತಾನು ಆ ಅಮೃತಗಳಿಗೆಯ ಪ್ರವಾದಿಯೂ ಆ ಉಜ್ವಲಭವಿಷ್ಯದ ಸಾಕ್ಷಾತ್ ರೂವಾರಿಯೂ ಆಗಿದ್ದೇನೆ ಎಂದು ತನ್ನ ಜನರನ್ನು ನಂಬಿಸಿ, ಆ ಎಲ್ಲದರ ಅನುಭಾವದ ಹುಚ್ಚು ಅವರಿಗೆ ಹತ್ತಿಸಿ, ಹಿಟ್ಲರನಿಗೆ ಮಾದರಿಯಾದವನು ಅವನು.

ತನಗೆ ಬೇಕಾದ ರಾಜಕೀಯ-ಸಾಮಾಜಿಕ ನೆಲಗಟ್ಟು ಹದವಾಗಿದ್ದರೆ, ಫ್ಯಾಶಿಜ಼ಮ್‌ನ ಆ ಆನುಭಾವಿಕ ತತ್ತ್ವವು ಎಲ್ಲಿ, ಯಾವತ್ತು ಬೇಕಿದ್ದರೂ ಹರಿದಾಡತೊಡಗುತ್ತದೆ. ಈ ಇಪ್ಪತ್ತೊಂದನೆಯ ಶತಮಾನದ ಏಷಿಯಾ ಖಂಡ ಮತ್ತು ಭಾರತ ದೇಶದ ನಾವು ನಮ್ಮನ್ನೇ ನೋಡಿಕೊಳ್ಳುವುದಾದರೆ, ಆ ತತ್ತ್ವವು ಈವತ್ತು, ಒಂದು ಕಡೆ, ಹಿಂದೂತ್ವ ಪಾರಮ್ಯದ ರಾಷ್ಟ್ರವನ್ನು ಸ್ಥಾಪಿಸಲು ಹೊರಟಿರುವವರಲ್ಲಿಯೂ, ಮತ್ತೊಂದು ಕಡೆ, ಜಗದ್ವ್ಯಾಪೀ ಇಸ್ಲಾಮವಾದೀ (ಇಸ್ಲಾಮಿಸ್ಟ್) ಖಿಲಾಫತ್ ಅನ್ನುವುದನ್ನು ಸ್ಥಾಪಿಸಲು ಹೊರಟಿರುವವರಲ್ಲಿಯೂ ಕಾಣಿಸಿಕೊಂಡು, ಸಾವುಗುಣಿತ ಕುಣಿಯುತ್ತಿದೆ: ನಮ್ಮಲ್ಲಿನ ಅಮಾಯಕರಲ್ಲಿ ವಿನಾಶಕಾರೀ ಭ್ರಮೆಯಾಗಿ, ಸ್ವಾರ್ಥಿಗಳಲ್ಲಿ ಮಹಾಕೇಡಿನ ಸೋಗು ತಾನಾಗಿ.

ಆ ಸಾವುಗುಣಿತಕ್ಕೆ (ಕುಣಿತ, ಗುಣಿತ – ಎರಡಕ್ಕೂ) ಅನುಭಾವ-ಅಧ್ಯಾತ್ಮದ ಸೋಗಿನ ಸೊಲ್ಲುಕಟ್ಟು ಹೇಳುತ್ತ ನಟುವಾಂಗ ನುಡಿಸುವ ನಾಜೂಕಯ್ಯಗಳಿಗೆ ಒಂದು ಉದಾಹರಣೆ ಎಂದರೆ ಜಗ್ಗಿ ವಾಸುದೇವ ಎಂಬ ಅಸದ್ಗುರು. ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ತನಗೆ ದಿವ್ಯದ ಅಪರೋಕ್ಷಾನುಭೂತಿ ಆಯಿತು ಅನ್ನುವ ಕಥೆ ಮುಂದಿಟ್ಟು, ಶಾಂಭವೀ ಅನ್ನುವ ಧ್ಯಾನಮುದ್ರೆಯೊಂದರ ಮಾರಾಟಮಾಡುತ್ತ ತನ್ನ ವ್ಯಾಪಾರ ಶುರುಮಾಡಿಕೊಂಡ ಮನುಷ್ಯ ಈತ. ಅನುಭಾವದ ಸೋಗಿನ ಆಧುನಿಕೋತ್ತರ, ಹೈಟೆಕ್ ಫ್ಯಾಶಿಸ್ಟ್ ವಿಕಾರಕ್ಕೆ ಈತನಲ್ಲಿ ನಖಶಿಖಾಂತ ಡಿಜೈ಼ನರ್ ದಿರಿಸು; ಡಿಸೈನರ್ ಗಡ್ಡಮೀಸೆಯ ಕೇಶಾಲಂಕಾರ; ಹುಸೀ ಅಮೆರಿಕನ್ ಉಚ್ಚಾರದ ಇಂಗ್ಲಿಶ್ ಮಾತು; ಬಾಂಬೆ ಹತ್ತಿಮಿಠಾಯಿ ರುಚಿಯ ಅಪಲಾಪ. ಶಿವಾನುಭಾವದ ಹೆಸರಲ್ಲಿ ತಮಂಧದ ವ್ಯಾಪಾರ, ದಾಸೋಹ. ಅಲ್ಲಿಂದಾಚೆ, ರೇಸಿಂಗ್ ಕಾರು, ಸ್ಪೋರ್ಟ್ಸ್ ಮೋಟಾರು ಬೈಕಿನ ವಿಲಾಸೀ ಸವಾರಿಯ ಫೋಟೋ ಪ್ರಚಾರ; ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮುಂತಾದ್ದರಲ್ಲಿ ಹಿಂಡುಹಿಂಡು ಹಿಂಬಾಲಕರ ಚಪ್ಪಾಳೆ; ಮೇಲುಜಾತಿ, ಮೇಲುಮಧ್ಯಮವರ್ಗದ, ಸ್ವಯಂಸಂತೃಪ್ತ ಜನರಿಂದ ಸಿಗುವ ಓಲೈಕೆ; ದೇಶದ ಅತ್ಯುನ್ನತ ವಿದ್ಯಾಕೇಂದ್ರಗಳಲ್ಲಿ ಸಂವಾದಕ್ಕೆ ಬುಲಾವು; ಅಲ್ಲಿ ಸುಳ್ಳು, ಠೇಂಕಾರಗಳ ಆಟ. ಎಲ್ಲಕ್ಕೂ, ಸಿನಿಮಾ ಸೆಟ್ಟಿನಂಥ, ಆದಿಯೋಗಿ ಮೂರ್ತಿಯ ಮೂಕಸಾಕ್ಷಿತ್ವ.

ಅಲ್ಲಿಂದತ್ತ ಗುಹೇಶ್ವರನ ಕೊಂದರೆಂಬ ಸುದ್ದಿ.

  1. ಜರ್ಮನ್ ಭಾಷೆಯಲ್ಲಿ ನೀತ್ಚ ಬಳಸಿದ ಪದ Übermensch (ಊಬರ್‍ಮೆನ್ಷ್) ಅನ್ನುವುದನ್ನು ಇಂಗ್ಲಿಶಿನಲ್ಲಿ Superman ಎಂದು ಅನುವಾದಿಸುತ್ತ ಬಂದಿದ್ದಾರೆ. ಆ ಸ್ಥಿತಿಗತಿಯನ್ನು ಹೊಂದಿರುವವನು ಮನುಷ್ಯತ್ವವನ್ನು ಮೀರಿದವನು ಎಂದು ಸೂಚಿಸಲು ಕೆಲವರು ಅದನ್ನು Overman ಎಂದು ಅನುವಾದಿಸಿದ್ದಾರೆ.  ನೀತ್ಚನ Also Sprach Zarathustra ಹೊತ್ತಿಗೆಯನ್ನು ಮೊತ್ತಮೊದಲ ಬಾರಿಗೆ ಇಂಗ್ಲಶಿಗೆ ತಂದ Alexander Tille ಅದನ್ನು Beyond Man ಎಂದು ಅನುವಾದಿಸಿದ್ದಾನೆ. ನೀತ್ಚ ಸೂಚಿಸುತ್ತಿರುವ ಮನುಷ್ಯನ ಸ್ಥಿತಿಗತಿಯನ್ನು Tilleನ ಅನುವಾದವು ಹೆಚ್ಚು ಸರಿಯಾಗಿ ಧ್ವನಿಸುತ್ತದೆ. ಹಾಗಾಗಿ Übermensch ಅನ್ನುವುದನ್ನು ಇಲ್ಲಿ ಪರಾಮಾನವ, Supraman ಎಂದು ಅನುವಾದಿಸಿದ್ದೇನೆ.

ಪುಸ್ತಕ 2

(ಪುಸ್ತಕಗಳನ್ನು ಅಂತರ್ಜಾಲದ ಮೂಲಕ  ಕೊಂಡುಕೊಳ್ಳಲು ಬಯಸುವವರಿಗೆ ಅನುಕೂಲವಾಗಲಿ ಎಂದು ಅವುಗಳ ಬಗ್ಗೆ ಮಾಹಿತಿ ನೀಡುವ ಪೋಸ್ಟರುಗಳನ್ನು ಇಲ್ಲಿ ಕೊಟ್ಟಿದೆ. ಅಲ್ಲಿನ ಕ್ಯೂಆರ್ ಕೋಡುಗಳನ್ನು ಬಳಸಿ ಆಸಕ್ತರು ಅವುಗಳನ್ನು ಕೊಳ್ಳಬಹುದು.)

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...