- ತುಘಲಕ್ ದರ್ಬಾರಿನ ಶತಕದ ಸಂಭ್ರಮದಲ್ಲಿದೆ ಎಂದ ಬಿಜೆಪಿ
- ಗ್ಯಾರಂಟಿ ಯೋಜನೆಯನ್ನು ಟೀಕಿಸಿ, ಟ್ವೀಟ್ ಮಾಡಿದ ಬಿಜೆಪಿ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ನೂರು ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ ಘಟಕ, ‘ಕಾಂಗ್ರೆಸ್ ತುಘಲಕ್ ದರ್ಬಾರಿನ ಶತಕದ ಸಂಭ್ರಮದಲ್ಲಿದೆ’ ಎಂದು ಟೀಕಿಸಿದೆ.
ಸುಮಾರು 10 ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಎಡವಿದೆ ಎಂದು ಆರೋಪಿಸಿದೆ.
ಮೊದಲ ಟ್ವೀಟ್‌ನಲ್ಲಿ, ‘ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ತುಘಲಕ್ ದರ್ಬಾರಿನ ಶತಕದ ಸಂಭ್ರಮದಲ್ಲಿದೆ. ಸಿದ್ದರಾಮಯ್ಯನವರ ಸರ್ಕಾರ ನೂರು ದಿನ ಸಾಧಿಸಿದ್ದೇನು ಎಂದು ಹುಡುಕಿದರೆ ನೂರಕ್ಕೂ ಹೆಚ್ಚು ಹಳವಂಡಗಳೇ ಹೆಚ್ಚು. ಅಧಿಕಾರಿಗಳ ದುರುಪಯೋಗ, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ, ಶ್ಯಾಡೋ ಸಿಎಂ, ಕಾಸಿಗಾಗಿ ಪೋಸ್ಟಿಂಗ್, ಮರಳು ಮಾಫಿಯಾ, ರೈತರ ಆತ್ಮಹತ್ಯೆ, ಕಲುಷಿತ ನೀರು, ಕಳಪೆ ಆಹಾರ ವಿತರಣೆ, ಉಡುಪಿಯ ಅಮಾನುಷ ಘಟನೆ ಅಬ್ಬಬ್ಬಾ ಒಂದಾ ಎರಡಾ ಭಂಡ ಕಾಂಗ್ರೆಸ್ಸಿನ 100 ಕರ್ಮಕಾಂಡಗಳು ತೆರೆಯುತ್ತವೆ’ ಎಂದು ದೂರಿದೆ.
ಗ್ಯಾರಂಟಿಗಳ ಪುಂಗಿ ಊದಿ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಎಡವಿದ್ದೂ ಅಲ್ಲದೆ ಇಂದಿಗೂ ಅವುಗಳನ್ನು ಸರಿಯಾಗಿ ಜಾರಿ ಮಾಡಲಾಗಲಿಲ್ಲ.
‘ಗ್ಯಾರಂಟಿಗಳ ಅನುಷ್ಠಾನಕ್ಕೂ ಮೊದಲೇ ರಾಜ್ಯದಲ್ಲಿ ಶುರುವಾಗಿದ್ದು ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ದರ್ಬಾರ್. ಉನ್ನತ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಅಧಿಕಾರ ಚಲಾಯಿಸಿದ್ದರು. ಈ ಮೂಲಕ ರಾಜ್ಯದ ಬೊಕ್ಕಸದಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಸಂದಾಯವಾದದ್ದು ಎಷ್ಟು ಎಂಬುದನ್ನು ಎಲ್ಲವನ್ನೂ ತಿಳಿದ ಡಿಕೆ ಶಿವಕುಮಾರ್ ಅವರೇ ತಿಳಿಸಬೇಕಷ್ಟೆ’ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ವಿರುದ್ಧವೂ ವಾಗ್ದಾಳಿ ನಡೆಸಿದೆ.
’10 ಕೆಜಿ ಅಕ್ಕಿ ಬೇಕೋ ಬೇಡ್ವಾ ಎಂದಿದ್ದ ಸಿದ್ದರಾಮಯ್ಯರವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ ಇವರ ಮೋಸ ಜನರಿಗೆ ತಿಳಿಯುತ್ತಿದೆ ಎಂಬ ಸೂಚನೆ ಸಿಗುತ್ತಿದ್ದಂತೆ 15 ಕೆಜಿ ಅಕ್ಕಿಯ ಬದಲಿಗೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ನೀಡುವ 5 ಕೆಜಿ ಅಕ್ಕಿಯೇ ತಮ್ಮದೆಂದು ಬಿಂಬಿಸಿದರು. ಇನ್ನುಳಿದ 5 ಕೆಜಿ ಅಕ್ಕಿಗೆ ಹಣವನ್ನೇ ತಿನ್ನಿ ಎಂದು ಕೈ ತೊಳೆದುಕೊಂಡರು. ವಿಪರ್ಯಾಸವೆಂದರೆ ಪ್ರಧಾನಿ ಮೋದಿ ಅವರ ಸರ್ಕಾರದ 5 ಕೆಜಿ ಅಕ್ಕಿಯಲ್ಲಿ ಎರಡು ಕೆಜಿಯನ್ನು ಎಟಿಎಂ ಸರ್ಕಾರವೇ ತಿಂದು ತೇಗಿದೆ. ಫಲಾನುಭವಿಗಳಿಗೆ ಮೂರು ಕೆಜಿ ಅಕ್ಕಿ ನೀಡಿ ಎರಡು ಕೆಜಿ ರಾಗಿ ನೀಡುತ್ತಿದೆ. 5 ಕೆಜಿ ಅಕ್ಕಿಗೆ ಹಣ ಕೊಡುತ್ತೇವೆಂದು ಪಡಿತರ ಚೀಟಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲವೆಂದು ಕಾಂಗ್ರೆಸ್ ಇನ್ನೂ ಕಾಗೆ ಹಾರಿಸುತ್ತಲೇ ಇದೆ’ ಎಂದು ಹೇಳುವ ಮೂಲಕ ಅನ್ನಭಾಗ್ಯ ಯೋಜನೆಯ ವಿವಾದಕ್ಕೆ ಮತ್ತೆ ಬಿಜೆಪಿ ಕೈ ಹಾಕಿದೆ.
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಅತಿಹೆಚ್ಚು ಸಂಭ್ರಮಿಸಿದ್ದು ಜಿಹಾದಿ ಮನಸ್ಥಿತಿಗಳು’ ಎಂದು ಟ್ವೀಟ್ ಮಾಡುವ ಬಿಜೆಪಿ ಮೂಲಕ ಮುಸ್ಲಿಮರ ವಿರುದ್ದವು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, ‘ನೂರು ದಿನದಲ್ಲಿ ನೂರಕ್ಕೂ ಹೆಚ್ಚು ಕರ್ಮಕಾಂಡಗಳೇ ತುಂಬಿ ತುಳುಕುತ್ತಿವೆ. ಇಂತಹ ಅಸಮರ್ಥ, ಅವಿವೇಕಿ ಕಾಂಗ್ರೆಸ್ ಸರ್ಕಾರ ಪಡೆದ ಕನ್ನಡಿಗರು ಹಿಡಿ ಶಾಪ ಹಾಕುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದೆ.





