ಸರ್ಕಾರಕ್ಕೆ ಸಾವಿರ ದಿನಗಳು | ಎಲ್ಲ ಬಣ್ಣ ಮಸಿ ನುಂಗದಿರಬೇಕಾದರೆ…

Date:

ಕರ್ನಾಟಕದಲ್ಲಿ ಸಿದ್ಧರಾಮಯ್ಯ ಅವರ ಸರ್ಕಾರ 1000 ದಿನಗಳನ್ನು ಪೂರೈಸಿದೆ. 'ಗ್ಯಾರಂಟಿ ಸರ್ಕಾರ' ಎಂಬ ಬಿರುದಿನ ಭಾರ ಸಿದ್ಧರಾಮಯ್ಯ ಅವರ ಸರ್ಕಾರಕ್ಕೆ ವರವಾಯಿತೇ ಅಥವಾ ಹೊರೆಯಾಯಿತೇ ಎಂಬುದರ ಜೊತೆಜೊತೆಗೇ, ಉಳಿದಂತೆ ಈ ಸರ್ಕಾರ ಹೇಗೆ ಕಾರ್ಯ ನಿರ್ವಹಿಸಿತು ಎಂಬುದನ್ನು ಗಮನಿಸುವ ಬರೆಹ ಇದು. ಒಂದಂತೂ ಸ್ಪಷ್ಟ: ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿ ಅಧಿಕಾರಕ್ಕೆ ಬಂದ ಸರ್ಕಾರ ಅದಕ್ಕೆ ಕಡಿವಾಣ ಹಾಕುವಲ್ಲಿ ದಯನೀಯ ವೈಫಲ್ಯ ಕಂಡಿದೆ. ಆ ಮಸಿ ಬಣ್ಣ ಮುಂದಿನ ಚುನಾವಣೆಯ ವೇಳೆಗೆ ಬೇರೆಲ್ಲ ಬಣ್ಣಗಳನ್ನು ನುಂಗಿದರೆ ಅಚ್ಚರಿ ಇಲ್ಲ.

ಕರ್ನಾಟಕ ಸರ್ಕಾರ ತನ್ನ ‘ಸಾವಿರದ ಸಾಧನೆ’ಯನ್ನು ಬಿಂಬಿಸಿಕೊಳ್ಳಲು ಪ್ರಾಯೋಜಿತ ಪುಟಗಳ ಜಾಹೀರಾತು ಸತ್ರ ನಡೆಸುತ್ತಿದೆ. ಅಂತಹ ಪ್ರಾಯೋಜಿತ ಪುಟವೊಂದರಲ್ಲಿ (ಉದಯವಾಣಿ, ಫೆ.16) ರಾಜ್ಯದ ಆಹಾರ ಮತ್ತು ಪಡಿತರ ಇಲಾಖೆಯ ಸಚಿವ ಕೆ.ಎಚ್. ಮುನಿಯಪ್ಪ ಅವರ ಸಂದರ್ಶನ ಪ್ರಕಟಗೊಂಡಿದ್ದು, ಅವರಿಗೆ, ”ರಾಜ್ಯದಲ್ಲಿ BPL ಕಾರ್ಡುಗಳೆಲ್ಲ APL ಕಾರ್ಡುಗಳಾಗುತ್ತಿವೆ. ಈ ಬಗ್ಗೆ ಆತಂಕದಲ್ಲಿರುವವರಿಗೆ ನಿಮ್ಮ ಸಂದೇಶ ಏನು?” ಎಂದು ಕೇಳಲಾಗಿದೆ. ಸಚಿವರು ಬೇರೆಯೇ ದಿಕ್ಕಿನಲ್ಲಿ (ಸಾಲ ಪಡೆಯಲು ಆದಾಯ ತೆರಿಗೆ ಪಾವತಿ ಮಾಡಿದವರು ಜೀವನೋಪಾಯಕ್ಕಾಗಿ ಹಾಗೆ ಮಾಡಿದ್ದರೆ ಮತ್ತೆ BPL ಕಾರ್ಡ್ ಮಾಡಿಸಿಕೊಳ್ಳಲು ಅವಕಾಶ ಇದೆ ಎಂದು ಹೇಳಿದ್ದಾರೆ) ಸ್ಪಷ್ಟನೆ ನೀಡಿ, ಯಾರೂ ಆತಂಕಪಡಬೇಕಾಗಿಲ್ಲ ಎಂಬ ಭರವಸೆ ಕೊಟ್ಟಿದ್ದಾರೆ.

ಇಲ್ಲಿ ಗಮನಿಸಬೇಕಾದ ಸಂಗತಿಯೊಂದಿದೆ.

ರಾಜ್ಯ ಸರ್ಕಾರ ಕಳೆದ ಒಂದು ಸಾವಿರ ದಿನಗಳಲ್ಲಿ, ತನ್ನ ಗ್ಯಾರಂಟಿ ಯೋಜನೆಗಳ ಮೂಲಕ ‘ಸಾರ್ವತ್ರಿಕ ಮೂಲಾದಾಯ'(Universal basic income) ಪರಿಕಲ್ಪನೆಯಡಿ ನೀಡಿರುವ ನೇರ ಆರ್ಥಿಕ ನೆರವು ರಾಜ್ಯದ ತಲಾ ಆದಾಯ ಹೆಚ್ಚಿಸುವಲ್ಲಿ ಕೆಲಸ ಮಾಡಿದೆ. ಇಂದು ರಾಜ್ಯದ ತಲಾ ಆದಾಯ 2024-25ರಲ್ಲಿ (GSDP) 3.81 ಲಕ್ಷ ರೂ. ಇದ್ದು, ದೇಶದಲ್ಲೇ ಕರ್ನಾಟಕ ತಲಾದಾಯದ ಮಟ್ಟಿಗೆ ಮೊದಲನೇ ಸ್ಥಾನದಲ್ಲಿದೆ (25-26ನೇ ಸಾಲಿಗೆ ನಾಲ್ಕನೇ ಸ್ಥಾನವಂತೆ). ಆರ್ಥಿಕ ಅಸಮಾನತೆ ಇನ್ನಿಲ್ಲ ಎಂಬಂತೆ ಏರುತ್ತಿರುವಾಗ (ಶ್ರೀಮಂತ 10% ಜನರ ಕೈಯಲ್ಲಿ ದೇಶದ 72% ಸಂಪತ್ತು ಕ್ರೋಡೀಕೃತವಾಗಿರುವುದು), ಈ ನೇರ ನಗದು ವರ್ಗಾವಣೆ ಮತ್ತು ಗ್ಯಾರಂಟಿ ಯೋಜನೆಗಳು ಬೀರಿರುವ ಪರಿಣಾಮಗಳು ಸಣ್ಣವೇನಲ್ಲ. ಗ್ಯಾರಂಟಿ ಫಲಾನುಭವಿಗಳು ತಮ್ಮ ಆದಾಯದಲ್ಲಿನ ಹೆಚ್ಚಳದ ಕಾರಣದಿಂದಾಗಿ BPLನಿಂದ APL ಹಂತಕ್ಕೆ ತಲುಪಿರಬಹುದೇನೋ ಎಂಬ ಸಂಶಯಗಳು ಎದ್ದಿರುವುದೇ, ಈ ಗ್ಯಾರಂಟಿಗಳು ತಮ್ಮ ಉದ್ದೇಶ ಪೂರ್ತಿಯ ಹಾದಿಯಲ್ಲಿ ಸಾಗುತ್ತಿವೆ ಎಂಬುದಕ್ಕೆ ಸಾಕ್ಷಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಸಿದ್ದರಾಮಯ್ಯರ ‘ಸಾವಿರದ ಸರ್ಕಾರ’ದಲ್ಲಿ ಸತ್ತಂತಿರುವವರು…!

ಅಂದಾಜು 7 ಕೋಟಿ ಆಸುಪಾಸಿನಲ್ಲಿರುವ ರಾಜ್ಯದ ಜನಸಂಖ್ಯೆಯಲ್ಲಿ 1.67 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸಲು 21,000 ಕೋಟಿ ರೂ. ವೆಚ್ಚ ಆಗಿದೆ (ಪ್ರತೀ ಮನೆಗೆ ಸರಾಸರಿ ಐನೂರು ರೂ. ಉಳಿತಾಯ); 1.24 ಕೋಟಿ ಮನೆ ಯಜಮಾನಿಯರಿಗೆ ಇಲ್ಲಿಯ ತನಕ 50,000 ರೂ. ಜಮೆ ಮಾಡಲಾಗಿದ್ದು, ಅದಕ್ಕೆ 58,000 ಕೋಟಿ ರೂ. ಈತನಕ ವೆಚ್ಚ ಮಾಡಲಾಗಿದೆ; ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಈತನಕ 17,335 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಪ್ರತೀ ತಿಂಗಳು 1500-2000 ರೂ. ಮಹಿಳೆಯರಿಗೆ ಉಳಿತಾಯ ಆಗುತ್ತಿದೆ; ರಾಜ್ಯದ 1.26 ಕೋಟಿ ಕುಟುಂಬಗಳಿಗೆ ಅನ್ನಭಾಗ್ಯ ಸಿಗುತ್ತಿದೆ; 3.08 ಲಕ್ಷ ಯುವಕ/ಯುವತಿಯರಿಗೆ 757 ಕೋಟಿ ರೂ. ಯುವನಿಧಿ ಅನುದಾನ ಹಂಚಲಾಗಿದೆ ಎಂದು ಸರ್ಕಾರ ತನ್ನ ‘ಸಾವಿರದ ಸಾಧನೆ’ ಜಾಹೀರಾತುಗಳಲ್ಲಿ ಹೇಳಿಕೊಂಡಿದೆ. ಇವೆಲ್ಲ ಒಟ್ಟಾಗಿ ಪ್ರತೀ ಕುಟುಂಬಕ್ಕೆ, ತಿಂಗಳಿಗೆ ತಲಾ 5000-6000ರೂ.ಗಳ ಸಾರ್ವತ್ರಿಕ ಮೂಲಾದಾಯವನ್ನು ಸರ್ಕಾರ ಖಚಿತಪಡಿಸಿರುವುದು ಸಣ್ಣ ಸಂಗತಿಯೇನಲ್ಲ. ಚುನಾವಣೆಗಳ ಕಾಲದಲ್ಲಿ ರಸವತ್ತಾದ ಪ್ರಚಾರದ ಕಾರಣದಿಂದಾಗಿ ಈ ಗ್ಯಾರಂಟಿಗಳು ದೇಶದಾದ್ಯಂತ ಸುದ್ದಿಯಾಗಿವೆ, ಬೇರೆ ರಾಜ್ಯಗಳಲ್ಲೂ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಇದನ್ನು ಅಳವಡಿಸಿಕೊಳ್ಳುತ್ತಿವೆ. ಚುನಾವಣಾ ಆಶ್ವಾಸನೆಗಳಾಗಿ ಈ UBI ಪರಿಕಲ್ಪನೆ ಕೆಡುಕಿನದು ಎಂದು ದೇಶದ ಯೋಜಕರಿಗೆಲ್ಲ ಹಠಾತ್ತಾಗಿ ಅನ್ನಿಸತೊಡಗಿದೆ. ಈ ಬಗ್ಗೆ NITI ಆಯೋಗ, 16ನೇ ಹಣಕಾಸು ಆಯೋಗ, ದೇಶದ ಆರ್ಥಿಕ ಮುಖ್ಯ ಸಲಹೆಗಾರರು– ಎಲ್ಲರೂ ಆತಂಕ ವ್ಯಕ್ತಪಡಿಸತೊಡಗಿದ್ದಾರೆ. ನಿಜಕ್ಕೆಂದರೆ, ಈ UBI ಪರಿಕಲ್ಪನೆಗೆ ಸ್ವಲ್ಪ ಆರ್ಥಿಕ ಶಿಸ್ತು ತಂದರೆ (ಅರ್ಥಾತ್, ಅರ್ಹರಿಗೆ ಮಾತ್ರ ಅವು ದೊರೆಯುವಂತಾದರೆ) ಆರ್ಥಿಕ ಅಸಮಾನತೆಯನ್ನು ಒಂದು ಹಂತಕ್ಕೆ ತೊಡೆದುಹಾಕುವಲ್ಲಿ ಇವು ಮಹತ್ವದ ಪಾತ್ರ ವಹಿಸಲಿವೆ. ಇವುಗಳ ಕುರಿತು ಮಾತನಾಡುತ್ತಿರುವ ಯಾರು ಕೂಡ ಸಿರಿವಂತರ, ಉದ್ಯಮಿಗಳ ಸಬ್ಸಿಡಿ ಭಾಗ್ಯಗಳ ಕುರಿತು ಚಕಾರ ಎತ್ತುತ್ತಿಲ್ಲ.

ಗ್ಯಾರಂಟಿ 2

ಕೇವಲ ಗ್ಯಾರಂಟಿಗೆ ಸೀಮಿತ ಸರ್ಕಾರವೆ?

ಸಿದ್ಧರಾಮಯ್ಯ ಅವರ ಸರ್ಕಾರದ ಈ ಎರಡನೇ ಅವಧಿಯ ಮೇಲಿರುವ ದೊಡ್ಡ ದೂರು ಎಂದರೆ, ಸರ್ಕಾರ ಗ್ಯಾರಂಟಿಯ ಹೆಗಲೇರಿ, ಬೇರೆಲ್ಲವನ್ನೂ ಮರೆತುಬಿಟ್ಟಿದೆ ಎಂಬುದು. ಸಿಬ್ಬಂದಿ ಸಂಬಳಗಳಿಂದ ಆರಂಭಿಸಿ, ಗುತ್ತಿಗೆದಾರರ ಕಾಮಗಾರಿಗಳಿಗೆ ಪಾವತಿ, ಹಳೆ ಬಾಕಿಗಳು, ಸರ್ಕಾರಿ ಅನುದಾನಗಳ ಪಾವತಿಯಲ್ಲಿ ವಿಳಂಬದ ದೂರುಗಳು ಪದೇಪದೇ ಕೇಳಿಬರುತ್ತಿದ್ದು, ಅದರಲ್ಲಿ ಸತ್ಯಾಂಶ ಇಲ್ಲದಿಲ್ಲ. ಉಪಮುಖ್ಯಮಂತ್ರಿಗಳಂತೂ ಮೊನ್ನೆ ದುಡ್ಡಿಲ್ಲ ಎಂದು ಗೊತ್ತಿದ್ದೂ ಕಾಮಗಾರಿ ನಡೆಸಿದ್ದೇಕೆ ಎಂದು ಗುತ್ತಿಗೆದಾರರನ್ನೇ ತರಾಟೆಗೆ ತೆಗೆದುಕೊಂಡ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ!

ಈ ಆರ್ಥಿಕ ಸಂಕಟಕ್ಕೆ ಸಂಬಂಧಿಸಿದಂತೆ ಸರ್ಕಾರದ ಸ್ವಯಂಕೃತ ಅಪರಾಧವೊಂದಿದೆ. ರಾಜ್ಯದ ಬಜೆಟ್ ಗಾತ್ರ 2025-26ನೇ ಸಾಲಿಗೆ 30.70 ಲಕ್ಷ ಕೋಟಿ ರೂ.ಗಳು. ಬಜೆಟ್ ಪ್ರಕಾರ ಸರ್ಕಾರ ಐದು ಗ್ಯಾರಂಟಿಗಳಿಗೆ ವ್ಯಯಿಸಲು ವರ್ಷಕ್ಕೆ ಬೇಕಾಗುವುದು ಕೇವಲ 51,034 ಕೋಟಿ ರೂ.ಗಳು. ಅಂದರೆ, ಇದು ಬಜೆಟ್ ಗಾತ್ರದ ಕೇವಲ ಆರನೇ ಒಂದು ಭಾಗ. ಇವುಗಳಲ್ಲೂ ಗೃಹಜ್ಯೋತಿ, ಅನ್ನಭಾಗ್ಯದ ಸಬ್ಸಿಡಿ ಅಂಶಗಳು ಈ ಗ್ಯಾರಂಟಿಗಳು ಬರುವ ಮುನ್ನವೇ ಇದ್ದಂತಹ ಖರ್ಚುಗಳು. ಗ್ಯಾರಂಟಿ ಬಂದ ಬಳಿಕ ಗಮನಾರ್ಹ ಹೊಸ ಖರ್ಚು ಎಂದರೆ ಗೃಹಲಕ್ಷ್ಮೀ ಯೋಜನೆಗೆ ಪ್ರತೀ ವರ್ಷವೂ ವ್ಯಯಿಸುತ್ತಿರುವ 28,608 ಕೋಟಿ ರೂ.ಗಳು ಮತ್ತು ಶಕ್ತಿ ಯೋಜನೆಯ ಮೂಲಕ ಮಹಿಳೆಯರ ಉಚಿತ ಪ್ರಯಾಣಕ್ಕೆಂದು ವ್ಯಯಿಸುತ್ತಿರುವ ವಾರ್ಷಿಕ 5,300 ಕೋಟಿ ರೂ.ಗಳು ಮಾತ್ರ. ಇವುಗಳಲ್ಲೂ ಗೃಹಲಕ್ಷ್ಮೀ ಯೋಜನೆಯ ಮೊತ್ತ ಸಕಾಲದಲ್ಲಿ ತಲುಪುತ್ತಿಲ್ಲ ಎಂಬ ದೂರುಗಳಿವೆ.

ವಾಸ್ತವ ಹೀಗಿರುವಾಗ, ಎಲ್ಲ ಸಮಸ್ಯೆಗಳಿಗೂ ಗ್ಯಾರಂಟಿ ಯೋಜನೆಗಳು ಕಾರಣ ಎಂಬ ನೆರೇಟಿವ್ ಹುಟ್ಟಿಕೊಂಡದ್ದು, ಬಲಗೊಂಡದ್ದು ಹೇಗೆ? ಸಿದ್ಧರಾಮಯ್ಯ ಅವರ ಅವಧಿಗಿಂತ ಹಿಂದಿನಿಂದಲೂ ಬಜೆಟ್ ಪರಿಧಿಯನ್ನು ದಾಟಿ, ಜಲಸಂಪನ್ಮೂಲ, ಕಿರುನೀರಾವರಿ, ಲೋಕೋಪಯೋಗಿ ಇಲಾಖೆಗಳಲ್ಲಿನ ಕಾಮಗಾರಿಗಳಿಗೆ ಮಂಜೂರಾತಿ ನೀಡಿ, ಕಾಮಗಾರಿ ಮಾಡಿಸಿದ ಲೆಗೆಸಿ ಬಾಕಿ ಸುಮಾರು 1.12 ಲಕ್ಷ ಕೋಟಿ ರೂ.ಗಳಿಗೂ ಮಿಕ್ಕಿ ಗಾತ್ರದ್ದು ಸಿದ್ಧರಾಮಯ್ಯ ಅವರ ಎರಡನೇ ಅವಧಿಯ ಸರ್ಕಾರಕ್ಕೆ ವರ್ಗಾವಣೆ ಆಗಿವೆ. ಅವುಗಳ ಪಾವತಿಗೆ ಸರ್ಕಾರ ಹೆಣಗುತ್ತಿದೆ ಎಂಬ ಮಾತುಗಳಿವೆ. ಸಿದ್ಧರಾಮಯ್ಯ ಸರ್ಕಾರವು ತನ್ನ ಎರಡನೇ ಆವೃತ್ತಿಯ ಆರಂಭದಲ್ಲೇ ಈ ಕುರಿತು ಶ್ವೇತಪತ್ರವೊಂದನ್ನು ಹೊರಡಿಸಿ, ಎಲ್ಲವನ್ನೂ ಪಾರದರ್ಶಕವಾಗಿಟ್ಟದ್ದಿದ್ದರೆ, ಇಂದು ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ, ಶಾಸಕರುಗಳಿಗೆ ತಮ್ಮ ಕ್ಷೇತ್ರಾಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂಬ ಮಾತುಗಳನ್ನು ಕೇಳಬೇಕಾಗಿ ಬರುತ್ತಿರಲಿಲ್ಲ.

ಇದನ್ನು ಓದಿದ್ದೀರಾ?: ಭ್ರಷ್ಟಾಚಾರವೆಂಬ ಸ್ನಾನದ ಕೋಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಬೆತ್ತಲೆಯೇ…

ಕರ್ನಾಟಕ ಸರ್ಕಾರದ ವಿವಿಧ ಇಲಾಖೆವಾರು ಸಾಧನೆಗಳ ಬಗ್ಗೆ ಕಳೆದೊಂದು ವಾರದಿಂದ ದಿನಪತ್ರಿಕೆಗಳಲ್ಲಿ ಪುಟಗಟ್ಟಲೆ ಮಾಹಿತಿಗಳು ಜಾಹೀರಾತು ರೂಪದಲ್ಲಿ ಪ್ರಕಟಗೊಳ್ಳುತ್ತಿವೆ. ಹಾಗಾಗಿ ಆ ಬಗ್ಗೆ ವಿವರಗಳಿಗೆ ಹೋಗುವುದಿಲ್ಲ. ಇವನ್ನೆಲ್ಲ ಹೊರತುಪಡಿಸಿ, ಸರ್ಕಾರದ ಒಟ್ಟು ಆರ್ಥಿಕ ನಿರ್ವಹಣೆಯನ್ನು ಸ್ಥೂಲವಾಗಿ ನೋಡಿದರೆ, ಹಲವು ವಿವರಗಳು ಅಯಾಚಿತವಾಗಿ ಕಣ್ಣಿಗೆ ಬೀಳುತ್ತವೆ. ರಾಜ್ಯ ಸರ್ಕಾರದ ಖರ್ಚಿನ ಕೈ ಏಕೆ ಕಟ್ಟಿದೆ ಎಂಬ ಪ್ರಶ್ನೆಗೆ ಉತ್ತರ ಬೇಕಿದ್ದರೆ, 2025-26ರ ಬಜೆಟ್ ಹಂಚಿಕೆಗಳನ್ನು ಗಮನಿಸಿ. ಸರ್ಕಾರ ತನ್ನ ಒಟ್ಟು ಆದಾಯದ 58%ಗಿಂತಲೂ ಹೆಚ್ಚು ಭಾಗವನ್ನು ಸಂಬಳ (29%), ಪಿಂಚಿಣಿ (13%), ಸಾಲಕ್ಕೆ ಬಡ್ಡಿ ಪಾವತಿ (16%) ಎಂದೇ ನಿಗದಿತ ಪುನರಾವರ್ತಿಸುವ ಖರ್ಚುಗಳಿಗೆ ವೆಚ್ಚ ಮಾಡಬೇಕಿದೆ. ಇನ್ನು ವಿವಿಧ ಇಲಾಖೆಗಳ ಚಟುವಟಿಕೆಗಳಿಗೆ (ಗ್ಯಾರಂಟಿಯೂ ಸೇರಿದಂತೆ) 62% ಭಾಗವನ್ನು ವೆಚ್ಚ ಮಾಡುತ್ತದೆ. ಹೀಗಾಗಿ ಖರ್ಚಿಗೆ ಕೊರತೆ ಬೀಳುವ 10-15% ಆದಾಯಕ್ಕಾಗಿ ಸಾಲದ ಮೊರೆಹೋಗುವುದು ಅಥವಾ ಹೆಚ್ಚುವರಿ ಸಂಪನ್ಮೂಲ ಕ್ರೋಡೀಕರಣ, ವೆಚ್ಚದಲ್ಲಿ ಹಿಂಜರಿಕೆಯಂತಹ ಹಾದಿಗಳನ್ನು ಹಿಡಿಯುವುದು ಸರ್ಕಾರಕ್ಕೆ ಅನಿವಾರ್ಯ ಅನ್ನಿಸುತ್ತದೆ.

ಅಶೋಕ್ 3

ದುರ್ಬಲ ವಿರೋಧ ಪಕ್ಷ

ಕರ್ನಾಟಕ ಸರ್ಕಾರಕ್ಕೆ ತನ್ನ ಕಲ್ಲುಮುಳ್ಳಿನ ಹಾದಿಯಲ್ಲಿ ಸದ್ಯಕ್ಕೆ ಬಲುದೊಡ್ಡ ರಿಲೀಫ್ ಎಂದರೆ, ಜನಾಭಿಪ್ರಾಯಗಳನ್ನು ಕ್ರೋಡೀಕರಿಸಿ, ಗಟ್ಟಿ ನೆರೇಟಿವ್‌‍ಗಳನ್ನು ಕಟ್ಟುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಲ್ಲ ಪ್ರತಿಪಕ್ಷ ಇಲ್ಲದಿರುವುದು. ಸರ್ಕಾರ ತನ್ನ 1000 ದಿನಗಳ ಸಾಧನೆಯ ಅದ್ದೂರಿ ಪ್ರಚಾರದಲ್ಲಿ ನಿರತವಾಗಿರುವಾಗ ಪ್ರತಿಪಕ್ಷ ಯಾವುದಾದರೂ ಗಂಭೀರ ಆಕ್ಷೇಪಗಳನ್ನು ಎತ್ತಿದೆಯೇ ಎಂದು ಪರಿಶೀಲಿಸಿದರೆ, ಕೇಂದ್ರ ಸರ್ಕಾರವು ನಿರ್ದಿಷ್ಟ ಉದ್ದೇಶಗಳಿಗೆಂದು ಕೊಟ್ಟ ವಿಶೇಷ ಗ್ರಾಂಟ್‌ಗಳನ್ನು ರಾಜ್ಯ ಸರ್ಕಾರ ರೀ-ರೂಟ್ ಮಾಡಿದೆ, ಬೇರೆ ಉದ್ದೇಶಗಳಿಗೆ ಬಳಕೆ ಮಾಡಿದೆ ಎಂಬ ಒಂದು ‘ಟೆಕ್ನಿಕಾಲಿಟಿ’ ಆರೋಪ ಮಾತ್ರ ಕಾಣಸಿಗುತ್ತದೆ.

ರಾಜ್ಯದ ಒಟ್ಟು ಹಿತಾಸಕ್ತಿಯನ್ನು ಪರಿಗಣಿಸುವ ಬದಲು ತನ್ನ ಪಕ್ಷ, ಸಿದ್ಧಾಂತ ಮತ್ತು ಅಜೆಂಡಾಗಳಿಗೆ ಸೀಮಿತವಾಗಿ ಹೊರಟಿರುವ ರಾಜ್ಯದ ಪ್ರಮುಖ ಪ್ರತಿಪಕ್ಷ ಬಿಜೆಪಿ, ಕಾಂಗ್ರೆಸ್‌ ಅನ್ನು ಅದರ ಆಡಳಿತ ಸಂಬಂಧಿ ಲೋಪಗಳಲ್ಲಿ ಹಿಡಿದು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಸೋತಿದೆ. ಹಾಗಾಗಿ ಜನಸಾಮಾನ್ಯರ ಹಿತಾಸಕ್ತಿಗಳು ರಾಜ್ಯ ರಾಜಕಾರಣದ ಮುಖ್ಯ ವೇದಿಕೆಯಿಂದ ಮಾಯವಾಗಿವೆ. ಇದಕ್ಕೆ ತದ್ವಿರುದ್ಧವಾಗಿ, ಕರ್ನಾಟಕ ಸರ್ಕಾರವು ಕೇಂದ್ರದಿಂದ ತನಗೆ ಬರಬೇಕಾದ ತೆರಿಗೆ ಪಾಲಿನಲ್ಲಿ ತಾರತಮ್ಯ ಆಗಿರುವ ಬಗ್ಗೆ ಬಲವಾದ ನೆರೇಟಿವ್ ಕಟ್ಟಿದೆ. ಅದರ ಫಲಿತವೂ ಈ ಬಾರಿ 16ನೇ ಹಣಕಾಸು ಆಯೋಗದ ಶಿಫಾರಸುಗಳಲ್ಲಿ ಕಾಣಿಸಿಕೊಂಡಿದೆ.

ಭಾರತ ಸರ್ಕಾರ ಅನುಸರಿಸುತ್ತಿರುವ ಕೇಂದ್ರೀಕೃತ ಅಭಿವೃದ್ಧಿ ನೀತಿಗೆ ಕಾಂಗ್ರೆಸ್ ತಾತ್ವಿಕ ವಿರೋಧ ಹೊಂದಿಲ್ಲ. ಅದು ತಾನೇ ಶ್ರೀಕಾರ ಹಾಕಿದ ಮತ್ತು ಬಿಜೆಪಿ ಇಂದು ಅಬ್ಬರದಿಂದ ಮುನ್ನಡೆಸುತ್ತಿರುವ ಉದಾರೀಕರಣದ ಹಾದಿಯಲ್ಲಿ ತಾನೂ ಇರುವುದರಿಂದ, ಅದನ್ನೆಲ್ಲ ವಿರೋಧಿಸುತ್ತಿಲ್ಲ. ಬದಲಾಗಿ ರಾಜ್ಯದಲ್ಲಿ ವಿದೇಶೀ ಹೂಡಿಕೆಗೆ ಆಹ್ವಾನದ ಮೇಲಾಟ, ಸರ್ಕಾರಿ ಸೊತ್ತುಗಳ ಡಿಸ್‍ಇನ್ವೆಸ್ಟ್‌ಮೆಂಟ್, PPP ಮಾದರಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಎಂದೆಲ್ಲ ಹೊರಟಿದೆ ಹಾಗೂ ಅಭಿವೃದ್ಧಿ ನೀತಿಗಳಲ್ಲಿ ತನಗೂ ಬಿಜೆಪಿಗೂ ಹೆಚ್ಚು ವ್ಯತ್ಯಾಸ ಇಲ್ಲ ಎಂದು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ. ಹಾಗಾಗಿ ಬಿಜೆಪಿಗೆ ಇಲ್ಲೆಲ್ಲೂ ಸರ್ಕಾರವನ್ನು ತಾತ್ವಿಕ ನೆಲೆಯಲ್ಲಿ ತರಾಟೆಗೆ ತೆಗೆದುಕೊಳ್ಳುವ ಅವಕಾಶ ಸಿಕ್ಕಿಲ್ಲ. ಸಿಕ್ಕರೂ ಅದನ್ನೆಲ್ಲ ಪರಿಣಾಮಕಾರಿಯಾಗಿ ಬಳಸಿಕೊಂಡಿಲ್ಲ.

ಹಾಲೀ ಸರಕಾರದಲ್ಲಿ ಗುತ್ತಿಗೆದಾರರು 40% ಕಮಿಷನ್ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಾಗುತ್ತದೆ ಎಂಬ ಬಿಜೆಪಿ ದೂರಿಗೆ ಗಿರಾಕಿಗಳಿಲ್ಲ. ಏಕೆಂದರೆ, ಅದೇ ದೂರು ಬಿಜೆಪಿಯನ್ನು ಕಳೆದಬಾರಿ ಅಧಿಕಾರದಿಂದ ಕೆಳಗಿಳಿಸಿತ್ತು. ಕಮಿಷನ್ ವ್ಯವಹಾರಗಳ ವಾಸ್ತವ ಏನೆಂಬುದು ಜಗತ್ತಿಗೇ ಗೊತ್ತಿರುವ ಸತ್ಯ ಆಗಿರುವುದರಿಂದ, ವಿರೋಧ ಪಕ್ಷಗಳ ಕಡೆಯಿಂದ ಭ್ರಷ್ಟಾಚಾರದ ದೂರು ಬಂದರೆ, ಅದನ್ನು ಗಂಭೀರವಾಗಿ ಸ್ವೀಕರಿಸಬಲ್ಲವರು ರಾಜ್ಯದಲ್ಲಿ ಯಾರೂ ಉಳಿದಿಲ್ಲ. ಭ್ರಷ್ಟಾಚಾರದ ಮಟ್ಟಿಗೆ ಎಲ್ಲರೂ ಒಂದೇ ಎಂಬುದು ನಾಡಿನ ಒಮ್ಮತದ ಅಭಿಪ್ರಾಯ.

w 412h 232imgid 01hcqs6v1zfbvkcjpj5zdmceg6imgname vdvdv

ಭ್ರಷ್ಟಾಚಾರದ ಗುಮ್ಮ ನಿಯಂತ್ರಣ ಹೇಗೆ?

ಭ್ರಷ್ಟಾಚಾರದ ಬುಡ ಸಮೇತ ನಿರ್ಮೂಲನ ಸಾಧ್ಯವೇ ಇಲ್ಲ. ಅದು ಮಾನವ ಸಹಜ ಪೃವ್ರತ್ತಿ ಎಂಬ ಹಂತವನ್ನು ತಲುಪಿದ ಬಳಿಕ, ಈಗ ಹಿಂದಿರುಗಿ ನೋಡಿದರೆ, ರಾಜಕೀಯ ಭ್ರಷ್ಟಾಚಾರ ಹೆಚ್ಚಳಕ್ಕೆ ಕಾಣಿಸುತ್ತಿರುವ ಬಲುದೊಡ್ಡ ಕಾರಣ ಎಂದರೆ ಚುನಾವಣೆಗಳ ಕಾಲದ ಖರ್ಚು. 30 ವರ್ಷಗಳ ಹಿಂದೆ ರಾಜಕಾರಣಿಗಳ ಚುನಾವಣೆ ಖರ್ಚು ಈ ಪ್ರಮಾಣದಲ್ಲಿ ಇರಲಿಲ್ಲ. ರಾಷ್ಟ್ರಮಟ್ಟದಲ್ಲಿ ಇಂದು ವಿರೋಧಪಕ್ಷವಾಗಿ ಕುಳಿತಿರುವ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯು ಚುನಾವಣಾ ಖರ್ಚುಗಳಿಗೆ ಸಂಬಂಧಿಸಿದಂತೆ ಇನ್ನೆಂದೂ ತಲೆ ಎತ್ತದಂತೆ ಸೋಲಿಸಿ ಆಗಿದೆ. ಇದರ ಫಲವಾಗಿ ಚುನಾವಣೆಗಳಿಗೆ ಸ್ಪರ್ಧಿಸಲು, ಗೆಲ್ಲಬಲ್ಲ ಕಾಸಿನ ಕುಳಗಳನ್ನು ಹುಡುಕುವುದೇ ಇಂದು ರಾಜಕೀಯ ತಂತ್ರಗಾರಿಕೆ ಅನ್ನಿಸಿಕೊಂಡುಬಿಟ್ಟಿದೆ. ಈ ಕಾಸಿನ ರಾಜಕೀಯದ ಮೇಲಾಟದಲ್ಲಿ ತಾನು ಗೆಲ್ಲುವುದು ಇನ್ನು ಸಾಧ್ಯವಿಲ್ಲ ಎಂಬ ಸ್ಥಿತಿ ತಲುಪಿರುವ ಕಾಂಗ್ರೆಸ್‌ಗೆ ಕನಿಷ್ಠಪಕ್ಷ ತಾನು ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಕಾಸಿಗೆ ಹೊರತಾದ ಪರ್ಯಾಯ ಹಾದಿಯನ್ನು ಗುರುತಿಸಿಕೊಳ್ಳುವುದು ಸಾಧ್ಯ ಇಲ್ಲವೆ?

ಈ ಭ್ರಷ್ಟಾಚಾರ ಕೇವಲ ರಾಜಕಾರಣಿಗಳಿಗೆ ಸೀಮಿತವಾದದ್ದಲ್ಲ. ಪ್ರತಿಯೊಂದು ಸರ್ಕಾರಿ ಕಚೇರಿ ಭ್ರಷ್ಟಗೊಂಡಿದೆ. ಈಗೀಗ ಹಿಂದೆಂದೂ ಊಹಿಸಿರದ ಶಿಕ್ಷಣ, ಸಮಾಜ ಕಲ್ಯಾಣದಂತಹ ಇಲಾಖೆಗಳಲ್ಲೂ ಪರ್ಸಂಟೇಜು ಇಲ್ಲದೇ ವ್ಯವಹಾರವೇ ಇಲ್ಲ ಎಂಬಂತಹ ರೋಗಿಷ್ಟ ಸ್ಥಿತಿಗೆ ತಲುಪಿಯಾಗಿದೆ. ಅಧಿಕಾರಿಗಳು ತಿಂದು, ಮೇಲಿನವರಿಗೆ ಪಾಲು ಕೊಡಬೇಕೆಂದು ಹೇಳಿ, ತಾವು ತಿಂದದ್ದರಲ್ಲೂ ದೊಡ್ಡ ಪಾಲನ್ನು ರಾಜಕಾರಣಿಗಳಿಗೆ ಅಂಟಿಸುತ್ತಿದ್ದಾರೆ. ಇಂದು ನಾಡಿನ ಜನಮಾನಸದಲ್ಲಿ ಭ್ರಷ್ಟಾಚಾರದ ಬಗ್ಗೆ ಅಗಾಧ ಪ್ರಮಾಣದ ಅಸಹನೆ ಇದೆ ಮತ್ತು ಅದು ಕಟ್ಟೆಯೊಡೆಯಲು ಸಮಯ ಕಾಯುತ್ತಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಅಧಿಕಾರಕ್ಕೆ ಬಂದಿರುವ ಸಿದ್ಧರಾಮಯ್ಯ ಸರ್ಕಾರ, ಅದನ್ನು ನಿಯಂತ್ರಿಸುವಲ್ಲಿ ದಯನೀಯವಾಗಿ ಸೋತಿದೆ. ಆ ಮಟ್ಟಿಗೆ ಸರ್ಕಾರದ್ದು ಸಂಪೂರ್ಣ ವೈಫಲ್ಯ.

ಇದನ್ನು ಓದಿದ್ದೀರಾ?: ‘ಕರಿಯ’ ಎಂಬ ಕಳಂಕ ಅಳಿಸಿ ‘ಆಫ್ರಿಕನ್ ಅಮೆರಿಕನ್’ ಅಸ್ಮಿತೆ ತಂದುಕೊಟ್ಟ ಹರಿಕಾರ

ಆಡಳಿತದಲ್ಲಿರುವ ಕಾಂಗ್ರೆಸ್ ತನ್ನದೇ ಚರಿತ್ರೆಯ ಪುಟಗಳನ್ನು ತೆರೆದು ನೋಡಿದರೆ, ಸೇವೆ ಆಧರಿತ ರಾಜಕಾರಣದ ಮೂಲಕವೇ ತನ್ನ ಬೇರುಮಟ್ಟವನ್ನು ಬಲಪಡಿಸಿಕೊಂಡಿರುವುದನ್ನು ಗುರುತಿಸುವುದು ಕಷ್ಟವಿಲ್ಲ. ಇಂದು ಗ್ಯಾರಂಟಿಗಳ ಮೂಲಕ ತಳ ಮಟ್ಟಕ್ಕೆ ತಲುಪಿರುವ ಕಾಂಗ್ರೆಸ್ಸಿಗೆ ದುಡ್ಡು ಇಲ್ಲದ ರಾಜಕೀಯ ಮಾದರಿಯೊಂದನ್ನು ರೂಪಿಸುವುದಕ್ಕೆ ಇದು ಸಕಾಲ. ತಳಮಟ್ಟದಲ್ಲಿ ಸೇವೆ ಮಾಡಬಲ್ಲ ಕಾರ್ಯಕರ್ತರನ್ನು ಗುರುತಿಸಿ, ಅವರ ಮೂಲಕ ಶ್ರಮ ಹಾಕಿ ಬೇರು ಗಟ್ಟಿ ಮಾಡಿಕೊಂಡರೆ, ಇದು ಅಸಾಧ್ಯದ್ದೇನಲ್ಲ. ದುಡ್ಡು ಚೆಲ್ಲಿ ಗೆಲ್ಲಿಸಿಕೊಂಡು ಬರಬಲ್ಲ ನಾಯಕರನ್ನು ಅವಲಂಬಿಸಿ ಪರೋಪಜೀವಿ ರಾಜಕಾರಣ ಮಾಡುವ ಸ್ಥಿತಿಯಿಂದ ಹೊರಬರದಿದ್ದರೆ, ಸಿದ್ಧರಾಮಯ್ಯ ಮಾದರಿ ಆಡಳಿತಕ್ಕೆ ಭವಿಷ್ಯ ಇಲ್ಲ. ಈ ನಿಟ್ಟಿನಲ್ಲಿ ಗಂಭೀರವಾಗಿ ಕಾರ್ಯಾಚರಿಸದಿದ್ದರೆ, ಕಾಂಗ್ರೆಸ್ ಬಾಣಲೆಯಿಂದ ಬೆಂಕಿಗೆ ಬೀಳಲಿದೆ. ಕರ್ನಾಟಕವು ದೇಶದ ಅತ್ಯಂತ ಭ್ರಷ್ಟ ಐದು ರಾಜ್ಯಗಳಲ್ಲಿ ಒಂದು ಎಂಬ ಹಣೆಪಟ್ಟಿ ಹಚ್ಚಿಕೊಂಡಾಗಿದೆ. ಅದನ್ನು ಕಳಚಿಕೊಳ್ಳದಿದ್ದರೆ, ಸಾಧನೆಯ ಎಲ್ಲ ಬಣ್ಣಗಳೂ ಮಸಿ ನುಂಗಿದಂತೆ.

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
+ posts

ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).

ಪೋಸ್ಟ್ ಹಂಚಿಕೊಳ್ಳಿ:

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...