ರಾಜ್ಯದ ಸಮಾಜೋ-ಆರ್ಥಿಕತೆ ಕುರಿತು ತಳಮಟ್ಟದ ಅಪಾರ ತಿಳಿವಳಿಕೆ, ಸೆಕ್ಯುಲರಿಸಂ, ಸಾಮಾಜಿಕ ಕಾಳಜಿ, ಆರ್ಥಿಕ ಶಿಸ್ತು ಇರುವ ಅತ್ಯಂತ ವಿರಳ ರಾಜಕಾರಣಿಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯವರೂ ಒಬ್ಬರು ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಇದೆಲ್ಲವನ್ನೂ ಬಳಸಿಕೊಂಡು ಪ್ರಗತಿಪರವಾದ, ಉತ್ತಮ ಪ್ರಭುತ್ವ ಎನ್ನಬಹುದಾದ ಆಡಳಿತ ಕೊಟ್ಟಿದ್ದಾರೆಯೇ ಎನ್ನುವ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿಯುತ್ತದೆ. ಎರಡನೆ ಅವಧಿ ನಿರಾಶದಾಯಕ ಮತ್ತು ಹಳಿ ತಪ್ಪಿದೆ ಎನ್ನುವ ಮಾತುಗಳಲ್ಲೂ ಹುರುಳಿದೆ.
ಮೇ 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಾವಿರ ದಿನಗಳಾಗಿವೆ. ಈ ನೆಪದಲ್ಲಿ ಸಂಭ್ರಮಾಚರಣೆಯೂ ನಡೆದು ಹೋಯಿತು. 135 ಶಾಸಕರು ಮತ್ತು ನಾಲ್ಕು ಪಕ್ಷೇತರ ಶಾಸಕರ ಬಹುಮತದ ಬೆಂಬಲ ಹೊಂದಿರುವ ಕಾಂಗ್ರೆಸ್ ಪಕ್ಷದ ಸರ್ಕಾರವು ತನ್ನ ಐದು ವರ್ಷಗಳ ದಾರಿಯಲ್ಲಿ ಅರ್ಧ ಹಾದಿ ಸವೆಸಿದೆ. ಇನ್ನುಳಿದಿರುವುದು ಕೇವಲ ಒಂದೂವರೆ ವರ್ಷ ಮಾತ್ರ. ಅಕ್ಟೋಬರ್ 2027ರ ನಂತರದ ಏಳೆಂಟು ತಿಂಗಳುಗಳು ಚುನಾವಣಾ ಪೂರ್ವ ಸಿದ್ಧತೆಯಲ್ಲಿ ಕಳೆದುಹೋಗುತ್ತದೆ. ಹಿಂದಣ ಹೆಜ್ಜೆಯನ್ನು ಅರಿತು ಮುಂದಣ ಹೆಜ್ಜೆ ಇಡಬೇಕಾದಂತಹ ನಿರ್ಣಾಯಕ ಹಂತದಲ್ಲಿದ್ದೇವೆ.
ಇದುವರೆಗೂ ಕರ್ನಾಟಕದಲ್ಲಿ ಒಕ್ಕಲಿಗರು, ಲಿಂಗಾಯತರು ಮತ್ತು ಬ್ರಾಹ್ಮಣರು ತಮ್ಮ ಜಾತಿಯ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ದಕ್ಕಿಸಿಕೊಂಡು ಅತಿ ಹೆಚ್ಚು ಅವಧಿಯಲ್ಲಿ ಅಧಿಕಾರ ನಡೆಸಿದ್ದಾರೆ. ಹಿಂದುಳಿದ ವರ್ಗಗಳಿಂದ ಬಂದ ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರ್ಮಸಿಂಗ್, ಸಿದ್ಧರಾಮಯ್ಯ ಮುಖ್ಯಮಂತಿಗಳಾಗಿದ್ದಾರೆ. ಇವರ ಒಟ್ಟು ಅವಧಿ ಹದಿನಾರು ವರ್ಷಗಳು ಮಾತ್ರ. ಸಿದ್ಧರಾಮಯ್ಯನವರು ಅತಿ ದೀರ್ಘಕಾಲದ ಮುಖ್ಯಂತ್ರಿ ಎಂದು ಅರಸು ಅವರನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿದ್ದಾರೆ. ಇಂದಿನ ಸಂದರ್ಭದಲ್ಲಿ ರಾಜ್ಯದ ಸಮಾಜೋ-ಆರ್ಥಿಕತೆ ಕುರಿತು ತಳಮಟ್ಟದ ಅಪಾರ ತಿಳಿವಳಿಕೆ, ಸೆಕ್ಯುಲರಿಸಂ, ಸಾಮಾಜಿಕ ಕಾಳಜಿ, ಆರ್ಥಿಕ ಶಿಸ್ತು ಇರುವ ಅತ್ಯಂತ ವಿರಳ ರಾಜಕಾರಣಿಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯವರೂ ಒಬ್ಬರು ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಇದೆಲ್ಲವನ್ನೂ ಬಳಸಿಕೊಂಡು ಪ್ರಗತಿಪರವಾದ, ಉತ್ತಮ ಪ್ರಭುತ್ವ ಎನ್ನಬಹುದಾದ ಆಡಳಿತ ಕೊಟ್ಟಿದ್ದಾರೆಯೇ ಎನ್ನುವ ಪ್ರಶ್ನೆಗೆ ಮಿಶ್ರ ಪ್ರತಿಕ್ರಿಯೆ ದೊರಕುತ್ತದೆ. ಆದರೆ ಎರಡನೆ ಅವಧಿ ನಿರಾಶದಾಯಕ ಮತ್ತು ಹಳಿ ತಪ್ಪಿದೆ ಎನ್ನುವ ಮಾತುಗಳಲ್ಲಿ ಹುರುಳಿದೆ.

ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಆಂತರಿಕ ಕಿತ್ತಾಟಗಳು ಸರ್ಕಾರದ ಕಾರ್ಯ ನಿರ್ವಹಣೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪಕ್ಷವು ಶಿಸ್ತನ್ನು ಬೆಳೆಸಿಕೊಳ್ಳಲು ವಿಫಲವಾಗಿದೆ. ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆಯೋ ಇಲ್ಲವೋ? ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಬೇಕೆಂದು ಒಪ್ಪಂದವಾಗಿದೆಯೇ? ಎನ್ನುವ ಎರಡಂಶಗಳ ಸುತ್ತ ಇಡೀ ಪಕ್ಷದ ಚಟುವಟಿಕೆ ಕೇಂದ್ರೀಕೃತವಾಗಿದ್ದು ಸರ್ಕಾರವು ಆಡಳಿತದ ಮೇಲೆ ಹತೋಟಿ ಕಳೆದುಕೊಂಡಿದೆ. ಕಾರ್ಯಾಂಗದ ಅದಕ್ಷತೆಗೆ ಕಾರಣವಾಗಿದೆ. ಕೊಟ್ಟ ಕುದುರೆ ಏರಲು ವಿಫಲರಾದವರು ಎನ್ನುವ ಟೀಕೆಗೆ ಗುರಿಯಾಗಿರುವ ಕಾಂಗ್ರೆಸ್ ಪಕ್ಷವು ಈ ಕಲಹದಿಂದಾಗಿ ಕೊರಳಿಗೆ ಬಂಡೆ ಕಟ್ಟಿಕೊಂಡು ಬಾವಿಗೆ ಬಿದ್ದಂತಹ ಪರಿಸ್ಥಿತಿಗೆ ಸಿಲುಕಿದೆ. ಜನತೆಗೆ ನಿರಾಶೆ ಮೂಡಿಸಿದೆ.
ವರ್ತಮಾನದ ನೋಟ
ಆರ್ಥಿಕತೆ
ಮೊದಲನೆಯದಾಗಿ ಚುನಾವಣಾ ಸಂದರ್ಭದ ಭರವಸೆಗಳಲ್ಲಿ ಒಂದಾದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಈ ಸರ್ಕಾರದ ಸಾಧನೆಯಾಗಿದೆ. ಇದು ಮಹಿಳೆಯರಲ್ಲಿ ಆತ್ಮವಿಶ್ವಾಸ, ಸ್ವಾವಲಂಬನೆಯನ್ನು ತಂದುಕೊಟ್ಟಿದೆ, ಹಸಿವಿನ ಬವಣೆ ಕಡಿಮೆಯಾಗಿದೆ, ಕೆಳವರ್ಗದವರಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಕೊಳ್ಳುವ ಸಾಮರ್ಥ್ಯ ಹೆಚ್ಚಿಸಿದೆ. ಆದರೆ ಇದು ಕಲ್ಯಾಣ ಯೋಜನೆ ಮಾತ್ರ, ಸಾರ್ವಜನಿಕ ನೀತಿಯಲ್ಲ. ಯಾವುದೇ ಸರ್ಕಾರಕ್ಕೆ ಇದು ಬೊಕ್ಕಸಕ್ಕೆ ಹೊರೆ ಎನಿಸಿದರೆ ನಿಲ್ಲಿಸಿಬಿಡಬಹುದು. ಇದರ ಅಪಾಯ ಸದಾ ತೂಗುಗತ್ತಿಯಂತೆ ನೇತಾಡುತ್ತಿರುತ್ತದೆ. ಹಾಗೆಯೇ ಇದರ ಕಾರ್ಯನಿರ್ವಹಣೆಯಲ್ಲಿ ಲೋಪದೋಷಗಳಿವೆ. ಸರ್ಕಾರವು ಇದರ ಬಾಧಕಗಳನ್ನು ಪತ್ತೆ ಹಚ್ಚಬೇಕಿದೆ. ಅವುಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಜೊತೆ ಜೊತೆಗೆ ಈ ಕಲ್ಯಾಣ ಯೋಜನೆಗಳ ಫಲಶ್ರುತಿಯನ್ನು ಸಮೀಕ್ಷೆ ಮಾಡಬೇಕಿದೆ. ಅದರ ಆಧಾರದಲ್ಲಿ ಬದಲಾವಣೆಗಳು ಅಗತ್ಯವಿದ್ದರೆ ಅದನ್ನೂ ಅಳವಡಿಸಿಕೊಳ್ಳಬೇಕಿದೆ. ಇವರ ಮುಂದೆ ಕೇವಲ ಎರಡು ವರ್ಷಗಳಿವೆ. ಕೂಡಲೆ ಕಾರ್ಯತತ್ಪರರಾಗಬೇಕಿದೆ.
52,000-60,000 ಕೋಟಿ ವೆಚ್ಚದ(ಇದುವರೆಗೂ 1.12 ಲಕ್ಷ ಕೋಟಿ ಖರ್ಚಾಗಿದೆ) ಈ ಐದು ಗ್ಯಾರಂಟಿಗಳಿಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಆರ್ಥಿಕ ಅಭಿವೃದ್ಧಿ, ಕೇಂದ್ರದಿಂದ ದೊರೆಯುವ ರಾಜ್ಯದ ತೆರಿಗೆ ಪಾಲು ಮತ್ತು ಆಡಳಿತ ಸುಧಾರಣೆ ಮೂಲಕ ಸಂಗ್ರಹಿಸುವುದಾಗಿ ಸಿದ್ಧರಾಮಯ್ಯನವರು ಹೇಳಿದ್ದರು. ಇಲ್ಲಿ ಕೇಂದ್ರದಿಂದ ಬರಬೇಕಾದ ರಾಜ್ಯ ಪಾಲು, ಅನುದಾನ, ಪಡಿತರ ಬರದೇ ಹೋದ ಕಾರಣ ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಕಷ್ಟವಾಗಿದ್ದು ನಿಜ. ಇದರ ಪ್ರಮಾಣ ಎಷ್ಟು ಎಂದು ಇಂದಿಗೂ ಅಂದಾಜಿಸಿಲ್ಲ. ಆದರೆ ಭ್ರಷ್ಟಾಚಾರ ನಿಯಂತ್ರಣದ ಮೂಲಕ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸಿ ಅದನ್ನು ಗ್ಯಾರಂಟಿಗಳಿಗೆ ಬಳಸಿಕೊಳ್ಳುವ ಭರವಸೆ ಇಂದಿಗೂ ಈಡೇರಲಿಲ್ಲ. ಭ್ರಷ್ಟಾಚಾರ ಮುಂದುವರೆದಿದೆ. ಆಡಳಿತದಲ್ಲಿನ ಅನಗತ್ಯ ವೆಚ್ಚವೂ ತಗ್ಗಲಿಲ್ಲ. ಬದಲಿಗೆ ದುಂದುವೆಚ್ಚ ಹೆಚ್ಚಾಗುತ್ತಿದೆ. ಕೆಲವರನ್ನು ಹೊರತುಪಡಿಸಿ ಬಹುತೇಕ ಮಂತ್ರಿಗಳ ಕಾರ್ಯನಿರ್ವಹಣೆಯಲ್ಲಿಅದಕ್ಷತೆಯಿದೆ. ಮತ್ತೊಂದೆಡೆ ರಾಜ್ಯದ ತೆರಿಗೆ ಸಂಗ್ರಹದ ಗುರಿ ತಲುಪುವುದು ಕಷ್ಟವಾಗುತ್ತಿದೆ. ಇದು ಗ್ಯಾರಂಟಿ ಯೋಜನೆಗಳ ಮೇಲೆ ಪರಿಣಾಮ ಬೀರುತ್ತಿದೆ. ಸಿದ್ಧರಾಮಯ್ಯನವರು ತಮ್ಮ ಅನುಭವ ಮತ್ತು ಪರಿಣಿತಿಯ ಮೂಲಕ ಇದನ್ನು ಮ್ಯಾನೇಜ್ ಮಾಡುತ್ತಿದ್ದಾರೆ. ಆದರೆ ಭವಿಷ್ಯದಲ್ಲಿ ಇದನ್ನು ನಿರಂತರವಾಗಿ ಮುಂದುವರಿಸುವ ಭರವಸೆ ಯಾರೂ ಕೊಡುತ್ತಿಲ್ಲ.
ಇದನ್ನು ಓದಿದ್ದೀರಾ?: ಸರ್ಕಾರಕ್ಕೆ ಸಾವಿರ ದಿನಗಳು | ಎಲ್ಲ ಬಣ್ಣ ಮಸಿ ನುಂಗದಿರಬೇಕಾದರೆ…
ಈ ಕಾರಣಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಆಡಳಿತ ಮತ್ತು ವಿರೋಧ ಪಕ್ಷದ ಮುಖಂಡರು ಏಕಪಕ್ಷೀಯವಾಗಿ ಟೀಕಿಸುತ್ತಿದ್ದಾರೆ. ಇದರಲ್ಲಿ ಹುರುಳಿದೆಯೇ ಎನ್ನುವುದನ್ನು ಸಹ ಪರಿಶೀಲನೆ ಮಾಡಬೇಕಿದೆ. ಆದರೆ ಬಹುಪಾಲು ಶಾಸಕರ ಬಳಿ ತಮ್ಮ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಕುರಿತು ಯಾವುದೇ ಕಾರ್ಯಯೋಜನೆಗಳಿಲ್ಲ, ನೀಲನಕ್ಷೆಗಳಿಲ್ಲ. ರೊಕ್ಕ ಗಳಿಸುವ ಪರ್ಸೆಂಟೇಜ್ ವ್ಯವಹಾರದ ಕಾಮಗಾರಿ ಕುರಿತು ಮಾತ್ರ ಇವರಿಗೆ ಆಸಕ್ತಿ ಇದೆ. ಅದರಾಚೆಗೆ ಕ್ಲಸ್ಟರ್ ಕೇಂದ್ರ ಆಧರಿತ ಉದ್ಯೋಗ ಸೃಷ್ಟಿ ಯೋಜನೆಗಳು, ಜಲ ಸಂರಕ್ಷಣೆ ಯೋಜನೆಗಳು, ಸಾರ್ವಜನಿಕ ಶಿಕ್ಷಣ, ಆರೋಗ್ಯ ಕುರಿತು ಬಹುತೇಕ ಶಾಸಕರಿಗೆ ಕಾಳಜಿ ಇಲ್ಲ. ಇವರು ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಗೋಳಿಟ್ಟರೂ ಅವರ ಮಾತುಗಳು ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಗ್ಯಾರಂಟಿ ಯೋಜನೆಗಳಿಲ್ಲದ 2023 ಪೂರ್ವದ ವರ್ಷಗಳಲ್ಲಿಯೂ ಇವರು ತಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕುರಿತು ಚಿಂತಿಸಿದ, ರೂಪಿಸಿದ ಉದಾಹರಣೆಗಳಿಲ್ಲ. ಗ್ಯಾರಂಟಿ ಯೋಜನೆಗಳ ಟೀಕೆ ಇವರ ನಿಷ್ಕ್ರಿಯತೆ ಮತ್ತು ಹೊಣೆಗೇಡಿತನವನ್ನು ಮರೆಮಾಚಲು ಒಂದು ನೆಪವಾಗಿದೆ.

ಸಿದ್ಧರಾಮಯ್ಯ ನೇತೃತ್ವ ಸರ್ಕಾರದ ಎರಡನೇ ಅವಧಿಯಲ್ಲಿ ಸಾಲದ ಪ್ರಮಾಣ ಹೆಚ್ಚಾಗಿದೆ. 2025-26ನೇ ಸಾಲಿನ ಕರ್ನಾಟಕ ರಾಜ್ಯದ ಬಜೆಟ್ ಅಂದಾಜಿನ ಪ್ರಕಾರ ಮಾರ್ಚ್ 2026ರ ಅಂತ್ಯಕ್ಕೆ ಸುಮಾರು ರೂ.7.64 ಲಕ್ಷ ಕೋಟಿ ತಲುಪುವ ಸಾಧ್ಯತೆಯಿದೆ, ಇದರಲ್ಲಿ 2025-26ನೇ ಸಾಲಿನಲ್ಲಿ ರೂ.1.16 ಲಕ್ಷ ಕೋಟಿ ಹೊಸ ಸಾಲ ಸೇರಿದೆ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಈ ಮೊತ್ತ ರೂ.7.81 ಲಕ್ಷ ಕೋಟಿ ತಲುಪಬಹುದು ಎಂದು ಕೆಲವು ವರದಿಗಳು ಸೂಚಿಸಿವೆ. ಈ ಸಾಲವನ್ನು ಕರ್ನಾಟಕದ 7 ಕೋಟಿ ಜನಸಂಖ್ಯೆಗೆ ಅಂದಾಜಿಸಿದರೆ ತಲಾ ಸಾಲ ರೂ.1,11,571ಗಳಾಗುತ್ತದೆ. ಕೇಂದ್ರ ಸರ್ಕಾರದ ಒಟ್ಟು ರೂ. 200 ಲಕ್ಷ ಕೋಟಿ ರೂ. ಸಾಲವನ್ನು ದೇಶದ 140 ಕೋಟಿ ಜನಸಂಖ್ಯೆಗೆ ಅಂದಾಜಿಸಿದರೆ ಪ್ರತಿ ಭಾರತೀಯರ ಮೇಲೆ ತಲಾ ಸರಾಸರಿ ರೂ.1,42,857 ಸಾಲವಿದೆ. ಕೇಂದ್ರ ಮತ್ತು ರಾಜ್ಯದ ತಲಾ ಸಾಲವನ್ನು ಸೇರಿಸಿದರೆ ಕರ್ನಾಟಕದಲ್ಲಿರುವ ಪ್ರತಿಯೊಬ್ಬರ ಮೇಲೆ ರೂ. 2,54,428 ಸಾಲವಿದೆ. ನವ ಉದಾರೀಕರಣದ ಸಂದರ್ಭದಲ್ಲಿ ಸಾಲದ ಪ್ರಮಾಣ ಹೆಚ್ಚಾಗುತ್ತಲೇ ಇರುತ್ತದೆ. ಇದಕ್ಕೆ ಯಾವುದೇ ಸರ್ಕಾರಗಳೂ ಹೊರತಲ್ಲ. ಸಾಲವನ್ನು ಆದಾಯ ಎಂದು ಪರಿಗಣಿಸುವುದೂ ಆರ್ಥಿಕ ನೀತಿಯ ಭಾಗವಾಗಿರುವುದು ಮತ್ತೊಂದು ವಿಪರ್ಯಾಸ.
ಹಾಗೆಯೇ ವಿತ್ತೀಯ ಕೊರತೆ ಹೆಚ್ಚಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ‘2023-24ರಲ್ಲಿ 65,525 ರೂಪಾಯಿಗಳಷ್ಟಿದ್ದ ಕೊರತೆಯನ್ನು ಹಣಕಾಸು ವರ್ಷ 2026ರಲ್ಲಿ 90,420 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ ಜಿಎಸ್‌ಡಿಪಿಯ ಶೇ.2.55ರಿಂದ ಶೇ.2.99ಕ್ಕೆ ಹೆಚ್ಚಿಸಲಾಗಿದೆ’ ಎಂದು ವಿಧಾನಸಭೆಯಲ್ಲಿ ತಿಳಿಸಿದರು. ಈ ವಿತ್ತೀಯ ಕೊರತೆಯನ್ನು ಕಡಿಮೆಗೊಳಿಸುವ ಅಥವಾ ನಿಯಂತ್ರಣದಲ್ಲಿಡುವ ಕೆಲಸ ತಂತಿ ಮೇಲಿನ ನಡಿಗೆಯಂತೆ. ಇಲ್ಲಿ ವೆಚ್ಚದ ಪ್ರಮಾಣ ಯಾವುದೇ ಸಂದರ್ಭದಲ್ಲಿಯೂ ಕಡಿಮೆಯಾಗುವುದಿಲ್ಲ, ಇದೇ ಸಂದರ್ಭದಲ್ಲಿ ಆದಾಯದಲ್ಲಿ ಸಣ್ಣ ಪ್ರಮಾಣದ ಇಳಿಕೆಯಾದರೂ ಕೊರತೆ ಹೆಚ್ಚುತ್ತದೆ.
ಕೇಂದ್ರ ಸರ್ಕಾರ ಜಿಎಸ್‌ಟಿಯಲ್ಲಿ ಬದಲಾವಣೆಗಳನ್ನು(ರಾಶನಲೈಸೇಶನ್) ಮಾಡಿದ ನಂತರ ರಾಜ್ಯ ಸರ್ಕಾರಕ್ಕೆ ಮುಂದಿನ ವರ್ಷದಲ್ಲಿ ರೂ. 16,000 ಕೋಟಿ ನಷ್ಟವಾಗುತ್ತದೆ ಎಂದು ಹಣಕಾಸು ಇಲಾಖೆಯ ವರದಿ ಹೇಳುತ್ತದೆ. ಜೊತೆಗೆ ನರೇಗಾ ರದ್ದುಪಡಿಸಿ ವಿಜಿ –ರಾಮ್ ಜಿ ಯೋಜನೆ ಅನುಷ್ಠಾನಗೊಳಿಸಿದ ನಂತರ ರಾಜ್ಯಗಳ ಮೇಲೆ ಹೆಚ್ಚುವರಿಯಾಗಿ ಶೇ.30ರಷ್ಟು ಹಣಕಾಸಿನ ಹೊರೆ ಬೀಳುತ್ತದೆ. ಈ ಕಾರಣಗಳಿಂದಾಗಿ ಈ ಬಾರಿಯ ಬಜೆಟ್ ಗಾತ್ರದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
16 ಜನವರಿ 2026ರ ಪ್ರಜಾವಾಣಿಯಲ್ಲಿ ‘ರಾಜ್ಯ ಸರ್ಕಾರವು ಈ ಆರ್ಥಿಕ ವರ್ಷದಲ್ಲಿ ರೂ.2.03 ಲಕ್ಷ ಕೋಟಿ ಆದಾಯ ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದು, ಒಂಬತ್ತು ತಿಂಗಳಲ್ಲಿ ರೂ.1.38 ಲಕ್ಷ ಕೋಟಿಯಷ್ಟೇ ಸಂಗ್ರಹವಾಗಿದೆ. ವರ್ಷದ ಅಂತ್ಯಕ್ಕೆ ಒಟ್ಟು ತೆರಿಗೆ ಸಂಗ್ರಹದಲ್ಲಿ ರೂ.9,000 ಕೋಟಿಯಿಂದ ರೂ.13,000 ಕೋಟಿ ಖೋತಾ ಆಗುವ ಅಂದಾಜಿದೆ’ ಎಂದು ವರದಿಯಾಗಿದೆ. ಶೇ.68ರಷ್ಟೇ ಗುರಿ ಸಾಧನೆಯಾಗಿದೆ. ಉಳಿದ 3 ತಿಂಗಳಲ್ಲಿ ರೂ.65,000 ಕೋಟಿ ಸಂಗ್ರಹ ಸವಾಲು ಎದುರಾಗಿದೆ. ಪರಿಷ್ಕೃತ ಅಂದಾಜಿನ ಪ್ರಕಾರ 8,000 ಕೋಟಿ ರೆವಿನ್ಯೂ ಕೊರತೆಯಾಗಲಿದೆ ಎಂದು ಹೇಳುತ್ತಿದ್ದಾರೆ. 2023-24ರಲ್ಲಿ 3.09 ಲಕ್ಷ ಕೋಟಿ ಬಜೆಟ್ ವೆಚ್ಚವಿದ್ದರೆ ರೂ.12,523 ಕೋಟಿ ರೆವಿನ್ಯೂ ಕೊರತೆಯಿತ್ತು, 2024-25ರಲ್ಲಿ ಬಜೆಟ್ ವೆಚ್ಚ 3.71 ಲಕ್ಷ ಕೋಟಿ, ರೆವಿನ್ಯೂ ಕೊರತೆ 27,354 ಕೋಟಿ, 2025-26ರ ಬಜೆಟ್ ವೆಚ್ಚ 4.09 ಲಕ್ಷ ಕೋಟಿ, ರೆವಿನ್ಯೂ ವೆಚ್ಚ 19,262 ಕೋಟಿ ಎಂದು ಅಂದಾಜಿಸಲಾಗಿತ್ತು.
ಒಟ್ಟಾರೆಯಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗೇನು ಇಲ್ಲ. ಆದರೆ ಈ ಬಿಕ್ಕಟ್ಟಿನಲ್ಲಿಯೂ ಸಿದ್ಧರಾಮಯ್ಯನವರು ಒಂದು ಮಟ್ಟದಲ್ಲಾದರೂ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದಾರೆ. ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿನ ತಲಾ ಆದಾಯ ಹೆಚ್ಚಿದೆ. ಹಸಿವಿನ ಪ್ರಮಾಣ ಕಡಿಮೆ ಇದೆ. ಆದರೆ ಸರ್ಕಾರದ ಅಭಿವೃದ್ಧಿಯ ಪರಿಕಲ್ಪನೆಯಲ್ಲಿಯೇ ದೋಷವಿರುವದರಿಂದ ಸಮಾಜವಾದಿ ಆರ್ಥಿಕತೆ ಕಡೆಗೆ ಚಲಿಸುವ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.
ಇದನ್ನು ಓದಿದ್ದೀರಾ?: ಭ್ರಷ್ಟಾಚಾರವೆಂಬ ಸ್ನಾನದ ಕೋಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಬೆತ್ತಲೆಯೇ…
ಸಾಮಾಜಿಕ-ಸಾಂಸ್ಕೃತಿಕ
ಎರಡನೆಯದಾಗಿ ಬಿಜೆಪಿ ಅಧಿಕಾರದ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಗಿತ್ತು. ಮುಕ್ತವಾಗಿ ಮಾತನಾಡುವ ಹಕ್ಕುಗಳನ್ನು ಮೊಟಕುಗೊಳಿಸಲಾಗಿತ್ತು. ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಭೂತಪೂರ್ವ ಬದಲಾವಣೆಗಳಾಗಿವೆ ಎನ್ನಲಾಗದಿದ್ದರೂ ಸಹ ವಿಮರ್ಶೆಗೆ ಮುಕ್ತ ಅವಕಾಶವಿದೆ. ಸಣ್ಣ ಪುಟ್ಟ ಮಿತಿಗಳ ನಡುವೆಯೂ ವ್ಯಕ್ತಿ ಸ್ವಾತಂತ್ರವನ್ನು ನಿರ್ಬಂಧಿಸಿಲ್ಲ.
ಮೂರನೆಯದಾಗಿ ದೇವರಾಜ ಅರಸು ಅವರ ಮಾದರಿಯಲ್ಲಿ ಸಾರ್ವಜನಿಕ ನೀತಿಗಳನ್ನು ರೂಪಿಸಲು ಸಿದ್ಧರಾಮಯ್ಯನವರಿಗೆ ಸಾಧ್ಯವಾಗಲಿಲ್ಲ. ಅದು ಜೀತ ಪದ್ಧತಿ ವಿಮುಕ್ತಿಯಾಗಲಿ, ಭೂ ಸುಧಾರಣೆಯಾಗಲಿ, ಗೇಣಿ ಪದ್ಧತಿ ರದ್ಧತಿಯಾಗಲಿ, ಹಿಂದುಳಿದ ವರ್ಗಗಳ ಆಯೋಗದ ಹಾವನೂರು ಆಯೋಗದ ಶಿಫಾರಸುಗಳ ಜಾರಿಗೊಳಿಸಿದ ಬದ್ಧತೆಯಾಗಲಿ ಅರಸು ಅವರು ಸದಾ ಸ್ಮರಣೀಯರಾಗಿರುತ್ತಾರೆ. ಆದರೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳಾಗಿ ತಮ್ಮ ಎರಡು ಅವಧಿಯಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ 2013 ಕಾಯ್ದೆಯನ್ನು ಹೊರತುಪಡಿಸಿದರೆ ಯಾವುದೇ ಬಗೆಯ ನೀತಿಗಳನ್ನು, ಜನಪರ ಕಾಯ್ದೆಗಳನ್ನು ರೂಪಿಸಲಿಲ್ಲ. ಕಲ್ಯಾಣ ಯೋಜನೆ ಆಧರಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟ ಮುಖ್ಯಮಂತ್ರಿಗಳು ನೀತಿ ನಿರೂಪಣೆ ಕುರಿತು ನಿರ್ಲಕ್ಷ್ಯ ವಹಿಸಿದರು. ಬಡಜನರ ಬದುಕನ್ನು ಸಹನೀಯಗೊಳಿಸುವಲ್ಲಿ, ಹಸಿವಿನಿಂದ ನರಳುವುದನ್ನು ತಪ್ಪಿಸುವಲ್ಲಿ ಕಲ್ಯಾಣ ಕಾರ್ಯಕ್ರಮಗಳು ಖಂಡಿತವಾಗಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಿದ್ಧರಾಮಯ್ಯನವರ ಸಾಧನೆ ಪ್ರಶಂಸನೀಯವಾಗಿದೆ.
ಆದರೆ ಇದರಾಚೆಗೆ ರಾಜ್ಯದ ಭವಿಷ್ಯದ ದೃಷ್ಟಿಯಿಂದ ದೀರ್ಘಕಾಲೀನ ಶಾಶ್ವತ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಯಾಕಂದರೆ ಈ ಬಗೆಯ ಕಾರ್ಯಕ್ರಮಗಳು ಶಾಶ್ವತವಲ್ಲ, ತಾತ್ಕಾಲಿಕವಾಗಿರುತ್ತವೆ. ಮುಂದೆ ಬಿಜೆಪಿ ಅಥವಾ ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜಕೀಯ ಕಾರಣಗಳಿಗೆ ಈ ಯೋಜನೆಗಳನ್ನು ರದ್ದುಪಡಿಸುತ್ತಾರೆ ಅಥವಾ ನಿರ್ಲಕ್ಷಿಸುತ್ತಾರೆ. ಇಂದಿರಾ ಕ್ಯಾಂಟೀನ್ ಇದಕ್ಕೊಂದು ಉದಾಹರಣೆ. ಈ ಬಗೆಯ ರಾಜಕೀಯ ಮೇಲಾಟಗಳು ಬಡಜನರ ಬದುಕಿನ ಮೇಲೆ ದುಷ್ಟಪರಿಣಾಮ ಬೀರುತ್ತದೆ. ಆದರೆ ನೀತಿಗಳ ವಿಷಯದಲ್ಲಿ ಹೀಗಾಗುವುದಿಲ್ಲ. ಇಲ್ಲಿ ಸಿದ್ಧರಾಮಯ್ಯನವರು ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ನೀತಿ ನಿರೂಪಣೆ ರೂಪಿಸುವುದಕ್ಕಿಂತಲೂ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಕ್ಕೆ ನವ ಉದಾರೀಕರಣದ ಕಾಲಘಟ್ಟ ಮಾತ್ರ ಕಾರಣವಲ್ಲ ಎಂದು ಅಭಿವೃದ್ಧಿ ಆರ್ಥಿಕತೆಯ ಆಳ ಅಗಲ ಬಲ್ಲ ತಜ್ಞರಿಗೆ ಗೊತ್ತಿದೆ. ಇದನ್ನು ನಿರ್ದಿಷ್ಟ ಕಾರಣಗಳೊಂದಿಗೆ ಚರ್ಚಿಸಿದರೆ ಹೊಸ ರಾಜಕೀಯ ಮಾಡುವವರಿಗೆ ಮುಂದಿನ ದಿನಗಳಲ್ಲಿ ಒಂದು ಮಾರ್ಗಸೂಚಿಯಾಗುತ್ತದೆ.
ನಾಲ್ಕನೆಯದಾಗಿ, ಸಾಮಾಜಿಕ ನ್ಯಾಯದ ಕುರಿತಂತೆ ಸಿದ್ಧರಾಮಯ್ಯ ನೇತೃತ್ವ ಸರ್ಕಾರದ ನಡೆ ಮತ್ತು ನಿಲುವು ನಿರಾಶೆ ಮೂಡಿಸುತ್ತದೆ. 2013-18ರ ತಮ್ಮ ಮೊದಲ ಅವಧಿಯಲ್ಲಿ ರಚಿಸಿದ ಕಾಂತರಾಜ ಆಯೋಗದ ವರದಿಯನ್ನು ಆಧರಿಸಿದ ಸಾಮಾಜಿಕ, ಆರ್ಥಿಕ ಸಮೀಕ್ಷೆಯ(ಜಾತಿಗಣತಿ) ಜಯಪ್ರಕಾಶ್ ಹೆಗ್ಗಡೆ ವರದಿ ಶಿಫಾರಸ್ಸುಗಳನ್ನು ಸಾರ್ವಜನಿಕವಾಗಿ ಮಂಡಿಸಲಿಲ್ಲ, ಚರ್ಚಿಸಲಿಲ್ಲ. ಬಲಿಷ್ಠ ಮುಂದುವರಿದ, ಮಧ್ಯ ಜಾತಿಗಳ ಒತ್ತಡ ಮತ್ತು ಹೈಕಮಾಂಡ್ ನಿರ್ದೇಶನ ಮನ್ನಿಸಿ ಆಯೋಗದ ವರದಿಯನ್ನು ತಿರಸ್ಕರಿಸಿದರು. ಇದಕ್ಕೆ ಹೈಕಮಾಂಡನ್ನು ದೂರುವುದು ಅರ್ಧಸತ್ಯವಾದರೆ ಸ್ವತಃ ಸಿದ್ಧರಾಮಯ್ಯನವರಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವುದು ಇನ್ನರ್ಧ ಸತ್ಯ.

ಅಹಿಂದ ನಾಯಕರು ಎಂದು ಬಿಂಬಿಸಲ್ಪಟ್ಟ ಸಿದ್ಧರಾಮಯ್ಯನವರು ತಮ್ಮ ಎರಡು ಅವಧಿಗಳಲ್ಲಿಯೂ(2013-2018, 2023-) ಸುಮಾರು 1 ಕೋಟಿ ಜನಸಂಖ್ಯೆ ಇರುವ ಅತಿ ಹಿಂದುಳಿದ ಸಮುದಾಯಗಳಿಗೆ ಯಾವುದೇ ಬಗೆಯ ಪ್ರಾತಿನಿಧ್ಯ, ಸಬಲೀಕರಣ ಕಲ್ಪಿಸಿಕೊಡಲು ವಿಫಲರಾಗಿದ್ದಾರೆ. ಗೋಸಾಯಿ, ಬಾವಾಜಿ, ಬೆಸ್ತ, ಮಡಿವಾಳ, ಮೊಗೇರ, ದಾಸರಿ, ದಾಸರು, ಕಾಡುಗೊಲ್ಲರು, ಕುಣಬಿ, ಕುಳವಾಡಿ, ಚಪ್ಪರ್ ಬಂದ್, ತಳವಾರ, ಪಿಂಜಾರ, ನದಾಫ್, ಲಡಾಫ್ ಮುಂತಾದ ಸಣ್ಣ ಸಣ್ಣ ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಯಾವುದೇ ಪ್ರಯತ್ನಗಳು ನಡೆಯಲಿಲ್ಲ. ಇನ್ನು ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ದೂರದ ಮಾತಾಗಿದೆ. ಈಗಿರುವ ನಿಗಮ, ಮಂಡಳಿಗಳಲ್ಲಿ ಮೇಲಿನ ಜಾತಿಗಳಿಂದ ಯಾರೂ ಅಧ್ಯಕ್ಷರಾಗಿ ಆಯ್ಕೆಯಾಗಲಿಲ್ಲ. ಸಿದ್ಧರಾಮಯ್ಯನವರ ರೀತಿ ದೀರ್ಘಕಾಲ ಅಧಿಕಾರದಲ್ಲಿ ಉಳಿಯಲು ಸಾಧ್ಯವಾಗದಿದ್ದರೂ ತಮಗೆ ದೊರೆತ ಅಲ್ಪ ಅವಕಾಶದಲ್ಲಿ ಅತಿ ಹಿಂದುಳಿದ ವರ್ಗಗಳ ಸೋಷಿಯಲ್ ಇಂಜಿನಿಯರಿಂಗ್‌ಗೆ ಚಾಲನೆ ಮತ್ತು ಚಲನಶೀಲತೆ ತಂದುಕೊಟ್ಟ ಕರ್ಪೂರಿ ಠಾಕೂರ್ ಅವರ ರಾಜಕೀಯ ಇಚ್ಛಾಶಕ್ತಿ ನಮ್ಮ ಮುಖ್ಯಮಂತ್ರಿಗಳಿಗೆ ಯಾಕೆ ಸಾಧ್ಯವಾಗಲಿಲ್ಲ ಎನ್ನುವುದರ ಕುರಿತು ಮುಕ್ತ ಚರ್ಚೆ, ಸಂವಾದ ನಡೆಯಬೇಕಿದೆ. ಅಹಿಂದ ಸಂಘಟನೆಯ ಮೂಲಕ ಅತಿ ಹಿಂದುಳಿದ ಜಾತಿಗಳು, ವಂಚಿತ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಲು ವಿಫಲರಾಗಿರುವ ಸಿದ್ಧರಾಮಯ್ಯನವರು ಇನ್ನುಳಿದ ಎರಡು ವರ್ಷಗಳ ಅಧಿಕಾರದ ಅವಧಿಯಲ್ಲಿ ಆಗಿರುವ ತಪ್ಪನ್ನು ತಿದ್ದಿಕೊಳ್ಳುವರೇ? ಈಗಿನ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಬಹಿರಂಗಗೊಳಿಸುವರೇ? ಸೂಕ್ತ ಪರಿಶೀಲನೆಯೊಂದಿಗೆ ಅನುಷ್ಠಾನಗೊಳಿಸುವರೇ?
ಇದನ್ನು ಓದಿದ್ದೀರಾ?: ಸಿದ್ದರಾಮಯ್ಯರ ‘ಸಾವಿರದ ಸರ್ಕಾರ’ದಲ್ಲಿ ಸತ್ತಂತಿರುವವರು…!
ಐದನೆಯದಾಗಿ ಪರಿಶಿಷ್ಟ ಸಮುದಾಯದೊಳಗಿನ ವಿವಿಧ ಉಪಜಾತಿಗಳ ನಡುವೆ ಮೀಸಲಾತಿ ಸೌಲಭ್ಯಗಳು ಸಮಾನವಾಗಿ ಹಂಚಿಕೆಯಾಗುತ್ತಿಲ್ಲ ಎಂಬ ದೀರ್ಘಕಾಲದ ಹೋರಾಟದ ಹಿನ್ನೆಲೆಯಲ್ಲಿ 1 ಆಗಸ್ಟ್ 2024ರಂದು ಸುಪ್ರೀಂಕೋರ್ಟ್ ಹಿಂದುಳಿದಿರುವಿಕೆಯ ಆಧಾರದಲ್ಲಿ ಒಳ ಮೀಸಲಾತಿ ಕಲ್ಪಿಸಬೇಕೆಂದು ತೀರ್ಪು ನೀಡಿತು. ಆದರೆ ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಕಾಂಗ್ರೆಸ್ ಸರ್ಕಾರ ವಿಳಂಬ ಮಾಡಿತು. ಕಡೆಗೂ ವಿವಿಧ ಸಂಘಟನೆಗಳ ಹಕ್ಕೊತ್ತಾಯ, ಪ್ರತಿಭಟನೆಗಳ ನಂತರ ಜನವರಿ 2025ರಲ್ಲಿ ಸಿದ್ದರಾಮಯ್ಯನವರು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗವನ್ನು ರಚಿಸಿದರು. ಆಯೋಗವು ಮೇ 5 ರಿಂದ ಜುಲೈ 6, 2025 ರವರೆಗೆ ರಾಜ್ಯಾದ್ಯಂತ ಸಮೀಕ್ಷೆ ನಡೆಸಿ, 27.24 ಲಕ್ಷ ಕುಟುಂಬಗಳ 1.07 ಕೋಟಿ ಜನರಿಂದ ಮಾಹಿತಿ ಸಂಗ್ರಹಿಸಿತು. ಆಗಸ್ಟ್ 4, 2025ರಂದು ಆಯೋಗವು ತನ್ನ ಅಂತಿಮ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿತು. 1,766 ಪುಟಗಳ ಈ ವರದಿಯು ಸಮೀಕ್ಷೆಯ ದತ್ತಾಂಶ ಮತ್ತು ಆರು ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ. ಪರಿಶಿಷ್ಟ ಜಾತಿಗಳ ಒಟ್ಟು ಮೀಸಲಾತಿಯನ್ನು(ಶೇ.17) ಉಪಜಾತಿಗಳ ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆ ಮತ್ತು ಸರ್ಕಾರಿ ಉದ್ಯೋಗಗಳಲ್ಲಿನ ಪ್ರಾತಿನಿಧ್ಯದ ಕೊರತೆಯ ಆಧಾರದ ಮೇಲೆ ಎ, ಬಿ, ಸಿ, ಡಿ ಎಂದು ವರ್ಗೀಕರಿಸಿ ಹಂಚಿಕೆ ಮಾಡಲು ಶಿಫಾರಸು ಮಾಡಿದೆ. ಆದರೆ ಈ ವರದಿಯ ಶಿಫಾರಸ್ಸುಗಳನ್ನು ಕಡೆಗಣಿಸಿದರು. ಅದನ್ನು ಪರಿಷ್ಕರಿಸಿದರು. ಅತಿ ಹಿಂದುಳಿದಿರುವಿಕೆ ಆಧಾರದಲ್ಲಿ ಪ್ರವರ್ಗ ‘ಎ’ನಲ್ಲಿ ಸೇರಿಸಲ್ಪಟ್ಟಿದ್ದ ಅಲೆಮಾರಿ ಸಮುದಾಯಗಳನ್ನು ಅಲ್ಲಿಂದ ತೆಗೆದು ಹಾಕಿ ಲಮಾಣಿ, ಕೊರಚ, ಕೊರಮ ಮತ್ತು ಬೋವಿ ಸಮುದಾಯಗಳಿರುವ ಪ್ರವರ್ಗ ‘ಸಿ’ಗೆ ಸೇರಿಸಿದರು. ಈ ಮೂಲಕ ಆ ಸಮುದಾಯಗಳಿಗೆ ಅನ್ಯಾಯ ಮಾಡಿದರು. ಇಂದಿಗೂ ಒಳಮೀಸಲಾತಿ ಜಾರಿಯಲ್ಲಿ ಗೊಂದಲಗಳು ಮುಂದುವರೆದಿದೆ.
ರಾಜಕೀಯವಾಗಿ ಪರಿಶಿಷ್ಟ ಸಮುದಾಯಗಳಿಗೆ ಮೀಸಲು ಸ್ಥಾನಗಳ ಕಾರಣಕ್ಕೆ ಪ್ರಾತಿನಿಧ್ಯ ದೊರಕುತ್ತಿದೆ ಎನ್ನುವ ಸತ್ಯ ಎಲ್ಲರಿಗೂ ಗೊತ್ತು. ಯಾಕೆಂದರೆ ಇದುವರೆಗೂ ಸಾಮಾನ್ಯ ಕ್ಷೇತ್ರದಲ್ಲಿ ದಲಿತ ಸಮುದಾಯದ ಅಭ್ಯರ್ಥಿಗೆ ಅವಕಾಶ ಕೊಡಲು ಸಾಧ್ಯವಾಗಲಿಲ್ಲ. ಉತ್ತರವೂ ಸರಳವಾಗಿದೆ. ಯಾರಿಗೂ ಬೇಕಾಗಿಲ್ಲ ಅಷ್ಟೇ. ಇನ್ನು ಸಾಮಾಜಿಕ, ಆರ್ಥಿಕ ಸಮಾನತೆಗೆ ಅಗತ್ಯವಾದ ಸಾರ್ವಜನಿಕ ನೀತಿಗಳಿಲ್ಲ. ನೀಲನಕ್ಷೆ ಇಲ್ಲ. ರಾಜಕೀಯ ಇಚ್ಛಾಶಕ್ತಿಯಂತೂ ಇಲ್ಲವೇ ಇಲ್ಲ.
ಆರನೆಯದಾಗಿ ಪರಿಶಿಷ್ಟ ಸಮುದಾಯಗಳ ಶಿಕ್ಷಣ ಮತ್ತು ಆಸ್ತಿ ನಿರ್ಮಾಣಕ್ಕೆ ಮಾತ್ರ ಬಳಸಿಕೊಳ್ಳಬೇಕು ಎನ್ನುವ ಆಶಯವಿರುವ, ವಿಧಿ 46ರ ಅಡಿಯಲ್ಲಿ ಕಾಯ್ದೆಯಾಗಿ ಜಾರಿಗೆ ಬಂದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆ ಪರಿಣಾಮಕಾರಿ ಅನುಷ್ಢಾನದಲ್ಲಿ ವಿಫಲಾಗಿದ್ದಾರೆ. ಪ್ರತಿ ಇಲಾಖೆಯಲ್ಲಿ ಶೇ.24.1ರಷ್ಟು ಹಣವನ್ನು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿಯಲ್ಲಿ ಹಂಚಿಕೆ ಮಾಡಲಾಗುತ್ತದೆ. ಆದರೆ ಇದನ್ನು ಅದರ ಮೂಲ ಉದ್ದೇಶಕ್ಕೆ ಬಳಸಿಕೊಳ್ಳದೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸ್ವತಃ ಸಿದ್ಧರಾಮಯ್ಯನವರು ತಮ್ಮ ಮೊದಲ ಅವಧಿಯಲ್ಲಿ ಜಾರಿಗೆ ತಂದ ಈ ಯೋಜನೆಯನ್ನು ದಲಿತರು, ಅಲೆಮಾರಿಗಳು, ಆದಿವಾಸಿಗಳ ಶಿಕ್ಷಣ ಮತ್ತು ಆಸ್ತಿ ನಿರ್ಮಾಣಕ್ಕೆ ಪೂರಕವಾಗಿ ಜಾರಿಗೊಳಿಸಲಿಲ್ಲ.

ಏಳನೆಯದಾಗಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೋಮು ಸಾಮರಸ್ಯ ಸಂಪೂರ್ಣ ಹದಗೆಟ್ಟಿತ್ತು. ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿ ಇರಲಿಲ್ಲ. ಹಿಂಸಾತ್ಮಕ ಮನಸ್ಥಿತಿಯ ಗುಂಪುಗಳಿಗೆ ಹಿಂದುತ್ವದ ಹೆಸರಿನಲ್ಲಿ ಪುಂಡಾಟಿಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಮತಧರ್ಮಾಂಧರು ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ದಾಳಿ, ದೌರ್ಜನ್ಯ ನಡೆಸುವುದರ ಮೂಲಕ ದ್ವೇಷಮಯ ವಾತಾವರಣ ನಿರ್ಮಿಸಿದ್ದರು. ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಹಲ್ಲೆ, ಹತ್ಯೆಗಳನ್ನು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಹೇಳುವುದರ ಮೂಲಕ ಕೀಳುಮಟ್ಟದ ರಾಜಕಾರಣ ಪ್ರದರ್ಶಿಸಿದ್ದರು. ಕಾಂಗ್ರೆಸ್ ಸರ್ಕಾರ ಬಂದ ನಂತರವೂ ಈ ಮತೀಯವಾದದ ಹಿಂಸೆ ಮತ್ತು ದೌರ್ಜನ್ಯ ನಿಯಂತ್ರಣಕ್ಕೆ ಬಂದಿಲ್ಲ. ಗೃಹ ಇಲಾಖೆಯ ವೈಫಲ್ಯವು ಈ ಸರ್ಕಾರದ ಸೋಲು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಎಂಟನೆಯದಾಗಿ ಪಂಚಾಯತ್ ರಾಜ್ ವ್ಯವಸ್ಥೆಗೆ ಚುನಾವಣೆ ನಡೆಸದೆ ಸಂಪೂರ್ಣ ಅಧಿಕಾರಶಾಹಿಯ ಹಿಡಿತಕ್ಕೆ ಒಪ್ಪಿಸಿರುವುದು ಈ ಸರ್ಕಾರದ ವೈಫಲ್ಯವಾಗಿದೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳಿಗೆ 2016ರಲ್ಲಿ ಚುನಾವಣೆ ನಡೆದಿತ್ತು. 2021ರಲ್ಲಿ ಅವಧಿ ಮುಗಿದಿತ್ತು. ಆ ವರ್ಷ ಕೋವಿಡ್ ಕಾಯಿಲೆ ಕಾರಣ ಚುನಾವಣೆ ನಡೆಯಲಿಲ್ಲ. ಆದರೆ 2023ರಲ್ಲಿ ಅಧಿಕಾರಕ್ಕೆ ಬಂದ ನಂತರವೂ ವಿಕೇಂದ್ರೀಕರಣದ ಕುರಿತು ಯಾವುದೇ ಆಸಕ್ತಿ ತೋರಿಸಲಿಲ್ಲ. ಅಗತ್ಯವಿರುವ ಮೀಸಲಾತಿ ಪ್ರಕ್ರಿಯೆಯನ್ನು ರೂಪಿಸಿ ಶೀಘ್ರವಾಗಿ ಚುನಾವಣೆ ನಡೆಸುವ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಸಮಾಜವಾದಿ ಮುಖ್ಯಮಂತ್ರಿಗಳು ಮತ್ತು ಅವರ ಸರ್ಕಾರ ಸೋತಿದ್ದಾರೆ. ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಜಾರಿಗೊಂಡ ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಇಂದು ನಿಷ್ಕ್ರಿಯವಾಗಿದೆ. ಜನವರಿ 2026ಕ್ಕೆ ಗ್ರಾಮ ಪಂಚಾಯತಿಯ ಅವಧಿಯೂ ಮುಗಿಯುತ್ತದೆ. ಇನ್ನಾದರೂ ತಡ ಮಾಡದೆ ತಕ್ಷಣದಲ್ಲಿ ಚುನಾವಣೆ ನಡೆಸುವ ಪ್ರಕ್ರಿಯೆ ಪ್ರಾರಂಭಿಸಬೇಕಿದೆ.
ಇದನ್ನು ಓದಿದ್ದೀರಾ?: ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದ ಸಾರಿಗೆ ನೌಕರರು: ಸರ್ಕಾರಕ್ಕೆ ಮಾ.2ರವರೆಗೆ ಗಡುವು
ಒಂಬತ್ತನೆಯದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಲ್ಲಿ 79,694, ಉನ್ನತ ಶಿಕ್ಷಣದಲ್ಲಿ 13,599, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 37,572 ಒಳಗೊಂಡಂತೆ ಖಾಲಿ ಇರುವ 2.84 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಗೆ ಕಾರ್ಯಯೋಜನೆ ರೂಪಿಸದೆ ನಿರುದ್ಯೋಗ ಪ್ರಮಾಣ ಹೆಚ್ಚಾಗುವುದಕ್ಕೆ ಕಾರಣವಾಗಿದ್ದಾರೆ. ಇದು ಇಲಾಖೆಗಳ ಕಾರ್ಯನಿರ್ವಹಣೆಗೆ ಹಿನ್ನಡೆಯಾಗಿದೆ. ಇದರ ಜೊತೆಗೆ 31 ಜಿಲ್ಲೆಗಳು 225 ತಾಲೂಕುಗಳಲ್ಲಿ ಕ್ಲಸ್ಟರ್ ಆಧರಿತ ಉದ್ಯೋಗ ಸೃಷ್ಟಿಯ ಮೂಲಕ ಪರ್ಯಾಯ ಆರ್ಥಿಕತೆಯನ್ನು ಕಟ್ಟುವುದರ ಕುರಿತು ದೂರದೃಷ್ಟಿ ಮತ್ತು ಧ್ಯೇಯ(ವಿಷನ್ & ಮಿಷನ್) ಉಳ್ಳಂತಹ ನೀತಿಗಳನ್ನು ರೂಪಿಸಲಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದ ಮಹಿಳೆ, ವಂಚಿತ ಸಮುದಾಯಗಳು, ಮುಸ್ಲಿಮ್ ಮತದಾರರನ್ನು ಸಾಮೂಹಿಕವಾಗಿ ಹೊರತಳ್ಳುವ ಎಸ್‌ಐಆರ್ ಕುರಿತು ಸ್ಪಷ್ಟ ನಿಲುವು ತೆಗೆದುಕೊಳ್ಳಲು ವಿಫಲರಾಗಿದ್ದಾರೆ
ಹತ್ತನೆಯದಾಗಿ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ಸಬಲೀಕರಣದ ಕುರಿತು ಯಾವುದೇ ಬಗೆಯ ಪ್ರಯತ್ನಗಳನ್ನು ಮಾಡುತ್ತಿಲ್ಲ. ಖಾಸಗೀಕರಣದ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ.
ಹೀಗೆ ಇತ್ಯಾದಿ, ಇತ್ಯಾದಿ…

ಕೊನೆಯಿಲ್ಲದ ಟಿಪ್ಪಣಿಗಳು
ದಕ್ಷ ರಾಜಕಾರಣಿ ಎಂದೇ ಹೆಸರಾಗಿರುವ, ಜನಪರ ಕಾಳಜಿಯುಳ್ಳ ಸಿದ್ಧರಾಮಯ್ಯನವರಿಗೆ ಈಗಿನದಕ್ಕಿಂತಲೂ ಹೆಚ್ಚಿಗೆ ಸಾಧಿಸುವ ಸಾಮರ್ಥ್ಯವಿದೆ. ಆದರೆ ಅದನ್ನು ಪ್ರಾಕ್ಟಿಕಲ್ ಆಗಿ ಅನುಷ್ಠಾನಗೊಳಿಸಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಇವರನ್ನು ಬೆಂಬಲಿಸಿ ಮತ ಹಾಕಿ ಅಧಿಕಾರಕ್ಕೆ ತಂದ ಜನತೆಗೆ ಈ ಸಬೂಬುಗಳು ಬೇಕಾಗಿಲ್ಲ ಅಲ್ಲವೇ? ಇನ್ನುಳಿದ ಎರಡು ವರ್ಷಗಳ ಅವಧಿಯಲ್ಲಿ ತಮ್ಮ ಎಲ್ಲಾ ಕ್ರಿಯಾಶೀಲತೆ, ಅನುಭವ ಮತ್ತು ಪರಿಣಿತಿಯನ್ನು ಧಾರೆ ಎರೆದು ಅಗತ್ಯ ಬದಲಾವಣೆ ತರಬೇಕಲ್ಲವೇ ಎಂದು ಬಯಸುತ್ತಾರೆ. ಏಕಂದರೆ 2028ರಲ್ಲಿ ಮರಳಿ ಮತಧರ್ಮಾಂಧ, ದ್ವೇಷ ರಾಜಕಾರಣ ಮಾಡುವ ಬಿಜೆಪಿ ಅಧಿಕಾರಕ್ಕೆ ಬರುವುದು ಕನಿಷ್ಠ ಪ್ರಜಾಪ್ರಭುತ್ವವಾದಿಗಳಿಗಂತೂ ಇಷ್ಟವಿಲ್ಲ. ಆದರೆ ಯಾವುದೇ ಸಿದ್ಧಾಂತ, ಬದ್ಧತೆ, ಪ್ರಾಮಾಣಿಕೆತೆ ಇಲ್ಲದ ಕಾಂಗ್ರೆಸ್ ಪಕ್ಷಕ್ಕೆ ಇಷ್ಟವಿದ್ದಂತಿದೆ…

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ




