ಬಜೆಟ್ ಅಧಿವೇಶನ | ಮೋದಿ ಸರ್ಕಾರದ ವೈಫಲ್ಯ ಬಿಚ್ಚಿಟ್ಟ ವಿಪಕ್ಷಗಳ ಪ್ರಮುಖ 11 ಪ್ರಶ್ನೆಗಳಿವು!

Date:

2026ರ ಬಜೆಟ್‌ ಅಧಿವೇಶನದ ಮೊದಲ ಹಂತ ಮುಗಿದಿದೆ. ಮೂರು ವಾರಗಳ ಬಿಡುವಿನ ಬಳಿಕ, ಎರಡನೇ ಹಂತದ ಅಧಿವೇಶನ ಆರಂಭವಾಗಲಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಪ್ರತಿದಿನ ಉತ್ತರದಾಯಿಯಾಗಿಸಲು ಶ್ರಮಿಸುತ್ತಿವೆ. ಮೊದಲ ಹಂತದ ಅಧಿವೇಶನದ ಐದು ದಿನಗಳ ‘ಪ್ರಶ್ನೋತ್ತರ ಅವಧಿಯಲ್ಲಿ’ ವಿರೋಧ ಪಕ್ಷಗಳು ಹಲವು ಪ್ರಶ್ನೆಗಳನ್ನು ಕೇಳಿವೆ. ಆದರೆ, ಸರ್ಕಾರವು ಹಲವು ಬಾರಿ ಅತೃಪ್ತಿಕರ ಉತ್ತರ ನೀಡಿ ಜಾರಿಕೊಂಡಿದೆ.

ವಿರೋಧ ಪಕ್ಷದ ಸಂಸದರು ಕೇಳಿದ ನೂರಾರು ಪ್ರಶ್ನೆಗಳಲ್ಲಿ, ಪ್ರಮುಖ 11 ಪ್ರಶ್ನೆಗಳು ಮತ್ತು ಅವುಗಳಿಗೆ ಸರ್ಕಾರ ನೀಡಿದ ಉತ್ತರಗಳು ಇಲ್ಲಿವೆ!

  1. ಮಲ್ಲಿಕಾರ್ಜುನ ಖರ್ಗೆ (ರಾಜ್ಯಸಭಾ ವಿಪಕ್ಷ ನಾಯಕ): ಬುಡಕಟ್ಟು ಪ್ರದೇಶಗಳಲ್ಲಿನ ರಸ್ತೆ ಸಂಪರ್ಕದ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದರು. ಸರ್ಕಾರದ ಉತ್ತರವು, ‘ಪಿಎಂ ಜನಮನ್’ (PM JANMAN) ಯೋಜನೆಯಡಿ ಮಂಜೂರಾದ ರಸ್ತೆ ಯೋಜನೆಗಳಲ್ಲಿ ಕೇವಲ 23% ಮಾತ್ರ ಪೂರ್ಣಗೊಂಡಿವೆ ಎಂದು ಹೇಳಿದೆ.
  2. ಅಭಿಷೇಕ್ ಬ್ಯಾನರ್ಜಿ (ಟಿಎಂಸಿ): ‘ಉಡಾನ್’ (UDAN) ಯೋಜನೆಯಡಿ ಅಭಿವೃದ್ಧಿಪಡಿಸಲಾದ ಎಷ್ಟು ವಿಮಾನ ನಿಲ್ದಾಣಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸರ್ಕಾರ, 800 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ 93 ವಿಮಾನ ನಿಲ್ಧಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ, 14 ನಿಲ್ದಾಣಗಳು (ಉತ್ತರ ಪ್ರದೇಶದ 6 ಸೇರಿದಂತೆ) ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದೆ.
  3. ಕೆ.ಸಿ. ವೇಣುಗೋಪಾಲ್ (ಕಾಂಗ್ರೆಸ್): ‘ಪಿಎಂ ಇಂಟರ್ನ್‌ಶಿಪ್’ ಯೋಜನೆಯ ನಿಧಿಯ ಬಳಕೆಯ ಬಗ್ಗೆ ಪ್ರಶ್ನಿಸಿದರು. ಈ ಯೋಜನೆಗೆ 2025-26ರ ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿದ್ದ 10,831 ಕೋಟಿ ರೂ. ಹಣದಲ್ಲಿ ಕೇವಲ 0.5% ಮಾತ್ರ ಬಳಕೆಯಾಗಿದೆ. ಮೊದಲ ಸುತ್ತಿನಲ್ಲಿ ಆಫರ್ ಪಡೆದ ಅಭ್ಯರ್ಥಿಗಳಲ್ಲಿ 35%ಕ್ಕಿಂತ ಕಡಿಮೆ ಜನರು ಮಾತ್ರವೇ ಇಂಟರ್ನ್‌ಶಿಪ್‌ ಪಡೆದಿದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿದೆ.
  4. ನೀರಜ್ ಮೌರ್ಯ ಮತ್ತು ಲಾಲ್ಜಿ ವರ್ಮಾ (ಸಮಾಜವಾದಿ ಪಕ್ಷ): 2014ರಿಂದ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ (NH) ಯೋಜನೆಗಳ ಬಗ್ಗೆ ಪ್ರಶ್ನಿಸಿದರು. ಉತ್ತರಿಸಿದ ಸರ್ಕಾರವು, 2024ರ ಏಪ್ರಿಲ್‌ನಿಂದ ಆರಂಭವಾದ 653 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. ಇವೆಲ್ಲವೂ, ಮೂಲ ಗಡುವನ್ನು ಮೀರಿವೆ ಎಂದು ವಿವರಿಸಿದೆ.
  5. ಡಾ. ಎಸ್. ಜಗತ್ರಕ್ಷಕನ್ (ಡಿಎಂಕೆ): ‘SHe-Box’ ಪೋರ್ಟಲ್‌ನಲ್ಲಿ ಸಚಿವಾಲಯಗಳು ಮತ್ತು ಇಲಾಖೆಗಳ ಸೇರ್ಪಡೆಯ ಬಗ್ಗೆ ಪ್ರಶ್ನೆ ಕೇಳಿದರು. ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡ ಇಲಾಖೆಗಳಲ್ಲಿ ಕೇವಲ 40% ಮಾತ್ರ ತಮ್ಮ ಆಂತರಿಕ ಸಮಿತಿಯ ವಿವರಗಳನ್ನು ಆಗ್ಗಾಗ್ಗೆ ಅಪ್‌ಡೇಟ್‌ ಮಾಡಿವೆ ಎಂದು ಸರ್ಕಾರ ತಿಳಿಸಿದೆ.
  6. ಜೂನ್ ಮಲಿಯಾ (ಟಿಎಂಸಿ): ಪ್ರಧಾನಮಂತ್ರಿಯವರ ಅಂತರಾಷ್ಟ್ರೀಯ ಪ್ರವಾಸಗಳ ಬಗ್ಗೆ ಪ್ರಶ್ನಿಸಿದರು. ಸರ್ಕಾರದ ಉತ್ತರ ಹೇಳುವಂತೆ; 2014 ಮತ್ತು 2025ರ ನಡುವೆ ಪ್ರಧಾನಿಯವರ ವಿದೇಶಿ ಪ್ರವಾಸಗಳ ವೆಚ್ಚದಲ್ಲಿ 500% ಹೆಚ್ಚಳವಾಗಿದೆ. ಕಳೆದ 10 ವರ್ಷಗಳಲ್ಲಿ 753 ಕೋಟಿ ರೂ. ವೆಚ್ಚವಾಗಿದೆ.
  7. ರಾಜೀವ್ ರೈ (ಸಮಾಜವಾದಿ ಪಕ್ಷ): ಬುಡಕಟ್ಟು ಕಲ್ಯಾಣ ಯೋಜನೆಗಳ ಕಾರ್ಯವೈಖರಿಯ ಬಗ್ಗೆ ಕೇಳಿದರು. ದೇಶಾದ್ಯಂತ ಮಂಜೂರಾದ ‘ಏಕಲವ್ಯ ಮಾದರಿ ವಸತಿ ಶಾಲೆ’ಗಳಲ್ಲಿ 31% ಇನ್ನೂ ಕಾರ್ಯಾರಂಭ ಮಾಡಿಲ್ಲ ಎಂದು ಸರ್ಕಾರ ಉತ್ತರಿಸಿದೆ.
  8. ಪ್ರಿಯಾಂಕಾ ಗಾಂಧಿ ವಾದ್ರಾ (ಕಾಂಗ್ರೆಸ್): ಚಲನಚಿತ್ರ ಪ್ರಮಾಣೀಕರಣ ನಿರ್ಧಾರಗಳನ್ನು ಪ್ರಶ್ನಿಸಿ ಚಿತ್ರತಂಡಗಳು ನ್ಯಾಯಾಲಯಗಳ ಮೆಟ್ಟಿಲೇರುವ ಪ್ರಕರಣಗಳ ಕುರಿತು ಪ್ರಶ್ನಿಸಿದರು. 2021-22ರಿಂದ 2025-26ರ ಅವಧಿಯಲ್ಲಿ ಸೆನ್ಸಾರ್ ಮಂಡಳಿ (CBFC) ಪ್ರಮಾಣೀಕರಿಸಿದ ಚಿತ್ರಗಳ ಸಂಖ್ಯೆ 10% ಹೆಚ್ಚಿದ್ದರೆ, ಆ ನಿರ್ಧಾರಗಳನ್ನು ಪ್ರಶ್ನಿಸಿ ಪರಿಷ್ಕರಣಾ ಸಮಿತಿಗಳ ಎದುರು ದಾಖಲಾಗುವ ಪ್ರಕರಣಗಳ ಸಂಖ್ಯೆ 120% ಏರಿಕೆಯಾಗಿದ್ದರೆ, ನ್ಯಾಯಾಲಯಗಳಲ್ಲಿನ ಪ್ರಕರಣಗಳ ಸಂಖ್ಯೆ 400% ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
  9. ಪ್ರೊ. ಮನೋಜ್ ಕುಮಾರ್ ಝಾ (ಆರ್‌ಜೆಡಿ): ಕನಿಷ್ಠ ಬೆಂಬಲ ಬೆಲೆ (MSP) ಮೂಲಕ ಲಾಭ ಪಡೆಯುತ್ತಿರುವ ರೈತರ ಶೇಕಡಾವಾರು ಪ್ರಮಾಣವನ್ನು ಕೇಳಿದರು. ಸರ್ಕಾರದ ಉತ್ತರವು ಹೇಳುವಂತೆ; ಕೇವಲ 15% ಭತ್ತ ಬೆಳೆವ ರೈತರು ಮತ್ತು 9.6% ಗೋಧಿ ರೈತರು ಮಾತ್ರ ತಮ್ಮ ಉತ್ಪನ್ನಗಳನ್ನು ಸರ್ಕಾರಿ ಖರೀದಿ ಏಜೆನ್ಸಿಗಳಿಗೆ ಮಾರಾಟ ಮಾಡಿದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿದೆ.
  10. ಡಾ. ಜಾನ್ ಬ್ರಿಟ್ಟಾಸ್ (ಸಿಪಿಐ-ಎಂ): ಬ್ಯಾಂಕಿಂಗ್ ಕ್ಷೇತ್ರದಲ್ಲಿನ ನೇರ ವಿದೇಶಿ ಹೂಡಿಕೆ (FDI) ಬಗ್ಗೆ ಪ್ರಶ್ನಿಸಿದರು. 2022-23 ಮತ್ತು 2024-25ರ ನಡುವೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ FDI ಇಕ್ವಿಟಿ ಹರಿವು 87% ರಷ್ಟು ಕಡಿಮೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
  11. ಅನಿಲ್ ಯಶವಂತ್ ದೇಸಾಯಿ (ಶಿವಸೇನೆ-ಯುಬಿಟಿ): ಭಾರತೀಯರನ್ನು, ವಿಶೇಷವಾಗಿ ವಿದ್ಯಾರ್ಥಿಗಳನ್ನು ವಿದೇಶಗಳಿಂದ ಗಡೀಪಾರು ಮಾಡಿರುವ ಬಗ್ಗೆ ವಿಚಾರಿಸಿದರು. 2021 ಮತ್ತು 2025ರ ನಡುವೆ 453 ಭಾರತೀಯ ವಿದ್ಯಾರ್ಥಿಗಳನ್ನು ಮತ್ತು 20,000ಕ್ಕು ಅಧಿಕ ಭಾರತೀಯರನ್ನು ವಿದೇಶಿ ವಲಸೆ ಅಧಿಕಾರಿಗಳು ಗಡೀಪಾರು ಮಾಡಿದ್ದಾರೆ. ಅವರಲ್ಲಿ, ಅಮೆರಿಕದಿಂದ 3,800+, ಸೌದಿಯಿಂದ 12,000 ಭಾರತೀಯರನ್ನು ಗಡಿಪಾರು ಮಾಡಲಾಗಿದೆ ಎಂದು ಸರ್ಕಾರ ಉತ್ತರಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...