ಟ್ರಂಪ್ ನೇತೃತ್ವದ ಅಮೆರಿಕ ಆಡಳಿತವು ವಲಸೆ ವಿರುದ್ಧ ಕಠಿಣ ಕ್ರಮ ಕೈಗೊಂಡು, 2025ರಲ್ಲಿ 3,800ಕ್ಕೂ ಹೆಚ್ಚು ಭಾರತೀಯರನ್ನು ಅಮೆರಿಕದಿಂದ ಗಡಿಪಾರು ಮಾಡಿದೆ. ಅಂತೆಯೇ, ಸೌದಿ ಅರೇಬಿಯಾ ಕೂಡ 12,000ಕ್ಕೂ ಹೆಚ್ಚು ಭಾರತೀಯರನ್ನು ಹೊರಗಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ವಿವಿಧ ದೇಶಗಳಿಂದ ಗಡಿಪಾರುಗೊಂಡ ಭಾರತೀಯ ವಲಸೆ ಕಾರ್ಮಿಕರ ಮಾಹಿತಿ ನೀಡುವಂತೆ ಬಜೆಟ್ ಅಧಿವೇಶನದಲ್ಲಿ ಕೇಳಿದ್ದರು. ಅವರ ಪ್ರಶ್ನೆಗೆ ಉತ್ತರಿಸಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, “2025ರ ಡಿಸೆಂಬರ್ ಅಂತ್ಯದ ವೇಳೆಗೆ ಅಮೆರಿಕದಿಂದ 3,800ಕ್ಕೂ ಹೆಚ್ಚು, ಸೌದಿ ಅರೇಬಿಯಾದಿಂದ 12,000, ನ್ಯೂಯಾರ್ಕ್ (47), ಅಟ್ಲಾಂಟಾ (31), ಹೂಸ್ಟನ್ (234), ಸ್ಯಾನ್ ಫ್ರಾನ್ಸಿಸ್ಕೋ (49) ಹಾಗೂ ಸಿಯಾಟಲ್‌ನಿಂದ 31 ಭಾರತೀಯರು ಗಡಿಪಾರುಗೊಂಡಿದ್ದಾರೆ” ಎಂದು ವಿವರಿಸಿದ್ದಾರೆ.
ಅಷ್ಟೇ ಅಲ್ಲದೆ, ಮಲೇಷ್ಯಾ, ಮ್ಯಾನ್ಮಾರ್ ಹಾಗೂ ಯುಎಇ ಕೂಡ ಹೆಚ್ಚಿನ ಸಂಖ್ಯೆಯ ಭಾರತೀಯರನ್ನು ಭಾರತಕ್ಕೆ ಗಡಿಪಾರು ಮಾಡಿವೆ ಎಂದು ಅವರು ಹೇಳಿದ್ದಾರೆ.
“ಭಾರತೀಯ ನಾಗರಿಕರ ಗಡೀಪಾರುಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿ ಭಾರತ ಸರ್ಕಾರವು ಅಮೆರಿಕ ಮತ್ತು ಇತರ ವಿದೇಶಿ ಸರ್ಕಾರಗಳೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತದೆ” ಎಂದು ಸಿಂಗ್ ಹೇಳಿದ್ದಾರೆ.
ಭಾರತೀಯ ಅಕ್ರಮ ವಲಸಿಗರನ್ನು ಅಮೆರಿಕವು ‘ಸಂಕೋಲೆಗಳು’ ಮತ್ತು ‘ಸರಪಳಿಗಳಲ್ಲಿ’ ಕಟ್ಟಿ ಅಮಾನವೀಯವಾಗಿ ಭಾರತಕ್ಕೆ ಗಡೀಪಾರು ಮಾಡಿತ್ತು. ಅಮೆರಿಕ ನಡೆ ಮತ್ತು ಕೇಂದ್ರ ಸರ್ಕಾರದ ಮೌನದ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು. ಕಳೆದ ವರ್ಷ ಸಂಸತ್ ಅಧಿವೇಶನದಲ್ಲಿ ಗಡಿಪಾರು ವಿಚಾರವನ್ನು ವಿಪಕ್ಷಗಳು ಬಲವಾಗಿ ಎತ್ತಿದ್ದವು.
ಆದಾಗ್ಯೂ, “ಗಡೀಪಾರುಗೊಂಡ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಸಂಕೋಲೆಗಳಲ್ಲಿ ಬಂಧಿಸಿದ್ದ ಕುರಿತು ನಾವು ಅಮೆರಿಕದ ಅಧಿಕಾರಿಗಳೊಂದಿಗೆ ನಮ್ಮ ಕಳವಳಗಳನ್ನು ದಾಖಲಿಸಿದ್ದೇವೆ” ಎಂದು ಸರ್ಕಾರ ಹೇಳಿಕೊಂಡಿದೆ.




