ಲೋಕಸಭೆಯಲ್ಲಿ ಮಹಿಳೆಯರಿಗೆ ಯಾವಾಗಲೂ ಕಡಿಮೆ ಪ್ರಾತಿನಿಧ್ಯವಿದೆ ಎಂಬುದು ಪ್ರತಿ ಚುನಾವಣೆ ಬಳಿಕ ಚರ್ಚೆಗೆ ಗ್ರಾಸವಾಗುವ ವಿಚಾರ. ಆದರೆ ಅದರಲ್ಲೂ ಮುಸ್ಲಿಂ ಮಹಿಳೆಯರ ಪ್ರಾತಿನಿಧ್ಯ ಅತಿ ಕಡಿಮೆ. ಹೊಸ ಪುಸ್ತಕವೊಂದರ ಪ್ರಕಾರ ಸ್ವಾತಂತ್ರ್ಯದ ನಂತರ ಕೇವಲ 18 ಮುಸ್ಲಿಂ ಮಹಿಳೆಯರು ಮಾತ್ರ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಈ 18 ಮಂದಿ ಪೈಕಿ 13 ಮಂದಿ ರಾಜಮನೆತನದವರು.
ರಾಜಮನೆತನದಿಂದ ಚಹಾ ಮಾರಾಟಗಾರನ ಪತ್ನಿಯವರೆಗೆ ಮತ್ತು ಪ್ರಥಮ ಮಹಿಳೆಯಿಂದ ಬಂಗಾಳಿ ನಟಿಯವರೆಗೆ, ಕೇವಲ 18 ಮುಸ್ಲಿಂ ಮಹಿಳೆಯರು ಮಾತ್ರ ಲೋಕಸಭೆಗೆ ಹೆಜ್ಜೆ ಇಟ್ಟಿದ್ದಾರೆ. ಹಾಗೆಯೇ ಇವರೆಲ್ಲರು ಹಲವು ಅಡೆತಡೆಗಳನ್ನು ಅನುಭವಿಸಿದ್ದಾರೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಏಕಾಂಗಿ ಸ್ಪರ್ಧೆ: ಮಾಯಾವತಿ
ಈ 18 ಮುಸ್ಲಿಂ ಮಹಿಳೆಯರ ಕಥೆಯನ್ನು ರಶೀದ್ ಕಿದ್ವಾಯಿ ಮತ್ತು ಅಂಬರ್ ಕುಮಾರ್ ಘೋಷ್ ಅವರು ತಮ್ಮ ಮುಂಬರುವ ಪುಸ್ತಕ ‘Missing from the House — Muslim women in the Lok Sabha’ (ಮನೆಯಿಂದ ಕಾಣೆಯಾದವರು-ಲೋಕಸಭೆಯಲ್ಲಿ ಮುಸ್ಲಿಂ ಮಹಿಳೆಯರು) ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ.
ಕೆಳಮನೆಗೆ ಆಯ್ಕೆಯಾದ 20 ಮುಸ್ಲಿಂ ಮಹಿಳೆಯರ ವ್ಯಕ್ತಿಚಿತ್ರವನ್ನು ಬರೆಯಲು ಕಿದ್ವಾಯಿ ಬಯಸಿದ್ದರು. ಆದರೆ ಈ ಪೈಕಿ ಇಬ್ಬರು- ಸುಭಾಷಿನಿ ಅಲಿ ಮತ್ತು ಆಫ್ರಿನ್ ಅಲಿ ತಾವು ತಾವು ಇಸ್ಲಾಂ ಅನ್ನು ಅನುಸರಿಸುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿದ್ದರು.
ಜಗ್ಗರ್‌ನಾಟ್ ಪ್ರಕಟಿಸಿದ ಮತ್ತು ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಪುಸ್ತಕದಲ್ಲಿ ಕಿದ್ವಾಯಿ ಮತ್ತು ಘೋಷ್, “1951-52ರಲ್ಲಿ ನಡೆದ ಮೊದಲ ಸಂಸತ್ ಚುನಾವಣೆಯ ನಂತರ ಕೇವಲ ಹದಿನೆಂಟು ಮುಸ್ಲಿಂ ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಭಾರತದ 146 ಕೋಟಿ ಜನಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಸುಮಾರು 7.1 ಪ್ರತಿಶತ. ಹಾಗಿರುವಾಗ ಈ ಸಂಖ್ಯೆ ಆಘಾತಕಾರಿಯಾಗಿ ಅತ್ಯಂತ ಕಡಿಮೆ. 2025ರವರೆಗೆ ರಚನೆಯಾದ 18 ಲೋಕಸಭೆಗಳಲ್ಲಿ ಐದು ಬಾರಿ ಲೋಕಸಭೆಯಲ್ಲಿ ಒಬ್ಬ ಮುಸ್ಲಿಂ ಮಹಿಳಾ ಸದಸ್ಯರು ಇರಲಿಲ್ಲ” ಎಂದು ಬರೆದಿದ್ದಾರೆ.
543 ಸ್ಥಾನಗಳನ್ನು ಹೊಂದಿರುವ ಸಂಸತ್ತಿನ ಕೆಳಮನೆಯಲ್ಲಿ ಒಂದೇ ಅವಧಿಯಲ್ಲಿ ಸಂಸತ್ತಿಗೆ ಆಯ್ಕೆಯಾದ ಮುಸ್ಲಿಂ ಮಹಿಳೆಯರ ಸಂಖ್ಯೆ ನಾಲ್ಕರ ಗಡಿಯನ್ನೂ ದಾಟಿಲ್ಲ. ಐದು ದಕ್ಷಿಣ ರಾಜ್ಯಗಳಾದ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಯಾವುದೇ ಓರ್ವ ಮುಸ್ಲಿಂ ಮಹಿಳೆ ಲೋಕಸಭೆಗೆ ಆಯ್ಕೆಯಾಗಿಲ್ಲ ಎಂದೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಮತಗಟ್ಟೆಗೆ ಬಂದಿದ್ದ ಮುಸ್ಲಿಂ ಮಹಿಳೆಯರಿಗೆ ಮುಖ ತೋರಿಸಲು ಆಗ್ರಹಿಸಿದ ಮಾಧವಿ ಲತಾ
ಆಯ್ಕೆಯಾದ 18 ಮುಸ್ಲಿಂ ಮಹಿಳೆಯರು
ಲೋಕಸಭೆಗೆ ಆಯ್ಕೆಯಾದ 18 ಮುಸ್ಲಿಂ ಮಹಿಳೆಯರಲ್ಲಿ ಮೊಫಿದಾ ಅಹ್ಮದ್ (1957, ಕಾಂಗ್ರೆಸ್); ಜೊಹ್ರಾಬೆನ್ ಅಕ್ಬರ್‌ಭಾಯ್ ಚಾವ್ಡಾ (ಕಾಂಗ್ರೆಸ್, 1962-67); ಮೈಮೂನಾ ಸುಲ್ತಾನ್ (ಕಾಂಗ್ರೆಸ್, 1957-67); ಬೇಗಂ ಅಕ್ಬರ್ ಜೆಹಾನ್ ಅಬ್ದುಲ್ಲಾ (ನ್ಯಾಷನಲ್ ಕಾನ್ಫೆರೆನ್ಸ್, 1977-79, 1984-89); ರಶೀದಾ ಹಕ್ (ಕಾಂಗ್ರೆಸ್ 1977-79); ಮೊಹ್ಸಿನಾ ಕಿದ್ವಾಯಿ (ಕಾಂಗ್ರೆಸ್, 1977-89); ಅಬಿದಾ ಅಹ್ಮದ್ (ಕಾಂಗ್ರೆಸ್, 1981-89); ನೂರ್ ಬಾನೋ (ಕಾಂಗ್ರೆಸ್, 1996, 1999-2004); ರುಬಾಬ್ ಸೈದಾ (ಸಮಾಜವಾದಿ ಪಕ್ಷ, 2004-09); ಮತ್ತು ಮೆಹಬೂಬಾ ಮುಫ್ತಿ (ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, 2004-09, 2014-19) ಸೇರಿದ್ದಾರೆ.
ಇನ್ನುಳಿದಂತೆ ತಬಸ್ಸುಮ್ ಹಸನ್ (ಸಮಾಜವಾದಿ ಪಕ್ಷ, ಲೋಕದಳ, ಬಹುಜನ ಸಮಾಜ ಪಕ್ಷ 2009-14); ಮೌಸಮ್ ನೂರ್ (ತೃಣಮೂಲ ಕಾಂಗ್ರೆಸ್ 2009-19); ಕೈಸರ್ ಜಹಾನ್ (ಬಹುಜನ ಸಮಾಜ ಪಕ್ಷ, 2009-14); ಮಮತಾಜ್ ಸಂಘಮಿತಾ (ತೃಣಮೂಲ ಕಾಂಗ್ರೆಸ್ 2014-19); ಸಜ್ದಾ ಅಹ್ಮದ್ (ತೃಣಮೂಲ ಕಾಂಗ್ರೆಸ್ 2014-24); ರಾನೀ ನಾರಾಹ್ (ಕಾಂಗ್ರೆಸ್, 1998-2004, 2009-14); ನುಸ್ರತ್ ಜಹಾನ್ ರುಹಿ (ತೃಣಮೂಲ ಕಾಂಗ್ರೆಸ್, 2019-24); ಮತ್ತು ಇಕ್ರಾ ಹಸನ್ (ಸಮಾಜವಾದಿ ಪಕ್ಷ, 2024-ಇಂದಿಗೂ) ಲೋಕಸಭೆಗೆ ಪ್ರವೇಶ ಪಡೆದ ಮುಸ್ಲಿಂ ಮಹಿಳೆಯರು.





