ಶುಕ್ರವಾರ ಗುಜರಾತ್ ಸಂಪುಟ ಪುನಾರಚನೆಯಾಗಿದ್ದು, ಗೃಹ ಸಚಿವ ಹರ್ಷಾ ಸಂಘವಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಸೇರಿದಂತೆ ಒಟ್ಟು 19 ಮಂದಿ ಹೊಸಬರಿಗೆ ಸಚಿವಗಿರಿ ನೀಡಲಾಗಿದೆ. ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ 26 ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಹೊಸ ನಾಯಕರು ಕೈಯಲ್ಲಿ ಭಗವದ್ಗೀತೆಯನ್ನು ಹಿಡಿದು ಪ್ರಮಾಣವಚನ ಸ್ವೀಕರಿಸಿದರು. ಸಾಮಾನ್ಯವಾಗಿ ಪ್ರಮಾಣವಚನ ಸ್ವೀಕರಿಸುವಾಗ ಯಾವುದೇ ಧರ್ಮಕ್ಕೆ ಸೇರಿದ ಪುಸ್ತಕಗಳನ್ನು ಇಟ್ಟುಕೊಳ್ಳುವುದಿಲ್ಲ.
ಇದನ್ನು ಓದಿದ್ದೀರಾ? ಗುಜರಾತ್ | ಸಂಪುಟ ಪುನರ್ ರಚನೆ: ಸಿಎಂ ಪಟೇಲ್ ವಿನಾ ಎಲ್ಲ ಸಚಿವರ ರಾಜೀನಾಮೆ
ಇನ್ನು ಹಲವು ಹಳೆಯ ಮತ್ತು ಕಾಂಗ್ರೆಸ್ ಮೂಲದ ಸಚಿವರನ್ನು ತೆಗೆದುಹಾಕಲಾಗಿದೆ. ಹೊಸ ಸಚಿವ ಸಂಪುಟದಲ್ಲಿ ಹಳಬರು ಮತ್ತು ಕಾಂಗ್ರೆಸ್ ಮೂಲದ ಸಚಿವರನ್ನು ತೆಗೆದುಹಾಕಲಾಗಿದೆ. ಹೊಸ ಸಂಪುಟದಲ್ಲಿ ಏಳು ಮಂದಿ ಪಾಟಿದಾರ್, ಎಂಟು ಮಂದಿ ಒಬಿಸಿ, ಮೂವರು ಪರಿಶಿಷ್ಟ ಜಾತಿಗಳು, ನಾಲ್ವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಮೂವರು ಮಹಿಳೆಯರಾಗಿದ್ದಾರೆ.
26 ಸಚಿವರಲ್ಲಿ ಕೇವಲ ಆರು ಮಂದಿ ಮಾತ್ರ ಈ ಹಿಂದಿನ ಸಚಿವರು. ಹತ್ತು ಮಂದಿಯನ್ನು ಸಂಪುಟದಿಂದ ಕೈಬಿಡಲಾಗಿದೆ. 19 ಮಂದಿಯನ್ನು ಹೊಸದಾಗಿ ಸಂಪುಟ ಸೇರಿಸಲಾಗಿದೆ. ಬಿಜೆಪಿಯು 2027ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಸಂಪುಟ ಪುನಾರಚನೆ ಮಾಡಿದಂತಿದೆ.
ಹಿಂದಿನ ಸಂಪುಟದಲ್ಲಿದ್ದ ಕುನ್ವರ್ಜಿ ಬವಾಲಿಯಾ ಮತ್ತು ಅರ್ಜುನ್ ಮೋಧ್ವಾಡಿಯಾ ಮಾತ್ರ ಮತ್ತೆ ಸಚಿವ ಸ್ಥಾನ ಪಡೆದಿದ್ದಾರೆ. ಉಳಿದಂತೆ ಬಲವಂತ್‌ಸಿನ್ಹ ರಜಪೂತ್, ಭಿಖುಸಿನ್ಹ ಪರ್ಮಾರ್, ಕುನ್ವರ್ಜಿ ಹಲ್ಪತಿ ಮತ್ತು ರಾಘವ್‌ಜಿ ಪಟೇಲ್ ಅವರನ್ನು ತೆಗೆದುಹಾಕಲಾಗಿದೆ.
ಗುಜರಾತ್ ಈವರೆಗೆ ಐವರು ಉಪ ಮುಖ್ಯಮಂತ್ರಿಗಳನ್ನು ಮಾತ್ರ ಕಂಡಿದೆ. ಚಿಮನ್ ಪಟೇಲ್ ಮತ್ತು ಕಾಂತಿಲಾಲ್ ಘಿಯಾ (1972), ಕೇಶುಭಾಯಿ ಪಟೇಲ್ (1990), ನರಹರಿ ಅಮೀನ್ (1994), ಮತ್ತು ರೂಪಾನಿ ಮುಖ್ಯಮಂತ್ರಿಯಾಗಿದ್ದಾಗ ನಿತಿನ್ ಪಟೇಲ್ ಡಿಸಿಎಂ ಆಗಿದ್ದರು. ಅದಾದ ಬಳಿಕ ಇದೀಗ ಸಂಘವಿ ಡಿಸಿಎಂ ಆಗಿದ್ದಾರೆ.





