ಕಾಂಗ್ರೆಸ್‌ ಸರ್ಕಾರಕ್ಕೆ 2.5 ವರ್ಷ: ಮಾಡಿದ್ದೇನು? ಮಾಡಬೇಕಿರುವುದೇನು?

Date:

ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ, ನಕ್ಸಲ್‌ ಮುಕ್ತ ರಾಜ್ಯ, ಒಳಮೀಸಲಾತಿ ಜಾರಿ, ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟದ್ದು ಮುಂತಾದ ಹಲವು ದಿಟ್ಟ ನಿರ್ಧಾರದ ಜೊತೆಗೆ, ಭ್ರಷ್ಟಾಚಾರ- ಹಗರಣಗಳಿಂದಾಗಿ ಸರ್ಕಾರ ಮುಜುಗರ ಅನುಭವಿಸಿದೆ. ಜೊತೆಗೆ ಆಗಾಗ ಸದ್ದು ಮಾಡುವ ಮುಖ್ಯಮಂತ್ರಿ ಬದಲಾವಣೆಯ ಕೂಗು ಸರ್ಕಾರದ ಮುಂದಿನ ಹಾದಿಯ ಬಗ್ಗೆ ಜನರಲ್ಲಿ ಗೊಂದಲ ಮೂಡಿಸಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ನಾನಾ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳು, ಒಳಮೀಸಲಾತಿ ಜಾರಿ ಹಾಗೂ ಸಾಮಾಜಿಕ-ಶೈಕ್ಷಣಿಕ ಜಾತಿ ಸಮೀಕ್ಷೆಗಳನ್ನು ನಡೆಸಿ ಜನಮನ್ನಣೆಯನ್ನೂ ಪಡೆದಿದೆ. ಅಂತೆಯೇ, ಮುಡಾ, ವಾಲ್ಮೀಕಿ ನಿಗಮ ಹಗರಣಗಳ ಆರೋಪಗಳಿಂದ ವಿವಾದಗಳಿಗೂ ಸಿಲುಕಿದೆ. ಮುಖ್ಯಮಂತ್ರಿ ಬದಲಾವಣೆ, ಅಧಿಕಾರ ಹಂಚಿಕೆ, ಸಚಿವರ ಇರಿಸು-ಮುರುಸು ಸೇರಿದಂತೆ ನಾನಾ ಕಾರಣಗಳಿಂದ ಬಿಕ್ಕಟ್ಟಿಗೂ ಸಿಲುಕಿದೆ. ಈಗಲೂ, ಅಧಿಕಾರ ಹಂಚಿಕೆ ಮತ್ತು ಮಾಧ್ಯಮ ಸೃಷ್ಟಿತ ‘ನವೆಂಬರ್ ಕ್ರಾಂತಿ’ ಎಂಬ ಊಹಾಪೋಹಗಳನ್ನು ಎದುರಿಸುತ್ತಿದೆ.

ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತ, ಭ್ರಷ್ಟಾಚಾರ, ಅಧಿಕಾರ ದುರ್ಬಳಕೆಯ ವಿರುದ್ಧ ಕಾಂಗ್ರೆಸ್‌ ಸಕ್ರಿಯವಾಗಿ ಪ್ರಚಾರ ಮಾಡಿತು. ‘ಪೇ-ಸಿಎಂ’ ರೀತಿಯ ಅಭಿಯಾನಗಳನ್ನು ನಡೆಸಿ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ, ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೇರಿತು. ಆದರೆ, ಜನರು ಕೊಟ್ಟ ಅಧಿಕಾರಯುತ ಜವಾಬ್ದಾರಿಯನ್ನು ಕಾಂಗ್ರೆಸ್‌ ಆಗಾಗ್ಗೆ ಮರೆತಂತೆ ವರ್ತಿಸಿದೆ. ಕೆಲವೊಮ್ಮೆ ಜನಾಧಿಕಾರವನ್ನು ಅರಿತು ಸದೃಢವಾಗಿ ಕೆಲವನ್ನೂ ಮಾಡಿದೆ. ಸರ್ಕಾರ/ಮುಖ್ಯಮಂತ್ರಿಗಳ ದೃಢತೆಯಿಂದಲೇ ಒಳಮೀಸಲಾತಿ ಘೋಷಣೆಯಾಗಿದೆ. ಆದಾಗ್ಯೂ, ಅಲೆಮಾರಿ ಸಮುದಾಯಕ್ಕೆ ಅನ್ಯಾಯ ಎಸಗಿದ ಆರೋಪಕ್ಕೆ ಸಿಲುಕಿಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾಂಗ್ರೆಸ್‌ ಸರ್ಕಾರದ ಅತ್ಯುತ್ತಮ, ಜನಪರ ಯೋಜನೆಗಳಲ್ಲಿ ಐದು ಗ್ಯಾರಂಟಿ ಯೋಜನೆಗಳದ್ದೇ ಅಗ್ರಸ್ಥಾನ. ಈ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರವು ಕಳೆದ ಎರಡೂವರೆ ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂ. ಖರ್ಚು ಮಾಡಿರುವುದಾಗಿ ಹೇಳಿಕೊಂಡಿದೆ. ಬಡವರು, ಯುವಜನರು ಹಾಗೂ ಮಹಿಳೆಯರಿಗಾಗಿ ಜಾರಿಗೆ ಬಂದ ಗ್ಯಾರಂಟಿ ಯೋಜನೆಗಳು ಪರ-ವಿರೋಧ ಚರ್ಚೆಗಳು, ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಲೇ ಜನರಿಗೆ ದೊರೆಯುತ್ತಿವೆ. ಶಕ್ತಿ ಯೋಜನೆಯನ್ನು ಹೊರತುಪಡಿಸಿ, ಉಳಿದ ನಾಲ್ಕು – ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವನಿಧಿ – ಯೋಜನೆಗಳು ಆಗಾಗ್ಗೆ ಸಮಸ್ಯೆಗಳನ್ನು ಎದುರಿಸಿವೆ. ಅನ್ನಭ್ಯಾಗ್ಯ ಯೋಜನೆಗೆ ಕೇಂದ್ರ ಸರ್ಕಾರದ ಅಸಹಕಾರ, ಗೃಹಲಕ್ಷ್ಮಿ ಯೋಜನೆಯಲ್ಲಿನ ವಿಳಂಬ, ಗೃಹಜ್ಯೋತಿ ಯೋಜನೆಯಲ್ಲಿ ನಾನಾ ತೊಡಕುಗಳು ಹಾಗೂ ತಾಂತ್ರಿಕ ಸಮಸ್ಯೆಯೂ ಸೇರಿದಂತೆ ನಾನಾ ಸವಾಲುಗಳನ್ನು ಎದುರಿಸಿದೆ. ಆದಾಗ್ಯೂ, ಮುಂದುವರೆಯುತ್ತಿವೆ. ಫಲಾನುಭವಿಗಳ ನೆರವಿಗೆ ನಿಂತಿವೆ. ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂದವರಿಗೆ ಉತ್ತರವಾಗಿ ಮುಂದುವರೆದಿವೆ.

ಈಗಲೂ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರವು ಇಂಧನ, ಮೋಟಾರು ವಾಹನ ನೋಂದಣಿ ಮತ್ತು ಮದ್ಯ ಸೇರಿದಂತೆ ಹಲವಾರು ಅಗತ್ಯ ವಸ್ತುಗಳ ತೆರಿಗೆಗಳು ಮತ್ತು ಬೆಲೆಗಳನ್ನು ಹೆಚ್ಚಿಸುತ್ತಲೇ ಇದೆ ಎಂದು ವಿರೋಧ ಪಕ್ಷ ಬಿಜೆಪಿ-ಜೆಡಿಎಸ್ ಆರೋಪಿಸುತ್ತಿವೆ. ಆದರೆ, ಈ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ. ರಾಜ್ಯಕ್ಕೆ ಕೇಂದ್ರವು ಸರಿಯಾಗಿ ತೆರಿಗೆ ಪಾಲು ನೀಡುತ್ತಿಲ್ಲ. ಪಾಲನ್ನು ಕಡಿತಗೊಳಿಸುತ್ತಿದೆ. ರಾಜ್ಯಕ್ಕೆ ಬರಬೇಕಾದ ಅನುದಾನವನ್ನೂ ಕಡಿಮೆ ಮಾಡುತ್ತಿದೆ. ರಾಜ್ಯಕ್ಕೆ ನ್ಯಾಯಯುತ ಪಾಲು ಸಿಗದ ಕಾರಣ, ಬೆಲೆ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕಾಂಗ್ರೆಸ್‌ ವಾದಿಸುತ್ತಿದೆ. ಬಿಟ್ಟಿಭಾಗ್ಯ ಎಂದು ಗೇಲಿ ಮಾಡಿದ್ದ ಬಿಜೆಪಿ, ಚುನಾವಣೆ ನಡೆಯುವ ರಾಜ್ಯಗಳಲ್ಲಿ ಕರ್ನಾಟಕದ ಗ್ಯಾರಂಟಿ ಮಾದರಿಯನ್ನು ಕಾಪಿ ಮಾಡುತ್ತಿದೆ.

ನಕ್ಸಲ್‌ ಮುಕ್ತ ರಾಜ್ಯ

ಗ್ಯಾರಂಟಿ ಯೋಜನೆಗಳ ಯಶಸ್ಸಿನ ಜೊತೆಗೆ, ರಾಜ್ಯದಲ್ಲಿದ್ದ ಆರು ಮಂದಿ ನಕ್ಸಲ್ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರುವ ಮೂಲಕ ಕರ್ನಾಟಕವನ್ನು ‘ನಕ್ಸಲ್ ಮುಕ್ತ ರಾಜ್ಯ’ವನ್ನಾಗಿ ಘೊಷಿಸಿದ ಕೀರ್ತಿಯೂ ಕಾಂಗ್ರೆಸ್‌ ಸರ್ಕಾರಕ್ಕೆ ದೊರೆತಿದೆ. ನಕ್ಸಲ್‌ ಮುಖಂಡ ವಿಕ್ರಂ ಗೌಡರನ್ನು ಶೂಟೌಟ್‌ ಮಾಡಿದ್ದ ನಕ್ಸಲ್‌ ನಿಗ್ರಹ ಪಡೆಯ ನಡೆ ಭಾರೀ ಆಕ್ರೋಶಕ್ಕೆ ಈಡಾಗಿತ್ತು. ಸಿದ್ದರಾಮಯ್ಯ ಮೇಲೆ ಒತ್ತಡವೂ ಹೆಚ್ಚಿತ್ತು. ಪ್ರಗತಿಪರ ಚಿಂತಕರು, ಹೋರಾಟಗಾರರೇ ಮುಂದೆ ನಿಂತು ಉಳಿದ ನಕ್ಸಲರ ಜೊತೆಗೆ ಮಾತುಕತೆ ನಡೆಸಿ, ಸರ್ಕಾರವೂ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ನಂತರ ಆರು ಮಂದಿ ನಕ್ಸಲರು ಮುಖ್ಯವಾಹಿನಿಗೆ ಬರುವ ನಿರ್ಧಾರ ಮಾಡಿದ್ದರು.

naxal 2
A new chapter: Siddaramaiah and Deputy Chief Minister D.K. Shivakumar (first from right) present copies of the Constitution to the six surrendred Naxals in Bengaluru | PTI

ಭೂಸ್ವಾಧೀನ ಕೈಬಿಟ್ಟ ದಿಟ್ಟ ನಡೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣ ರೈತರ ಭೂಮಿಯನ್ನು ಕೆಐಡಿಬಿ ಮೂಲಕ ಸ್ವಾದೀನ ಪ್ರಕ್ರಿಯೆಗೆ ಚಾಲನೆ ನೀಡಿದ್ದ ಬಿಜೆಪಿ ಸರ್ಕಾರದ ನಡೆಗೆ ರೈತರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಕೈಗೊಂಡಿದ್ದರು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂತಿಮ ನೋಟಿಫಿಕೇಷನ್‌ ಹೊರಡಿಸಿ ಭಾರೀ ವಿರೋಧಕ್ಕೆ ಸಿದ್ದರಾಮಯ್ಯ ಸರ್ಕಾರ ಈಡಾಗಿತ್ತು. ಕೊನೆಗೂ ಮೂರು ವರ್ಷಗಳ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ, ರೈತರ ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಅಧಿಸೂಚನೆಯನ್ನು ರದ್ದುಪಡಿಸಿದೆ.

ಒಳಮೀಸಲಾತಿ ಘೋಷಣೆ

ಹಿಂದುಳಿದ ವರ್ಗಗಳು 30 ವರ್ಷಗಳಿಂದ ನಡೆಸಿದ್ದ ಒಳಮೀಸಲಾತಿ ಹೋರಾಟವೂ ಈ ಸರ್ಕಾರದಲ್ಲಿ ಗೆಲುವಿನೊಂದಿಗೆ ಮುಕ್ತಾಯಗೊಂಡಿದೆ. ಸರ್ಕಾರವು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ಸಮೀಕ್ಷೆ ನಡೆಸಿ ವರದಿ ನೀಡಲು ಕೋರಿತ್ತು. ಆದರೆ, ದಾಸ್‌ ವರದಿಯಂತೆ ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿ ನೀಡುವ ವಿಚಾರದಲ್ಲಿ ಅನ್ಯಾಯ ಎಸಗಿದೆ. ಅನ್ಯಾಯದ ವಿರುದ್ಧ ಅಲೆಮಾರಿ ಸಮುದಾಯವು ದೆಹಲಿಯವರೆಗೆ ತೆರಳಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಮನವಿ ಸಲ್ಲಿಸಿದೆ. ನಾಳೆ, ಅಕ್ಟೋಬರ್ 31ರಂದು ಸರ್ಕಾರ ಮತ್ತು ಹೋರಾಟಗಾರರ ನಡುವೆ ಸಭೆ ನಡೆಯಲಿದ್ದು, ನ್ಯಾಯ ದೊರೆಯುವ ನಿರೀಕ್ಷೆಯಿದೆ.

cm 2

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ನಾಯಕರಾಗಿ ವೈಯಕ್ತಿಕವಾಗಿ ರಾಜ್ಯದ ಜನರ ವಿಶ್ವಾಸ ಉಳಿಸಿಕೊಂಡಿದ್ದಾರೆ. ಒಳಮೀಸಲಾತಿಯಲ್ಲಿ ಎದುರಾಗಿರುವ ತೊಡಕುಗಳ ವಿಚಾರದಲ್ಲಿ ತಮ್ಮದೇ ಸಚಿವ ಸಂಪುಟದ ಅಸಹಕಾರದಿಂದಾಗಿ ಅಸಹಾಯಕತೆಯನ್ನೂ ವ್ಯಕ್ತಪಡಿಸಿದ್ದಾರೆ. ಉಳಿದಂತೆ, ರಾಜ್ಯದ 32 ಸಚಿವರಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ಗೃಹ ಸಚಿವ ಜಿ ಪರಮೇಶ್ವರ್, ಜಮೀರ್‌ ಅಹಮದ್‌ ಖಾನ್‌ ಹೊರತುಪಡಿಸಿದರೆ ಉಳಿದ ಸಚಿವರು ಜನರ ಕೈಗೆ ಸಿಗುತ್ತಿಲ್ಲ. ಕಣ್ಣಿಗೆ ಕಾಣುತ್ತಿಲ್ಲ. ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಡವಟ್ಟುಗಳಿಗೆ ಹೆಸರಾಗಿದ್ದಾರೆ.

ಬೆಂಗಳೂರಿನ ರಸ್ತೆ ಗುಂಡಿಗಳ ವಿಚಾರದಲ್ಲಿ ಪರ-ವಿರೋಧ ಚರ್ಚೆ ಮತ್ತು ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿದ್ದ ಡಿ.ಕೆ ಶಿವಕುಮಾರ್ ಅವರು ‘ಬೆಂಗಳೂರು ನಡಿಗೆ’ ಅಭಿಯಾನ ನಡೆಸುತ್ತಿದ್ದಾರೆ. ಬೆಂಗಳೂರು ನಿವಾಸಿಗಳ ಸಮಸ್ಯೆಗಳು-ಸಲಹೆಗಳನ್ನು ಕೇಳುತ್ತಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದಾದ್ಯಂತ ನಿರಂತರವಾಗಿ ಸಂಚರಿಸುತ್ತಿದ್ದಾರೆ. ಕಚೇರಿಗಳಿಗೆ ದಿಢೀರ್ ಭೇಟಿ ಮೂಲಕ, ಅಧಿಕಾರಿಗಳ ಬೆವರಿಳಿಸುತ್ತಿದ್ದಾರೆ. ಜೊತೆಗೆ, ಕಂದಾಯ ಇಲಾಖೆಯಲ್ಲಿ ನಾನಾ ರೀತಿಯ ಸುಧಾರಣೆಗಳನ್ನು ತರುತ್ತಿದ್ದಾರೆ. ಪ್ರಿಯಾಂಕ್‌ ಖರ್ಗೆ ಅವರು ತಮ್ಮ ಕೆಲಸಗಳ ಜೊತೆಗೆ ಬಿಜೆಪಿ-ಆರ್‌ಎಸ್‌ಎಸ್‌ನ ಮನುವಾದಿ, ಕೋಮುವಾದಿ ಸಿದ್ಧಾಂತಗಳ ವಿರುದ್ಧ ಕಟು ವಿಮರ್ಶೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಗುರಿ, ಉದ್ದೇಶ, ಸಿದ್ದಾಂತಗಳನ್ನು ಸರ್ಕಾರಕ್ಕೂ-ಜನರಿಗೂ ನೆನಪಿಸುತ್ತಿದ್ದಾರೆ.

ಡಾ. ಜಿ ಪರಮೇಶ್ವರ್‌ ನಿರ್ವಹಿಸುತ್ತಿರುವ ಗೃಹ ಖಾತೆಯು ನಿರಂತರ ಸುದ್ದಿಯಲ್ಲಿದೆ. ಹಲವು ಪ್ರಕರಣಗಳಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಬೇಕಿದ್ದ ಪರಮೇಶ್ವರ್ ಹಾರಿಕೆಯ ಉತ್ತರಗಳನ್ನು ನೀಡುವ ಮೂಲಕ ವಿರೋಧಕ್ಕೂ ಗುರಿಯಾಗಿದ್ದಾರೆ. ಆದಾಗ್ಯೂ, ಧರ್ಮಸ್ಥಳ ಸರಣಿ ಸಾವುಗಳು ಮತ್ತು ರಹಸ್ಯ ಹೂತುಹಾಕಿದ ಪ್ರಕರಣ ಮತ್ತು ಆಳಂದ ಮತಗಳವು ಪ್ರಕರಣಗಳಲ್ಲಿ ಎಸ್‌ಐಟಿ ರಚಿಸಿದ್ದು ಅವರ ಸಾಧನೆಯಂತೆ ಕಾಣುತ್ತಿದೆ. ಜೊತೆಗೆ, ಪೊಲೀಸರ ಟೋಪಿ ಬದಲಾವಣೆ ಗಮನ ಸೆಳೆದಿದೆ. ಆದಾಗ್ಯೂ, ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ಅಪರಾಧ ಕೃತ್ಯಗಳು ಮುಂದುವರೆದಿವೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು, ದಲಿತರ ಮೇಲಿನ ಜಾತಿ ದೌರ್ಜನ್ಯ, ಕೋಮು ವಿವಾದಗಳು ಗೃಹ ಸಚಿವರು ಎಚ್ಚರಗೊಳ್ಳಬೇಕೆಂದು ಎಚ್ಚರಿಸುತ್ತಲೇ ಇವೆ.

ಈ ಸಚಿವರನ್ನು ಹೊರತುಪಡಿಸಿ ಉಳಿದ ಸಚಿವರಲ್ಲಿ ಬಹುತೇಕರ ಹೆಸರನ್ನೂ ಜನರು ಮರೆತಂತಾಗಿದೆ. ಸಚಿವರ ವಿಲಾಸಿ ಜೀವನ ಮತ್ತು ರಾಜ್ಯಾದ್ಯಂತ ಮೂಲ ಸೌಕರ್ಯಗಳ ಸಮಸ್ಯೆಗಳು ಸರ್ಕಾರವು ಅಗತ್ಯ ಸೌಲಭ್ಯಗಳಿಗೆ ಇನ್ನೂ ಹೆಚ್ಚು ಗಮನ ಹರಿಸಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಿವೆ. ಮೂಲಸೌಕರ್ಯ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಸರ್ಕಾರದ ಗಮನ ಮತ್ತು ಅನುದಾನ ಎರಡೂ ಹೆಚ್ಚಬೇಕಿದೆ. ಉತ್ತರ ಕರ್ನಾಟಕಕ್ಕೆ ವಿಶೇಷ ಒತ್ತು ಕೊಡುವ ಅಗತ್ಯವೂ ಇದೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಮಹಾಘಟಬಂಧನ್ ಭರಪೂರ ಭರವಸೆ; ಕಾರ್ಯಸಾಧುವೇ?

ಹಲವು ಆರೋಪ, ಭ್ರಷ್ಟಾಚಾರದ ವಾಸನೆ

ಸರ್ಕಾರವು ತನ್ನ ಸಾಧನೆ, ಗುರಿ, ಉದ್ದೇಶಗಳ ಹೊರತಾಗಿಯೂ ನಾನಾ ಸವಾಲು, ಆರೋಪ, ವಿವಾದಗಳನ್ನು ಎದುರಿಸಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ತಮ್ಮ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ 14 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದಲ್ಲಿ ಸಿದ್ದರಾಮಯ್ಯ ಸಿಲುಕಿಕೊಂಡಿದ್ದರು. ವಿವಾದ ಮುನ್ನೆಲೆಗೆ ಬಂದು, ಪಾರ್ವತಿ ಅವರು ತಮ್ಮ ನಿವೇಶನಗಳನ್ನು ಮುಡಾಗೆ ಹಿಂದಿರುಗಿಸಿದರು. ಮುಡಾ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿದ್ದು, ಯಾವುದೇ ಅಪರಾಧ ಕಂಡುಬಂದಿಲ್ಲವೆಂದು ʼಬಿ ರಿಪೋರ್ಟ್‌ʼ ಸಲ್ಲಿಸಿದೆ.

ವಾಲ್ಮೀಕಿ ನಿಗಮಕ್ಕೆ ಸಂಬಂಧಿಸಿದ ಅವ್ಯವಹಾರ, ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಿ ನಾಗೇಂದ್ರ ಅವರು ಸಚಿವ ಸಂಪುಟದಿಂದ ಹೊರಗುಳಿದಿದ್ದಾರೆ. ಆದಾಗ್ಯೂ, ಅವರ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ. ಅಕ್ರಮ ಬೆಟ್ಟಿಂಗ್ ದಂಧೆಯಲ್ಲಿ ಚಿತ್ರದುರ್ಗ ಶಾಸಕ ವಿರೇಂದ್ರ ಪಪ್ಪಿ ಜೈಲು ಸೇರಿದ್ದರೆ, ಬಿಜೆಪಿ ಕಾರ್ಪೋರೇಟರ್ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಜೈಲು ಪಾಲಾಗಿದ್ದಾರೆ. ಅಲ್ಲದೆ, ಅದಿರು ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರವಾರ ಶಾಸಕ ಸತೀಶ್‌ ಸೈಲ್ ಅವರನ್ನು ಇಡಿ ಬಂಧಿಸಿತ್ತು – ಅವರು ಅನಾರೋಗ್ಯ ಕಾರಣ ನೀಡಿ ಜಾಮೀನು ಪಡೆದು ಹೊರಬಂದಿದ್ದಾರೆ.

ಇನ್ನು, 2024ರ ಲೋಕಸಭಾ ಚುನಾವಣೆಯಲ್ಲಿ  9 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, ನಿರೀಕ್ಷಿತ ಸ್ಥಾನಗಳನ್ನು ಗೆಲ್ಲಲಾಗಲಿಲ್ಲ. ಆದಾಗ್ಯೂ, ಆ ನಂತರ, ಮೂರು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆದ್ದು, ಯಶಸ್ಸು ಕಂಡಿತು. ಈ ಗೆಲುವಿಗೆ ಗ್ಯಾರಂಟಿ ಯೋಜನೆಗಳು ಕಾರಣವೆಂದು ಸಿದ್ದರಾಮಯ್ಯ ಹೇಳಿದರು.

ಇದೆಲ್ಲದರ ನಡುವೆ, ಬಿಬಿಎಂಪಿ ಮತ್ತು ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆದಿಲ್ಲ. ಬಿಜೆಪಿಯ ಹಾದಿಯಲ್ಲಿಯೇ ಕಾಂಗ್ರೆಸ್‌ ಸರ್ಕಾರ ಕೂಡ ವಿಳಂಬ ಧೋರಣೆ ಅನುಸರಿಸುತ್ತಿದೆ. ಒಳಮೀಸಲಾತಿ ಜಾರಿ, ಜಾತಿಗಣತಿ ವಿಚಾರದಲ್ಲೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ.

ಜೊತೆಗೆ, ಮುಖ್ಯಮಂತ್ರಿ ಬದಲಾವಣೆ, ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅಧಿಕಾರ ಹಂಚಿಕೆ ವಿಚಾರಗಳು ಆಗಾಗ್ಗೆ ಮುನ್ನೆಲೆಗೆ ಬರುತ್ತಿವೆ. ಅಲ್ಲದೆ, ಸತೀಶ್‌ ಜಾರಕಿಹೊಳಿ, ಪರಮೇಶ್ವರ್ ಕೂಡ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಓಡುತ್ತಿದ್ದಾರೆ. ಇತ್ತೀಚಿಗೆ, ಸಿದ್ದರಾಮಯ್ಯ ಅವರ ಪುತ್ರ, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಅವರು ಸತೀಶ್‌ ಜಾರಕಿಹೊಳಿ ಕುರಿತು ನೀಡಿದ ಹೇಳಿಕೆಯು ಕಾಂಗ್ರೆಸ್‌ನಲ್ಲಿ ಹೊಸ ವಿವಾದ/ಸಂಚಲನ ಸೃಷ್ಟಿಸಿದೆ. ಜೊತೆಗೆ, ಸಚಿವ ಸಂಪುಟದಿಂದ ಕೆ.ಎನ್ ರಾಜಣ್ಣ ಅವರನ್ನು ಕೈಬಿಟ್ಟಿರುವುದು ಮತ್ತು ಹಲವು ಸಚಿವರು ಬಹಿರಂಗವಾಗಿ ನೀಡುತ್ತಿರುವ ಹೇಳಿಕೆಗಳು ಕಾಂಗ್ರೆಸ್‌ಗೆ ಒಳಪೆಟ್ಟು ಕೊಡುತ್ತಿವೆ. ಇದೆಲ್ಲವನ್ನು ನಿಭಾಯಿಸಿಕೊಂಡು, ಕಾಂಗ್ರೆಸ್‌ ಸರ್ಕಾರವು ಸದೃಢವಾಗಿ ಮುನ್ನಡೆಯುವ ಸವಾಲಿನ ಜೊತೆಗೆ, ರಾಜ್ಯದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಗಮನ ಕೊಡಬೇಕಿದೆ.

ಸರ್ಕಾರದ ಸಾಧನೆಗಳ ಪಟ್ಟಿ
1. ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ
2. ಒಳಮೀಸಲಾತಿ ಘೋಷಣೆ
3. ನಕ್ಸಲ್ ಮುಕ್ತ ರಾಜ್ಯ ಘೋಷಣೆ
4. ಸಾಮಾಜಿಕ-ಶೈಕ್ಷಣಿಕ ಜಾತಿ ಸಮೀಕ್ಷೆ
5. ಚನ್ನರಾಯಪಟ್ಟಣ ಭೂಸ್ವಾಧೀನ ಅಧಿಸೂಚನೆ ರದ್ದು
6. ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ರಚನೆ
7. ಕಂದಾಯ ಇಲಾಖೆಯಲ್ಲಿ ಹಲವು ಸುಧಾರಣೆಗಳು

ಸರ್ಕಾರಕ್ಕೆ ಮುಜುಗರ ತಂದ ಪ್ರಕರಣಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಮುಡಾ ನಿವೇಶನ ಪಡೆದ ಆರೋಪ
2. ಬಿ ನಾಗೇಂದ್ರ ವಿರುದ್ಧದ ವಾಲ್ಮೀಕಿ ನಿಗಮ ಅವ್ಯವಹಾರ, ಅಕ್ರಮ ಹಣ ವರ್ಗಾವಣೆ ಆರೋಪ
3. ಚಿತ್ರದುರ್ಗ ಶಾಸಕ ವಿರೇಂದ್ರ ಪಪ್ಪಿ ವಿರುದ್ಧ ಅಕ್ರಮ ಬೆಟ್ಟಿಂಗ್ ದಂಧೆ ಆರೋಪ – ಬಂಧನ
4. ಧಾರವಾಡ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಯೋಗೀಶ್‌ ಗೌಡ ಕೊಲೆ ಆರೋಪ – ಬಂಧನ
5. ಕಾರವಾರ ಶಾಸಕ ಸತೀಶ್‌ ಸೈಲ್ ವಿರುದ್ಧ ಅದಿರು ಕಳ್ಳತನ ಆರೋಪ – ಬಂಧನ, ಜಾಮೀನಿನ ಮೇಲೆ ಬಿಡುಗಡೆ
6. ಇದೀಗ, ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ವಿರುದ್ಧ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯಿಂದ ಭ್ರಷ್ಟಾಚಾರ ಆರೋಪ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...