ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ಮುಗಿದಿದೆ. 13 ರಾಜ್ಯಗಳ 88 ಸ್ಥಾನಗಳಿಗೆ ಮತದಾರರು ಮತ ಚಲಾಯಿಸಿದ್ದಾರೆ. ಎರಡನೇ ಹಂತದಲ್ಲಿ 89 ಸ್ಥಾನಗಳಿಗೆ ಮತದಾನ ನಡೆಯಬೇಕಿತ್ತು. ಆದರೆ, ಮಧ್ಯಪ್ರದೇಶದ ಬೇತುಲ್ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ನಿಧನರಾದ ಕಾರಣ, ಆ ಕ್ಷೇತ್ರದ ಮತದಾನವನ್ನು 3ನೇ ಹಂತದಲ್ಲಿ ನಡೆಸಲು ಮುಂದೂಡಲಾಗಿದೆ. ಮತದಾರರು ಉತ್ಸಾಹದಿಂದ ಮತದಾನ ಮಾಡಿದ್ದರೂ, 2ನೇ ಹಂತದ ಮತದಾನದಲ್ಲಿ 2019ರ ಚುನಾವಣೆಗೆ ಹೋಲಿಸಿದರೆ, ಈ ಬಾರೀ ಮತದಾನದ ಪ್ರಮಾಣ ಭಾರೀ ಕುಸಿತ ಕಂಡಿದೆ. ದೇಶಾದ್ಯಂತ ಈ ಬಾರಿ 60.96% ಮತದಾನವಾಗಿದೆ. 2019ರಲ್ಲಿ 88 ಸ್ಥಾನಗಳಿಗೆ ಒಟ್ಟು 70.09% ಮತದಾನವಾಗಿತ್ತು.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೇ ಹೆಚ್ಚಿನ ಮತದಾರರು ಮತದಾನ ಮಾಡದೇ ಇದ್ದರೂ, ಪ್ರಧಾನಿ ಮೋದಿ ಅವರು ಉತ್ತಮ ಮತದಾನವಾಗಿದೆ ಎಂದಿದ್ದಾರೆ. “ಎರಡನೇ ಹಂತದ ಮತದಾನ ಚೆನ್ನಾಗಿ ನಡೆದಿದೆ. ಭಾರತದಾದ್ಯಂತ ಇಂದು ಮತ ಚಲಾಯಿಸಿದ ಜನರಿಗೆ ಕೃತಜ್ಞತೆಗಳು. ಎನ್‌ಡಿಎಗೆ ಬಂದಿರುವ ಅಪ್ರತಿಮ ಬೆಂಬಲವು ಪ್ರತಿಪಕ್ಷಗಳನ್ನು ಇನ್ನಷ್ಟು ನಿರಾಶೆಗೊಳಿಸಲಿದೆ. ಮತದಾರರು ಎನ್‌ಡಿಎಯ ಉತ್ತಮ ಆಡಳಿತವನ್ನು ಬಯಸುತ್ತಾರೆ. ಯುವಜನರು ಮತ್ತು ಮಹಿಳಾ ಮತದಾರರು ಎನ್‌ಡಿಎಗೆ ಪ್ರಬಲ ಬೆಂಬಲವನ್ನು ನೀಡುತ್ತಿದ್ದಾರೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಎನ್‌ಡಿಎಗೆ ಭಾರೀ ಬೆಂಬಲ ವ್ಯಕ್ತವಾಗಿದೆ ಎಂದು ಮೋದಿ ಅವರು ಹೇಳಿಕೊಂಡರೂ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮತದಾರರು ಹೆಚ್ಚಾಗಿ ಮತಗಟ್ಟೆಗಳಿಗೆ ಬಂದಿಲ್ಲ ಎಂಬುದು ವಾಸ್ತವ. ಇದಕ್ಕೆ, ಬಿಜೆಪಿ ಆಡಳಿತದ ಮೇಲೆ ಜನರಿಗಿರುವ ಅಸಹನೆಯೇ ಕಾರಣವೆಂದೂ ಹೇಳಲಾಗಿದೆ. ಇದು, ಬಿಜೆಪಿಯಲ್ಲಿ ಸೋಲಿನ ಆತಂಕವನ್ನು ಹೆಚ್ಚಿಸಿದೆ.
2ನೇ ಹಂತದ ಮತದಾನ ನಡೆದ 13 ರಾಜ್ಯಗಳ ಪೈಕಿ 9 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ಒಂಬತ್ತು- ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಮಹಾರಾಷ್ಟ್ರ, ಮಣಿಪುರ, ಅಸ್ಸಾಂ, ತ್ರಿಪುರಾ ಹಾಗೂ ಬಿಹಾರ- ರಾಜ್ಯಗಳಲ್ಲಿಯೇ 2019ಕ್ಕಿಂತ ಈ ಬಾರಿ ಅತೀ ಹೆಚ್ಚು ಮತದಾನದ ಪ್ರಮಾಣ ಕುಸಿದಿದೆ.
ಬಿಜೆಪಿ ಕೋಮುವಾದದ ಪ್ರಯೋಗ ಶಾಲೆ, ಕೋಮು ಸಂಘರ್ಷದ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಉತ್ತರ ಪ್ರದೇಶದಲ್ಲಿ 2ನೇ ಹಂತದಲ್ಲಿ 8 ಸ್ಥಾನಗಳಿಗೆ ಮತದಾನ ನಡೆದಿದ್ದು, ಮತದಾನ ತೀರ ಕುಸಿತ ಕಂಡಿದೆ. ಇದೇ ವರ್ಷದ ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಿದ ಹೊರತಾಗಿಯೂ, ಶ್ರೀರಾಮನ ಹೆಸರೇಳಿಕೊಂಡು ಮತದಾರರು ಮತಗಟ್ಟೆಗಳಿಗೆ ಬಂದಿಲ್ಲ. 2019ರಲ್ಲಿ ಉತ್ತರ ಪ್ರದೇಶದಲ್ಲಿ (8 ಸ್ಥಾನ) 62.18% ಮತದಾನವಾಗಿತ್ತು. ಆದರೆ, ಈ ವರ್ಷ ಕೇವಲ 54.85% ಮತದಾನವಾಗಿದೆ.
ಜನಾಂಗೀಯ ಹಿಂಸಾಚಾರಕ್ಕೆ ಬಲಿಯಾಗಿರುವ ಮಣಿಪುರದಲ್ಲಿ (1 ಸ್ಥಾನ) 2019ರಲ್ಲಿ 84.14% ಮಂದಿ ಮತ ಚಲಾಯಿಸಿದ್ದರು, ಈ ಬಾರಿ 77.95%ಗೆ ಕುಸಿದಿದೆ.
ಮಧ್ಯಪ್ರದೇಶದಲ್ಲಿ (7 ಸ್ಥಾನ) 2019ರಲ್ಲಿ 67.67% ಮತದಾನವಾಗಿತ್ತು. ಈ ಬಾರಿ, 58.13%ಗೆ ಕುಸಿದಿದೆ. ರಾಜಸ್ಥಾನದಲ್ಲಿ (13 ಸ್ಥಾನ) ಕಳೆದ ಚುನಾವಣೆಯಲ್ಲಿ 68.42% ಮತದಾನವಾಗಿತ್ತು. ಈಗ 64.07%ಗೆ ಇಳಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ (8 ಸ್ಥಾನ) 2019ರಲ್ಲಿ 62.81% ಮತದಾನವಾಗಿದ್ದರೆ, ಈ ಬಾರಿ 59.49% ಮತ ಚಲಾವಣೆಯಾಗಿವೆ. ಅಸ್ಸಾಂನಲ್ಲಿ (5 ಸ್ಥಾನ) ಈ ಹಿಂದೆ, 81.28% ಮತದಾರರು ಮತದಾನ ಮಾಡಿದ್ದರು. ಈ ಬಾರಿ, 76.06%ಗೆ ಕುಸಿತವಾಗಿದೆ. ಬಿಹಾರದಲ್ಲಿ (5 ಸ್ಥಾನ) 2019ರಲ್ಲಿ 62.93% ಮತದಾನವಾಗಿತ್ತಾದರೂ, ಈ ಬಾರಿ 55.99%ಗೆ ಕುಸಿತ ಕಂಡಿದೆ.
ತ್ರಿಪುರದಲ್ಲಿ (1 ಸ್ಥಾನ) 2019ರಲ್ಲಿ 82.90% ಮತದಾನವಾಗಿತ್ತು. ಈ ಬಾರಿ, 79.58%ಗೆ ಇಳಿಕೆಯಾಗಿದೆ. ಛತ್ತೀಸ್‌ಗಢದಲ್ಲಿ (1 ಸ್ಥಾನ) 2019ರಲ್ಲಿ 75.12% ಮಂದಿ ಮತ ಚಲಾಯಿಸಿದ್ದರು, ಈ ಬಾರಿ, 73.94% ಮತದಾನವಾಗಿದೆ.
ಇನ್ನು, ರಾಜ್ಯ ಸರ್ಕಾರವೇ ಇಲ್ಲದ ಜಮ್ಮು ಮತ್ತು ಕಾಶ್ಮೀರದಲ್ಲಿ (1 ಸ್ಥಾನ) 2019ರಲ್ಲಿ 72.50% ಮತದಾನವಾಗಿತ್ತು. ಈಗ, 72.32%ಗೆ ಇಳಿದಿದೆ.

ಅಲ್ಲದೆ, ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ (14 ಸ್ಥಾನ) 2019ರಲ್ಲಿ 68.96% ಮತದಾನವಾಗಿತ್ತು. ಈ ಬಾರಿ, 69.23% ಮತದಾನವಾಗಿದೆ. 0.3%ರಷ್ಟು ಮತಗಳು ಹೆಚ್ಚಾಗಿವೆ.
ಇನ್ನು, ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ (ಎಡರಂಗ) ಅಧಿಕಾರದಲ್ಲಿರುವ ಕೇರಳದಲ್ಲಿ ಎಲ್ಲ 20 ಸ್ಥಾನಗಳಿಗೂ ಮತದಾನ ನಡೆದಿದೆ. ಅಲ್ಲಿ, 2019ರಲ್ಲಿ 77.84% ಮತದಾನವಾಗಿತ್ತು. ಈ ಬಾರಿ, 66.54%ಗೆ ಕುಸಿತಕಂಡಿದೆ.
ಟಿಎಂಸಿ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳದಲ್ಲಿ (3 ಸ್ಥಾನ) 2019ರಲ್ಲಿ 80.66% ಮತದಾನವಾಗಿತ್ತು. ಈ ಬಾರಿ, 71.84%ಗೆ ಇಳಿದಿದೆ.
ಮೊದಲ ಹಂತದ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೇ ಮತದಾನದಲ್ಲಿ ಹೆಚ್ಚು ಕುಸಿತವಾಗಿತ್ತು. ಇದೀಗ, 2ನೇ ಹಂತದಲ್ಲಿಯೂ ಬಿಜೆಪಿ ಅಧಿಕಾರದಲ್ಲಿರುವ 9 ರಾಜ್ಯಗಳು ಮತ್ತು ರಾಜ್ಯಪಾಲರ ಮೂಲಕ ಕೇಂದ್ರವೇ ಅಧಿಕಾರ ನಡೆಸುತ್ತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾರರು ಹೆಚ್ಚಾಗಿ ಮತ ಚಲಾಯಿಸಿಲ್ಲ. ಇದು, ಬಿಜೆಪಿಯಲ್ಲಿ ಮತ್ತಷ್ಟು ಭಯವನ್ನು ಹುಟ್ಟು ಹಾಕಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ‘ಆರ್ಟಿಕಲ್ 370’ಯನ್ನು ರದ್ದು ಮಾಡಿದ್ದರ ವಿರುದ್ಧ ಅಲ್ಲಿನ ಜನರು ಸಿಟ್ಟಾಗಿದ್ದಾರೆ. ಅವರೆಲ್ಲರೂ ಬಿಜೆಪಿ ವಿರುದ್ಧವೇ ಮತದಾನ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ.
ಮಾತ್ರವಲ್ಲದೆ, ಬಿಜೆಪಿ ಗೆಲ್ಲುವುದು ತೀರಾ ಕಷ್ಟವೆಂದು ಭಾವಿಸಲಾಗಿದ್ದ ಕರ್ನಾಟಕ ಮತ್ತು ಕೇರಳದಲ್ಲಿಯೂ ಬಿಜೆಪಿಗೆ ಮತಹಾಕುವವರಲ್ಲಿ ಹೆಚ್ಚಿನವರು ಮತಗಟ್ಟೆಗಳಿಗೆ ಬಂದಿಲ್ಲ ಎನ್ನಲಾಗಿದ್ದು, ಬಿಜೆಪಿಗೆ ಮತ್ತಷ್ಟು ಆತಂಕ ತಂದೊಡ್ಡಿದೆ. ಕರ್ನಾಟಕದಲ್ಲಿ ಬಿಜೆಪಿ ಮತ್ತು ಬ್ರಾಹ್ಮಣರಲ್ಲಿ ವಾಗ್ಮಿ ಎಂದೇ ಕರೆಸಿಕೊಂಡಿರುವ ತೇಜಸ್ವಿ ಸೂರ್ಯ ಸಂಸದನಾಗಿರುವ ಮತ್ತು ಬಿಜೆಪಿ ಅಭ್ಯರ್ಥಿಯೂ ಆಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೇವಲ 53.70% ಮತದಾನವಾಗಿದ್ದು, ಇಡೀ ದೇಶದಲ್ಲಿಯೇ ಅತೀ ಕಡಿಮೆ ಮತದಾರರು ಮತ ಚಲಾಯಿಸಿದ್ದಾರೆ. ಇದು ಬಿಜೆಪಿ ವಿರುದ್ಧದ ಅಸಮಾಧಾನಕ್ಕೆ ಹಿಡಿದ ಕನ್ನಡಿಯಾಗಿದೆ.
ಜೊತೆಗೆ, ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ವಿರುದ್ದ ಕೂಡ ಮಂಡ್ಯ ಮತ್ತು ಹಾಸನದಲ್ಲಿ ಭಾರೀ ವಿರೋಧವಿದೆ. ಅದರಲ್ಲೂ, ಹಾಸನದಲ್ಲಿ ಪ್ರಭಾವಿ ಯುವ ನಾಯಕನೊಬ್ಬನ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹೊರಬಂದ ಬಳಿಕ, ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದು, ರಾಜ್ಯದಲ್ಲಿ ಬಿಜೆಪಿ ಸೋಲನ್ನು ಸೂಚಿಸುತ್ತಿದೆ.
ಕೇರಳದಲ್ಲಿ ಎನ್‌ಡಿಎ ಮೂರನೇ ಸ್ಥಾನದಲ್ಲಿದ್ದು, ಅದು ಮೇಲೇರುವುದು ಕಷ್ಟ ಎಂಬುದು ಖಚಿತವಾಗಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಿ, ಎನ್‌ಸಿಪಿ ಮತ್ತು ಶಿವಸೇನೆಯನ್ನು ಇಬ್ಬಾಗ ಮಾಡಿ, ಅಧಿಕಾರ ಪಡೆದಿರುವ ಬಿಜೆಪಿ ವಿರುದ್ಧ ಜನಾಕ್ರೋಶವಿದ್ದು, ಅಲ್ಲಿಯೂ ಬಿಜೆಪಿ ಈ ಹಿಂದೆ ಗೆದ್ದಿದ್ದಷ್ಟೂ ಸ್ಥಾನಗಳನ್ನು ಉಳಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ.
ಮಣಿಪುರದಲ್ಲಿ ಮೈಥೇರಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ ಎಂಬ ಆರೋಪಗಳಿವೆ. ಅಲ್ಲಿ ಮತದಾರರು, ಅದರಲ್ಲೂ ಬಿಜೆಪಿಯ ಓಟ್ ಬ್ಯಾಂಕ್ ಆಗಿದ್ದ ಪ್ರಬಲ ಸಮುದಾಯ ಮೈಥೇಯಿಗಳು ಮತದಾನದಿಂದ ದೂರವಿದ್ದಾರೆ ಎನ್ನಲಾಗಿದೆ. ಅಸ್ಸಾಂನಲ್ಲಿಯೂ ಸಿಎಎ ವಿರೋಧಿ ಅಲೆಯು ಮತದಾರರನ್ನು ಮತಗಟ್ಟೆಯಿಂದ ದೂರ ಉಳಿಯುವಂತೆ ಮಾಡಿದೆ.
ಈ ಎಲ್ಲ ಪರಿಸ್ಥಿತಿಗಳು ಬಿಜೆಪಿಯಲ್ಲಿ ಆತಂಕವನ್ನು ಸೃಷ್ಟಿಸಿದೆ. ಸೋಲಿನ ಭೀತಿಯನ್ನು ಹೆಚ್ಚಿಸಿದೆ. ಮೋದಿ ಅವರು ‘ಚಾರ್ ಸವ್ ಪಾರ್’ ಘೋಷಣೆಯನ್ನು ಅವರು ಗಂಟಿನಲ್ಲಿಯೇ ಅದುಮಿಟ್ಟುಕೊಳ್ಳುವಂತೆ ಮಾಡಿದೆ. ಇನ್ನೂ 5 ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 4ರ ಫಲಿತಾಂಶ ಏನಾಗಲಿದೆ. ಚುನಾವಣಾ ಕಣ ಉತ್ತರ ನೀಡಲಿದೆ.




