ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಮಾಡಿ ಎಂದು ಆಗ್ರಹಿಸಿ 31 ಶಾಸಕರು ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದಾರೆ. ಮೊದಲ ಬಾರಿ ಆಯ್ಕೆಯಾಗಿರುವ ಶಾಸಕರು ಈ ಮನವಿ ಪತ್ರವನ್ನು ಬರೆದಿದ್ದು, ಆದಷ್ಟು ಬೇಗ ಸಂಪುಟ ಪುನಾರಚನೆ ಮಾಡಿ ಎಂದು ಆಗ್ರಹಿಸಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಈ ಪತ್ರವನ್ನು ಬರೆಯಲಾಗಿದೆ. ಪತ್ರದಲ್ಲಿ ದಿನಾಂಕ ಉಲ್ಲೇಖ ಮಾಡಿಲ್ಲ. ಆದರೆ 31 ಶಾಸಕರ ಸಹಿ ಇದೆ. ಈ ಪತ್ರ ಇದೀಗ ವೈರಲ್ ಆಗುತ್ತಿದೆ.
ಕಾಂಗ್ರೆಸ್ ನಲ್ಲಿ 31 ಶಾಸಕರು ಹೊಸದಾಗಿ ಗೆದ್ದಿದ್ದೇವೆ. ಬೇರೆ ರಾಜ್ಯಗಳಲ್ಲಿ ಮೊದಲ ಬಾರಿಗೆ ಗೆದ್ದವರು ಸಿಎಂ ಆಗಿದ್ದಾರೆ. ಮೊದಲ ಬಾರಿ ಗೆದ್ದ ಶಾಸಕರಿಗೂ ಸಚಿವ ಸ್ಥಾನ ನೀಡಿ ಅವಕಾಶ ಕೊಡಬೇಕು ಎಂದು ಮನವಿ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಶೋಯೆಬ್ ಖಾನ್ | ಬಿಹಾರದ ಕುಗ್ರಾಮದಿಂದ ಯುಎಇ ವಿಶ್ವಕಪ್ ತಂಡದವರೆಗೆ ರೋಚಕ ಪಯಣ
ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆದವರಿಗೆ ಸಂಪುಟದಲ್ಲಿ ಅವಕಾಶ ನೀಡುವುದು ಅಗತ್ಯವಾಗಿದೆ. ಇದರಿಂದ ಯುವ ಮುಖಗಳಿಗೆ ಅವಕಾಶ ಸಿಕ್ಕಂತಾಗುತ್ತದೆ. ಹೀಗಾಗಿ ಈ ಬಾರಿ ಸಂಪುಟ ಪುನಾರಚನೆ ಆದಲ್ಲಿ ಕನಿಷ್ಠ ಪಕ್ಷ ಐದು ಮಂದಿಗೆ ಅವಕಾಶ ನೀಡಬೇಕು. ನಾವು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ಧರಾಗಿದ್ದೇವೆ. 2028 ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತಕ್ಕೆ ಬರಬೇಕಾಗಿದೆ. ಹಾಗಾಗಿ ಸಂಪುಟದಲ್ಲಿ ಯುವ ಮುಖಗಳಿಗೆ ಅವಕಾಶ ನೀಡಬೇಕು ಎಂದು ಉಲ್ಲೇಖ ಮಾಡಲಾಗಿದೆ.
ನಾಯಕತ್ವ ಬದಲಾವಣೆ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಕೆ ಎನ್ ರಾಜಣ್ಣ ದೆಹಲಿಗೆ ತೆರಳಿದ್ದರು. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದರು. ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಈ ನಡುವೆ ಶಾಸಕರು ಹೈಕಮಾಂಡ್ ನಾಯಕರಿಗೆ ಪತ್ರಬರೆದಿದ್ದಾರೆ.





