ಉತ್ತರಾಖಂಡದ ಸಹಕಾರಿ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ33ರಷ್ಟು ಮೀಸಲಾತಿ ನೀಡುವ ಆದೇಶವನ್ನು ಅಲ್ಲಿನ ಸರ್ಕಾರ ಶನಿವಾರ ಹೊರಡಿಸಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದೀಗ, ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವು ಸಹಕಾರಿ ಸಂಸ್ಥೆಗಳಲ್ಲಿ ಪುರುಷರ ಪ್ರಾಬಲ್ಯವನ್ನು ಕೊನೆಗೊಳಿಸಲಿದೆ ಎಂದು ಸರ್ಕಾರವು ಅಧಿಕೃತ ಪ್ರಕಟಣೆ ತಿಳಿಸಿದೆ.
ಸರ್ಕಾರದ ಆದೇಶವು ರಾಜ್ಯದ 10 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು, 670 ವಿವಿಧೋದ್ದೇಶ ಸಹಕಾರ ಸಂಘಗಳು ಮತ್ತು ಇತರ ಉನ್ನತ ಸಹಕಾರಿ ಸಂಸ್ಥೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಉತ್ತರಾಖಂಡ ರಾಜ್ಯ ಸಹಕಾರಿ ಬ್ಯಾಂಕ್, ರಾಜ್ಯ ಸಹಕಾರ ಮಹಾಮಂಡಳಿ, ಗೃಹ ನಿರ್ಮಾಣ ಮತ್ತು ನಿರ್ಮಾಣ ಸಹಕಾರ ಒಕ್ಕೂಟ, ಪ್ರಾದೇಶಿಕ ಸಹಕಾರ ಸಂಘ, ಗ್ರಾಹಕ ಸಹಕಾರ ಒಕ್ಕೂಟ, ರೇಷ್ಮೆ ಒಕ್ಕೂಟ ಮುಂತಾದವುಗಳಲ್ಲಿಯೂ ಮಹಿಳೆಯರಿಗೆ ಕೋಟಾ ಸಿಗಲಿದೆ ಎಂದು ಸರ್ಕಾರ ಹೇಳಿದೆ.
ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಉತ್ತರಾಖಂಡ ಸರ್ಕಾರ ಸಾಗುತ್ತಿದೆ ಎಂಬುದನ್ನು ಈ ಐತಿಹಾಸಿಕ ನಿರ್ಧಾರವು ಸಾಬೀತುಪಡಿಸುತ್ತದೆ ಎಂದು ರಾಜ್ಯ ಸಹಕಾರಿ ಸಚಿವ ಧನ್ ಸಿಂಗ್ ರಾವತ್ ಹೇಳಿದ್ದಾರೆ.




