ಬಿಹಾರ ಚುನಾವಣೆಗೂ ಮುನ್ನ ಕೆಲವು ರಾಜಕೀಯ ಬದಲಾವಣೆಗಳು ನಡೆಯುತ್ತಿದ್ದು ಇದೀಗ ಬಂಡಾಯ ಎಲ್‌ಜೆಪಿ ರಚನೆ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಖಗಾರಿಯಾ ಜಿಲ್ಲೆಯಲ್ಲಿ ಎಲ್‌ಜೆಪಿಯ 38 ನಾಯಕರು ರಾಜೀನಾಮೆ ನೀಡಿದ್ದಾರೆ. ಬಂಡಾಯ ಬಣ ಬಿಹಾರದಲ್ಲಿ ಶೀಘ್ರವೇ ತನ್ನದೇ ಆದ ಪಕ್ಷವನ್ನು ರಚಿಸಲಿದೆ ಎಂದು ಮಾಜಿ ಲೋಕ ಜನಶಕ್ತಿ ಪಕ್ಷದ (ರಾಮ್-ವಿಲಾಸ್) ನಾಯಕ ಶಿವರಾಜ್ ಯಾದವ್ ಶನಿವಾರ ಘೋಷಿಸಿದ್ದಾರೆ.
ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಯಾದವ್, “ಖಗಾರಿಯಾ ಜಿಲ್ಲೆಯ ಎಲ್ಲಾ ಕಾರ್ಯಕರ್ತರು, 38 ನಾಯಕರು, ಬ್ಲಾಕ್ ಅಧ್ಯಕ್ಷರು, ಪಂಚಾಯತ್ ಅಧ್ಯಕ್ಷರು ಸೇರಿದಂತೆ ಕಾರ್ಯಕರ್ತರು ಎಲ್ಲರೂ ರಾಜೀನಾಮೆ ನೀಡಿದ್ದಾರೆ. ಇಡೀ ಜಿಲ್ಲಾ ಸಮಿತಿಯೇ ರಾಜೀನಾಮೆ ನೀಡಿದೆ. ಆದ್ದರಿಂದ, ಖಗಾರಿಯಾ ಈಗ ಶೂನ್ಯ. ಈಗ ನಾವು ತಳಮಟ್ಟದಿಂದ ಪುನರ್ನಿರ್ಮಿಸುತ್ತಿದ್ದೇವೆ. ನಾವು ಬಂಡಾಯ ಲೋಕ ಜನಶಕ್ತಿ ಪಕ್ಷವನ್ನು ರಚಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಬಿಹಾರದಲ್ಲಿ ಅದೇ ರೀತಿ ಆಗಲು ಬಿಡಲ್ಲ: ರಾಹುಲ್ ಗಾಂಧಿ
ಖಗಾರಿಯಾ ಜಿಲ್ಲಾ ಅಧ್ಯಕ್ಷರಾಗಿದ್ದ ಎಲ್‌ಜೆಪಿಯ ಯಾದವ್, ಚಿರಾಗ್ ಪಾಸ್ವಾನ್ ಅವರ ಪಕ್ಷಕ್ಕಾಗಿ ತಾವು ಮಾಡಿದ ತ್ಯಾಗಗಳನ್ನೂ ಈ ವೇಳೆ ನೆನಪಿಸಿಕೊಂಡಿದ್ದಾರೆ. “ಎಲ್ಲವೂ ಕುಸಿದು ಬಿದ್ದಾಗ ನಾನು ಪಕ್ಷದ ಪರವಾಗಿ ನಿಂತಿದ್ದೆ. ಜನರು ಲೋಕ ಜನಶಕ್ತಿ ಪಕ್ಷದ ಬಗ್ಗೆ ಮರೆತಿದ್ದರು. ಹೆಸರೇ ಮಾಯವಾಗಿತ್ತು. ಖಗಾರಿಯಾದಲ್ಲಿ, ಅವರ ಹೆಸರನ್ನು ಹೇಳಲು ಯಾರೂ ಇರಲಿಲ್ಲ. ಆ ಕ್ಷಣದಲ್ಲಿ, ನಾನು ಮಾತ್ರ ಅವರೊಂದಿಗಿದ್ದೆ” ಎಂದಿದ್ದಾರೆ.
ಹಾಗೆಯೇ ಖಗಾರಿಯಾ ಲೋಕಸಭಾ ಸಂಸದ ರಾಜೇಶ್ ವರ್ಮಾ ಅವರನ್ನು ದುರಂಹಕಾರಿ ಮತ್ತು ಅಧಿಕಾರದ ದುರುಪಯೋಗ ಮಾಡುವ ವ್ಯಕ್ತಿ ಎಂದು ಹೇಳಿಕೊಂಡಿರುವ ಶಿವರಾಜ್ ಯಾದವ್, “ಪಕ್ಷ ಮತ್ತು ಪಕ್ಷದ ನಾಯಕರು ನನಗೆ ದ್ರೋಹ ಬಗೆದಿದ್ದಾರೆ. ಸ್ಥಳೀಯ ಸಂಸದರು ನನಗೆ ದ್ರೋಹ ಬಗೆದರು. ಸಂಸದರು ಸಹ ಪಾಸ್ವಾನ್‌ಗಳನ್ನು ಅವಮಾನಿಸುತ್ತಾರೆ. ನಮ್ಮ ಸಮಿತಿಯ ಶೇಕಡ 80ರಷ್ಟು ಕಾರ್ಯಕರ್ತರು ಪಾಸ್ವಾನ್‌ಗಳು. ಸ್ಥಳೀಯ ಸಂಸದ ರಾಜೇಶ್ ವರ್ಮಾ ಅವರೆಲ್ಲರನ್ನೂ ನಿಂದಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಬಿಹಾರದಲ್ಲಿ ಚುನಾವಣೆ ನಡೆಯಲಿರುವ ನಡುವೆ ಈ ಬೆಳವಣಿಗೆ ಕಂಡುಬಂದಿದೆ. ಅಕ್ಟೋಬರ್‌ನಿಂದ ನವೆಂಬರ್ ನಡುವೆ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪ್ರಸ್ತುತ 243 ಸದಸ್ಯರ ಬಿಹಾರ ವಿಧಾನಸಭೆಯಲ್ಲಿ, ಎನ್‌ಡಿಎ ಒಕ್ಕೂಟ 131 ಸ್ಥಾನಗಳನ್ನು ಹೊಂದಿದ್ದು, ಬಿಜೆಪಿ (80), ಜೆಡಿ(ಯು) (45), ಎಚ್‌ಎಎಂ(ಎಸ್) (4), ಮತ್ತು 2 ಸ್ವತಂತ್ರರ ಅಭ್ಯರ್ಥಿಗಳು. ವಿಪಕ್ಷ ಇಂಡಿಯಾ ಒಕ್ಕೂಟವು 111 ಸ್ಥಾನಗಳನ್ನು ಹೊಂದಿದ್ದು, ಇದರಲ್ಲಿ ಆರ್‌ಜೆಡಿ (77), ಕಾಂಗ್ರೆಸ್ (19), ಸಿಪಿಐ (ಎಂಎಲ್) (11), ಸಿಪಿಐ (ಎಂ) (2), ಮತ್ತು ಸಿಪಿಐ (2) ಸೇರಿವೆ.





