ಮಧ್ಯಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಮೊದಲ ಹಂತವು ಮಂಗಳವಾರ ಪೂರ್ಣಗೊಂಡಿದ್ದು, 230 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯಿಂದ 42.74 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.
2003ರ ಮತದಾರರ ಪಟ್ಟಿಯಲ್ಲಿ ಪೋಷಕರು ಅಥವಾ ಅಜ್ಜ-ಅಜ್ಜಿಯರ ವಿವರಗಳು ಕಂಡುಬಂದಿಲ್ಲವಾದ್ದರಿಂದ ಒಟ್ಟು 8,65,832 ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಲಾಗಿದೆ. ಪಟ್ಟಿಯಿಂದ ತೆಗೆದುಹಾಕಲಾದ 42.74 ಲಕ್ಷಕ್ಕೂ ಹೆಚ್ಚು ಮತದಾರರಲ್ಲಿ 19.19 ಲಕ್ಷ ಪುರುಷರು ಮತ್ತು 23.64 ಲಕ್ಷ ಮಹಿಳೆಯರು.
ಇದನ್ನು ಓದಿದ್ದೀರಾ? Breaking News | ಆಳಂದ ಮತದಾರರ ಪಟ್ಟಿ ಅಕ್ರಮ; ತನಿಖೆಗೆ ಎಸ್‌ಐಟಿ ರಚನೆ ಸಾಧ್ಯತೆ
ಹೆಸರು ನೋಂದಾಯಿಸದ 8.65 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ನೀಡಲಾಗುವುದು. 2026ರ ಫೆಬ್ರವರಿ 21ರಂದು ಪ್ರಕಟವಾಗುವ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಲು ಮತ್ತು 13 ದಾಖಲೆಗಳಲ್ಲಿ ಯಾವುದಾದರೂ ಒಂದರೊಂದಿಗೆ ವೈಯಕ್ತಿಕವಾಗಿ ಹಾಜರಾಗಲು ಅವರಿಗೆ ಒಂದು ವಾರದ ಸಮಯವನ್ನು ನೀಡಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಇನ್ನು ಈ ಬಗ್ಗೆ ಮಾತನಾಡಿದ ಮಧ್ಯಪ್ರದೇಶದ ಸಿಇಒ ಎಸ್‌ಕೆ ಝಾ, “31.51 ಲಕ್ಷ ಅಥವಾ 73% ಮತದಾರರು ಸ್ಥಳಾಂತರಗೊಂಡಿದ್ದಾರೆ, 8.46 ಲಕ್ಷ ಅಥವಾ 20% ಜನರು ಸಾವನ್ನಪ್ಪಿದ್ದಾರೆ ಮತ್ತು 2.77 ಲಕ್ಷ ಅಥವಾ 6% ಜನರು ನಕಲಿ ಮತದಾರರಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಚುನಾವಣೆಗೂ ಮುನ್ನವೇ ಬಿಹಾರದಲ್ಲಿ ತರಾತುರಿಯಲ್ಲಿ ನಡೆಸಲಾದ ಸದ್ಯ 12 ರಾಜ್ಯಗಳಲ್ಲಿ ನಡೆಸಲಾಗುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧ ಈಗಾಗಲೇ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದೆ. ಈ ಪ್ರಕ್ರಿಯೆಯ ಮೂಲಕ ದೊಡ್ಡ ಮಟ್ಟದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ದೂರಿದೆ. ಅದೂ ಮುಖ್ಯವಾಗಿ ಎಲ್ಲ ದಾಖಲೆಗಳು ಇರದ ದಲಿತರು, ಮಹಿಳೆಯರು ಮತ್ತು ವಲಸೆ ಕಾರ್ಮಿಕರಿಂದ ಮತದಾನದ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದೆ.





