‘ಹಾವನೂರು ವರದಿ’ಗೆ 50 ವರ್ಷಗಳು: ಅರಸು- ಹಾವನೂರು ಮಾಡಿದ ಮಹತ್ಕಾರ್ಯಗಳು

Date:

ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಅಭಿವೃದ್ಧಿಗಾಗಿ, ಭವಿಷ್ಯತ್ತಿನ ಬದುಕಿಗಾಗಿ ಜೀವ ತೇದ ಹಾವನೂರರನ್ನು ನೆನಪು ಮಾಡಿಕೊಳ್ಳಲು, ಹಾವನೂರು ವರದಿಗೆ 50 ವರ್ಷಗಳು ಒಂದು ನೆಪ. ಹಾವನೂರರ ಹೋರಾಟದ ಬದುಕು... ಈದಿನ ಓದುಗರಿಗಾಗಿ

ಭಾರತ ದೇಶದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. SC, ST, OBC ಜಾತಿ ಸಮುದಾಯಗಳು ಶತಶತಮಾನಗಳ ಕಾಲದಿಂದ ಎದುರಿಸಿದ, ಎದುರಿಸುತ್ತಿರುವ ಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸಲು; ದೇಶದ ಸಮಾಜದಲ್ಲಿ ಸಮಾನತೆ ತರಲು ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತ ಸಂವಿಧಾನದಲ್ಲಿ “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ತತ್ವದಡಿ, ಎಲ್ಲರಿಗೂ ಪ್ರಾತಿನಿಧ್ಯ/ಮೀಸಲಾತಿ, ಸವಲತ್ತುಗಳು, ರಕ್ಷಣೆಗಳು- ಇಂತಹ ವಿವಿಧ ‘ಸಾಧನ’ಗಳ ಅವಕಾಶ ಕಲ್ಪಿಸಿದ್ದಾರೆ. ಈ ಅವಕಾಶಗಳ ಮೂಲಕ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು- ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ (ಶಾಸನಸಭೆ) ಕ್ಷೇತ್ರಗಳಲ್ಲಿ ‘ಪ್ರಾತಿನಿಧ್ಯ/ಮೀಸಲಾತಿ’ಗಳನ್ನು ಆ ಶೋಷಿತ ಜಾತಿಗಳಿಗಾಗಿ ಜಾರಿಗೆ ತಂದಿವೆ.

ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ(OBC) (ಅಲ್ಪಸಂಖ್ಯಾತರು ಒಳಗೊಂಡಂತೆ) ಪ್ರಪ್ರಥಮ ಬಾರಿಗೆ ‘ಮೀಸಲಾತಿ’, ಜಾರಿಗೆ ತಂದಿದ್ದು 1975ರಲ್ಲಿ, ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರು. ಈ ಮೀಸಲಾತಿ ಅನುಷ್ಠಾನಕ್ಕೆ ಆಧಾರವಾಗಿದ್ದು ಎಲ್.ಜಿ. ಹಾವನೂರ ಅಧ್ಯಕ್ಷತೆಯ ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ’ದ ವರದಿ.

ಎಲ್.ಜಿ. ಹಾವನೂರ್ ಅವರ ಕಿರು ಪರಿಚಯ ಹಂಚಿಕೊಳ್ಳುವುದಾದರೆ- ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆ ಮತ್ತು ಕರ್ನಾಟಕ ಏಕೀಕರಣ ಪೂರ್ವದಲ್ಲಿ, ಮೈಸೂರು ರಾಜ್ಯದ, ಅಖಂಡ ಧಾರವಾಡ ಜಿಲ್ಲೆ ರಾಣೆಬೆನ್ನೂರಿನಲ್ಲಿ ದಿನಾಂಕ 25-3-1927ರಂದು ‘ನಾಯಕ(ವಾಲ್ಮೀಕಿ) ಜಾತಿ’ಯ, ಗೂಳಪ್ಪ ಮತ್ತು ದುರ್ಗಾದೇವಿ ದಂಪತಿಗಳಿಗೆ ಜನಿಸಿದರು. ಚಿಕ್ಕ ವಯಸ್ಸಿನಲ್ಲಿ ಶೋಷಣೆ, ಅಪಮಾನ, ತಿರಸ್ಕಾರಗಳಿಗೆ ಒಳಗಾದರು. ಧಾರವಾಡದಲ್ಲಿ ಪದವಿ ಓದುತ್ತಿರುವಾಗ ಹಾಸ್ಟೆಲ್‌ನಲ್ಲಿ ತಂಗಿದ್ದರು. ಈ ಹಾಸ್ಟೆಲ್‌ನಲ್ಲಿ ಒಂದು ಪದ್ಧತಿ ಇತ್ತು, ಅದೇನೆಂದರೆ ಮೊದಲು ಮೇಲ್ಜಾತಿಯವರಿಗೆ, ನಂತರ ಹಿಂದುಳಿದವರಿಗೆ, ಅದಾದ ಮೇಲೆ ಇತರೆಯವರು ಊಟಕ್ಕೆ ಬರಬೇಕಿತ್ತು. ಹೀಗಿರುವಾಗ, ಒಂದು ದಿನ ಹಾವನೂರುರಿಗೆ ತುಂಬಾ ಹಸಿವಾಗಿತ್ತು. ಆಗ ಮೇಲ್ಜಾತಿಯವರಿಗಿಂತ ಮೊದಲು ಇವರು ಊಟಕ್ಕೆ ಕುಳಿತರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಮೇಲ್ಜಾತಿ ಜನ ಜಗಳ ತೆಗೆದರು. ಹಾವನೂರರು ಕುಸ್ತಿಪಟು, ಕಟ್ಟುಮಸ್ತಾಗಿದ್ದರು. ಅವರ ವಿರುದ್ಧ ಕೈ ಮಾಡಲು ಹೆದರಿದ ಮೇಲ್ಮಾತಿಯವರು, ಅಡುಗೆ ಮಾಡುತ್ತಿದ್ದವನ ಮೇಲೆ ಹಲ್ಲೆ ಮಾಡಿದರು. ಇದನ್ನು ನೋಡಿದ ಹಾವನೂರರು, ಊಟ ಮಾಡುತ್ತಿದ್ದ ಎಂಜಲು ಕೈಯಲ್ಲೇ ಮೇಲ್ಜಾತಿ ಹುಡುಗರನ್ನು ಓಡಾಡಿಸಿಕೊಂಡು ಬಾರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಮನರೇಗಾ | ಲಕ್ಷಾಂತರ ಉದ್ಯೋಗ ಕಾರ್ಡ್ ರದ್ದು; ಗ್ರಾಮೀಣ ಭಾರತದ ಕತ್ತು ಹಿಸುಕುತ್ತಿರುವ ಕೇಂದ್ರ ಸರ್ಕಾರ

ಮುಂದೆ ಬೆಳಗಾವಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ನಂತರ ರಾಣೆಬೆನ್ನೂರಿಗೆ ವಾಪಸಾಗಿ ವಕೀಲಿಕೆ ಪ್ರಾರಂಭಿಸಿದರು. 1953ರಲ್ಲಿ ಬಾಂಬೆ ಹೈಕೋರ್ಟ್ ಆಫ್ ಜುಡಿಕೆಚರ್‍‌ನಲ್ಲಿ ವಕೀಲ ವೃತ್ತಿ ಮಾಡಿದರು. ಈ ವೇಳೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಂಪರ್ಕ ಪಡೆದು, ಅವರಿಂದ ಬಹಳಷ್ಟು ಪ್ರಭಾವಿತರಾದರು. ಈ ಪ್ರಭಾವದಿಂದ 1956ರಲ್ಲಿ ಮತ್ತು 1973ರಲ್ಲಿ ಕರ್ನಾಟಕ ರಾಜ್ಯವ್ಯಾಪಿ ಹಿಂದುಳಿದ ವರ್ಗಗಳ ಪ್ರಮುಖರನ್ನು ಆಹ್ವಾನಿಸಿ, ರಾಣೆಬೆನ್ನೂರಿನಲ್ಲಿ ಮತ್ತು ವಿಭಾಗೀಯ ಮಟ್ಟಗಳಲ್ಲಿ ರಾಜ್ಯಮಟ್ಟದ ಹಿಂದುಳಿದ ವರ್ಗಗಳ ಸಮ್ಮೇಳನ ಮಾಡಿದರು. ಈ ಮಧ್ಯೆ 1956ರಲ್ಲಿ ರಾಣೆಬೆನ್ನೂರು ಪುರಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಸೇವೆ ಕೂಡ ಮಾಡಿದರು.

1970ರಲ್ಲಿ ಅಂದು ಮುಖ್ಯಮಂತ್ರಿ ಆಗಿದ್ದ ವೀರೇಂದ್ರ ಪಾಟೀಲ್, ಧಾರವಾಡ ಜಿಲ್ಲೆಯ ಅಣ್ಣಿಗೇರಿ ನಗರದ ಸಭೆ ಒಂದರಲ್ಲಿ ಭಾಷಣ ಮಾಡುತ್ತಾ, IAS, IPS, ಪರೀಕ್ಷೆಗೆ ಇರುವ ಮೀಸಲಾತಿಯನ್ನು ಕಿತ್ತು ಹಾಕಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹ ಮಾಡಿದರು. ವೀರೇಂದ್ರ ಪಾಟೀಲರ ವಿರುದ್ಧ ಕೋಪವನ್ನು ಹೊರ ಹಾಕಿ, ರಾಜ್ಯವ್ಯಾಪಿ SC/ST ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ, ಜನಾಂದೋಲನಗಳನ್ನು ಮಾಡಿ ಮೀಸಲಾತಿ ಮುಂದುವರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದರು.

ಈ ಸಾಮಾಜಿಕ ಹೋರಾಟಗಳ ಮಧ್ಯೆ ವಕೀಲಿಕೆ ವೃತ್ತಿಯಲ್ಲಿ ಮುಂದುವರೆದಿದ್ದರು. ‘ಕೇಸು ಗೆಲ್ಲುವ ವಕೀಲ’ ಎಂದು ಖ್ಯಾತಿ ಪಡೆದಿದ್ದರು. ಈ ಖ್ಯಾತಿಯಿಂದ ನ್ಯಾಯಾಂಗದಲ್ಲಿ ನ್ಯಾಯಾಧೀಶರಾಗುವ ಆಹ್ವಾನ ಮೂರು ಬಾರಿ ಬಂದಿತು. ಒಮ್ಮೆ ನ್ಯಾಯಾಧೀಶರಾದರೆ ಬಡವರ ಪರ ವಕೀಲಿಕೆ ಮಾಡುವ, ನ್ಯಾಯ ಕೊಡಿಸುವ ಅವಕಾಶ ಇರುವುದಿಲ್ಲವೆಂದು ಹಾವನೂರರು ನ್ಯಾಯಾಧೀಶರಾಗುವ ಅವಕಾಶವನ್ನು ನಿರಾಕರಿಸಿದರು. 2 ವರ್ಷಗಳ ಕಾಲ ಹೈಕೋರ್ಟ್‌ನಲ್ಲಿ ‘ಸರ್ಕಾರಿ ವಕೀಲ’ರಾಗಿ ಸೇವೆ ಮಾಡಿದರು. ವಕೀಲಿಕೆ ಅವಧಿಯಲ್ಲಿಯೇ ಬೆಂಗಳೂರು ಸರ್ಕಾರಿ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ಹಾವನೂರು
ಅಂಬೇಡ್ಕರ್ ಅವರಿಂದ ಹಾವನೂರರವರೆಗೆ…

ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಬಲಾಢ್ಯ ಜಾತಿಗಳ ರಾಜಕಾರಣವನ್ನು ವಿರೋಧಿಸುತ್ತಿದ್ದ ದೇವರಾಜ ಅರಸುರವರು, 70ರ ದಶಕದಲ್ಲಿ ರಾಜ್ಯವ್ಯಾಪಿ ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರ (ಅಹಿಂದ) ಪ್ರತಿಭೆಗಳು, ಹೋರಾಟಗಾರರನ್ನು ಹುಡುಕುತ್ತಿದ್ದರು. ಆ ವೇಳೆಯಲ್ಲಿ ದೇವರಾಜ ಅರಸು ಅವರ ಕಣ್ಣಿಗೆ ಈ ಹಾವನೂರು ಬಿದ್ದರು.

ವಾಲ್ಮೀಕಿ ಜಾತಿಯವರಾಗಿದ್ದರೂ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಕಲ್ಯಾಣ, ಅಭಿವೃದ್ಧಿ ಬಗ್ಗೆ ಹಾವನೂರರಿಗೆ ಇದ್ದ ಚಿಂತನೆ, ಭಾರತ ಸಂವಿಧಾನದ ಜ್ಞಾನ, ನಿಷ್ಠೆ ಮತ್ತು ಸಾಮಾಜಿಕ ಹೋರಾಟಗಳನ್ನು ಗುರುತಿಸಿ, ದೇವರಾಜ ಅರಸು ಅವರು 1972ರಲ್ಲಿ ಹಾವನೂರು ಅವರನ್ನು ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ’ದ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಈ ಆಯೋಗದ ಕಾರ್ಯವನ್ನು ಪ್ರಾರಂಭಿಸಿದಾಗ, ಸರ್ಕಾರದಲ್ಲಿದ್ದ ಮೇಲ್ಜಾತಿಯ ಅಧಿಕಾರಿಗಳು ಮಾಹಿತಿಗಳನ್ನು ನೀಡಲು ವಿಳಂಬ ಮಾಡುವುದು, ಉದಾಸೀನತೆ ತೋರುವುದು ಮಾಡಿದರು. ಇದನ್ನು ಗಮನಿಸಿದ ಹಾವನೂರು ಸಾಹೇಬರು ಅಂದು ಮುಖ್ಯಮಂತ್ರಿ ಆಗಿದ್ದ ದೇವರಾಜ ಅರಸು ಅವರನ್ನು ಭೇಟಿಯಾಗಿ, CrPC ಅಧಿಕಾರಗಳನ್ನು ಪಡೆದರು. ಅಲ್ಲಿಂದ ಸಮನ್ಸ್, ವಾರಂಟ್ ಮೂಲಕ ಅಧಿಕಾರಿಗಳನ್ನು ಕರೆಸುವ, ಮಾಹಿತಿಗಳನ್ನು ತರಿಸಿಕೊಳ್ಳುವ ಕಾರ್ಯಗಳನ್ನು ಮಾಡಿದರು. ಜೊತೆಗೆ ರಾಜ್ಯವ್ಯಾಪಿ ಅಂದಾಜು 185 ನಗರ/ಪಟ್ಟಣ ಪಂಚಾಯಿತಿ ಪ್ರದೇಶಗಳನ್ನು ಹಾಗೂ 193 ಗ್ರಾಮಗಳನ್ನು ಸುತ್ತಾಡಿದರು. ಹಗಲು ರಾತ್ರಿ ಶ್ರಮವಹಿಸಿ ದಿನಾಂಕ: 19-11-1975ರಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಯನ ವರದಿ(ಹಾವನೂರ್ ವರದಿ)ಯನ್ನು ಸರ್ಕಾರಕ್ಕೆ ನೀಡಿದರು. ಈ ವರದಿಯನ್ನು ಓದಿದ ಮುಖ್ಯಮಂತ್ರಿ ದೇವರಾಜ ಅರಸು ಅವರು “ಈ ಹಾವನೂರು ವರದಿ ಹಿಂದುಳಿದ ವರ್ಗಗಳ ಬೈಬಲ್” ಎಂದರು.

ಈ ಹಿಂದಿನಂತೆ ಮೇಲ್ವರ್ಗದವರು, ಬಲಾಢ್ಯ ಜಾತಿಗಳು ಹಾವನೂರ್ ಅವರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ವಿರೋಧಿಸಿದರು. ಹೋದಲ್ಲಿ ಬಂದಲ್ಲಿ ಹಾವನೂರು ಕಾರಿಗೆ ಕಲ್ಲು ಒಡೆದರು. ರಾಜ್ಯದಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಿಸಿ, ಮುಷ್ಕರ, ಪ್ರತಿಭಟನೆ ಮಾಡಿದರು. ಸರ್ಕಾರ, ಸಚಿವ ಸಂಪುಟ ಮತ್ತು ಶಾಸನಸಭೆಗಳಲ್ಲಿ ವರದಿ ಅನುಷ್ಠಾನ ತಡೆಯಲು ಒತ್ತಡ ಹಾಕಿದರು. ಇದಕ್ಕೆಲ್ಲ ಬಗ್ಗದೆ ಈ ಸಂಘರ್ಷಗಳ ನಡುವೆಯೇ ದೇವರಾಜ ಅರಸು ಅವರು ಈ ಹಾವನೂರು ವರದಿಯನ್ನು ಅಂಗೀಕರಿಸಿ, ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಹಿಂದುಳಿದ ವರ್ಗ(ಅಲ್ಪಸಂಖ್ಯಾತರು ಒಳಗೊಂಡಂತೆ)ಗಳಿಗೆ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಜಾರಿ ಮಾಡಿದರು. ಇದನ್ನು ಮೇಲ್ವರ್ಗದವರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರು. ನ್ಯಾಯಾಧೀಶರು ಹಾವನೂರು ಅವರ ಅಧ್ಯಯನ ವರದಿಯನ್ನು ಓದಿ, ನ್ಯಾಯಾಲಯದಲ್ಲಿಯೇ “ಹಾವನೂರು ಒಂದು ವೇಳೆ ಮೇಲ್ವರ್ಗದಲ್ಲಿ ಅಥವಾ ಬೇರೆ ದೇಶದಲ್ಲಿ ಜನಿಸಿದ್ದರೆ, ಅವರ ಮೂರ್ತಿಯನ್ನು ಅಮೃತ ಶಿಲೆಯಲ್ಲಿ ಸ್ಥಾಪಿಸುತ್ತಿದ್ದರು” ಅಂತ ಬಣ್ಣಿಸಿ, ಮೇಲ್ವರ್ಗದವರ ಅರ್ಜಿ ವಜಾಗೊಳಿಸಿ, ದೇವರಾಜ ಅರಸು ಸರ್ಕಾರ ಘೋಷಣೆ ಮಾಡಿದ್ದ ಹಿಂದುಳಿದ ವರ್ಗಗಳ ಮೀಸಲಾತಿ ಆದೇಶವನ್ನು ಎತ್ತಿ ಹಿಡಿದರು. ಮೇಲ್ವರ್ಗದವರು ಇಷ್ಟಕ್ಕೆ ಸುಮ್ಮನಾಗದೆ ಮುಂದುವರೆದು, ಸುಪ್ರೀಂ ಕೋರ್ಟಿಗೆ ಹೋಗಿ ಮೇಲ್ಮನವಿ ಸಲ್ಲಿಸಿದರು. ಅಲ್ಲೂ ಕೂಡ “ಹಾವನೂರು ವರದಿ ಹಿಂದುಳಿದ ವರ್ಗಗಳ ಸಮಗ್ರ ವೈಜ್ಞಾನಿಕ ಅಧ್ಯಯನ ವರದಿ ಆಧರಿಸಿದೆ” ಎಂದು ಮೇಲ್ವರ್ಗದವರ ದಾವೆಯನ್ನು ವಜಾಗೊಳಿಸಿತು. ಮೇಲ್ವರ್ಗದವರಿಗೆ ಇದರಿಂದ ಭಾರಿ ಮುಖಭಂಗವಾಯಿತು.

ಕರ್ನಾಟಕ ರಾಜ್ಯದಲ್ಲಿ ಅಂದಿನಿಂದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಬಹಳಷ್ಟು ಹಿಂದುಳಿದ ವರ್ಗಗಳು (ಅಲ್ಪಸಂಖ್ಯಾತರು ಒಳಗೊಂಡಂತೆ) ಮೊದಲ ಬಾರಿಗೆ ಮೀಸಲಾತಿ ಅವಕಾಶಗಳನ್ನು ಪಡೆದರು. ತಮ್ಮ ಬದುಕುಗಳನ್ನು ಉತ್ತಮ ಪಡಿಸಿಕೊಂಡರು. ಸಾಕಷ್ಟು ಅಭಿವೃದ್ಧಿ ಹೊಂದಿದರು. ಮುಂದೆ ಕೇಂದ್ರ ಸರ್ಕಾರ ಬಿ.ಪಿ.ಮಂಡಲ್ ಹಿಂದುಳಿದ ವರ್ಗಗಳ ಆಯೋಗವನ್ನು ರಚನೆ ಮಾಡಿದಾಗ, ಆ ಆಯೋಗ ಕೂಡ ಹಾವನೂರು ವರದಿಯನ್ನು ವ್ಯಾಪಕವಾಗಿ ಉಲ್ಲೇಖ ಮಾಡಿತು. ಭಾರತದ ವಿವಿಧ ರಾಜ್ಯಗಳ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಮಾರ್ಗಸೂಚಿಗಳನ್ನು ಈ ವರದಿ ತಿಳಿಸಿತು. ಅಷ್ಟು ಖ್ಯಾತಿಯನ್ನು ಈ ವರದಿ ಪಡೆದಿತ್ತು.

ಇದನ್ನು ಓದಿದ್ದೀರಾ?: ನಿಷ್ಪಕ್ಷಪಾತವಲ್ಲದ ಚುನಾವಣಾ ಆಯೋಗ ದೇಶಕ್ಕೆ ಅಪಾಯಕಾರಿ

ಮುಂದೆ, ಹಾವನೂರು ಅವರ ಪ್ರತಿಭೆ, ಶ್ರಮವನ್ನು ರಾಜ್ಯದ ಅಭ್ಯುದಯಕ್ಕೆ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ದೇವರಾಜ ಅರಸು ಅವರು ಹಾವನೂರ್ ಅವರನ್ನು 1977ರಿಂದ 1978 ಅವಧಿಗೆ ರಾಜ್ಯಸಭಾ ಸಂಸತ್ ಸದಸ್ಯರನ್ನಾಗಿ ಆಯ್ಕೆ ಮಾಡಿದರು; ನಂತರ 1978ರಲ್ಲಿ ಅರಸು ಅವರು ತಮ್ಮ ಮಂತ್ರಿಮಂಡಲದಲ್ಲಿ ಹಾವನೂರು ಅವರನ್ನು ಕಾನೂನು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರನ್ನಾಗಿ ನೇಮಕ ಮಾಡಿದರು.

ಹಾವನೂರು ಅವರು ಸಚಿವರಾಗಿದ್ದಾಗ…

  1. ದಲಿತರಿಗೆ ಗ್ರಾಂಟ್ ಮಾಡಿದ್ದ ಜಮೀನುಗಳನ್ನು ಮಾರಾಟ ಮಾಡಲು ಅವಕಾಶವಿಲ್ಲದಂತೆ; ಒಂದು ವೇಳೆ ಮಾರಾಟ ಮಾಡಿದ್ದರೆ ಆ ಜಮೀನನ್ನು ವಾಪಸ್ ದಲಿತರಿಗೆ ಹಿಂದಿರುಗಿಸುವಂತೆ PTCL ಕಾಯ್ದೆ ಜಾರಿಗೆ ತಂದರು. ಇದರಿಂದ ಲಕ್ಷಾಂತರ ದಲಿತರಿಗೆ ಅವರ ಪೂರ್ವಜರು ಮಾರಿಕೊಂಡಿದ್ದ ಭೂಮಿ ಮರಳಿ ದೊರೆಯಿತು.
  2. ರಾಜ್ಯದಲ್ಲಿ ದಲಿತರಿಗೆ ಪ್ರಥಮ ಬಾರಿಗೆ ಉದ್ಯೋಗದಲ್ಲಿ ಬಡ್ತಿ ಮೀಸಲಾತಿಯನ್ನು ಜಾರಿಗೆ ತಂದರು. ಇದರಿಂದ ಸರ್ಕಾರಿ ಉದ್ಯೋಗದಲ್ಲಿ ಸಾವಿರಾರು ದಲಿತರು ಉನ್ನತ ಹುದ್ದೆಗೇರಲು ಸಹಾಯವಾಯಿತು.
  3. ರಾಜ್ಯವ್ಯಾಪಿ, 2 ಸಾವಿರಕ್ಕೂ ಹೆಚ್ಚು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್‌ಗಳನ್ನು ತೆರೆದರು. ಇದರಿಂದ ಸಾವಿರಾರು ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳು ರಾಜ್ಯದಲ್ಲಿ ಹಾಸ್ಟೆಲ್ ಸೌಲಭ್ಯ ಮತ್ತು ಶಿಕ್ಷಣ ಪಡೆದರು.
  4. ತಾಲೂಕು ಮತ್ತು ಜಿಲ್ಲಾ ನ್ಯಾಯಾಧೀಶರ ಹುದ್ದೆಗಳ ನೇಮಕದಲ್ಲಿ ಮೀಸಲಾತಿ ಜಾರಿಗೆ ತಂದರು.
  5. ಬಡವರಿಗೆ ‘ಉಚಿತ ಕಾನೂನು ಸೇವೆ’ ಜಾರಿಗೆ ತಂದರು.

    …ಹೀಗೆ ಬಹಳ ಕಡಿಮೆ ಅವಧಿಯಲ್ಲಿ ಜನಪರ ಕೆಲಸಗಳನ್ನು ಅದರಲ್ಲೂ ಧಮನಿತರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಕಲ್ಯಾಣವನ್ನು, ಅಭಿವೃದ್ಧಿಯನ್ನು ಹಾವನೂರು ಮಾಡಿದರು.

1979/1980ರಲ್ಲಿ ಬೆಲ್ ಗ್ರೇಡ್ (ಯುಗೋಸ್ಲಾವಿಯ) ಮತ್ತು ಬರ್ಲಿನ್ (ಜರ್ಮನಿ) ದೇಶಗಳಲ್ಲಿ ನಡೆದ ‘ಅಂತಾರಾಷ್ಟ್ರೀಯ ಕಾನೂನು ಸಮ್ಮೇಳನ’ಕ್ಕೆ ಭಾರತದ ಪ್ರತಿನಿಧಿಯಾಗಿ ಹಾವನೂರು ಪಾಲ್ಗೊಂಡಿದ್ದರು.

ಅರಸು ಹಾವನೂರು
ದೇವರಾಜ ಅರಸು ಮತ್ತು ಎಲ್.ಜಿ. ಹಾವನೂರು

1980ರಲ್ಲಿ ಕಾಂಗ್ರೆಸ್ ಪಕ್ಷದ ಒಳಗೆ ಒಡಕು ಉಂಟಾಗಿ ದೇವರಾಜ ಅರಸು ಅವರನ್ನು ಪಕ್ಷದಿಂದ ಉಚ್ಚಾಟಿಸಿ, ಕಾಂಗ್ರೆಸ್ ಪಕ್ಷ ಬ್ರಾಹ್ಮಣ ಆರ್.ಗುಂಡೂರಾವ್ ಅವರನ್ನು ಮುಖ್ಯಮಂತ್ರಿ ಮಾಡಿದರು. ಆಗ ಹಾವನೂರ್ ಮಂತ್ರಿ ಪದವಿಗೆ ಆಸೆ ಪಡದೆ, ನಿಷ್ಠೆಗಾಗಿ ವಿಧಾನ ಪರಿಷತ್ತು ಶಾಸಕ ಸ್ಥಾನಕ್ಕೆ ಕೂಡ 1981ರಲ್ಲಿ ರಾಜೀನಾಮೆ ನೀಡಿ, ಅಧಿಕಾರ ಇಲ್ಲದ ದೇವರಾಜ ಅರಸು ಹಿಂದೆ ಸಾಗಿದರು.

ಯಾವೊಂದು ಅಧಿಕಾರ ಇಲ್ಲದೆ, ವಕೀಲಿಕೆ ಮಾಡುತ್ತಿದ್ದ ಅವಧಿ 1991ರಲ್ಲಿ ಆಹ್ವಾನದ ಮೇರೆಗೆ ಹಾವನೂರರು ದಕ್ಷಿಣ ಆಫ್ರಿಕಾಗೆ ತೆರಳಿ, ದಕ್ಷಿಣ ಆಫ್ರಿಕಾ ದೇಶದ ಸಂವಿಧಾನ ರಚನೆ ಕಾರ್ಯದಲ್ಲಿ ಪ್ರಮುಖ ಕಾರ್ಯ ನಿರ್ವಹಿಸಿ, ಅಲ್ಲಿನ “ಸಂವಿಧಾನ ಶಿಲ್ಪಿ” ಆಗಿ ಹೆಸರಾದರು.

ಇದನ್ನು ಓದಿದ್ದೀರಾ?: ಬಿಹಾರ | ಮತದಾನಕ್ಕೆ ಮೊದಲೇ ದೈತ್ಯ ಗೆಲುವಿನ ಜನಾದೇಶ ಬಿಜೆಪಿ ಜೋಳಿಗೆಯಲ್ಲಿತ್ತೇ?

ಹಾವನೂರ, ರಾಜ್ಯದಲ್ಲಿ ಪ್ರತಿಭೆ ಇರುವ ದಲಿತ, ಹಿಂದುಳಿದ ವರ್ಗಗಳ ಬಹುತೇಕರಿಗೆ ಆಶ್ರಯ ನೀಡಿ, ಜ್ಞಾನ, ಧೈರ್ಯಗಳನ್ನು ನೀಡಿ, ಕಾನೂನು, ಸಮಾಜ ಸೇವೆ ಕ್ಷೇತ್ರಗಳಲ್ಲಿ ಅನೇಕರನ್ನು ಬೆಳೆಸಿದ್ದಾರೆ; ಹೀಗೆ ಅವರ ನೆರಳಿನಲ್ಲಿ ಬೆಳೆದ ಪ್ರಮುಖರಲ್ಲಿ, ಹಾಲಿ ಹಿರಿಯ ನ್ಯಾಯವಾದಿ ಮತ್ತು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ರವಿವರ್ಮ ಕುಮಾರ್ ಒಬ್ಬರು.

ಹಾವನೂರ್ ಅವರ ಕಾನೂನು ಅರಿವು, ಬಡವರ ಪರ ಕಾಳಜಿ, ನಿಷ್ಠೆಗಳಿಗೆ ಪ್ರೇರೇಪಿತರಾಗಿ ರಾಜ್ಯದ ಹಿಂದುಳಿದ ವರ್ಗಗಳ ರಾಜಕಾರಣಿಗಳಾದ ಸಾರೆಕೊಪ್ಪ ಬಂಗಾರಪ್ಪ(ಈಡಿಗ) ಮತ್ತು ವೀರಪ್ಪ ಮೊಯ್ಲಿ (ದೇವಾಡಿಗ) ಇತರೆ ಪ್ರಮುಖ ಹಿಂದುಳಿದ ವರ್ಗಗಳ ರಾಜಕಾರಣಿಗಳು ಮುಂದೆ ಯಶಸ್ವಿ/ಜನಪ್ರಿಯ ರಾಜಕಾರಣಿಗಳಾದರು.

ಯಾರಿಂದಲೂ, ಯಾವೊಂದು ನೆರವು, ಸಹಾಯಹಸ್ತ ಪಡೆಯದೆ, ಸಾವಿನ ಅಂತ್ಯದವರೆಗೂ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ ಹಿರಿಯ ವಕೀಲರಾಗಿ ಹಾವನೂರು ಸೇವೆ ಮಾಡಿದರು. ವೃದ್ಧಾಪ್ಯದಲ್ಲಿ ಆ ವಕೀಲಿ ವೃತ್ತಿಯಿಂದ ಬಂದ ಹಣದಿಂದ, ಕರ್ನಾಟಕ ಹೌಸಿಂಗ್ ಬೋರ್ಡ್ ವತಿಯಿಂದ ಬೆಂಗಳೂರಿನ ತುಮಕೂರು ರಸ್ತೆಯ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಐಜಿ ಗ್ರೂಪಿನಲ್ಲಿ ಹಣ ಕಟ್ಟಿ ನಿವೇಶನ ಪಡೆದು, ಅಲ್ಲೇ ಸಣ್ಣದಾಗಿ ಮನೆ ಕಟ್ಟಿಕೊಂಡು ಪತ್ನಿ, 3 ಗಂಡು ಮತ್ತು 4 ಹೆಣ್ಣು ಮಕ್ಕಳೊಡನೆ ವಾಸವಿದ್ದರು. ತನ್ನ 79ನೇ ವಯಸ್ಸಿನಲ್ಲಿ, ಹಾವನೂರ್ ದಿನಾಂಕ 15-9-2006ರಂದು ವಯೋಸಹಜ ಸಾವನ್ನಪ್ಪಿದ್ದರು. ಮೀಸಲಾತಿ ಪಡೆದ ಹಿಂದುಳಿದ ವರ್ಗಗಳು, ಹಾಸ್ಟೆಲ್ ಶಿಕ್ಷಣ ಪಡೆದು ಉದ್ಯೋಗ ಪಡೆದವರು, ಮರಳಿ ಭೂಮಿ ಪಡೆದವರು, ನಿಷ್ಠೆಯ ರಾಜಕಾರಣಕ್ಕೆ ಪ್ರೇರೇಪಿತರಾದ ರಾಜಕಾರಣಿಗಳು, ವಕೀಲರು, ನ್ಯಾಯಾಧೀಶರು… ಯಾರೂ ಶವಸಂಸ್ಕಾರಕ್ಕೆ ಬರಲಿಲ್ಲ. ಪತ್ನಿ ಮಕ್ಕಳು ಮತ್ತು ಬಂಧುಗಳು ಬೆಂಗಳೂರಿನಲ್ಲಿ ಅವರ ಶವಸಂಸ್ಕಾರ ಕಾರ್ಯ ಮಾಡಿ ಮುಗಿಸಿದರು.

ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಅಭಿವೃದ್ಧಿಗಾಗಿ, ಭವಿಷ್ಯತ್ತಿನ ಬದುಕಿಗಾಗಿ ಜೀವ ತೇದ ಹಾವನೂರರನ್ನು ನೆನಪು ಮಾಡಿಕೊಳ್ಳಲು, ಹಾವನೂರು ವರದಿಗೆ 50 ವರ್ಷಗಳು ಒಂದು ನೆಪವಾಗಿದೆ. ಈ ಮೂಲಕವಾದರೂ ಅವರ ಹೋರಾಟದ ಬದುಕನ್ನು ಅರಿಯಬೇಕಿದೆ. ಅವರು ಕೊಟ್ಟ ಕಾಣ್ಕೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕಿದೆ.

S Murthy
ಎಸ್ ಮೂರ್ತಿ
+ posts

ಲೇಖಕರು, ವಿಧಾನಸಭೆ ಸಚಿವಾಲಯ ಮಾಜಿ ಕಾರ್ಯದರ್ಶಿ

ಪೋಸ್ಟ್ ಹಂಚಿಕೊಳ್ಳಿ:

ಎಸ್ ಮೂರ್ತಿ
ಎಸ್ ಮೂರ್ತಿ
ಲೇಖಕರು, ವಿಧಾನಸಭೆ ಸಚಿವಾಲಯ ಮಾಜಿ ಕಾರ್ಯದರ್ಶಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...