ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಿದೆ. ಸಂಸತ್‌ನಲ್ಲಿನ ಅಗತ್ಯ ಬಹುಮತಕ್ಕಿಂತ 20 ಸ್ಥಾನಗಳನ್ನು ಅಧಿಕವಾಗಿಯೇ ಗೆದ್ದಿದೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆದರೆ, ಶ್ರೀರಾಮನಿಗೆ ರಾಮಮಂದಿರ ಕಟ್ಟಿದ ಉತ್ತರ ಪ್ರದೇಶದಲ್ಲೇ ಬಿಜೆಪಿ ಹೀನಾಯವಾಗಿ ಸೋತಿದೆ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಹಿನ್ನಡೆ ಆಶ್ಚರ್ಯವನ್ನುಂಟುಮಾಡಿದೆ. ಈ ಬಗ್ಗೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದೆ. ಎನ್‌ಡಿಎ 300 ದಾಟಲು ಸಾಧ್ಯವಾಗದಿರಲು ಉತ್ತರ ಪ್ರದೇಶದಲ್ಲಿನ ಸೋಲು ಕೂಡ ಕಾರಣವೆಂದು ಬಿಜೆಪಿ ಒಪ್ಪಿಕೊಂಡಿದೆ.
ದೇಶದ ಗರಿಷ್ಠ ಸಂಸತ್ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ, ಲೋಕಸಭೆಯಲ್ಲಿ ಸರ್ಕಾರ ರಚಿಸುವ ಪಕ್ಷ ಯಾವುದು ಎಂಬುದನ್ನು ನಿರ್ಧರಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ. 80 ಸ್ಥಾನಗಳಿರುವ ಆ ರಾಜ್ಯದಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಹಿನ್ನಡೆ ಅನುಭವಿಸಿದ್ದು, ಕೇವಲ 36 (ಬಿಜೆಪಿ 33 + ಮಿತ್ರಪಕ್ಷಗಳು 3) ಸ್ಥಾನಗಳನ್ನು ಗೆದ್ದಿವೆ. ಉಳಿದ 44 ಸ್ಥಾನಗಳನ್ನು ‘ಇಂಡಿಯಾ’ ಒಕ್ಕೂಟ ಗೆದ್ದು ಬೀಗಿದೆ. ಅಲ್ಲಿ, 2019ರಲ್ಲಿ ಬಿಜೆಪಿ 64 ಸ್ಥಾನಗಳನ್ನು ಗೆದ್ದಿದ್ದು, ಇದೀಗ ಅರ್ಧದಷ್ಟು ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ. ಆ ರಾಜ್ಯದಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಹಿನ್ನಡೆ ಹಲವು ಕಾರಣಗಳಿವೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
‘ದೋ ಲಡ್ಕೋನ್ ಕಿ ಜೋಡಿ’ (ಇಬ್ಬರು ಯುವ ನಾಯಕರ ಜೋಡಿ)
ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ದೋ ಲಡ್ಕೋನ್ ಕಿ ಜೋಡಿ’ ಉತ್ತರ ಪ್ರದೇಶದಲ್ಲಿ 2017 ವಿಧಾನಸಭಾ ಚುನಾವಣೆಗಿಂತ ಈ ಬಾರಿ ಭಿನ್ನವಾಗಿ ಕೆಲಸ ಮಾಡಿದೆ. 2017ರಲ್ಲಿ ಬಿಜೆಪಿ 302 ಸ್ಥಾನಗಳನ್ನು ಗಳಿಸಿತ್ತು ಮತ್ತು ಕಾಂಗ್ರೆಸ್-ಎಸ್‌ಪಿ ಮೈತ್ರಿಕೂಟ ಕೇವಲ 47 ಸ್ಥಾನಗಳನ್ನು ಗಳಿಸಿತು. ಆದರೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕಿದೆ.
ಏಳು ವರ್ಷಗಳ ನಂತರ, ಇಬ್ಬರು ನಾಯಕರು ದೊಡ್ಡ ಲೋಕಸಭಾ ಹೋರಾಟದಲ್ಲಿ ಜೊತೆಗೂಡಿ, ‘ಇಂಡಿಯಾ’ ಕೂಟವನ್ನು ಮುನ್ನಡೆಸಿದ್ದಾರೆ. ಎನ್‌ಡಿಎಯನ್ನು 30ರ ಆಸುಪಾಸಿಗೆ ಕಟ್ಟಿ ಹಾಕಿ, 40ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದಾರೆ.
ಸಂವಿಧಾನಕ್ಕೆ ಬೆದರಿಕೆ – ಆರೋಪ ನಿರ್ವಹಿಸುವಲ್ಲಿ ಬಿಜೆಪಿ ವಿಫಲ
ಮತ್ತೆ ಬಿಜೆಪಿ ಗರಿಷ್ಠ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಬೆದರಿಕೆ ಇದೆ ಎಂಬುದರ ಸುತ್ತ ವಿರೋಧ ಪಕ್ಷಗಳು ಹೆಣೆದಿದ್ದ ನಿರೂಪಣೆಯನ್ನು ಎದುರಿಸಲು ಎನ್‌ಡಿಎ ವಿಫಲವಾಗಿದೆ. ಎನ್‌ಡಿಎ 400ರ ಗಡಿ ಮುಟ್ಟಿದರೆ ಒಬಿಸಿ ಮತ್ತು ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿ ಸೌಲಭ್ಯಗಳನ್ನು ರದ್ದುಪಡಿಸುತ್ತದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಈ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ‘ಸಂಪತ್ತಿನ ಹಂಚಿಕೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ’ ಎಂಬ ಪ್ರತ್ಯಾರೋಪದೊಂದಿಗೆ ಎದುರಿಸಲು ಯತ್ನಿಸಿದರೂ, ಅದು ಪ್ರಯೋಜನವಾಗಲಿಲ್ಲ. ಸಂವಿಧಾನಕ್ಕೆ ಬಿಜೆಪಿಯಿಂದ ಬೆದರಿಕೆ ಎಂಬುದು ಜನರ ಮನದಲ್ಲಿ ಹೆಚ್ಚು ಪ್ರಭಾವ ಬೀರಿದೆ.
ಅಭ್ಯರ್ಥಿಗಳ ವಿರುದ್ಧ ಆಡಳಿತ ವಿರೋಧಿ ಅಲೆ
ಅನೇಕ ಹಾಲಿ ಸಂಸದರ ವಿರುದ್ಧ ಪ್ರಬಲ ವಿರೋಧವಿದ್ದರೂ, ಬಿಜೆಪಿ ತಂತ್ರಜ್ಞರು ಅವುಗಳನ್ನು ಲೆಕ್ಕಿಸಲಿಲ್ಲ. ಪಕ್ಷದ ಆಂತರಿಕ ಸಮೀಕ್ಷೆಗಳು ಹಾಲಿ ಸಂಸದರ ವಿರುದ್ಧ ಸಾರ್ವಜನಿಕ ಕೋಪವನ್ನು ಸೂಚಿಸಿದ್ದವು. ಅದಾಗ್ಯೂ, ಸಾಂಸ್ಥಿಕ ವಿರೊಧಿವನ್ನು ನಿರ್ಲಕ್ಷಿಸಿ, ಹಾಲಿ ಸಂಸದರಿಗೆ ಬಿಜೆಪಿ ಮಣೆ ಹಾಕಿತು. ಹಿಂದಿನ ಚುನಾವಣೆಯಲ್ಲಿ 181 ಮತಗಳ ಕಡಿಮೆ ಅಂತರದಿಂದ ಗೆದ್ದಿದ್ದ ಅಭ್ಯರ್ಥಿಗಳು ಈ ಬಾರಿ ಹೀನಾಯವಾಗಿ ಸೋತಿದ್ದಾರೆ.
ಅಧಿಕಾರ ವಿರೋಧಿ ಅಂಶವನ್ನು ನೀಡಿ ಕನಿಷ್ಠ 30-35%ರಷ್ಟು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲು ಬಿಜೆಪಿ ಆರಂಭದಲ್ಲಿ ನಿರ್ಧರಿಸಿತ್ತು. ಆದರೆ, ಅವರಲ್ಲಿ 14 ಮಂದಿಗೆ ಮಾತ್ರ ಟಿಕೆಟ್ ತಪ್ಪಿಸಲಾಯಿತು.
ಸ್ಥಳೀಯ ಸಮಸ್ಯೆಗಳು
ರೈತರ ಸಂಕಷ್ಟ, ಆರ್ಥಿಕ ಆತಂಕ, ನಿರುದ್ಯೋಗ ಮತ್ತು ಅಗ್ನಿವೀರ್ ಯೋಜನೆಯ ವಿರುದ್ಧ ಪ್ರತಿಪಕ್ಷಗಳ ನಿರೂಪಣೆ ಬಿಜೆಪಿ ವಿರುದ್ಧ ಆಕ್ರೋಶವನ್ನು ಹೆಚ್ಚಿಸಿತು. ಅದರಲ್ಲೂ ನಿರುದ್ಯೋಗ ಮತ್ತು ಅಗ್ನಿವೀರ್ ಯೋಜನೆ ಯುವಜನರಲ್ಲಿ ಕೋಪವನ್ನು ಹೆಚ್ಚಿಸಿತ್ತು. ಅದು ಬಿಜೆಪಿ ವಿರೋಧಿ ಮತಗಳಾಗಿ ಪರಿವರ್ತನೆಯಾಯಿತು.
ಅಲ್ಪಸಂಖ್ಯಾತರ ಮತಗಳ ಕ್ರೋಢೀಕರಣ
ಬಿಜೆಪಿ ಅಲ್ಪಸಂಖ್ಯಾತರನ್ನು ಮನವೊಲಿಸಲು ವಿಫಲವಾಗಿದೆ. ಅಲ್ಲದೆ, ವಿರೋಧ ಪಕ್ಷಗಳಲ್ಲಿ ಅಲ್ಪಸಂಖ್ಯಾತ ಮತಗಳನ್ನು ಒಗ್ಗೂಡುವುದನ್ನು ತಡೆಯುವಲ್ಲಿಯೂ ಸೋತಿದೆ. ಪರಿಣಾಮ, ವಿಪಕ್ಷಗಳು ಕನಿಷ್ಟ 85% ಮುಸ್ಲಿಂ ಮತಗಳನ್ನು ಪಡೆದಿದ್ದರೆ, ಎನ್‌ಡಿಎ ಕೇವಲ 6% ಮತಗಳನ್ನು ಮಾತ್ರ ಗಳಿಸಿದೆ.
ಮತ್ತೊಂದೆಡೆ, ಜಾತಿಯ ಆಧಾರದ ಮೇಲೆ ಹೆಚ್ಚು ಮತ ಚಲಾಯಿಸಿದ ಹಿಂದು ಮತದಾರರು ಕೂಟ ಬಿಜೆಪಿಯಿಂದ ಹಿಂದೆ ಸರಿದಿದ್ದಾರೆ. ಅವರು ಬಿಜೆಪಿ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ.
ರಾಮಮಂದಿರದ ಪ್ರಭಾವ ಇಲ್ಲ
1980ರ ದಶಕದಿಂದಲೂ ಬಿಜೆಪಿ ಚುನಾವಣಾ ಭರವಸೆಯಾದ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವು ಈ ಚುನಾವಣೆಯಲ್ಲಿಯೂ ಪ್ರಮುಖವಾಗಿ ಮಾತನಾಡುವ ಅಂಶವಾಗಿತ್ತು. ಬಿಜೆಪಿ ರಾಮ ಮಂದಿರದ ಬಗ್ಗೆ ಮಾತನಾಡುತ್ತಲೇ ಇತ್ತು. ಲೋಕಸಭಾ ಚುನಾವಣಾ ಫಲಿತಾಂಶಗಳಲ್ಲಿ ನಿರ್ಣಾಯಕ ಅಂಶವಾಗಲಿದೆ ಎಂದು ಬಿಜೆಪಿಗರು ನಂಬಿದ್ದರು.
ಲೋಕಸಭೆ ಚುನಾವಣೆಯಲ್ಲಿ ಅದರ ಲಾಭವನ್ನು ಪಡೆಯಲು ಈ ವರ್ಷದ ಜನವರಿಯಲ್ಲಿ ಅಯೋಧ್ಯೆಯಲ್ಲಿ ಸಂಪೂರ್ಣವಾಗಿ ನಿರ್ಮಾಣವಾಗದ ರಾಮಮಂದಿರವನ್ನು ಮೋದಿ ಉದ್ಘಾಟಿಸಿದರು. ಆದರೆ, ಅಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿಯೇ ಜನರು ಬಿಜೆಪಿಗೆ ಮತ ಹಾಕಲಿಲ್ಲ. ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿ ಹೀನಾಯವಾಘಿ ಸೋತಿದ್ದಾರೆ. ಮಾತ್ರವಲ್ಲ, ಪ್ರಧಾನಿ ಮೋದಿ ಅವರು ಕಳೆದ ಚುನಾವಣೆಗಿಂತ ಈ ಬಾರಿ ಕಡಿಮೆ ಮತಗಳನ್ನು ಪಡೆದು, ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಮಾಯಾವತಿ ಪ್ರಾಬಲ್ಯವೇ ಇಲ್ಲ
ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು ಯುಪಿಯಲ್ಲಿ ಒಂದು ಕಾಲದಲ್ಲಿ ಬೃಹತ್ ಶಕ್ತಿಯಾಗಿತ್ತು. ಆದರೆ, ಈ ಚುನಾವಣೆಯಲ್ಲಿ ತನ್ನ ಖಾತೆ ತೆರೆಯಲು ವಿಫಲವಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲೂ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಹೀನಾಯ ಸೋಲು ಕಂಡಿತ್ತು. ಆದರೆ, 2019ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು 10 ಸ್ಥಾನಗಳನ್ನು ಗಳಿಸಿ, ತನ್ನ ನೆಲೆ ಉಳಿಸಿಕೊಂಡಿತ್ತು. ಈ ಬಾರಿ ಏಕಾಂಗಿಯಾಗಿ ಹೋರಾಟ ನಡೆಸಿ, ಸೋಲು ಕಂಡಿದೆ. ಇದಲ್ಲದೆ, ಬಿಎಸ್‌ಪಿ 2019ರಲ್ಲಿ ಪಡೆದಿದ್ದ ಶೇ.19.43 ರಷ್ಟು ಮತಗಳನ್ನು ಉಳಿಸಿಕೊಳ್ಳುವಲ್ಲಿಯೂ ವಿಫಲವಾಗಿದೆ. ಬಿಎಸ್‌ಪಿಯ ನಷ್ಟವು ‘ಇಂಡಿಯಾ’ ಮೈತ್ರಿಕೂಟಕ್ಕೆ ಲಾಭವಾಗಿದೆ. ಇಂಡಿಯಾ ಕೂಟದ ಮತಗಳು ಶೇ.40ಕ್ಕಿಂತ ಹೆಚ್ಚಾಗಿದೆ.




