ಬಿಜೆಪಿ ಆಡಳಿತದ ಅವಧಿಯಲ್ಲಿ ಗೋವಾದಲ್ಲಿ ಭೂಕಬಳಿಕೆ, ಅಪರಾಧ ಹಾಗೂ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಗೋವಾದಲ್ಲಿ ಬಿಜೆಪಿ ಆಡಳಿತವು ‘ಗೂಂಡಾರಾಜ್’ಆಗಿ ಮಾರ್ಪಟ್ಟಿದೆ ಎಂದು ಎಎಪಿ ಆರೋಪಿಸಿದೆ. ‘ಗೋವಾಗೆ ಬಿಜೆಪಿಯ ಗೂಂಡಾರಾಜ್ ಬೇಕಿಲ್ಲ’ ಎಂದು ಅಭಿಯಾನ ಆರಂಭಿಸಿದೆ.
‘ಗೋವಾಗೆ ಬಿಜೆಪಿಯ ಗೂಂಡಾರಾಜ್ ಬೇಕಿಲ್ಲ’ ಎಂಬ ಘೋಷಣೆಯನ್ನು ಗೋವಾದಲ್ಲಿ ಬ್ರಾಂಡ್ ಮತ್ತು ಟ್ರಂಪ್ ಮಾಡಲು ಎಎಪಿ ಮುಂದಾಗಿದೆ. ಎಎಪಿಯ ಈ ಅಭಿಯಾನವು ಬಿಜೆಪಿ ಸರ್ಕಾರಕ್ಕೆ ನೇರ ಸವಾಲುಗಳನ್ನು ಹಾಕಿದೆ. ಸುರಕ್ಷತೆ, ನ್ಯಾಯ ಹಾಗೂ ಹೊಣೆಗಾರಿಕೆಯನ್ನು ಬಯಸುವ ಗೋವಾ ಜನರ ಸಾಮೂಹಿಕ ಧ್ವನಿಯಾಗಿ ತಾವು ಈ ಅಭಿಯಾನ ನಡೆಸುತ್ತಿರುವುದಾಗಿ ಎಎಪಿ ನಾಯಕರು ಹೇಳಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಗೋವಾ ಶಾಂತಿ ಮತ್ತು ಸಾಮರಸ್ಯದ ರಾಜ್ಯವಾಗಿತ್ತು. ಆದರೆ, ಬಿಜೆಪಿ ಆಡಳಿತದಲ್ಲಿ ಗೋವಾದ ಸ್ಥಿರತೆ ಕುಸಿತ ಕಂಡಿದೆ. ಗೋವಾ ಪೊಲೀಸರ ವರದಿ ಪ್ರಕಾರ, ರಾಜ್ಯದಲ್ಲಿ ಗಂಭೀರ ಅಪರಾಧಗಳು ಆರು ವರ್ಷಗಳಲ್ಲಿ 38%ರಷ್ಟು ಹೆಚ್ಚಾಗಿವೆ. 2017ರಲ್ಲಿ, ಸುಮಾರು 2,900 ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಆದರೆ, 2024ರ ಹೊತ್ತಿಗೆ ಈ ಸಂಖ್ಯೆ 4,050ಕ್ಕೆ ಏರಿಕೆಯಾಗಿದೆ” ಎಂದು ಎಎಪಿ ವಿವರಿಸಿದೆ.
“ಮಹಿಳೆಯರ ವಿರುದ್ಧದ ಅಪರಾಧಗಳು 40%ಗಿಂತ ಹೆಚ್ಚಾಗಿದೆ. ಕಳೆದ ವರ್ಷ ಕೊಲೆಗಳು ಅಥವಾ ಕೊಲೆ ಯತ್ನಕ್ಕೆ ಸಂಬಂಧಿಸಿದ 120ಕ್ಕೂ ಹೆಚ್ಚು ಪ್ರಕರಣಗಳು, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 350 ಪ್ರಕರಣಗಳು ಹಾಗೂ ಕಳ್ಳತನ ಮತ್ತು ದರೋಡೆಗೆ ಸಂಬಂಧಿಸಿದ 800ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ” ಎಂಬುದನ್ನು ಎಎಪಿ ಒತ್ತಿ ಹೇಳಿದೆ.
“ಬಿಜೆಪಿ ಸರ್ಕಾರವು ದೊಡ್ಡ ಪ್ರಮಾಣದ ಭೂ ವರ್ಗಾವಣೆಗಳನ್ನು ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ, ಸ್ಥಳೀಯ ಸಮುದಾಯಗಳ ಒಪ್ಪಿಗೆ ಇಲ್ಲದೆಯೇ 3,200 ಎಕರೆಗೂ ಹೆಚ್ಚು ಸಾರ್ವಜನಿಕ ಮತ್ತು ಸಮುದಾಯದ ಭೂಮಿಯನ್ನು ಖಾಸಗಿ ಕಂಪನಿಗಳು ಮತ್ತು ಬಿಲ್ಡರ್‌ಗಳಿಗೆ ಹಸ್ತಾಂತರಿಸಲಾಗಿದೆ. ಇದು ಗೋವಾದ ಭೂ ಹಕ್ಕುಗಳು ಮತ್ತು ಸಾಂಸ್ಕೃತಿಕ ಗುರುತನ್ನು ಹಾಳುಮಾಡಿದೆ” ಎಂದು ಎಎಪಿ ಆರೋಪಿಸಿದೆ.
“ಕಳೆದ ಎರಡು ವರ್ಷಗಳಲ್ಲಿ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರ ಮೇಲೆ 250ಕ್ಕೂ ಹೆಚ್ಚು ಹಲ್ಲೆ ಪ್ರಕರಣಗಳು ವರದಿಯಾಗಿವೆ. ಕಾರ್ಯಕರ್ತರ ಮೇಲೆ ದಾಳಿಯ ಪ್ರಕರಣಗಳು ರಾಜ್ಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆಯ ಕುಸಿತ ಮತ್ತು ಭಯದ ವಾತಾವರಣವನ್ನು ಸೂಚಿಸುತ್ತವೆ” ಎಂದು ಎಎಪಿ ಹೇಳುತ್ತದೆ.
ಈ ಲೇಖನ ಓದಿದ್ದೀರಾ?: ಜಾತಿ ಸಮೀಕ್ಷೆ; ಜಾಗೃತವಾಗಿದ್ದಾರೆಯೇ ಒಬಿಸಿಗಳು?
ಅಭಿಯಾನದಲ್ಲಿ ಮೂಲಸೌಕರ್ಯವು ಮತ್ತೊಂದು ಪ್ರಮುಖ ಅಂಶವಾಗಿದೆ. ಗೋವಾದ ಸುಮಾರು 72%ರಷ್ಟು ರಸ್ತೆಗಳು ತುರ್ತು ದುರಸ್ತಿಗಾಗಿ ಕಾಯುತ್ತಿವೆ. ಮಳೆಗಾಲದಲ್ಲಿ ಪುನರಾವರ್ತಿತ ಪ್ರವಾಹವು ಕಳಪೆ ಯೋಜನೆ ಮತ್ತು ಅಸಮರ್ಪಕ ನಿರ್ವಹಣೆಯನ್ನು ಎತ್ತಿ ತೋರಿಸುತ್ತದೆ ಎಂದು ಎಎಪಿ ಹೇಳಿದೆ.
ಒಂದು ಕಡೆ ಅಪರಾಧ, ಭೂಕಬಳಿಕೆ ಮತ್ತು ಗುಂಡಾರಾಜ್ಅನ್ನು ಸಕ್ರಿಯಗೊಳಿಸಿದ ಆರೋಪ ಹೊತ್ತಿರುವ ಬಿಜೆಪಿ ಇದೆ. ಮತ್ತೊಂದೆಡೆ, ಶಾಂತಿ, ಕಾನೂನು, ಪಾರದರ್ಶಕತೆ ಹಾಗೂ ಜನರ ನೇತೃತ್ವದ ಆಡಳಿತದ ಭರವಸೆ ನೀಡುವ ಎಎಪಿ ಇದೆ. ಜನರು ತಮ್ಮ ಜೀವನೋಪಾಯ ಮತ್ತು ಭದ್ರತೆಗಾಗಿ ಉತ್ತಮ ಆಯ್ಕೆಯನ್ನು ಮಾಡುತ್ತಾರೆ ಎಂದು ಎಎಪಿ ಹೇಳಿಕೊಂಡಿದೆ.
2027ರ ಫೆಬ್ರವರಿಯಲ್ಲಿ ಗೋವಾ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಗೋವಾ ವಿಧಾನಸಭೆಯು 40 ಸದಸ್ಯರ ಸಂಖ್ಯಾ ಬಲವನ್ನು ಹೊಂದಿದೆ.




