ಕನ್ನಡ ಸಾಹಿತ್ಯ ಪರಿಷತ್ತು(ಕಸಾಪ) ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಕುತಂತ್ರಗಳನ್ನು ನಿಲ್ಲಿಸಬೇಕು. ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಸದಾ ವಿವಾದಕ್ಕೆ ಒಳಗಾಗಿರುವ ಜೋಶಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಆಡಳಿತಾಧಿಕಾರಿಯನ್ನು ಒಪ್ಪಿಕೊಂಡು ತನಿಖೆ ಮತ್ತು ವಿಚಾರಣೆಗೆ ಅನುವು ಮಾಡಿಕೊಡಬೇಕು ಎಂದು ಪ್ರಗತಿಪರರು ಆಗ್ರಹಿಸಿದ್ದಾರೆ.
ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮಾಡಿದ ವೆಚ್ಚವೂ ಸೇರಿ ಲೋಕಾಯುಕ್ತರಿಂದ ತನಿಖೆ ನಡೆಸಬೇಕು ಎಂದು ಕಸಾಪ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿದೆ. ಜಮಖಂಡಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಕಸಾಪ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಮಂಡ್ಯದಲ್ಲಿ ಭಾರೀ ಪ್ರತಿಭಟನೆ, ರಸ್ತೆ ತಡೆ
ಈ ಪ್ರಕಟಣೆಯನ್ನು ಖಂಡಿಸಿ ಜಂಟಿ ಪತ್ರಿಕಾ ಹೇಳಿಕೆಯನ್ನು ನೀಡಿರುವ ಪ್ರೊ. ಎಸ್ ಜಿ ಸಿದ್ದರಾಮಯ್ಯ, ಪ್ರೊ. ಬಿ ಜಯಪ್ರಕಾಶಗೌಡ, ಬಂಜಗೆರೆ ಜಯಪ್ರಕಾಶ್ ಕೆ ಎಸ್ ವಿಮಲಾ, ಶ್ರೀಪಾದ ಭಟ್, ಮಾವಳ್ಳಿ ಶಂಕರ್ ಅವರು, “ಕನ್ನಡ ಸಾಹಿತ್ಯ ಪರಿಷತ್ತು ‘ಲೋಕಾಯುಕ್ತ ತನಿಖೆಗೆ ಕಸಾಪ ಒತ್ತಾಯ’ ಎಂದು ನೀಡಿರುವ ಹೇಳಿಕೆಯು ಬಹಳ ಬಾಲಿಶವಾದದ್ದು, ಈ ಹೇಳಿಕೆಯನ್ನು ನೀಡಿರುವವರು ಕಸಾಪದ ಕಾರ್ಯಕಾರಣಿ ಸಮಿತಿಯ ಸದಸ್ಯರೇ ಅಲ್ಲ. ರಾಜ್ಯಾಧ್ಯಕ್ಷರು ಹೇಳಿಕೆ ನೀಡಲು ನೈತಿಕತೆಯನ್ನು ಹೊಂದಿಲ್ಲದ ಕಾರಣದಿಂದ ಮಾಧ್ಯಮ ಸಂಚಾಲಕರಿಂದ ಹೇಳಿಕೆ ಕೊಡಿಸಿದ್ದಾರೆ” ಎಂದು ಟೀಕಿಸಿದ್ದಾರೆ.
“ಇವರು(ಮಹೇಶ್ ಜೋಶಿ) ಆರೋಪಿಸಿರುವ ವ್ಯಕ್ತಿಗಳ ಮತ್ತು ಸಂಸ್ಥೆಗಳ ವಿರುದ್ಧ ಲೋಕಾಯುಕ್ತದ ತನಿಖೆ ಆಗಬೇಕಾದ ಸಂದರ್ಭ ಬಂದಾಗ ಖಂಡಿತಾ ಆಗಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಅದಕ್ಕೂ ಮೊದಲು, ಆಯಾ ಸಂಘ ಸಂಸ್ಥೆಗಳ ವಿರುದ್ಧ ದೂರುಗಳು ಬಂದಾಗ ನಿಯಮಾನುಸಾರವಾಗಿ ಸಂಬಂಧಪಟ್ಟ ಸಕ್ಷಮಗಳಿಗೆ ಮತ್ತು ಇಲಾಖೆಗಳಿಗೆ ವಿಚಾರಣೆ ಮಾಡಲು ಅಧಿಕಾರವಿದೆ. ಅವುಗಳು ವಿಫಲವಾದಲ್ಲಿ ಲೋಕಾಯುಕ್ತದ ಹಂತಕ್ಕೆ ಹೋಗಬಹುದು, ಅಲ್ಲದೆ ಆಯಾ ಸಂಘ ಸಂಸ್ಥೆಗಳಿಗೆ ಸಂಬಂಧಪಟ್ಟವರು ಅವುಗಳ ಬಗ್ಗೆ ಗಮನಹರಿಸುತ್ತಾರೆ” ಎಂದು ಹೇಳಿದ್ದಾರೆ.
“ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮಹೇಶ್ ಜೋಶಿಯವರ ಬಗ್ಗೆ ನಾವು ಮತ್ತು ರಾಜ್ಯದ ಅನೇಕರು ನಿಯಮಾನುಸಾರ ಹಂತ ಹಂತವಾಗಿ ಸಲ್ಲಿಸಿದ ದೂರುಗಳನ್ವಯ ವಿಚಾರಣೆ ನಡೆಸಿ, ಮೇಲ್ನೋಟಕ್ಕೆ ಸಾಬೀತಾದ ಅಪರಾಧಗಳ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಂಡು ಆಡಳಿತಾಧಿಕಾರಿಯನ್ನು ನೇಮಕ ಮಾಡಬಹುದಾದ ಸುದ್ದಿಗಳು ಚಾಲ್ತಿಯಲ್ಲಿರುವಾಗ, ತನ್ನ ಮೇಲಿನ ಆರೋಪಗಳನ್ನು ಮುಚ್ಚಿ ಹಾಕಿಕೊಳ್ಳಲು ಅಥವಾ ವಿಷಯಾಂತರ ಮಾಡಿ ವ್ಯವಸ್ಥೆಯನ್ನು ದಿಕ್ಕು ತಪ್ಪಿಸಲು ಪ್ರಯತ್ನ ಪಡುತ್ತಿರುವುದು ಮೂರ್ಖತನದ ಪರಮಾವಧಿ” ಎಂದು ಪ್ರಗತಿಪರರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕಸಾಪ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ; ಕಡಿವಾಣಕ್ಕೆ ಮುಂದಾದ ಸರ್ಕಾರ
“ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ತೆರಿಗೆ ಹಣದಿಂದ ಅನುದಾನ ಪಡೆಯುತ್ತಿರುವುದರಿಂದ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಮತ್ತು ಕನ್ನಡಿಗರು ಪ್ರಶ್ನಿಸಬಹುದಾಗಿದೆ. ಇವರು ಹೇಳಿರುವ ಸಂಘ-ಸಂಸ್ಥೆಗಳ ಮತ್ತು ವ್ಯಕ್ತಿಗಳ ಮೇಲೆ ಆರೋಪಿಸಲು ಮತ್ತು ದೂರು ನೀಡಲು ಆಯಾ ಸಂಸ್ಥೆಗಳ ಸದಸ್ಯರು ಮತ್ತು ಕನ್ನಡಿಗರು ಹಕ್ಕುಳ್ಳವರಾಗಿದ್ದಾರೆ. ಅದರಂತೆ ಕ್ರಮಬದ್ಧವಾಗಿ ಕೆಳಹಂತದಿಂದ ದೂರು ಸಲ್ಲಿಸಿ ಮುಂದುವರಿಯಬೇಕೆ ಹೊರತು, ಈ ರೀತಿಯಾಗಿ ಬುಡವನ್ನು ಬಿಟ್ಟು ತುದಿಯನ್ನು ಹಿಡಿದು ಅಲ್ಲಾಡಿಸುವುದು ಮೂರ್ಖತನ ಮತ್ತು ಅತ್ಯಂತ ಖಂಡನೀಯ” ಎಂದು ಹೇಳಿದ್ದಾರೆ.
“ಇವರು ತಿಳಿಸಿರುವ ಹಾಗೆ ಜಮಖಂಡಿಯಲ್ಲಿ ನಡೆದ ಕಸಾಪದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಿಜವಾಗಿಯೂ ಚರ್ಚಿಸಲಾಯಿತೇ. ಒಂದು ವೇಳೆ ಚರ್ಚಿಸಿದ್ದರೆ, ಈ ರೀತಿಯ ನಿರ್ಧಾರಗಳಿಂದ ‘ಕೆರೆದು ಹುಣ್ಣು ಮಾಡಿಕೊಂಡಂತಾಗುತ್ತದೆ’ ಎಂದು ಹೇಳದಷ್ಟು ಮೂರ್ಖತನ ಅಲ್ಲಿದ್ದವರಿಗೆ ಆವರಿಸಿತ್ತೇ?, ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ
ಬೇರೆಯವರ ತಟ್ಟೆಯಲ್ಲಿನ ನೊಣದ ಚಿಂತೆ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ, ತಾನು ಕಳ್ಳ ಪರರ ನಂಬನು ಎಂಂತಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ಮುಂದುವರೆದು, ಅತ್ಯಂತ ಪ್ರಮುಖವಾಗಿ ಹೇಳುವುದಾದರೆ ಕಸಾಪದ ರಾಜ್ಯಾಧ್ಯಕ್ಷರು ಆರೋಪಿಸಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದವರು ವಿಚಾರಣೆಗೆ ಒಳಗಾಗಲು ಸಿದ್ಧರಿದ್ದಾರೆ. ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಸದಾ ವಿವಾದಕ್ಕೆ ಒಳಗಾಗಿರುವ ಜೋಶಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಆಡಳಿತಾಧಿಕಾರಿಯನ್ನು ಒಪ್ಪಿಕೊಂಡು ತನಿಖೆ ಮತ್ತು ವಿಚಾರಣೆಗೆ ಅನುವು ಮಾಡಿಕೊಡಲಿ, ಆರೋಪ ಮುಕ್ತರಾಗುವವರೆಗೆ ತನ್ನ ಕುತಂತ್ರಗಳನ್ನು ನಿಲ್ಲಿಸಲಿ” ಎಂದು ಪ್ರಗತಿಪರರು ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.





