ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಹಲವರು ಹನಿಟ್ರ್ಯಾಪ್, ಲೈಂಗಿಕ ದೌರ್ಜನ್ಯ ಆರೋಪಗಳಿಂದಲೇ ಹೆಚ್ಚಾಗಿ ಸುದ್ದಿಯಾಗುತ್ತಿದ್ದಾರೆ. ಅಂತಹದ್ದೇ ಪ್ರಕರಣವೊಂದರಲ್ಲಿ ಶಾಸಕರೊಬ್ಬರು ಮಹಿಳೆಯೊಬ್ಬರೊಂದಿಗೆ ತಾವು ಖಾಸಗಿ ಕ್ಷಣಗಳನ್ನು ಕಳೆದಿರುವ ತಮ್ಮದೇ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಅವರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ಕಂಡುಬಂದಿರುವ ಶಾಸಕನನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಶಿಂಗನಮಲ ಕ್ಷೇತ್ರದ ವೈಸಿಪಿ ಪಕ್ಷದ ಶಾಸಕ ಫಣೀಂದ್ರ ಎಂದು ಹೇಳಲಾಗಿದೆ. ಶಾಸಕ ಫಣೀಂದ್ರ ಅವರು ವೈಸಿಪಿ ಪಕ್ಷದ ಬಿ.ಸಿ ಘಟಕದ ಅಧ್ಯಕ್ಷರೂ ಕೂಡ ಆಗಿದ್ದಾರೆ.
ಶಾಸಕ ಫಣೀಂದ್ರ ಅವರು ಶಿಕ್ಷಕಿಯೊಬ್ಬರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು. ಆಕೆಯ ಜೊತೆಗಿನ ತಮ್ಮ ಖಾಸಗಿ ಕ್ಷಣಗಳನ್ನು ತಾವೇ ವಿಡಿಯೋ ಮಾಡಿಟ್ಟುಕೊಂಡಿದ್ದರು. ಯಾವುದೋ ವಿಡಿಯೋವನ್ನು ಹಂಚಿಕೊಳ್ಳುವ ಭರದಲ್ಲಿ ತಮ್ಮದೇ ಖಾಸಗಿ ವಿಡಿಯೋವನ್ನು ಫಣೀಂದ್ರ ತಮ್ಮ ಪಕ್ಷದ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವಿಡಿಯೋ ವೈರಲ್ ಆಗಿದ್ದು ಗೊತ್ತಾದ ಕೂಡಲೇ ಶಾಸಕ ಫಣೀಂದ್ರ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಆದರೂ, ಆ ವೇಳೆಗೆ ಹಲವರು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಿಂದ ವಿಡಿಯೋ ಅಂತರ್ಜಾಲದಲ್ಲಿ ಉಳಿದುಹೋಗಿದೆ.
ವಿಡಿಯೋ ಕುರಿತು ಸ್ಪಷ್ಟನೆ ನೀಡಿರುವ ಶಾಸಕ ಫಣೀಂದ್ರ, “ನನ್ನ ಮೊಬೈಲ್ ಫೋನ್ಅನ್ನು ಯಾರೋ ಹ್ಯಾಕ್ ಮಾಡಿ, ವೀಡಿಯೊವನ್ನು ಹರಿಬಿಟ್ಟಿದ್ದಾರೆ. ನಾನು ಎಂದಿಗೂ ಅಂತಹ ವೀಡಿಯೊವನ್ನು ಹಂಚಿಕೊಂಡಿಲ್ಲ. ನನ್ನ ರಾಜಕೀಯ ವಿರೋಧಿಗಳು ಈ ಕೃತ್ಯ ಎಸಗಿದ್ದಾರೆ” ಎಂದು ಆರೋಪಿಸಿದ್ದಾರೆ.
ಶಾಸಕ ಫಣೀಂದ್ರ ಅವರ ಖಾಸಗಿ ವಿಡಿಯೋ ವೈರಲ್ ಆಗಿರುವುದು ವೈಸಿಪಿ ಪಕ್ಷಕ್ಕೆ ಮುಜುಗರ ಉಂಟುಮಾಡಿದೆ. ಶಾಸಕನ ವಿರುದ್ಧ ಪಕ್ಷದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕನ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.




