ಕೇರಳದ ಶಬರಿಮಲೆ ದೇವಾಲಯದಲ್ಲಿ ಚಿನ್ನ ಕಳವು ಪ್ರಕರಣ ಬಹಿರಂಗವಾದ ಬೆನ್ನಲ್ಲೇ ಮತ್ತೊಂದು ಪ್ರಸಿದ್ಧ ದೇವಾಲಯ ಗುರುವಾಯೂರಿನಲ್ಲಿ ವಿವಿಧ ವಸ್ತುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. 2019ರ ಲೆಕ್ಕಪರಿಶೋಧನೆಯ ವರದಿಯು ಬಿಡುಗಡೆಯಾಗಿದ್ದು, ಚಿನ್ನ ಮತ್ತು ದಂತ ಸೇರಿದಂತೆ ವಿವಿಧ ಸ್ವತ್ತುಗಳು ನಾಪತ್ತೆಯಾಗಿವೆ ಎಂದು ವರದಿಯಾಗಿದೆ.
ಸರಿಯಾಗಿ ನಿಯಮಗಳನ್ನು ಪಾಲಿಸದೆ ಚಿನ್ನ, ದಂತ ಮೊದಲಾದವುಗಳ ನಿರ್ವಹಣೆ ಮಾಡಲಾಗಿದೆ. ಹಾಗೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ನಡೆಸುತ್ತಿರುವ ಚಿನ್ನದ ಯೋಜನೆಯಲ್ಲಿ ಠೇವಣಿ ಮಾಡಿದ್ದರಿಂದ 79 ಲಕ್ಷ ರೂ. ನಷ್ಟ ಉಂಟಾಗಿರುವುದನ್ನು ಲೆಕ್ಕಪರಿಶೋಧನೆ ವೇಳೆ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಶಬರಿಮಲೆ ಗರ್ಭಗುಡಿ ದ್ವಾರದ ಚಿನ್ನ ನಾಪತ್ತೆ: ಕದ್ದವರು ಯಾರು?
ಇನ್ನು ಎಣಿಕೆ ವೇಳೆ ಮಂಜಟ್ಟಿ ಕಾಯಿಗಳು (ಕೆಂಪು ಗುಲಗಂಜಿ) ಕಾಣೆಯಾಗಿವೆ. ಕೇಸರಿ ಹೂವುಗಳನ್ನು ದಾಖಲೆಗಳಲ್ಲಿ ಸೇರಿಸಲಾಗಿಲ್ಲ. ಇದಲ್ಲದೆ, 15 ಲಕ್ಷ ರೂ. ಮೌಲ್ಯದ 2,000 ಕೆಜಿ ಸಾಂಪ್ರದಾಯಿಕವಾಗಿ ಬಳಸಲಾಗುವ ಪಾತ್ರೆಗಳು ಮತ್ತು ತಾಮ್ರ, ಹಿತ್ತಾಳೆ, ಕಂಚಿನಿಂದ ಪಾತ್ರೆಗಳನ್ನು(ಉರುಳಿ) ಲೆಕ್ಕಾಚಾರದಲ್ಲಿ ಸೇರಿಸಲಾಗಿಲ್ಲ. ಇನ್ನು ಪುನ್ನತ್ತೂರು ಆನೆ ಕೋಟೆಯಿಂದ 530 ಕೆಜಿಗೂ ಹೆಚ್ಚು ತೂಕದ ದಂತ ಕಾಣೆಯಾಗಿದೆ ಎಂದು ವರದಿಯಾಗಿದೆ.
ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಗುರುವಾಯೂರು ದೇವಸ್ವಂ ಮಂಡಳಿ ಎಲ್ಲಾ ನ್ಯೂನತೆಗಳನ್ನು ಪರಿಹರಿಸಲಾಗಿದೆ. ಈ ಬಗ್ಗೆ ವಿವರವಾದ ಅಫಿಡವಿಟ್ ಅನ್ನು ಕೇರಳ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ಹೇಳಿದೆ. ರಾಜ್ಯ ಸರ್ಕಾರವು ಎಲ್ಲಾ ಗೊಂದಲಗಳನ್ನು ಪರಿಹರಿಸಲಾಗಿದೆ. ಈ ಬಗ್ಗೆ ಅಂತಿಮ ವರದಿಯನ್ನೂ ಶೀಘ್ರವೇ ನೀಡಲಾಗುವುದು ಎಂದು ಹೇಳಿದೆ.
ಆದರೆ ವಿರೋಧ ಪಕ್ಷ ಬಿಜೆಪಿ ಕೇರಳ ಸರ್ಕಾರದ ವಿರುದ್ಧ ವಾಗ್ದಾಳಿ ಆರಂಭಿಸಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿಯ ಪ್ರದೀಪ್ ಭಂಡಾರಿ, “ಇದು ಎಡ ಸರ್ಕಾರವು ಹಿಂದೂ ಭಕ್ತರಿಗೆ ಮಾಡಿದ ದೊಡ್ಡ ಅವಮಾನ. ಶಬರಿಮಲೆ ಬಳಿಕ ಈಗ ಗುರುವಾಯೂರು ದೇವಾಲಯದ ಖಜಾನೆಯಿಂದ ಚಿನ್ನ ಕಾಣೆಯಾಗಿದೆ ಎಂದು ಲೆಕ್ಕಪರಿಶೋಧನೆಯು ಬಹಿರಂಗಪಡಿಸಿದೆ. ಕೇರಳ ಸರ್ಕಾರ ಪೂಜ್ಯ ದೇವಾಲಯಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮತ್ತು ದುರುಪಯೋಗ ಮಾಡುತ್ತಿರುವುದು ಆಘಾತಕಾರಿ” ಎಂದು ಬರೆದುಕೊಂಡಿದ್ದಾರೆ.





