ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. 24 ಗಂಟೆಗಳ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದ ಬೆನ್ನಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೆಚ್ಚಿನ ದಾಖಲೆಗಳಿದ್ದು ಇದರ ಆಧಾರದಲ್ಲಿ ವಿಚಾರಣೆ ನಡೆಸಬೇಕಿದೆ ಎಂದು ಕೋರ್ಟ್‌ಗೆ ಲೋಕಾಯುಕ್ತ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿದೆ. ಕೋರ್ಟ್‌ನಲ್ಲೇ ಪೊಲೀಸರು ದಿನೇಶ್ ಕುಮಾರ್ ಅವರನ್ನು ವಶಕ್ಕೆ ಪಡೆದಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಮುಡಾ ಪ್ರಕರಣ | ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪ ಸಾಬೀತಾಗಿಲ್ಲ: ಲೋಕಾಯುಕ್ತ ವರದಿ
ಈ ಪ್ರಕರಣದ ವಿಚಾರಣೆಯನ್ನು ಲೋಕಾಯುಕ್ತ ಎಸ್‌ಪಿ ಉದೇಶ್ ಅವರ ನೇತೃತ್ವದ ತಂಡ ನಡೆಸುತ್ತಿದೆ. ಈ ಹಿಂದೆ ಡಿಸೆಂಬರ್ 12ರಂದು ನಡೆದ ವಿಚಾರಣೆ ವೇಳೆ ದಿನೇಶ್ ಕುಮಾರ್ ಅವರು ತಮ್ಮ ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು. ಆದರೆ ಇದೀಗ ಕೆಲವು ದಾಖಲೆಗಳ ಆಧಾರದಲ್ಲಿ ಮತ್ತೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಹಿಂದೆ 2025ರ ಫೆಬ್ರವರಿಯಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಲೋಕಾಯುಕ್ತ ನೀಡಿದ ಕ್ಲೀನ್ ಚೀಟ್ ಅರ್ಜಿಯನ್ನು ನ್ಯಾಯಾಲಯವು ಪ್ರಸ್ತುತ ಪರಿಶೀಲಿಸುತ್ತಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈ ‘ಬಿ’ ವರದಿಯನ್ನು ಸ್ವೀಕರಿಸಬೇಕೋ ಅಥವಾ ತಿರಸ್ಕರಿಸಬೇಕೋ ಎಂಬ ಬಗ್ಗೆ ಡಿಸೆಂಬರ್ 18, 2025 ರಂದು ತನ್ನ ಆದೇಶವನ್ನು ಪ್ರಕಟಿಸುವ ಸಾಧ್ಯತೆಯಿದೆ.





