2013ರಲ್ಲಿ ಅಗಸ್ಟಾ-ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಭ್ರಷ್ಟಾಚಾರದ ಆರೋಪ ಮಾಡಿತ್ತು. ಆದರೆ ಇದೀಗ ಮೋದಿ-ಅದಾನಿ ವಾಶಿಂಗ್ ಮಷೀನ್‌ನಲ್ಲಿ ಸಂಸ್ಥೆ ಪರಿಶುದ್ಧವಾಗಿ 'ಲಿಯೋನಾರ್ಡೋ' ಆಗಿದೆ. ಯಾವ ಸಂಸ್ಥೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಲಾಗಿತ್ತೋ ಅದೇ ಸಂಸ್ಥೆಗೆ ಮೋದಿ ರಕ್ಷಣಾ ಸಚಿವಾಲಯವು 2021ರಲ್ಲಿ ಕ್ಲೀನ್‌ಚಿಟ್ ನೀಡಿದೆ. ಇದೀಗ ಅದಾನಿ ಸಂಸ್ಥೆ ಜತೆ ಒಪ್ಪಂದ ನಡೆಯುತ್ತಿದೆ.
ಭಾರತದ ಅತ್ಯಂತ ದೊಡ್ಡ ರಕ್ಷಣಾ ಖರೀದಿ ಹಗರಣಗಳಲ್ಲಿ ಅಗಸ್ಟಾ-ವೆಸ್ಟ್‌ಲ್ಯಾಂಡ್ (AgustaWestland) ಹೆಲಿಕಾಪ್ಟರ್ ಹಗರಣ ಕೂಡಾ ಒಂದು. ಈ ಒಪ್ಪಂದವನ್ನು ಪಡೆಯಲು ಕಂಪನಿಯು ಮಧ್ಯವರ್ತಿಗಳಿಗೆ ಮತ್ತು ಭಾರತೀಯ ಅಧಿಕಾರಿಗಳಿಗೆ ಬರೋಬ್ಬರಿ 450 ಕೋಟಿ ರೂಪಾಯಿ ಲಂಚ ನೀಡಿರುವ ಪ್ರಕರಣವಿದು. 2013ರಲ್ಲಿ ಈ ಹಗರಣ ಬೆಳಕಿಗೆ ಬಂದಿದ್ದು, ಸುಮಾರು ವರ್ಷಗಳ ಕಾಲ ತನಿಖೆ ಬಳಿಕ ಭಾರತದ ರಕ್ಷಣಾ ಸಚಿವಾಲಯವು 2021ರಲ್ಲಿ ಕ್ಲೀನ್‌ಚಿಟ್ ನೀಡಿದೆ. ಇದೀಗ ಮೋದಿ-ಅದಾನಿ ವಾಶಿಂಗ್ ಮಷೀನ್‌ನಲ್ಲಿ ಪರಿಶುದ್ಧವಾದ ‘ಭ್ರಷ್ಟ’ ಅಗಸ್ಟಾ-ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಕಂಪನಿ ಹೊಸ ಹೆಸರಿನೊಂದಿಗೆ ಮತ್ತೆ ಭಾರತಕ್ಕೆ ಬರುತ್ತಿದೆ!
ಪ್ರಧಾನಿ ನರೇಂದ್ರ ಮೋದಿ ವಾಶಿಂಗ್ ಮಷೀನ್‌ನಲ್ಲಿ ಹಲವು ನಾಯಕರುಗಳು ಸ್ವಚ್ಛಗೊಂಡಿದ್ದಾರೆ. ಎನ್‌ಸಿಪಿ ನಾಯಕ, ಇತ್ತೀಚೆಗೆ ವಿಮಾನ ದುರಂತದಲ್ಲಿ ಮೃತರಾದ ಅಜಿತ್ ಪವಾರ್ ವಿರುದ್ಧದ ಹಲವು ಪ್ರಕರಣಗಳು, 2023ರಲ್ಲಿ ಅಜಿತ್ ಎನ್‌ಡಿಎ ಸೇರಿದ ನಂತರ ಮುಚ್ಚಿಹೋಗಿದೆ. 2017ರ ಏರ್ ಇಂಡಿಯಾ ಹಗರಣದಲ್ಲಿ ಸಿಲುಕಿದ್ದ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಕೂಡಾ ಎನ್‌ಡಿಎ ಸೇರುತ್ತಿದ್ದಂತೆ ಸಿಬಿಐ ಅವರಿಗೆ ಕ್ಲೀನ್ ಚಿಟ್ ನೀಡಿತು. ಹಿಮಂತ ಬಿಸ್ವ ಶರ್ಮಾ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರುತ್ತಿದ್ದಂತೆ ಶಾರದಾ ಚಿಟ್ ಫಂಡ್ ಹಗರಣದ ತನಿಖೆ ಸ್ಥಗಿತಗೊಂಡಿದೆ.
ಇದನ್ನು ಓದಿದ್ದೀರಾ? ಬಿಜೆಪಿ ವಾಶಿಂಗ್ ಮಷೀನ್‌ಗೆ ಬಿದ್ದು ಕೈಲಾಸ ಸೇರಿದ ದೆಹಲಿ ಸಚಿವ ಗಹ್ಲೋಟ್
ಅಶೋಕ್ ಚವಾಣ್ 2024ರ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದು ಇದಾದ ಬಳಿಕ ಆದರ್ಶ್ ಹೌಸಿಂಗ್ ಸೊಸೈಟಿ ಹಗರಣದ ತನಿಖೆ ವೇಗ ಕಳೆದುಕೊಂಡಿದೆ. ಹೀಗೆ ಬಿಜೆಪಿ ವಾಶಿಂಗ್ ಮಷೀನ್‌ನಲ್ಲಿ ಸ್ವಚ್ಛವಾದವರ ಪಟ್ಟಿಯಲ್ಲಿ ಸುವೇಂದು ಅಧಿಕಾರಿ, ನವೀನ್ ಜಿಂದಾಲ್ ಸೇರಿ 23ಕ್ಕೂ ಅಧಿಕ ನಾಯಕರುಗಳು ಇದ್ದಾರೆ. ಚುನಾವಣಾ ಬಾಂಡ್ ವಿವರ ಪರಿಶೀಲಿಸಿದಾಗ ಹಲವು ಸಂಸ್ಥೆಗಳೂ ಮೋದಿ ವಾಶಿಂಗ್ ಮಷೀನ್‌ನ ಒಳನುಗ್ಗಿರುವುದು ಕಂಡುಬರುತ್ತದೆ. ಅದೇ ರೀತಿಯಲ್ಲಿ ಈಗ ಮೋದಿ ಮತ್ತು ಅದಾನಿ ವಾಶಿಂಗ್ ಮಷೀನ್‌ನಲ್ಲಿ ಅಗಸ್ಟಾ-ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಕಂಪನಿ ಶುದ್ಧವಾಗಿದ್ದು‘ಲಿಯೋನಾರ್ಡೋ’ ಎಂದು ಹೆಸರು ಬದಲಾಯಿಸಿಕೊಂಡಿದೆ! ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ಎನಿಸಿಕೊಂಡಿದ ಪ್ರಕರಣ ಇದೀಗ ಮೋದಿ-ಅದಾನಿ ಹಸ್ತ ಸೇರಿ ಶುದ್ಧವಾಗಿದ್ದು ಹೇಗೆ? ಅಷ್ಟಕ್ಕೂ ಏನಿದು ಹಗರಣ?
ಅಗಸ್ಟಾ-ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣ
ಭಾರತ ಸರ್ಕಾರವು ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳಂತಹ ಗಣ್ಯರ (VVIP) ಪ್ರಯಾಣಕ್ಕಾಗಿ 12 AW101 ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಇಟಲಿಯ ಫಿನ್‌ಮೆಕಾನಿಕಾ (ಈಗಿನ ಲಿಯೋನಾರ್ಡೋ) ಕಂಪನಿಯ ಅಂಗಸಂಸ್ಥೆಯಾದ ಅಗಸ್ಟಾ-ವೆಸ್ಟ್‌ಲ್ಯಾಂಡ್ ಜತೆ 2010ರಲ್ಲಿ ಸುಮಾರು ₹3,600 ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದವನ್ನು ಗಿಟ್ಟಿಸಿಕೊಳ್ಳಲು ಕಂಪನಿಯು ಭಾರತೀಯ ರಾಜಕಾರಣಿಗಳು, ಅಧಿಕಾರಿಗಳು ಮತ್ತು ವಾಯುಪಡೆಯ ಉನ್ನತ ಅಧಿಕಾರಿಗಳಿಗೆ ಸುಮಾರು ₹450 ಕೋಟಿ ಲಂಚ ನೀಡಿದೆ ಎಂಬ ಆರೋಪ ಕೇಳಿಬಂದಿತ್ತು.
ರಾಜಕಾರಣಿಗಳಿಗೆ ಲಂಚ ನೀಡಿರುವುದು ಮಾತ್ರವಲ್ಲದೆ ನಿಯಮ ಬದಲಾವಣೆಯನ್ನೂ ಮಾಡಿರುವ ಆರೋಪವಿದೆ. ಅಗಸ್ಟಾ-ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ಗಳು ಟೆಂಡರ್‌ನಲ್ಲಿ ಅರ್ಹತೆ ಪಡೆಯುವಂತೆ ಮಾಡಲು, ಹೆಲಿಕಾಪ್ಟರ್‌ಗಳು ಹಾರಬಲ್ಲ ಗರಿಷ್ಠ ಎತ್ತರದ ಮಿತಿಯನ್ನು 6,000 ಮೀಟರ್‌ನಿಂದ 4,500 ಮೀಟರ್‌ಗೆ ಇಳಿಸಲಾಗಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿತ್ತು. ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ. ತ್ಯಾಗಿ ಮತ್ತು ಮಧ್ಯವರ್ತಿ ಕ್ರಿಶ್ಚಿಯನ್ ಮಿಚೆಲ್ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್‌ಪಿ ತ್ಯಾಗಿ ಹೆಲಿಕಾಪ್ಟರ್‌ಗಳ ಹಾರಾಟದ ಎತ್ತರದ ಮಿತಿಯನ್ನು ಕಡಿಮೆ ಮಾಡಲು ಸಹಾಯ ಮಾಡಿದ ಆರೋಪವನ್ನು ಹೊಂದಿದ್ದಾರೆ. ಈ ಹಗರಣದ ಪ್ರಮುಖ ಆರೋಪಿ ಬ್ರಿಟಿಷ್ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್ (Christian Michel) ಅನ್ನು 2018ರಲ್ಲಿ ದುಬೈನಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ. 2025ರ ಡಿಸೆಂಬರ್‌ನಲ್ಲಿ ದೆಹಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯ (ED) ದಾಖಲಿಸಿದ ಪ್ರಕರಣದಲ್ಲಿ ಬಿಡುಗಡೆ ಮಾಡಲು ಆದೇಶಿಸಿದೆ. ಆದರೆ ಸಿಬಿಐ ಪ್ರಕರಣ ಇನ್ನೂ ನಡೆಯುತ್ತಿರುವ ಕಾರಣ ಮಿಶೆಲ್ ಜೈಲಿನಲ್ಲೇ ಇದ್ದಾರೆ.

ಗೈಡೋ ಹಾಶ್ಕೆ (Guido Haschke) ಮತ್ತು ಕಾರ್ಲೋ ಗೆರೋಸಾ (Carlo Gerosa) ಎಂಬ ಇಟಾಲಿಯನ್ ಮಧ್ಯವರ್ತಿಗಳು ಲಂಚದ ಹಣವನ್ನು ಭಾರತೀಯರಿಗೆ ತಲುಪಿಸಲು ಸಹಾಯ ಮಾಡಿದ್ದರು ಎಂಬ ಆರೋಪವಿದೆ. ದೆಹಲಿ ಮೂಲದ ವಕೀಲ ಗೌತಮ್ ಖೈತಾನ್ ಮೇಲೆ ಲಂಚದ ಹಣವನ್ನು ಮನಿ ಲಾಂಡರಿಂಗ್ ಮೂಲಕ ವರ್ಗಾಯಿಸಲು ಸಹಾಯ ಮಾಡಿದ ಆರೋಪವಿದೆ. ಇನ್ನು ಫಿನ್‌ಮೆಕಾನಿಕಾ ಕಂಪನಿಯ ಮಾಜಿ ಅಧ್ಯಕ್ಷ ಜ್ಯೂಸೆಪ್ಪೆ ಒರ್ಸಿ ಈ ಒಪ್ಪಂದವನ್ನು ಪಡೆಯಲು ಮಧ್ಯವರ್ತಿಗಳ ಮೂಲಕ ಲಂಚ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಅಗಸ್ಟಾ-ವೆಸ್ಟ್‌ಲ್ಯಾಂಡ್ ಕಂಪನಿಯ ಮಾಜಿ ಸಿಇಒ ಬ್ರೂನೋ ಸ್ವಾಗ್ನೋಲಿನಿ, ಎಸ್‌ಪಿ ತ್ಯಾಗಿ ಅವರ ಸೋದರ ಸಂಬಂಧಿಗಳಾದ ಸಂಜೀವ್ ತ್ಯಾಗಿ, ಸಂದೀಪ್ ತ್ಯಾಗಿ ಮತ್ತು ರಾಜೀವ್ ತ್ಯಾಗಿ ಲಂಚದ ವ್ಯವಹಾರದಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾರೆ. ದುಬೈ ಮೂಲದ ಉದ್ಯಮಿ ರಾಜೀವ್ ಸಕ್ಸೇನಾ, ಮಾಜಿ ರಕ್ಷಣಾ ಕಾರ್ಯದರ್ಶಿ ಶಶಿಕಾಂತ್ ಶರ್ಮಾ ಹೆಸರೂ ಈ ಪ್ರಕರಣದಲ್ಲಿ ಕೇಳಿಬಂದಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲಿಗೆ ಕಳಿಸುವ ಮೋದಿ ಗ್ಯಾರಂಟಿಯು ‘ಜನತಂತ್ರದ ಜನನಿ’ಯ ಅಣಕ ಅಲ್ಲವೇ?
2012-2013ರಲ್ಲಿ ಇಟಲಿ ನಡೆಸಿದ ತನಿಖೆಯಿಂದ ಭ್ರಷ್ಟಾಚಾರ ಬಹಿರಂಗವಾಗಿದೆ. 2013ರಲ್ಲಿ ಇಟಲಿ ಪೊಲೀಸರು ಫಿನ್ಮೆಕಾನಿಕಾ ಸಿಇಒ ಗೈಸೆಪ್ಪೆ ಓರ್ಸಿ ಬಂಧಿಸುತ್ತಿದ್ದಂತೆ ಅಂದಿನ ಭಾರತದಲ್ಲಿ ರಕ್ಷಣಾ ಸಚಿವ ಎಕೆ ಆಂಟನಿ ತನಿಖೆಗೆ ಆದೇಶಿಸಿದ್ದರು. ಹಾಗೆಯೇ 2014ರ ಜನವರಿಯಲ್ಲಿ ಅಂದಿನ ಯುಪಿಎ ಸರ್ಕಾರವು ಒಪ್ಪಂದವನ್ನು ರದ್ದುಗೊಳಿಸಿತ್ತು. ಹೆಲಿಕಾಪ್ಟರ್‌ಗಳ ವಿತರಣೆ ನಿಲ್ಲಿಸಲಾಗಿತ್ತು. ಕಂಪನಿಯನ್ನು ಬ್ಲ್ಯಾಕ್‌ಲಿಸ್ಟ್ ಮಾಡಲಾಯಿತು.
ಇನ್ನೊಂದೆಡೆ 2014ರಲ್ಲಿ ಇಟಲಿಯ ಕೆಳಹಂತದ ನ್ಯಾಯಾಲಯವು ಕಂಪನಿಯ ಮಾಜಿ ಮುಖ್ಯಸ್ಥರಾದ ಗೈಸೆಪ್ಪೆ ಓರ್ಸಿ ಮತ್ತು ಬ್ರೂನೊ ಸ್ಪಿಗ್ನೋಲಿನಿರನ್ನು ಭ್ರಷ್ಟಾಚಾರದ ಆರೋಪದಿಂದ ಮುಕ್ತಗೊಳಿಸಿತ್ತು, ಆದರೆ ತೆರಿಗೆ ವಂಚನೆಗೆ ಶಿಕ್ಷೆ ವಿಧಿಸಿತ್ತು. ಆದರೆ 2016ರಲ್ಲಿ ಮೇಲ್ಮನವಿ ಪರಿಶೀಲಿಸಿದ ಇಟಲಿಯ ಮಿಲನ್ ನ್ಯಾಯಾಲಯ ಕೆಳಹಂತದ ತೀರ್ಪನ್ನು ರದ್ದುಗೊಳಿಸಿ, ಇಬ್ಬರೂ ಅಧಿಕಾರಿಗಳಿಗೆ ಕ್ರಮವಾಗಿ 4.5 ಮತ್ತು 4 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪಿನಲ್ಲಿ ಭಾರತದ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲಂಚ ನೀಡಲಾಗಿರುವ ಬಗ್ಗೆ ಉಲ್ಲೇಖಿಸಲಾಗಿತ್ತು.
ಆದರೆ 2018ರಲ್ಲಿ ಇಟಲಿಯ ಸುಪ್ರೀಂ ಕೋರ್ಟ್ ಪ್ರಕರಣದ ಮರುತನಿಖೆಗೆ ಆದೇಶಿಸಿದ ನಂತರ, ಮಿಲನ್‌ನ ಮೂರನೇ ಮೇಲ್ಮನವಿ ನ್ಯಾಯಾಲಯವು ‘ಸಾಕ್ಷ್ಯಾಧಾರಗಳ ಕೊರತೆಯಿಂದ’ ಆರೋಪಿಗಳನ್ನು ಭ್ರಷ್ಟಾಚಾರದ ಆರೋಪದಿಂದ ಸಂಪೂರ್ಣವಾಗಿ ಮುಕ್ತಗೊಳಿಸಿತು. ಇಟಲಿಯಲ್ಲಿ ಆರೋಪಿಗಳು ಮುಕ್ತರಾಗಿದ್ದರೂ, ಭಾರತದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ತಮ್ಮದೇ ಆದ ಪ್ರತ್ಯೇಕ ತನಿಖೆಯನ್ನು ಮುಂದುವರಿಸಿವೆ.
ಇವೆಲ್ಲವುದರ ನಡುವೆ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಐ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. 2013ರಲ್ಲಿ ಈ ಹಗರಣ ಬೆಳಕಿಗೆ ಬರುತ್ತಿದ್ದಂತೆ ಬಿಜೆಪಿಯು, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿತ್ತು. ಮುಖ್ಯವಾಗಿ 2013ರಿಂದ 2019ರವರೆಗೆ ಚುನಾವಣಾ ಸಂದರ್ಭಗಳಲ್ಲಿ, ಬಿಜೆಪಿಗೆ ಇದೂ ಒಂದು ಪ್ರಚಾರದ ವಿಷಯವಸ್ತುವಾಗಿತ್ತು. ಕಾಂಗ್ರೆಸ್ ರಾಷ್ಟ್ರೀಯ ಸುರಕ್ಷತೆಯೊಂದಿಗೆ ಚೆಲ್ಲಾಟವಾಡಿದೆ ಎಂದು ಬಿಜೆಪಿ ಹೇಳಿಕೊಂಡಿತ್ತು. ನೇರವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪರಿವಾರದ ಮೇಲೆಯೂ ಬಿಜೆಪಿ ಆರೋಪಗಳನ್ನು, ವಾಗ್ದಾಳಿಗಳನ್ನು ಮಾಡುತ್ತಾ ಚುನಾವಣೆಯ ಲಾಭಗಿಟ್ಟಿಸಿಕೊಂಡಿತ್ತು.
ಆದರೆ ವರ್ಷಗಳು ಕಳೆಯುತ್ತಿದ್ದಂತೆ ಯಾವ ಸಂಸ್ಥೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಲಾಗಿತ್ತೋ ಅದೇ ಸಂಸ್ಥೆಗೆ ಮೋದಿ ಅವರ ರಕ್ಷಣಾ ಸಚಿವಾಲಯವು 2021ರಲ್ಲಿ ಕ್ಲೀನ್‌ಚಿಟ್ ನೀಡಿದೆ. ಅಷ್ಟು ಮಾತ್ರವಲ್ಲದೆ ಇದೀಗ ಲಿಯೊನಾರ್ಡೋ ಹೆಸರಿನಲ್ಲಿ ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಜತೆ ಭಾರತದಲ್ಲಿ ಸಮಗ್ರ ಹೆಲಿಕಾಪ್ಟರ್ ಉತ್ಪಾದನಾ ವ್ಯವಸ್ಥೆಯನ್ನು ಸ್ಥಾಪಿಸುವ ಒಪ್ಪಂದ ನಡೆಸುತ್ತಿದೆ. ಈ ಸಹಭಾಗಿತ್ವದ ಅಡಿಯಲ್ಲಿ ಲಿಯೊನಾರ್ಡೊ ಕಂಪನಿಯ ಸುಧಾರಿತ AW169M ಮತ್ತು AW109 TrekkerM ಹೆಲಿಕಾಪ್ಟರ್‌ಗಳನ್ನು ಭಾರತದಲ್ಲೇ ಉತ್ಪಾದಿಸಲು ಮುಂದಾಗಿದೆ. ಕೇವಲ ಉತ್ಪಾದನೆ ಮಾತ್ರವಲ್ಲದೆ, ಹೆಲಿಕಾಪ್ಟರ್‌ಗಳ ನಿರ್ವಹಣೆ, ದುರಸ್ತಿ (MRO) ಮತ್ತು ಪೈಲಟ್‌ಗಳಿಗೆ ತರಬೇತಿ ನೀಡುವ ಕೇಂದ್ರಗಳನ್ನೂ ಈ ಒಪ್ಪಂದದಡಿಯಲ್ಲಿ ಸ್ಥಾಪಿಸಲಾಗುತ್ತದೆ.

ಯುಪಿಎ ಅವಧಿಯಲ್ಲಿ ಭಷ್ಟ ಸಂಸ್ಥೆಯಾಗಿದ್ದ ಅಗಸ್ಟಾ-ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಕಂಪನಿ ಇದೀಗ ಮೋದಿ ಅವಧಿಯಲ್ಲಿ ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಯೋಜನೆಗೆ ಬಲ ನೀಡುವ ಯೋಜನೆಯ ಭಾಗವಾಗಿದೆ! ಈ ಒಪ್ಪಂದದ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶವಿದೆ ಎಂದು ಸರ್ಕಾರ ಹೇಳಿಕೊಂಡಿದೆ! ಇದು ‘ಕ್ರೋನಿ ಕ್ಯಾಪಿಟಲಿಸಂ’ ಅಲ್ಲದೆ ಮತ್ತೇನು? ಭ್ರಷ್ಟಾಚಾರ ಆರೋಪವಿರುವ ಕಂಪನಿಗೆ ಪುನಃ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ನೀಡಿ, ಅದಾನಿ ಅಂತಹ ಖಾಸಗಿ ಸಂಸ್ಥೆಗಳಿಗೆ ಆದ್ಯತೆ ನೀಡಿ ಸಾರ್ವಜನಿಕ ವಲಯದ ಎಚ್‌ಎಎಲ್ (HAL) ನಂತಹ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಕಡೆಗಣಿಸುವುದಲ್ಲವೇ? ಭ್ರಷ್ಟ ಸಂಸ್ಥೆಯೊಂದಿಗೆ ಕೈಜೋಡಿಸಿ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನದ ಲಭ್ಯತೆಯನ್ನು ಹೆಚ್ಚಿಸಲು ಈ ನಿರ್ಧಾರ ಅಗತ್ಯವಾಗಿತ್ತು ಎಂದು ಸರ್ಕಾರ ಸಮರ್ಥನೆಗೆ ಇಳಿಯುವುದು ಎಷ್ಟು ಸರಿ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




