ಎಸ್‌ಐಆರ್ ಗೊಂದಲದ ನಡುವೆಯೇ ಪಶ್ಚಿಮ ಬಂಗಾಳದಲ್ಲಿ ಹಿಂದೂ-ಮುಸ್ಲಿಂ ಮತಾಂಧ ರಾಜಕಾರಣ ತಾರಕಕ್ಕೇರುತ್ತಿದೆ. ಬಿಜೆಪಿ ಎಂದಿನಂತೆ ಹಿಂದೂಗಳ ಓಲೈಕೆ ಮಾಡಿದರೆ, ಟಿಎಂಸಿ ಉಚ್ಚಾಟಿತ ಶಾಸಕ ಮುಸ್ಲಿಮರನ್ನು ಎತ್ತಿಕಟ್ಟಿ ತನ್ನ ಹೊಸ ರಾಜಕೀಯ ಪಕ್ಷ ಕಟ್ಟುವ ದುರಾಸೆಗೆ ಇಳಿದಿದ್ದಾರೆ. ಅದಕ್ಕಾಗಿ ಬಾಬರಿ ಮಸೀದಿ ಎಂಬ ಆಟ ಶುರು ಮಾಡಿದ್ದಾರೆ. ಆದರೆ ಇದರ ಲಾಭವನ್ನೂ ಪಡೆಯುವ ತಂತ್ರವನ್ನು ಬಿಜೆಪಿ ನಡೆಸುತ್ತಿದೆ.
ದೇಶದಲ್ಲಿ ಚುನಾವಣೆ ಎಂದರೆ ಧರ್ಮಗಳ ಆಟ. ಎರಡು ಧರ್ಮಗಳನ್ನು ವಿಂಗಡಿಸಿ ಆಳುವುದು ದೇಶದಲ್ಲಿ ಹೊಸದೇನಲ್ಲ. ಇದು 20ನೇ ಶತಮಾನದ ಆರಂಭದಲ್ಲಿ ಬ್ರಿಟಿಷರ ‘ಡಿವೈಡ್ ಅಂಡ್ ರೂಲ್’ (Divide and Rule) ನೀತಿಯೊಂದಿಗೆ ಆರಂಭವಾಗಿದೆ. ಇಂದಿಗೂ ರಾಜಕೀಯ ಪಕ್ಷಗಳು ಪಾಲಿಸುತ್ತಿರುವುದು ಅದನ್ನೇ. ಅದರಲ್ಲೂ ಬಿಜೆಪಿಗೆ ಪ್ರಮುಖ ಮತ ಬ್ಯಾಂಕ್ ಕೋಮು ರಾಜಕಾರಣ. ಮುಂದಿನ ವರ್ಷ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿಯೂ ಸದ್ಯ ಈ ಹಿಂದೂ-ಮುಸ್ಲಿಂ ಮತಾಂಧ ರಾಜಕಾರಣವೇ ಮೇಲೈಸುತ್ತಿದೆ. ಬರೀ ಹಿಂದೂ ಮಾತ್ರವಲ್ಲ ಮುಸ್ಲಿಂ ಕೋಮುವಾದವೂ ಪಶ್ಚಿಮ ಬಂಗಾಳದಲ್ಲಿ ಮತಬೇಟೆಯ ತಂತ್ರವಾಗುತ್ತಿದೆ.
ಈ ಹಿಂದೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರದಲ್ಲಿ ಬಾಬರಿ ಮಸೀದಿ ಶೈಲಿಯ ಹೊಸ ಮಸೀದಿಯನ್ನು ಕಟ್ಟುವುದಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಹುಮಾಯೂನ್ ಕಬೀರ್ ಘೋಷಿಸಿದ್ದರು. ಇದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಟಿಎಂಸಿ ಕಬೀರ್ ಅವರನ್ನು ಪಕ್ಷದಿಂದಲೇ ಅಮಾನತು ಮಾಡಿತು. ಅದಾದ ಬಳಿಕ ಕಬೀರ್ ಮಸೀದಿಯ ನಿರ್ಮಾಣಕ್ಕೆ ಅಡಿಗಲ್ಲು ಕೂಡಾ ಹಾಕಿದರು, ತಮ್ಮದೇ ಆದ ಹೊಸ ಪಕ್ಷ ನಿರ್ಮಾಣದ ಘೋಷಣೆ ಮಾಡಿದರು. ಇವೆಲ್ಲವೂ ನಡೆದು ಕೆಲವು ದಿನಗಳಲ್ಲೇ ಇದೀಗ ಅಯೋಧ್ಯೆ ಮಾದರಿಯ ರಾಮಮಂದಿರ ಸಂಕೀರ್ಣ ನಿರ್ಮಿಸುವ ಬಗ್ಗೆ ಬಿಜೆಪಿ ನಾಯಕ ಸಂಜಯ್ ಪೊಯ್ರಾ ಹೆಸರಲ್ಲಿ ಕೆಲವು ಪೋಸ್ಟರ್‌ಗಳು ಹರಿದಾಡುತ್ತಿದೆ.
ಇದನ್ನು ಓದಿದ್ದೀರಾ? ‘ಬಾಬರಿ ಮಸೀದಿ’ ಮಾದರಿಯ ಮಸೀದಿ ಶಂಕುಸ್ಥಾಪನೆಗೆ ಮುಂದಾದ ಉಚ್ಚಾಟಿತ ಟಿಎಂಸಿ ಶಾಸಕ; ಪಶ್ಚಿಮ ಬಂಗಾಳದಲ್ಲಿ ಕಟ್ಟೆಚ್ಚರ
ಪಶ್ಚಿಮ ಬಂಗಾಳದಲ್ಲಿ 2026ರ ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಈ ಚುನಾವಣೆಗಾಗಿ ಈಗಾಗಲೇ ಬಗೆ ಬಗೆಯ ರೀತಿಯಲ್ಲಿ ಪ್ರಚಾರಗಳು ನಡೆಯುತ್ತಿದೆ. ಇದೇ ಹೊತ್ತಲ್ಲಿ ವಿಪಕ್ಷಗಳ ವಿರೋಧಗಳ ನಡುವೆಯೂ ಬಂಗಾಳದಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ನಡೆಸಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿನಿಧಿಸುವ ಭಬಾನಿಪುರ ಕ್ಷೇತ್ರವು ಅತಿ ಹೆಚ್ಚು ಮತದಾರರನ್ನು ಹೊರಹಾಕಲಾದ ಕ್ಷೇತ್ರಗಳಲ್ಲಿ ಒಂದಾಗಿರುವುದು ವಿಪಕ್ಷಗಳ ಆರೋಪಕ್ಕೆ ಪುಷ್ಠಿ ನೀಡಿದೆ.
ಚುನಾವಣಾ ಆಯೋಗ ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯ ಕ್ಷೇತ್ರವಾರು ದತ್ತಾಂಶ ಬಿಡುಗಡೆ ಮಾಡಿದೆ. ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಅವರ ನಂದಿಗ್ರಾಮ ಕ್ಷೇತ್ರಕ್ಕಿಂತ ನಾಲ್ಕು ಪಟ್ಟು ಹೆಚ್ಚು ಮತದಾರರ ಹೆಸರನ್ನು ಮಮತಾ ಪ್ರತಿನಿಧಿಸುವ ಭಬಾನಿಪುರ ಕ್ಷೇತ್ರದಲ್ಲಿ ಅಳಿಸಿಹಾಕಲಾಗಿರುವುದು ಸದ್ಯ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಎಸ್‌ಐಆರ್ ಗೊಂದಲದ ನಡುವೆಯೇ ಪಶ್ಚಿಮ ಬಂಗಾಳದಲ್ಲಿ ಹಿಂದೂ-ಮುಸ್ಲಿಂ ಮತಾಂಧ ರಾಜಕಾರಣ ತಾರಕಕ್ಕೇರುತ್ತಿದೆ. ಬಿಜೆಪಿ ಎಂದಿನಂತೆ ಹಿಂದೂಗಳ ಓಲೈಕೆ ಮಾಡಿದರೆ, ಟಿಎಂಸಿ ಉಚ್ಚಾಟಿತ ಶಾಸಕ ಮುಸ್ಲಿಮರನ್ನು ಎತ್ತಿಕಟ್ಟಿ ತನ್ನ ಹೊಸ ರಾಜಕೀಯ ಪಕ್ಷ ಕಟ್ಟುವ ದುರಾಸೆಗೆ ಇಳಿದಿದ್ದಾರೆ. ಅದಕ್ಕಾಗಿ ಬಾಬರಿ ಮಸೀದಿ ಎಂಬ ಆಟ ಶುರು ಮಾಡಿದ್ದಾರೆ. ಆದರೆ ಇದರ ಲಾಭವನ್ನೂ ಪಡೆಯುವ ತಂತ್ರವನ್ನು ಬಿಜೆಪಿ ನಡೆಸುತ್ತಿದೆ.
ಬಾಬರಿ ಮಸೀದಿ ಎಂಬ ಆಟ
ಟಿಎಂಸಿಯಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ನೇತೃತ್ವದಲ್ಲಿ ಪಶ್ಚಿಮ ಬಂಗಾಳದ ರೆಜಿನಗರದಲ್ಲಿ ಬಾಬರಿ ಮಸೀದಿ ಶೈಲಿಯ ಹೊಸ ಮಸೀದಿಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. 2024ರ ಡಿಸೆಂಬರ್ 12ರಂದು ಕಬೀರ್ ಮಾಡಿದ ಘೋಷಣೆಯಂತೆಯೇ 2025ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸದ ದಿನದಂದೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಅಯೋಧ್ಯೆಯಲ್ಲಿದ್ದ ಮೂಲ ಬಾಬರಿ ಮಸೀದಿಯ ವಿನ್ಯಾಸವನ್ನೇ ಹೋಲುವಂತೆ ಈ ಮಸೀದಿಯನ್ನು ನಿರ್ಮಿಸಲಾಗುತ್ತಿದೆ. ಮಸೀದಿ ಸಂಕೀರ್ಣದ ಅಂದಾಜು ವೆಚ್ಚ 300 ಕೋಟಿ ರೂ. ಆಗಿದೆ. ಅಡಿಗಲ್ಲು ಹಾಕಿದ ಕೆಲವೇ ದಿನಗಳಲ್ಲಿ ಸಾರ್ವಜನಿಕರಿಂದ ಬರೋಬ್ಬರಿ 5 ಕೋಟಿ ರೂ.ಗೂ ಅಧಿಕ ದೇಣಿಗೆ ಬಂದಿದೆ ಎಂದು ಹೇಳಲಾಗಿದೆ. ನಿರ್ಮಾಣ ಆರಂಭವಾಗಿದ್ದು, ಇದೇ ಸ್ಥಳದಲ್ಲಿ ಶುಕ್ರವಾರದ ಪ್ರಾರ್ಥನೆಗಳನ್ನೂ ಸಹ ಆಯೋಜಿಸಲಾಗಿದೆ.
ಇದನ್ನು ಓದಿದ್ದೀರಾ? ಮುರ್ಶಿದಾಬಾದ್‌ನಲ್ಲಿ ‘ಬಾಬರಿ ಮಸೀದಿ’: ಕಬೀರ್ ನಡೆ ಬಿಜೆಪಿ ಚುನಾವಣಾ ತಂತ್ರ!
2026ರಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ ಈ ಮಸೀದಿ ನಿರ್ಮಾಣವು ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಕೋಲಾಹಲ ಮತ್ತು ಕೋಮು ವಿವಾದಗಳಿಗೆ ಕಾರಣವಾಗಿದೆ. ಬಿಜೆಪಿ ನಾಯಕರು ಈ ನಡೆಯನ್ನು ಟಿಎಂಸಿಯ ‘ತುಷ್ಟೀಕರಣ ರಾಜಕಾರಣ’ ಎಂದು ಟೀಕಿಸಿದ್ದಾರೆ. ಆದರೆ ಟಿಎಂಸಿ ಮಾತ್ರ ಹುಮಾಯೂನ್ ಕಬೀರ್ ಬಾಬರಿ ಮಸೀದಿ ಶೈಲಿಯ ಮಸೀದಿ ನಿರ್ಮಾಣದ ಘೋಷಣೆ ಮಾಡಿದಾಗಲೇ ಕಬೀರ್ ಅನ್ನು ಪಕ್ಷದಿಂದ ಅಮಾನತುಗೊಳಿಸಿ ‘ಸೇಫ್ ಗೇಮ್’ ಆಡಿದೆ. ಆದರೂ ಬಿಜೆಪಿ ಮಾತ್ರ ಟಿಎಂಸಿ ಅತ್ತ ಬೆರಳು ಮಾಡಿ ರಾಜಕೀಯದಾಟ ಮುಂದುವರೆಸಿದೆ.
ರಾಮ ಮಂದಿರ ಎಂಬ ಮತ್ತೊಂದು ರಾಜಕಾರಣ
ಒಂದೆಡೆ ಬಾಬರಿ ಮಸೀದಿ ಶೈಲಿಯ ಮಸೀದಿ ನಿರ್ಮಾಣ ಎಂಬ ನೆಪದಲ್ಲಿ ರಾಜಕಾರಣಕ್ಕೆ ಕಬೀರ್ ಇಳಿದಿರುವಾಗ ಇನ್ನೊಂದೆಡೆ ಬಿಜೆಪಿ ರಾಮ ಮಂದಿರದ ರಾಜಕಾರಣವನ್ನು ಮುಂದುವರೆಸಿದೆ. ಕಬೀರ್ ಬಾಬರಿ ಮಸೀದಿ ನಿರ್ಮಿಸಲು ಅಡಿಗಲ್ಲು ಹಾಕಿದ ಬೆನ್ನಲ್ಲೇ ರಾಮಮಂದಿರ ಯೋಜನೆಗಳ ಘೋಷಣೆ ಮತ್ತು ಶಂಕುಸ್ಥಾಪನೆಗಳು ನಡೆದಿವೆ. 2024ರ ಡಿಸೆಂಬರ್‌ನಲ್ಲಿ ಕಬೀರ್ ಬಾಬರಿ ಮಸೀದಿ ಶೈಲಿಯ ಮಸೀದಿ ನಿರ್ಮಾಣದ ಘೋಷಣೆ ಮಾಡಿದ್ದರು. ಅದಾದ ಬಳಿಕ 2025ರ ಏಪ್ರಿಲ್ 6ರಂದು ರಾಮ ನವಮಿಯ ಸಂದರ್ಭದಲ್ಲಿ, ಬಿಜೆಪಿ ಶಾಸಕ ಸುವೇಂದು ಅಧಿಕಾರಿ ನಂದಿಗ್ರಾಮದ ಸೋನಚೂರಾ ಗ್ರಾಮದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಬಾಬರಿ ಮಸೀದಿ ಶೈಲಿಯ ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ ಬಳಿಕ ಕೋಲ್ಕತ್ತಾಗೆ ಹೊಂದಿಕೊಂಡಿರುವ ಬಿಧನಗರ (ಸಾಲ್ಟ್ ಲೇಕ್) ಪ್ರದೇಶದಲ್ಲಿ ಅಯೋಧ್ಯೆ ಮಾದರಿಯ ರಾಮಮಂದಿರ ಸಂಕೀರ್ಣ ನಿರ್ಮಿಸುವ ಯೋಜನೆಗಳಿರುವ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂಕೀರ್ಣದಲ್ಲಿ ಆಸ್ಪತ್ರೆ, ಶಾಲೆ ಮತ್ತು ವೃದ್ಧಾಶ್ರಮದಂತಹ ಸೌಲಭ್ಯಗಳನ್ನು ಸಹ ಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ನಾಯಕ ಸಂಜಯ್ ಪೊಯ್ರಾ ಹೆಸರಲ್ಲಿ ಈ ಪೋಸ್ಟರ್‌ಗಳು ಹರಿದಾಡುತ್ತಿವೆ.
ಇವೆಲ್ಲವೂ ಚುನಾವಣೆ ಸಮೀಪಿಸುತ್ತಿರುವಾಗ ನಡೆಯುತ್ತಿರುವುದು ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಲಾಭ ಪಡೆಯುವ ಹುನ್ನಾರ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಆದರೆ ಧರ್ಮದ ಅಮಲು ಮಾತ್ರ ಮಾನವೀಯತೆಯನ್ನು ಮರೆಸುತ್ತಿದೆ. ನೈಜ ವಿಚಾರದಿಂದ ಬೇರೆಡೆ ಜನರ ಮನಸ್ಸನ್ನು ಸೆಳೆದು, ಜನರ ನಡುವೆ ಕಿತ್ತಾಟ ಸೃಷ್ಟಿಸಿ ಅದರಿಂದ ರಾಜಕೀಯ ಲಾಭ ಪಡೆಯುವ ಹುನ್ನಾರವಿದು ಎಂಬುದನ್ನು ಜನರು ಅರ್ಥಮಾಡಿಕೊಂಡರೆ ಉತ್ತಮ. ಆದರೆ ಆ ಬದಲಾವಣೆ ಶುರುವಾಗುವುದು ಯಾವಾಗ? ಜನರಿಗೆ ಮತಕ್ಕಾಗಿ ನಡೆಯುವ ಮತಾಂಧ ರಾಜಕಾರಣ ಅರ್ಥವಾಗುವುದು ಯಾವಾಗ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




