ಬುಧವಾರ (ಜ.28) ಮುಂಜಾನೆಯೇ ದುರದೃಷ್ಟಕರ ದುರ್ಘಟನೆಯೊಂದು ಸಂಭವಿಸಿವೆ. ಮಹಾರಾಷ್ಟ್ರದ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವನ್ನಪ್ಪಿದ್ದಾರೆ. ಅವರ ಖಾಸಗಿ ಜೆಟ್ ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ತಾಂತ್ರಿಕ ದೋಷಗಳನ್ನು ಎದುರಿಸಿದ್ದು, ರನ್‌ವೇಯಿಂದ ಹೊರಗುಳಿದು ಸ್ಫೋಟಗೊಂಡಿದೆ. ಅಜಿತ್ ಪವಾರ್, ಅವರ ಪೈಲಟ್ ಸೇರಿದಂತೆ ಆರು ಮಂದಿ ಕೊನೆಯುಸಿರೆಳೆದಿದ್ದಾರೆ.
ಶರದ್ ಪವಾರ್ ಅವರ ನೇತೃತ್ವದ ಎನ್‌ಸಿಪಿಯನ್ನು ಇಬ್ಭಾಗಿಸಿ, ತಮ್ಮದೇ ಬಣದೊಂದಿಗೆ ಬಿಜೆಪಿ ಜೊತೆಗೂಡಿ ‘ಮಹಾಯುತಿ’ ಮೈತ್ರಿಕೂಟ ರಚಿಸಿದ್ದ ಅಜಿತ್ ಪವಾರ್ ಅವರು ಹಿಂದಿನ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಮತ್ತು ಹಾಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ಕೆಲವು ಹಗರಣಗಳ ಆರೋಪ ಹೊತ್ತಿದ್ದ ಅಜಿತ್, ಅಧಿಕಾರದ ಲಾಲಸೆ ಜೊತೆಗೆ, ಮೋದಿ ಸರ್ಕಾರದ ಇಡಿ, ಸಿಬಿಐ ದಾಳಿಗಳ ಬೆದರಿಕೆಗೆ ಒಳಗಾಗಿ ಎನ್‌ಸಿಪಿಯನ್ನು ಒಡೆದಿದ್ದರು ಮತ್ತು ಬಿಜೆಪಿ ಜೊತೆ ಸೇರಿದ್ದರು ಎಂಬ ವಿಚಾರಗಳು ಮೂರ್ನಾಲ್ಕು ವರ್ಷಗಳಿಂದ ಚರ್ಚೆಯಲ್ಲಿವೆ.
ಅಂದಹಾಗೆ, ಅಜಿತ್ ಪವಾರ್ ಅವರು ಪೂರ್ಣ ಹೆಸರು ‘ಅಜಿತ್ ಅನಂತರಾವ್ ಪವಾರ್’. ಮಾಜಿ ಮುಖ್ಯಮಂತ್ರಿ, ಪ್ರಭಾವಿ ನಾಯಕ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ಅಣ್ಣ ಆನಂತರಾವ್ ಪವಾರ್ ಅವರ ಮಗ. ಶರದ್ ಪವಾರ್ ನಾಯಕತ್ವದಲ್ಲಿ ಎನ್‌ಸಿಪಿಯಲ್ಲಿ ಬೆಳೆದ ಅಜಿತ್, ಮಹಾರಾಷ್ಟ್ರದ ಪ್ರಭಾವಿ ರಾಜಕೀಯ ನಾಯಕನಾಗಿ ಮುನ್ನೆಲೆಗೆ ಬಂದವರು. ಅವರು ಜನಿಸಿದ್ದು, ಅಹಮದ್ನಗರ ಜಿಲ್ಲೆಯ ದೇವಳಾಳಿ ಪ್ರವರದಲ್ಲಿ, 1957ರ ಜುಲೈ 22ರಂದು. ಅವರ ತಾಯಿ ಅಶಾತಾಯಿ ಪವಾರ್.
1982ರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಮಂಡಳಿಗೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಅಜಿತ್ ರಾಜಕೀಯ ಆರಂಭಿಸಿದರು. 1991ರ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಲ್ಲಿ ಎನ್‌ಸಿಪಿಯಿಂದ ಸ್ಪರ್ಧಿಸಿ, ಗೆದ್ದು ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದರು. ಆದರೆ, ಅಂದಿನ ಪಿ.ವಿ ನರಸಿಂಹ ರಾವ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಶರದ್ ಪವಾರ್ ಅವರು ರಕ್ಷಣಾ ಸಚಿವ ಸ್ಥಾನ ಪಡೆಯಲು ದಾರಿ ಮಾಡಿಕೊಡುವ ಉದ್ದೇಶದಿಂದ, ಅದೇ ವರ್ಷ ಸಂಸದ ಸ್ಥಾನಕ್ಕೆ ಅಜಿತ್ ರಾಜೀನಾಮೆಯನ್ನೂ ನೀಡಿದರು. ಬಳಿಕ, ಅವರು ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ತೊಡಗಿಸಿದರು.
ಅಜಿತ್ ಅವರು 1991ರಿಂದ ಈವರೆಗೆ ಸುಮಾರು 8 ಬಾರಿ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಅವಧಿಯಲ್ಲಿ 5-6 ಬಾರಿ ಉಪಮುಖ್ಯಮಂತ್ರಿ ಹುದ್ದೆಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಜೊತೆಗೆ, ಹಣಕಾಸು, ಕೃಷಿ, ವಿದ್ಯುತ್, ಯೋಜನೆ, ಮಣ್ಣು ಸಂರಕ್ಷಣೆ, ಸಣ್ಣ ನೀರಾವರಿ, ಜಲಸಂಪನ್ಮೂಲ, ಊರ್ಜಾ ಮುಂತಾದ ಪ್ರಮುಖ ಇಲಾಖೆಗಳನ್ನು ನಿರ್ವಹಿಸಿದ್ದಾರೆ. ಜನತಾ ದರ್ಬಾರ್ ನಡೆಸುವ ಮೂಲಕ ಸಾಮಾನ್ಯರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಪರಿಹರಿಸುತ್ತಿದ್ದರು ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ.
ಕೃಷಿ ಮತ್ತು ಜಲಸಂಪನ್ಮೂಲ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾಗಿದೆ. ಅವರು ರೈತರ ಹಿತಕ್ಕಾಗಿ ನಾನಾ ಕ್ರಮಗಳನ್ನು ಕೈಗೊಂಡಿದ್ದರು. ರೈತರ ಕೃಷಿ ಪಂಪ್‌ಗಳಿಗೆ ಉಚಿತ ವಿದ್ಯುತ್ ಮತ್ತು ಸೌರ ಗ್ರಿಡ್ ಯೋಜನೆಗಳ ಅನುಷ್ಠಾನಗೊಳಿಸಿದ್ದರು. ಜಲಸಂಪನ್ಮೂಲ ಸಚಿವರಾಗಿ, ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯನ್ನು ರೂಪಿಸಿದ್ದರು. ಜೊತೆಗೆ, ಹೊಸ ಬ್ಯಾರೇಜ್‌ಗಳ ನಿರ್ಮಾಣಕ್ಕೆ ಒತ್ತುಕೊಟ್ಟಿದ್ದರು.
ಹಣಕಾಸು ಖಾತೆಯನ್ನು ನಿಭಾಯಿಸಿದ್ದ ಅಜಿತ್, ಜಿಲ್ಲೆಗಳಿಗೆ ತ್ವರಿತ ನಿಧಿ ವಿತರಣೆಗೆ ಒತ್ತುಕೊಟ್ಟಿದ್ದರು. ರೈತರ ಕಲ್ಯಾಣ, ಕೃಷಿಗೆ ಹೆಚ್ಚಿನ ನಿಧಿ ಹಂಚಿಕೆ ಮಾಡಿದ್ದರು. ತೆರಿಗೆ ಸಂಗ್ರಹಣೆಯನ್ನು ಸುಧಾರಿಸಿದ್ದರು.
ಮಹಾರಾಷ್ಟ್ರ ರಾಜಕೀಯದಲ್ಲಿ ಅಜಿತ್ ಪವಾರ್ ಅವರ ಸಾಧನೆಗಳು ಎಷ್ಟಿವೆಯೋ, ಅದಕ್ಕಿಂತ ಮಿಗಿಲಾಗಿ ವಿವಾದಗಳೂ ಇವೆ. 2013ರಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಅಜಿತ್ ಪವಾರ್, ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುವಾಗ, ‘ಮೂತ್ರ ಮಾಡಿ ನೀರು ತುಂಬಿಸಲಾ?’ ಎಂಬ ಹೇಳಿಕೆ ನೀಡಿ, ವಿವಾದಕ್ಕೆ ಸಿಲುಕಿದ್ದರು. ರೈತರ ಆಕ್ರೋಶಕ್ಕೆ ಗುರಿಯಾಗಿದ್ದರು. ಬಳಿಕ, ಕ್ಷಮೆಯಾಚಿಸಿದರು.
ಹಗರಣಗಳ ಸುಳಿಯಲ್ಲೂ ಸಿಲುಕಿದ್ದ ಅಜಿತ್ ಪವಾರ್, ನೀರಾವರಿಗೆ ಸಂಬಂಧಿತ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದರು. 1999-2014ರ ನಡುವೆ ಜಲಸಂಪನ್ಮೂಲ ಸಚಿವರಾಗಿದ್ದ ಅಜಿತ್, ನೀರಾವರಿಗಾಗಿ ಸುಮಾರು 20,000 ಕೋಟಿ ರೂ.ಗಳಿಗೆ ಅಧಿಕ ಖರ್ಚು ಮಾಡಿದ್ದರೂ, ಅಭಿವೃದ್ಧಿ ಮಾತ್ರ 0.1% ಮಾತ್ರವೇ ಇದೆ. ಬೃಹತ್ ಹಗರಣ ನಡೆದಿದೆ ಎಂದು ಆರೋಪಿಸಲಾಗಿತ್ತು.
ನೀರಾವರಿ ಇಲಾಖೆಯ ಇಂಜಿನಿಯರ್ ಆಗಿದ್ದ ವಿಜಯ್ ಪಂಢರೆ ಅವರು ಅಜಿತ್ ವಿರುದ್ಧ ಗಂಭೀರ ಆರೋಪ ಮಾಡಿ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 2014ರಲ್ಲಿ ಅಧಿಕಾರಕ್ಕೆ ಬಂದ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಈ ಹಗರಣದ ತನಿಖೆ ನಡೆಸಿತು. ಆದಾಗ್ಯೂ, ತನಿಖೆ ನಡೆಸಿದ, ಆ್ಯಂಟಿ ಕರಪ್ಷನ್ ಬ್ಯೂರೋ (ಎಸಿಬಿ) 2019ರಲ್ಲಿ ಅಜಿತ್‌ಗೆ ಕ್ಲೀನ್ ಚಿಟ್ ನೀಡಿತು. ಹಲವು ಪ್ರಕರಣಗಳನ್ನು ಮುಚ್ಚಿತು.
ಈ ಲೇಖನ ಓದಿದ್ದೀರಾ?: ಸಂವಿಧಾನದ ಪೀಠಿಕೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳದ ಹೊರತು ʼಪ್ರತಿಜ್ಞೆʼಗೆ ಅರ್ಥವಿಲ್ಲ
ಅಜಿತ್ ಅವರ ಪುತ್ರ ಪಾರ್ಥ್ ಪವಾರ್ ಅವರು ಪುಣೆಯಲ್ಲಿ ದಲಿತರಿಗೆ ಮೀಸಲಿದ್ದ ‘ಮಹಾರ್ ಸ್ಮಶಾನ ಭೂಮಿ’ಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. 1,800 ಕೋಟಿ ರೂ. ಮೌಲ್ಯದ ಭೂಮಿಯನ್ನು ಕೇವಲ 300 ಕೋಟಿ ರೂ.ಗಳಿಗೆ ಖರೀದಿಸಿದ್ದಾರೆ. ಸ್ಟಾಂಪ್ ತೆರಿಗೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೂ ತಮಗೂ ಸಂಬಂಧಿವಿಲ್ಲವೆಂದು ಅಜಿತ್ ಹೇಳಿಕೊಂಡಿದ್ದರು.
ಇನ್ನು, ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ಗೆ ಸಂಬಂಧಿಸಿದ 25,000 ಕೋಟಿ ರೂ.ಗಳ ಬೃಹತ್ ಹಗರಣದಲ್ಲಿಯೂ ಅಜಿತ್ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಲವಾಸ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಭೂಮಿ ವಿತರಣೆಯಲ್ಲಿ ಅಧಿಕಾರಿಗಳಿಗೆ ಒತ್ತಡ ಹೇರಿದ ಆರೋಪಗಳೂ ಅಜಿತ್ ವಿರುದ್ಧ ಕೇಳಿಬಂದಿದ್ದವು. ಜೊತೆಗೆ, ಅಕ್ರಮ ಮರಳು ಗಣಿಗಾರಿಕೆ, ಪಿಂಪ್ರಿ-ಚಿಂಚವಡ್ ನಗರಸಭೆಯಲ್ಲಿ ಭ್ರಷ್ಟಾಚಾರ ಆರೋಪಗಳಲ್ಲಿಯೂ ಅಜಿತ್ ಹೆಸರು ಕೇಳಿಬಂದಿತ್ತು. ಈ ಎಲ್ಲ ಆರೋಪಗಳನ್ನು ರಾಜಕೀಯ ಪ್ರೇರಿತವೆಂದು ಹೇಳಿದ್ದ ಅಜಿತ್ ಪವಾರ್, ಆರೋಪಗಳನ್ನು ತಳ್ಳಿ ಹಾಕಿದ್ದರು.
ಆದಾಗ್ಯೂ, ಇದೇ ಆರೋಪಗಳ ಆಧಾರದ ಮೇಲೆ ಅಜಿತ್ ವಿರುದ್ಧ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇಡಿ, ಸಿಬಿಐ ದಾಳಿಯ ಬೆದರಿಕೆವೊಡ್ಡಿತ್ತು ಎಂದು ಹೇಳಲಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸುವ ಮೋದಿ ಸರ್ಕಾರದ ಬಲವಂತಕ್ಕೆ ಮಣಿದು ಅಜಿತ್ ಪವಾರ್, ಎನ್‌ಸಿಪಿಯನ್ನು ಇಬ್ಭಾಗ ಮಾಡಿದ್ದರು.
2023ರಲ್ಲಿ ಎನ್‌ಸಿಪಿಯ ಹಲವಾರು ಶಾಸಕರೊಂದಿಗೆ ಅಜಿತ್ ಪವಾರ್, ಬಿಜೆಪಿ-ಶಿವಸೇನಾ (ಶಿಂಧೆ ಬಣ) ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಸೇರಿದರು. ಮತ್ತೆ ಉಪಮುಖ್ಯಮಂತ್ರಿಯಾದರು. ಅವರ ನಡೆಯನ್ನು, ಶರದ್ ಪವಾರ್ ಮತ್ತು ಎಂವಿಎ ‘ರಾಜಕೀಯ ದ್ರೋಹ’ವೆಂದು ಬಣ್ಣಿಸಿದವರು. ಆದಾಗ್ಯೂ, ಅವರು ಬಿಜೆಪಿ ಮೈತ್ರಿಕೂಟ ಸೇರಿದ ಬೆನ್ನಲ್ಲೇ, ಅಜಿತ್ ವಿರುದ್ಧದ ಹಲವಾರು ಪ್ರಕರಣಗಳನ್ನು ಮುಚ್ಚಲಾಯಿತು. ಮೋದಿ ಸರ್ಕಾರದ ಕೃಪೆಯಿಂದಾಗಿ ಅಜಿತ್ ಪವಾರ್ ತಾವು ‘ಕ್ಲೀನ್ ಹ್ಯಾಂಡ್’ ಎಂದು ಹೇಳಿಕೊಳ್ಳಲು ಸಾಧ್ಯವಾಯಿತು.
ಹಾಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್, ಬುಧವಾರ ದುರಂತ ಅಂತ್ಯ ಕಂಡಿದ್ದಾರೆ.




