ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಫೇಸ್‌ಬುಕ್ ಖಾತೆ (ಪುಟ)ವನ್ನು ಫೇಸ್‌ಬುಕ್ ನಿರ್ಬಂಧಿಸಿದೆ. ಅವರ ಖಾತೆಯನ್ನು ಯಾರೊಬ್ಬರೂ ವೀಕ್ಷಿಸಲಾಗದಂತೆ ಮಾಡಲಾಗಿದೆ. ಇದು ಕ್ರಮವು ವಿಪಕ್ಷಗಳ ಧ್ವನಿಯನ್ನು ನಿಗ್ರಹಿಸುವ ಕುತಂತ್ರವೆಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಶುಕ್ರವಾರ ಸಂಜೆ, ಅಖಿಲೇಶ್ ಯಾದವ್ ಅವರ ಫೇಸ್‌ಬುಕ್ ಖಾತೆಯನ್ನು ನಿರ್ಬಂಧಿಸಲಾಗಿದೆ. ಮೋದಿ ಸರ್ಕಾರದ ಆದೇಶದ ಮೇರೆಗೆ ಈ ನಿರ್ಬಂಧ ಹೇರಲಾಗಿದೆ. ಕೇಂದ್ರ ಸರ್ಕಾರವನ್ನು ಅಖಿಲೇಶ್ ಯಾದವ್ ನಿರಂತರವಾಗಿ ಟೀಕಿಸುತ್ತಿದ್ದರು, ಪ್ರಶ್ನಿಸುತ್ತಿದ್ದರು. ಅವರ ದನಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಈ ಕುತಂತ್ರ ಮಾಡಿದೆ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ಆರೋಪಿಸಿದೆ.
ಲೋಕಸಭೆಯಲ್ಲಿ 37 ಸಂಸದರನ್ನು ಹೊಂದಿರುವ ಸಮಾಜವಾದಿ ಪಕ್ಷವು ಬಿಜೆಪಿ ಮತ್ತು ಕಾಂಗ್ರೆಸ್ ನಂತರ ದೇಶದ ಮೂರನೇ ಅತಿದೊಡ್ಡ ಪಕ್ಷವೆಂದು ಹೇಳಿಕೊಂಡಿರುವ ಎಸ್‌ಪಿ, “ದೇಶದ ಮೂರನೇ ಅತಿದೊಡ್ಡ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಫೇಸ್‌ಬುಕ್ ಖಾತೆಯನ್ನು ಸ್ಥಗಿತಗೊಳಿಸಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಬಿಜೆಪಿ ಸರ್ಕಾರ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ವಿಧಿಸಿದೆ. ವಿರೋಧದ ಪ್ರತಿಯೊಂದು ಧ್ವನಿಯನ್ನು ನಿಗ್ರಹಿಸಲು ಬಿಜೆಪಿ ಬಯಸುತ್ತದೆ. ಆದಾಗ್ಯೂ, ಸಮಾಜವಾದಿ ಪಕ್ಷವು ಬಿಜೆಪಿಯ ಜನವಿರೋಧಿ ನೀತಿಗಳನ್ನು ವಿರೋಧಿಸುವುದನ್ನು ಮುಂದುವರಿಸುತ್ತದೆ” ಎಂದು ಎಸ್‌ಪಿ ವಕ್ತಾರ ಫಕ್ರುಲ್ ಹಸನ್ ಚಾಂದ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಆಡಳಿತ ವಿರೋಧಿ ಅಲೆ ದಾಟಿ ದಡ ಸೇರುವರೇ ನಿತೀಶ್-ಮೋದಿ?
“ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ನಾವು ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇವೆ. ನಾವು ಯಾವುದಕ್ಕೂ ಹಿಂಜರಿಯುವುದಿಲ್ಲ, ಜನರ ಸಮಸ್ಯೆಗಳ ಕುರಿತು ದನಿ ಎತ್ತುತ್ತಲೇ ಇರುತ್ತೇವೆ” ಎಂದು ಅವರು ಹೇಳಿದ್ದಾರೆ.
ಎಸ್‌ಪಿ ಸಂಸದ ಸಂಸದ ರಾಜೀವ್ ರೈ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಖಾತೆಯನ್ನು ಫೇಸ್‌ಬುಕ್ ನಿರ್ಬಂಧಿಸಿರುವುದು ಖಂಡನೀಯ. ಮಾತ್ರವಲ್ಲ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ. ಇದನ್ನು ಆಡಳಿತ ಪಕ್ಷದ ಆಜ್ಞೆಯ ಮೇರೆಗೆ ಮಾಡಲಾಗಿದ್ದರೆ, ಅದು ಹೇಡಿತನದ ಸಂಕೇತ. ಸಮಾಜವಾದಿಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುವುದು ಅಕ್ಷಮ್ಯ” ಎಂದಿದ್ದಾರೆ.




