ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಹಾಗೂ ತೇಜಸ್ವಿ ಯಾದವ್ ಅವರನ್ನು ‘ಪಪ್ಪು, ಅಪ್ಪು ಹಾಗೂ ತಪ್ಪು’ ಎಂದು ಬಣ್ಣಿಸಿ, ಮಹಾತ್ಮ ಗಾಂಧಿ ಅವರ ‘ಮೂರು ಮಂಗಗಳು’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿಂದಿಸಿದ್ದರು. ಅವರ ನಿಂದನೆಗೆ ಪ್ರತ್ಯುತ್ತರ ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ಆದಿತ್ಯನಾಥ್ ಅವರು ಕೋತಿಗಳ ಗುಂಪಿನ ನಡುವೆ ಕುಳಿತರೆ, ಅವರನ್ನು ಯಾರೂ ಗುರುತಿಸುವುದಿಲ್ಲ. ಅವರೇ ಮಂಕಿ” ಎಂದು ನಿಂದಿಸಿದ್ದಾರೆ.
ಬಿಹಾರ ಚುನಾವಣೆಯ ಪ್ರಚಾರದಲ್ಲಿ ಮಾತನಾಡಿದ ಅಖಿಲೇಶ್, “ಜನರ ಮನಸ್ಸನ್ನು ಪ್ರಮುಖ ವಿಷಯಗಳಿಂದ ಬೇರೆಡೆಗೆ ತಿರುಗಿಸಲು ಬಿಜೆಪಿಗರು ಗಾಂಧೀಜಿಯವರ ಮೂರು ಕೋತಿಗಳನ್ನು ನೆನಪಿಸಿಕೊಳ್ಳುತ್ತಿದ್ದರೆ. ಸತ್ಯವೆಂದರೆ ಅವರನ್ನು ಕೋತಿಗಳ ಗುಂಪಿನ ನಡುವೆ ಕೂರಿಸಿದರೆ, ನೀವು ಅಥವಾ ನಾನು ಅವರನ್ನು ಗುರುತಿಸಲು ಸಾಧ್ಯವಾಗುವುದಿಲ್ಲ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ನ.6ಕ್ಕೆ ಮೊದಲ ಹಂತದ ಮತದಾನ; ಕಣದಲ್ಲಿರುವ ಘಟಾನುಘಟಿಗಳು ಇವರು!
ಬಿಹಾರವು ಹೈ-ವೋಲ್ಟೇಜ್ ವಿಧಾನಸಭಾ ಚುನಾವಣೆಗೆ ಸಜ್ಜಾಗಿದೆ. ನಾಳೆ (ನ.6) ಮೊದಲ ಹಂತದ ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನ ನವೆಂಬರ್ 11 ರಂದು ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ. ಒಂದು ಕಡೆ ಜೆಡಿಯು, ಬಿಜೆಪಿ, ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಹಾಗೂ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಒಳಗೊಂಡ ಆಡಳಿತಾರೂಢ ಎನ್‌ಡಿಎ ಅಧಿಕಾರ ಉಳಿಸಿಕೊಳ್ಳಲು ನೋಡುತ್ತಿದೆ. ಮತ್ತೊಂದೆಡೆ ಆರ್‌ಜೆಡಿ, ಕಾಂಗ್ರೆಸ್, ಎಡ ಪಕ್ಷಗಳು ಹಾಗೂ ಮುಖೇಶ್ ಸಹಾನಿ ಅವರ ವಿಕಾಸಶೀಲ ಇನ್ಸಾನ್ ಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟವು ಎನ್‌ಡಿಎಯನ್ನು ಸೋಲಿಸಿ ಅಧಿಕಾರ ಪಡೆಯುವ ಉತ್ಸಾಹದಲ್ಲಿದೆ.




