ಆಳಂದ ಮತಗಳವು | ಒಂದೇ ತಿಂಗಳಲ್ಲಿ SITಗೆ ಸಿಕ್ಕಿತು ಅತಿಮುಖ್ಯ ಪುರಾವೆ; ಚು.ಆಯೋಗ ಹಿಂದೆಯೇ ಸ್ಪಂದಿಸಿದ್ದರೆ?

Date:

ದೇಶದ ಉನ್ನತ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮೇಲೆ ಗುರುತರವಾದ ಆರೋಪಗಳು ಬಂದಿರುವಾಗ ಅರೆಬರೆ ಸತ್ಯಗಳನ್ನು ಹೇಳಿದೆ. ನುಣುಚಿಕೊಳ್ಳುವ ಉತ್ತರಗಳನ್ನು ನೀಡಿದೆ. ಹಲವು ಸತ್ಯಗಳನ್ನು ಮರೆಮಾಚಿದೆ. ಖಚಿತ ಆರೋಪಕ್ಕೆ ಖಚಿತ ಉತ್ತರವನ್ನು ನೀಡಬೇಕೇ ವಿನಃ ಹಾರಿಕೆಯ ಉತ್ತರಗಳನ್ನಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ‘ಮತಗಳ್ಳತನ’ ಪ್ರಕರಣವು ಚುನಾವಣಾ ಸಮಯದಲ್ಲಿ ಸದ್ದು ಮಾಡಿ, ಮೂಲೆಗುಂಪಾಗಿತ್ತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸುದ್ದಿಗೋಷ್ಠಿಯಿಂದಾಗಿ ಪ್ರಕರಣಕ್ಕೆ ಮರುಜೀವ ಬಂದಂತಾಗಿದೆ. ತನಿಖೆಗಾಗಿ ರಚಿಸಲಾಗಿದ್ದ ಎಸ್‌ಐಟಿ ಪ್ರಕರಣವನ್ನು ಭೇದಿಸಿದ್ದು, ‘ಪ್ರತಿ ಮತಗಳನ್ನು ಅಳಿಸುವ ಅರ್ಜಿ ಸಲ್ಲಿಕೆಗೆ 80 ರೂ. ನೀಡಲಾಗಿದೆ’ ಎಂಬುದನ್ನು ಕಂಡುಹಿಡಿದಿದೆ. ಇದು, ಪ್ರಕರಣದ ಗಂಭೀರತೆಯನ್ನು ಎತ್ತಿ ತೋರಿಸಿದೆ.

ಸೆಪ್ಟೆಂಬರ್ 26ರಂದು ಪ್ರಕರಣವನ್ನು ಸಿಐಡಿಯಿಂದ ತನ್ನ ತೆಕ್ಕೆಗೆ ತೆಗೆದುಕೊಂಡ ಎಸ್‌ಐಟಿ, ಕೇವಲ ನಾಲ್ಕೇ ವಾರಗಳಲ್ಲಿ ಮಹತ್ವದ ಸಂಗತಿಯನ್ನು ಪತ್ತೆ ಹಚ್ಚಿದೆ. “ಮತದಾರರ ಹೆಸರು ಅಳಿಸಲು ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಗೆ ಪ್ರತಿ ಅರ್ಜಿಗೂ 80 ರೂ. ನೀಡಲಾಗಿದೆ. ಈ ಅರ್ಜಿಗಳನ್ನು ಕಲಬುರಗಿ ಜಿಲ್ಲಾ ಕೇಂದ್ರದಲ್ಲಿರುವ ಡೇಟಾ ಸೆಂಟರ್‌ನಿಂದ ಸಲ್ಲಿಸಲಾಗಿದೆ. ಇದರ ಹಿಂದೆ ಡೇಟಾ ಸೆಂಟರ್ ಮತ್ತು ಬಿಜೆಪಿ ನಾಯಕರೊಬ್ಬರ ಸಹಾಯಕರ ಕೈವಾಡವಿದೆ” ಎಂದು ಎಸ್‌ಐಟಿ ಕಂಡುಹಿಡಿದಿದೆ.

ಅಲ್ಲದೆ, ಅಕ್ಟೋಬರ್ 17ರಂದು ಬಿಜೆಪಿ ನಾಯಕ ಸುಭಾಷ್ ಗುತ್ತೇದಾರ್, ಅವರ ಪುತ್ರರಾದ ಹರ್ಷಾನಂದ ಮತ್ತು ಸಂತೋಷ್ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಮಲ್ಲಿಕಾರ್ಜುನ್ ಮಹಾಂತಗೋಲ್ ಅವರ ಮೇಲೆ ದಾಳಿ ನಡೆಸಿದ್ದು, 7ಲ್ಯಾಪ್‌ಟಾಪ್‌ಗಳು ಮತ್ತು ಹಲವು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎಸ್‌ಐಟಿ ತನಿಖೆ ಆರಂಭಿಸಿದ ಸುಮಾರು 20 ದಿನಗಳಲ್ಲಿಯೇ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ ಎಂಬುದು ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಳಂದದಲ್ಲಿ ಚುನಾವಣಾ ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿಬಂದದ್ದು, ಪ್ರಕರಣ ದಾಖಲಾಗಿದ್ದ 2023ರಲ್ಲಿ. ಅಂದಿನಿಂದ ಇಂದಿನವರೆಗೂ ಪ್ರಕರಣದಲ್ಲಿ ಯಾವುದೇ ಗಂಭೀರ ಅಂಶಗಳನ್ನು ಸಿಐಡಿ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಸಿಐಡಿಗೆ ಚುನಾವಣಾ ಆಯೋಗವು ಸಹಕಾರವನ್ನೂ ನೀಡಿರಲಿಲ್ಲ. ಒಂದು ವೇಳೆ, ಆಯೋಗವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಈವರೆಗೆ ತನಿಖೆಯು ಭಾಗಶಃ ಅಂತಿಮ ಹಂತಕ್ಕೆ ತಲುಪುತ್ತಿತ್ತು.

ಅಂದಹಾಗೆ, ಆಳಂದದಲ್ಲಿ ಮತ ಕಳ್ಳತನವು ಬೆಳಕಿಗೆ ಬಂದದ್ದು, 2023ರ ಫೆಬ್ರವರಿಯಲ್ಲಿ. ಅಂದರೆ, ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗ. ”ಕ್ಷೇತ್ರದ ಮತದಾರರ ಅರಿವಿಗೆ ಬಾರದೆ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ” ಎಂಬುದು ಬಿಎಲ್‌ಒ ಒಬ್ಬರ ಸಹೋದರ ಮತವನ್ನು ಅಳಿಸುವ ಅರ್ಜಿ ಬಂದಾಗ ಗೊತ್ತಾಯಿತು.

ಮತದಾರರ ಮಾಹಿತಿ ಕಳವು, ನಕಲಿ ಲಾಗಿನ್ ಗಳು ಹಾಗೂ ಹೊರರಾಜ್ಯದ ಮೊಬೈಲ್ ಸಂಖ್ಯೆಗಳ ಮೂಲಕ ಬೇನಾಮಿ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದೆ. ಕುಟುಂಬವೊಂದರ ಅರಿವಿಗೆ ಬಾರದೆಯೇ ಇಡೀ ಕುಟುಂಬದ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವಂತೆ ಅರ್ಜಿ ಸಲ್ಲಿಕೆಯಾಗಿತ್ತು. ಅಂತಹ ಅರ್ಜಿಗಳಲ್ಲಿ ಬಿಎಲ್‌ಒ ಸಹೋದರನ ಹೆಸರನ್ನು ಅಳಿಸುವ ಅರ್ಜಿಯೂ ಒಂದಾಗಿತ್ತು.

ಆ ಬಿಎಲ್‌ಒ ಸಹೋದರ ಬಿ ಆರ್ ಪಾಟೀಲ್ ಅವರ ನಿಕಟವರ್ತಿಯಾಗಿದ್ದ ಕಾರಣ, ಮತ ಕಳ್ಳತನದ ವಿಚಾರ ಬಿ ಆರ್ ಪಾಟೀಲ್ ಅವರಿಗೆ ಗೊತ್ತಾಯಿತು. ಬಳಿಕ, ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದರು. ಅವರ ದೂರು ಆಧರಿಸಿ, ಪರಿಶೀಲನೆ ನಡೆಸುವಂತೆ ಕರ್ನಾಟಕ ಚುನಾವಣಾ ಆಯೋಗವು ಸ್ಥಳೀಯ ಚುನಾವಣಾ ಅಧಿಕಾರಿಗೆ (ಜಿಲ್ಲಾಧಿಕಾರಿ) ಸೂಚಿಸಿತು. ಸ್ಥಳೀಯ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಬರೋಬ್ಬರಿ 5,994 ಮತಗಳನ್ನು ಅಳಿಸಿಹಾಕಲು ನಕಲಿ ಅರ್ಜಿಗಳು ಸಲ್ಲಿಕೆಯಾಗಿರುವುದು ಬೆಳಕಿಗೆ ಬಂದಿತು.

ಬಳಿಕ, ಕಲಬುರಗಿ ಸಹಾಯಕ ಆಯುಕ್ತೆ ಮಮತಾ ದೇವಿ ಅವರು 2023ರ ಫೆಬ್ರವರಿ 21ರಂದು ಆಳಂದ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದರು.

ಅಂತಿಮವಾಗಿ, ನಕಲಿ ಅರ್ಜಿಗಳಿಂದ ಮತದಾನದ ಹಕ್ಕು ಕಳೆದುಕೊಂಡಿದ್ದ 5,994 ಮತದಾರರ ಹೆಸರುಗಳನ್ನು ಮತಪಟ್ಟಿಯಲ್ಲಿ ಮರಳಿ ಸೇರಿಸಲಾಯಿತು. ಈ 5,994 ಮತದಾರರಲ್ಲಿ ಬಹುತೇಕರು ಕಾಂಗ್ರೆಸ್‌ಗೆ ಮತ ಚಲಾಯಿಸುವ ದಲಿತರು, ಬಡವರು, ಅಲ್ಪಸಂಖ್ಯಾತರು ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ, ಈ ಮತ ಕಳ್ಳತನ ಪ್ರಕರಣವನ್ನು ಸರ್ಕಾರವು ಸಿಐಡಿ ತನಿಖೆ ವರ್ಗಾಯಿಸಿತು. ಆದರೆ, ಅರ್ಜಿ ಸಲ್ಲಿಸಿದ್ದ ಆರೋಪಿಗಳನ್ನು ಪತ್ತೆ ಮಾಡಲು ಅಗತ್ಯವಿರುವ ‘ಅರ್ಜಿ ಸಲ್ಲಿಸಿದವರ ಐಪಿ ಅಡ್ರೆಸ್‌’ಗಳನ್ನು ನೀಡುವಂತೆ ಕೇಳಿ 18 ತಿಂಗಳಲ್ಲಿ 18 ಬಾರಿ ಚುನಾವಣಾ ಆಯೋಗಕ್ಕೆ ಸಿಐಡಿ ಪತ್ರ ಬರೆದರೂ, ಚುನಾವಣಾ ಆಯೋಗ ಈವರೆಗೆ ಸಿಐಡಿ ಪತ್ರಕ್ಕೆ ಸ್ಪಂದಿಸಿಲ್ಲ. ಅರ್ಜಿ ಸಲ್ಲಿಸಿದವರ ಮಾಹಿತಿಯನ್ನು ಸಿಐಡಿಗೆ ಒದಗಿಸಿಲ್ಲ ಎಂಬ ಗಂಭೀರ ಆರೋಪವಿದೆ.

ಈ ಕಾರಣಕ್ಕಾಗಿಯೇ, ಸೆಪ್ಟೆಂಬರ್ 18ರಂದು ಪತ್ರಿಕಾಗೋಷ್ಠಿ ನಡೆಸಿದ ರಾಹುಲ್‌ ಗಾಂಧಿ, “ಮತಪಟ್ಟಿಯಿಂದ ಮತದಾರರ ಹೆಸರನ್ನು ಅಳಿಸುವಂತೆ ನಕಲಿ ಅರ್ಜಿ ಸಲ್ಲಿಸಿದವರು ಯಾರು? ಇಂತಹ ಕೃತ್ಯಗಳನ್ನು ಮಾಡುತ್ತಿರುವವರು ಯಾರು ಎಂಬುದು ಚುನಾವಣಾ ಆಯುಕ್ತರಿಗೆ ತಿಳಿದಿದೆ. ಆದರೆ, ಅವರು ಅರ್ಜಿ ಸಲ್ಲಿಸಿದವರ ಮಾಹಿತಿಯನ್ನು ನೀಡದೆ, ಮತ ಕಳ್ಳತನದ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಯತ್ನಿಸಿದ ಕೊಲೆಗಾರರನ್ನು ಚುನಾವಣಾ ಆಯುಕ್ತರು ರಕ್ಷಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಆಳಂದ ಮಾತ್ರವಲ್ಲದೆ, ಕಳೆದ ನಾಲ್ಕೈದು ವರ್ಷಗಳಲ್ಲಿ ದೇಶಾದ್ಯಂತ ಹಲವು ರಾಜ್ಯಗಳು ಮತ್ತು ಕ್ಷೇತ್ರಗಳಲ್ಲಿ ಮತಗಳವು ನಡೆದಿದೆ ಎಂದು ಕಾಂಗ್ರೆಸ್‌ ನಿರಂತರವಾಗಿ ಆರೋಪಿಸುತ್ತಿದೆ. ‘ವೋಟ್‌ ಚೋರಿ‘ ಸಂಬಂಧ ಈವರೆಗೆ ಎರಡು ಸುದ್ದಿಗೋಷ್ಠಿಗಳನ್ನು ನಡೆಸಿರುವ ರಾಹುಲ್‌ ಗಾಂಧಿ, ‘ಕರ್ನಾಟಕ, ಮಹಾರಾಷ್ಟ್ರ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತಗಳವು ನಡೆದಿದೆ, ನಡೆಯುತ್ತಿದೆ. ಬಿಜೆಪಿ ಜೊತೆ ಚುನಾವಣಾ ಆಯೋಗ ಕೈಜೋಡಿಸಿದ್ದು, ಚುನಾವಣಾ ಅಕ್ರಮಗಳು ನಡೆಯುತ್ತಿವೆ’ ಎಂದು ದಾಖಲೆ ಸಮೇತ ಆರೋಪಿಸಿದ್ದಾರೆ. ಅಲ್ಲದೆ, ಬೆಂಗಳೂರು ಮತ್ತು ಬಿಹಾರದಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದಾರೆ.

ಈ ಹಿಂದೆ, ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಕನಿಷ್ಠ 15% ಮತದಾರರು ನಕಲಿ ಎಂಬುದಾಗಿ ಆರೋಪಿಸಿದ್ದ ರಾಹುಲ್ ಗಾಂಧಿ, ತಮ್ಮ ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಮತ್ತೊಂದು ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 2023ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಆಳಂದದಲ್ಲಿ 6,018 ಮತದಾರರ ಹೆಸರನ್ನು ಅಳಿಸಲು ಯತ್ನಗಳು ನಡೆದಿದ್ದವು. ಅವುಗಳಲ್ಲಿ 5,994 ಮತಗಳನ್ನು ಅಕ್ರಮವಾಗಿ ಅಳಿಸಿ ಹಾಕಲು ಯತ್ನಿಸಲಾಗಿತ್ತು. ಈ ಕೃತ್ಯದಲ್ಲಿ ಚುನಾವಣಾ ಆಯೋಗವು ನೇರವಾಗಿ ಸಹಕರಿಸಿದೆ ಎಂದು ಆರೋಪಿಸಿದ್ದರು.

ಈ ಲೇಖನ ಓದಿದ್ದೀರಾ?: ‘ಆಳಂದ’ ಕ್ಷೇತ್ರದಲ್ಲಿ ಭಾರೀ ಮತ ಕಳ್ಳತನ; ಸಿಐಡಿ ತನಿಖೆಗೆ ಸ್ಪಂದಿಸದ ಚುನಾವಣಾ ಆಯೋಗ!

ರಾಹುಲ್‌ ಗಾಂಧಿ ಆರೋಪಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಿ, ತಮ್ಮದೇನೂ ತಪ್ಪಿಲ್ಲವೆಂದು ತೋರಿಸಿಕೊಳ್ಳಲು ಯತ್ನಿಸಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್, ದೇಶದ ಜನರ ಎದುರು ಬೆತ್ತಲಾಗಿದ್ದರು. “ರಾಹುಲ್‌ ಅವರ ಆರೋಪಗಳು ಆಧಾರರಹಿತ. ಸಾರ್ವಜನಿಕರು ಆನ್‌ಲೈನ್‌ನಲ್ಲಿ ಯಾವುದೇ ಮತಗಳನ್ನು ಅಳಿಸಲು ಸಾಧ್ಯವಿಲ್ಲ” ಎಂದು ಹೇಳಿಕೊಂಡಿದ್ದರು. ಆದರೆ, ರಾಹುಲ್ ಗಾಂಧಿ ಹೇಳಿದ್ದು, ‘ಮತದಾರರ ಹೆಸರನ್ನು ಮತಪಟ್ಟಿಯಿಂದ ಅಳಿಸಿಹಾಕುವಂತೆ ಬೇರೊಬ್ಬ ವ್ಯಕ್ತಿ ಆನ್‌ಲೈನ್‌ನಲ್ಲಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿದೆ’ ಎಂದಷ್ಟೇ.

ಇನ್ನು, ಚುನಾವಣಾ ಆಯೋಗವೇ ಎಫ್‌ಐಆರ್‌ ದಾಖಲಿಸಿದೆ ಎಂದು ಜ್ಞಾನೇಶ್ ಕುಮಾರ್ ಮತ್ತೊಂದು ಸುಳ್ಳು ಹೇಳಿದ್ದರು. ಆದರೆ, ಆದರೆ, ಚುನಾವಣಾ ಆಯೋಗವೇ ಸ್ವಯಂ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿರಲಿಲ್ಲ. 2023ರ ಫೆಬ್ರುವರಿಯಲ್ಲಿ ಆಳಂದದ ಹಾಲಿ ಶಾಸಕ, ಅಂದಿನ ಅಭ್ಯರ್ಥಿ ಬಿ.ಆರ್ ಪಾಟೀಲ್ ಮತ್ತು ಪ್ರಿಯಾಂಕ್‌ ಖರ್ಗೆ ಅವರು ನೀಡಿದ ದೂರಿನ ಆಧಾರದ ಮೇಲೆಯೇ ಎಫ್‌ಐಆರ್ ದಾಖಲಾಗಿತ್ತು.

ರಾಹುಲ್ ಗಾಂಧಿ ಆರೋಪಗಳಿಗೆ ತ್ವರಿತವಾಗಿ ಸ್ಪಂದಿಸಿದ ಚುನಾವಣಾ ಆಯುಕ್ತರು, ಮತಗಳವು ಪ್ರಕರಣಕ್ಕೂ ಅಷ್ಟೇ ತ್ವರಿತವಾಗಿ ಸ್ಪಂದಿಸಿದ್ದರೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ, ತನಿಖೆ ನಡೆಸುತ್ತಿದ್ದ ಸಿಐಡಿಗೆ ಎಲ್ಲ ರೀತಿಯಲ್ಲಿಯೂ ಸ್ಪಂದಿಸಿದ್ದರೆ, ಆಳಂದ ಮತಗಳವು ಪ್ರಕರಣದ ಆರೋಪಿಗಳು, ಕೃತ್ಯಗಳು ಬೆಳಕಿಗೆ ಬರುತ್ತಿದ್ದವು. ಚುನಾವಣಾ ಆಯೋಗದ ಮೇಲಿನ ಕಳಂಕವೂ ಅಳಿಸಿಹೋಗುತ್ತಿತ್ತು.

ಆದರೆ, ಸಿಐಡಿ ಬರೆದ 18 ಪತ್ರಗಳಿಗೆ ಚುನಾವಣಾ ಆಯೋಗ ಸ್ಪಂದಿಸಲೇ ಇಲ್ಲ. ಡಿಜಿಟಲ್ ಸಾಕ್ಷ್ಯಗಳನ್ನು ಒದಗಿಸಲೂ ಇಲ್ಲ. ಸರಿಯಾದ ಸಹಕಾರ ನೀಡದ ಚುನಾವಣಾ ಆಯೋಗ, ತನಿಖೆಗೆ ತಡೆಯೊಡ್ಡಿತ್ತು.

ದೇಶದ ಉನ್ನತ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮೇಲೆ ಗುರುತರವಾದ ಆರೋಪಗಳು ಬಂದಿರುವಾಗ ಅರೆಬರೆ ಸತ್ಯಗಳನ್ನು ಹೇಳಿತ್ತು. ಖಚಿತ ಆರೋಪಕ್ಕೆ ಖಚಿತ ಉತ್ತರವನ್ನು ನೀಡಬೇಕೇ ವಿನಃ ಹಾರಿಕೆಯ ಉತ್ತರಗಳನ್ನಲ್ಲ.

ಈ ನಡುವೆ, ಆಳಂದ ಪಟ್ಟಣದ ಸೋಲಾಪೂರ ಮಾರ್ಗದ ರಾಜ್ಯ ಹೆದ್ದಾರಿಯ ಶಖಾಪೂರ ಸೇತುವೆ ಬಳಿ ಅರೆಬರೆ ಸುಟ್ಟ ಮತದಾರರ ಪಟ್ಟಿಯ ದಾಖಲೆಗಳು ಪತ್ತೆಯಾದರೆ, ಮಟಕಿ ರಸ್ತೆಯ ಮನೆಯೊಂದರ ಬಳಿ ಮತಪಟ್ಟಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದು ಪತ್ತೆಯಾಗಿದೆ. ಶುಕ್ರವಾರ ಇವೆರಡೂ ಸ್ಥಳಗಳಿಗೆ ಎಸ್ಐಟಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಒಂದು ಅರ್ಜಿಗೆ 80 ರೂ. ನೀಡಲಾಗಿದೆ ಎಂಬುದನ್ನು ಪತ್ತೆ ಹಚ್ಚಿದೆ. ಹಲವಾರು ವಿದ್ಯುನ್ಮಾನ ಉಪಕರಣಗಳನ್ನು ವಶಕ್ಕೆ ಪಡೆದಿದೆ. ಆಯೋಗವು ಈಗಲಾದರೂ ಎಸ್‌ಐಟಿ ತನಿಖೆಗೆ ಸರಿಯಾಗಿ ಸ್ಪಂದಿಸಿದ್ದೇ ಆದಲ್ಲಿ, ಬೃಹತ್ ಅಕ್ರಮ ‘ವೋಟ್‌ ಚೋರಿ’ ಹಿಂದಿರುವವರು ಯಾರೆಂಬುದು ಸ್ಪಷ್ಟವಾಗಿ ಗೊತ್ತಾಗಲಿದೆ.

ಆದರೆ, ರಾಹುಲ್‌ ಗಾಂಧಿ ಆರೋಪದಂತೆ ಚುನಾವಣಾ ಆಯೋಗಕ್ಕೆ ಪ್ರಕರಣದಲ್ಲಿ ಆರೋಪಿಗಳನ್ನು ಗುರುತಿಸುವುದು, ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಅಥವಾ ಪ್ರಕರಣದ ತನಿಖೆ ಪೂರ್ಣಗೊಳ್ಳುವುದು ಬೇಕಿಲ್ಲ. ಚುನಾವಣಾ ಆಯೋಗಕ್ಕೆ ‘ಸಿರಿಯಸ್ ನೆಸ್’ ಕೂಡ ಇಲ್ಲ ಎಂಬುದು ಸ್ಪಷ್ಟ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...