ಸಂಸತ್ತಿನ ಚಳಿಗಾಲದದ ಅಧಿವೇಶನ ಆರಂಭವಾಗಿದ್ದು ಮೊದಲ ದಿನವೇ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(SIR) ಬಗ್ಗೆ ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದೆ. ಇದರ ನಡುವೆಯೇ ಕೇಂದ್ರ ಸರ್ಕಾರವು ಮಣಿಪುರ ಜಿಎಸ್‌ಟಿ ಮಸೂದೆ ಮಂಡಿಸಿ, ಅಂಗೀಕಾರಗೊಳಿಸಿದೆ.
ಕೆಲಸದ ಒತ್ತಡದಿಂದಾಗಿ ಬೂತ್ ಮಟ್ಟದ ಅಧಿಕಾರಿಗಳ (BLO) ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಿರುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿದೆ. ಹಲವು ವಿಪಕ್ಷದ ಸದಸ್ಯರು SIR ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಪ್ರತಿಭಟಿಸಿದ್ದಾರೆ. ಈ ಗದ್ದಲದ ನಡುವೆ ಬೆಳಿಗ್ಗೆ ಮತ್ತು ನಂತರ ಪ್ರಶ್ನೋತ್ತರ ಅವಧಿಯಲ್ಲಿ ಸದನವು ಎರಡು ಬಾರಿ ಮುಂದೂಡಲ್ಪಟ್ಟಿದೆ.
ಇದನ್ನು ಓದಿದ್ದೀರಾ? ಶ್ರೀಮಂತ ಪಕ್ಷ ಬಿಜೆಪಿ 60,000 ಕೋಟಿ ರೂ. ಖರ್ಚಿನ ಬಗ್ಗೆ ಉತ್ತರಿಸಲೇಬೇಕಿದೆ
ಅದರ ನಡುವೆಯೂ ಮಣಿಪುರದಲ್ಲಿ ಜಿಎಸ್‌ಟಿ ಕಾನೂನಿಗೆ ತಿದ್ದುಪಡಿಗಳನ್ನು ಜಾರಿಗೆ ತರುವ ಮಸೂದೆಯನ್ನು ಸಂಕ್ಷಿಪ್ತ ಚರ್ಚೆಯ ನಂತರ ಅಂಗೀಕರಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರಂಭದಲ್ಲಿ ಮಸೂದೆಯನ್ನು ಪರಿಚಯಿಸಿದರು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯಿರುವ ಕಾರಣ ಸಂಸತ್ತು ತನ್ನ ಅಧಿಕಾರವನ್ನು ಬಳಸಿಕೊಂಡು ಶಾಸನವನ್ನು ಅಂಗೀಕರಿಸಿದೆ ಎಂದು ವರದಿಯಾಗಿದೆ.
ಶೂನ್ಯ ವೇಳೆಯ 12 ನಿಮಿಷಗಳ ಅವಧಿಯಲ್ಲಿ, ಸೀತಾರಾಮನ್ ಅವರು 2025-2026ರ ಅನುದಾನಕ್ಕಾಗಿ ಪೂರಕ ಬೇಡಿಕೆಗಳನ್ನು ಮಂಡಿಸುವುದರ ಜತೆಗೆ ಮೂರು ಮಸೂದೆಗಳನ್ನು ಮಂಡಿಸಿದರು.
ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸುವ ಎರಡು ಮಸೂದೆಗಳು ಪರಿಚಯಿಸಲಾಯಿತು ಮತ್ತು ಪಾನ್ ಮಸಾಲಾ ತಯಾರಿಕೆಯ ಮೇಲೆ ಹೊಸ ಸೆಸ್ ಅನ್ನು ವಿಧಿಸುವುದನ್ನೂ ಘೋಷಿಸಲಾಯಿತು. ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025 ಮತ್ತು ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ, 2025 ಮಂಡಿಸಲಾಗಿದೆ.
ಇದನ್ನು ಓದಿದ್ದೀರಾ? ಕಾವೇರಿಸಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನ – ಧೂಳೆಬ್ಬಿಸುವ ವಂದೇ ಮಾತರಂ – ಎಸ್ ಐ ಆರ್
ಏನಿದು ಮಣಿಪುರ ಜಿಎಸ್‌ಟಿ ಮಸೂದೆ?
ಮಣಿಪುರ ಜಿಎಸ್‌ಟಿ ಕಾಯಿದೆ, 2017ಕ್ಕೆ ಕೆಲವು ತಿದ್ದುಪಡಿಗಳನ್ನು ತರುವ ಮಸೂದೆ ಇದಾಗಿದೆ. ಮಣಿಪುರ ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆಯ ಅಡಿಯಲ್ಲಿರುವುದರಿಂದ, ರಾಜ್ಯ ವಿಧಾನಸಭೆಯ ಬದಲಿಗೆ ಲೋಕಸಭೆಯಲ್ಲಿ ಈ ಮಸೂದೆ ಅಂಗೀಕರಿಸಲಾಗಿದೆ. 56ನೇ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಅಸ್ತಿತ್ವದಲ್ಲಿರುವ 5%, 12%, 18%, ಮತ್ತು 28% ತೆರಿಗೆ ಸ್ಲ್ಯಾಬ್‌ಗಳನ್ನು 5% ಮತ್ತು 18% ಎಂಬ ಎರಡು ಸ್ಲ್ಯಾಬ್‌ಗಳಾಗಿ ವಿಲೀನಗೊಳಿಸಲು ನಿರ್ಧರಿಸಲಾಗಿದೆ. ಇದನ್ನು ಈ ತಿದ್ದುಪಡಿಯಲ್ಲಿ ಸೇರಿಸಲಾಗಿದೆ. ಅಲ್ಟ್ರಾ-ಐಷಾರಾಮಿ ವಸ್ತುಗಳ ಮೇಲೆ ಶೇಕಡ 40ರಷ್ಟು ಹೊಸ ಸೆಸ್ ವಿಧಿಸಲು ಪ್ರಸ್ತಾಪಿಸಲಾಗಿದೆ.
ಆದರೆ ಎಸ್‌ಐಆರ್ ಸಂಬಂಧ ವಿರೋಧ ಪಕ್ಷಗಳ ಗದ್ದಲ ಮತ್ತು ಪ್ರತಿಭಟನೆಗಳ ನಡುವೆಯೇ ಈ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ. ಚರ್ಚೆಯೂ ನಡೆದಿಲ್ಲ. ಈ ಪ್ರಕ್ರಿಯೆಯ ಬಗ್ಗೆ ಸದ್ಯ ವಿರೋಧ ವ್ಯಕ್ತವಾಗುತ್ತಿದೆ.





