ಲೋಕಸಭೆ ಚುನಾವಣೆಯ ನಂತರ ಪಂಜಾಬ್‌ನಲ್ಲಿ ಭಗವಂತ್ ಮಾನ್ ಸರ್ಕಾರವನ್ನು ಪತನಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆದರಿಕೆ ಹಾಕಿದ್ದಾರೆ. ಇದು ಸರ್ವಾಧಿಕಾರಿ ನಡೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸೋಮವಾರ ಆರೋಪಿಸಿದ್ದಾರೆ.
ಭಾನುವಾರ ಪಂಜಾಬ್‌ನ ಲುಧಿಯಾನದಲ್ಲಿ ಅಮಿತ್ ಶಾ ಚುನಾವಣಾ ರ್ಯಾಲಿ ನಡೆಸಿದ್ದಾರೆ. ಈ ವೇಳೆ, ಪಂಜಾಬ್‌ನಲ್ಲಿ ಬಿಜೆಪಿಯ ಅಭ್ಯರ್ಥಿಗಳ ಗೆಲುವಿಗೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಕೇಂದ್ರದಲ್ಲಿ ಬಿಜೆಪಿಯ ವಿಜಯದ ನಂತರ ಭಗವಂತ್ ಮಾನ್ ಸರ್ಕಾರವು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.
ಅಮೃತಸರದಲ್ಲಿ ಸೋಮವಾರ ನಡೆ ವರ್ತಕರ ಸಭೆಯಲ್ಲಿ ಅಮಿತ್ ಶಾ ಹೇಳಿಕೆ ಬಗ್ಗೆ ಮಾತನಾಡಿದ ಕೇಜ್ರಿವಾಲ್, “ಅಮಿತ್ ಶಾ ಅವರ ಹೇಳಿಕೆಯನ್ನು ನೀವು ಕೇಳಿದ್ದೀರಾ? ಅವರು ಬೆದರಿಕೆ ಹಾಕಿದ್ದಾರೆ. ಆರಂಭದಲ್ಲಿ ಅವರು ಪಂಜಾಬಿಗಳನ್ನು ಸಾಕಷ್ಟು ನಿಂದಿಸಿದ್ದರು. ಈಗ, ಜೂನ್ 4ರ ನಂತರ ಪಂಜಾಬ್ ಸರ್ಕಾರವನ್ನು ಉರುಳಿಸುವ ಬೆದರಿಕೆ ಹಾಕಿದ್ದಾರೆ. ಜೂನ್ 4ರ ನಂತರ ಭಗವಂತ್ ಮಾನ್ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ ಎಂಬ ಬೆದರಿಕೆವೊಡ್ಡಿದ್ದಾರೆ” ಎಂದು ಆರೋಪಿಸಿದರು.
“ನಮ್ಮಲ್ಲಿ 92 ಶಾಸಕರಿದ್ದಾರೆ. ನೀವು ನಮ್ಮ ಸರ್ಕಾರ ಅನ್ನು ಹೇಗೆ ಉರುಳಿಸುತ್ತೀರಿ? ದೇಶದಲ್ಲಿ ಸರ್ವಾಧಿಕಾರವಿದೆ. ಬಿಜೆಪಿ ನಾಯಕರು ಸಿಬಿಐ, ಇಡಿ ಮೂಲಕ ಶಾಸಕರಿಗೆ ಬೆದರಿಕೆ ಹಾಕುತ್ತಾರೆ. ಬಳಿಕ, ಅವರನ್ನು ಖರೀದಿ ಮಾಡುತ್ತಾರೆ” ಎಂದು ಕೇಜ್ರಿವಾಲ್ ದೂರಿದ್ದಾರೆ.
“ನಾನು ಅಮಿತ್ ಶಾ ಅವರಿಗೆ ಹೇಳಬಯಸುತ್ತೇನೆ. ನೀವು ಪಂಜಾಬ್‌ನ ಜನರಿಗೆ ಬೆದರಿಕೆ ಹಾಕಿದರೆ, ನಿಮಗೆ ಪಂಜಾಬ್‌ಗೆ ಪ್ರವೇಶಿಸಲು ಕಷ್ಟವಾಗುತ್ತದೆ. ಎಚ್ಚರಿಕೆಯಿಂದ ಮಾತನಾಡಿ” ಎಂದಿದ್ದಾರೆ.
ನಿರುದ್ಯೋಗ, ಹಣದುಬ್ಬರದ ಬಗ್ಗೆ ಮಾತನಾಡಿದ ಕೇಜ್ರಿವಾಲ್, “ಮೋದಿ ಅವರು ‘ಇಂಡಿಯಾ’ ಕೂಟವು ಜನರ ಮಂಗಳಸೂತ್ರ ಕಸಿದುಕೊಳ್ಳುತ್ತದೆ ಎಂದು ದ್ವೇಷ ಬಿತ್ತುವ ಮಾತನಾಡುತ್ತಿದ್ದಾರೆ. ಆದರೆ, ಅವರು ನಿರುದ್ಯೋಗ, ಬೆಲೆ ಏರಿಕೆಯಂತಹ ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಜನರ ಸಮಸ್ಯೆಗಳಿಗೆ ಅವರ ಬಳಿ ಪರಿಹಾರವಿಲ್ಲ. ಅವರು ಬೇರೆ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ ಎಂಬಂತೆ ಕಾಣುತ್ತಿದೆ” ಎಂದರು.
“5,500 ಕೋಟಿ ಗ್ರಾಮೀಣಾಭಿವೃದ್ಧಿ ನಿಧಿ ಸೇರಿದಂತೆ ಪಂಜಾಬ್‌ನ 9,000 ಕೋಟಿ ರೂಪಾಯಿ ಹಣವನ್ನು ತಡೆಹಿಡಿದಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು. “ಇದು ಅವರ ಮೋದಿ) ಹಣವಲ್ಲ, ಇದು ಪಂಜಾಬ್ ಜನರ ಹಣ” ಎಂದು ಹೇಳಿದರು.




