ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿಗಳಲ್ಲಿ ಒಂದು ಅನ್ನಭಾಗ್ಯ ಯೋಜನೆ. ಈ ಯೋಜನೆಯಡಿ ಬಿಪಿಎಲ್ ಪಡಿತರದಾರರಿಗೆ ಮಾಸಿಕ ತಲಾ 10 ಕೆ.ಜಿ ಅಕ್ಕಿ ಕೊಡುತ್ತೇವೆಂದು ಹೇಳಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರ ನೆರವು ನೀಡಲಿಲ್ಲ. ಹೀಗಾಗಿ, 5 ಕೆ.ಜಿ ಅಕ್ಕಿ ಮಾತ್ರ ನೀಡಲು ಶಕ್ತವಾಗಿದ್ದ ಕಾಂಗ್ರೆಸ್ ಸರ್ಕಾರ, ಉಳಿದ 5 ಕೆ.ಜಿ ಅಕ್ಕಿ ಬದಲಿಗೆ, 170 ರೂ. ಹಣ ನೀಡುವುದಾಗಿ ಘೋಷಿಸಿತ್ತು. ಅಕ್ಕಿ ಬದಲಿಗೆ ಹಣ ನೀಡುವ ಕ್ರಮ ಜಾರಿಯಾಗಿ ಈ ತಿಂಗಳಿಗೆ (ಜುಲೈ) ಒಂದು ವರ್ಷವಾಯಿತು. ಈಗಲೂ ಸರ್ಕಾರ ಹಣವನ್ನೇ ಫಲಾನುಭವಿಗಳ ಕುಟುಂಬಕ್ಕೆ ನೀಡುತ್ತಿದೆ. ಲೋಕಸಭಾ ಚುನಾವಣೆ ನಡೆದು, ಮುಗಿದು, ಬಿಜೆಪಿ ಸೋತು ಮೈತ್ರಿಯಲ್ಲಿ ಎನ್‌ಡಿಎ ಸರ್ಕಾರ ರಚಿಸಿದರೂ, ಈಗಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿಯ ನೆರವು ನೀಡುತ್ತಿಲ್ಲ.
ಅಂದಹಾಗೆ, ರಾಜ್ಯ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್, ರಾಷ್ಟ್ರೀಯ ಆಹಾರ ಸುರಕ್ಷಣಾ ಕಾಯ್ದೆಯಡಿ ನೀಡುವ 5 ಕೆ.ಜಿ ಅಕ್ಕಿಯ ಜೊತೆಗೆ, ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಅಧಿಕಾರಕ್ಕೆ ಬಂದ ನಂತರ, ತನ್ನ ಘೋಷಣೆಗೆ ಅನುಗುಣವಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿತು. ಯೋಜನೆಯಡಿ ಹೆಚ್ಚುವರಿ 5 ಕೆ.ಜಿ ಅಕ್ಕಿಯನ್ನ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಸಿಸಿ) ಅಡಿಯಲ್ಲಿ ಕೇಂದ್ರದ ಅಧೀನದಲ್ಲಿರುವ ‘ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ’ದಿಂದ (ಎಫ್‌ಸಿಐ) ಪ್ರತಿ ಕೆ.ಜಿಗೆ 34 ರೂ.ನಂತೆ ಖರೀದಿ ಮಾಡಲು ಮುಂದಾಗಿತ್ತು. 2023ರ ಜೂನ್ 12ರಂದು, ರಾಜ್ಯಕ್ಕೆ ಅಕ್ಕಿ ಮಾರಾಟ ಮಾಡಲು ಎಫ್‌ಸಿಐ ಕೂಡ ಒಪ್ಪಿಗೆ ನೀಡಿತ್ತು.
ಆದರೆ, ದ್ವೇಷ ರಾಜಕಾರಣಕ್ಕೆ ಹೆಸರಾದ ಬಿಜೆಪಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದಕ್ಕೆ ಕೊಕ್ಕೆ ಹಾಕಿತು. ಅಂದರೆ, ಅಕ್ಕಿ ಮಾರಾಟಕ್ಕೆ ಎಫ್‌ಸಿಐ ಒಪ್ಪಿಕೊಂಡ ಮರುದಿನ 2023ರ ಜೂನ್ 13ರಂದು ಒಎಂಸಿಸಿ ಅಡಿಯಲ್ಲಿ ಎಲ್ಲ ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡೋದಕ್ಕೆ ಕೇಂದ್ರ ಸರ್ಕಾರ ತಡೆ ನೀಡಿತು. ಈ ತಡೆಯ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯ ಯೋಜನೆಯನ್ನ ಜಾರಿಗೆ ತರುವುದಕ್ಕೆ ಅಡ್ಡಗಾಲು ಹಾಕುವ ಉದ್ದೇಶ ಕೇಂದ್ರದ್ದು ಅಂತ ಕರ್ನಾಟಕವೂ ಸೇರಿದಂತೆ ಹಲವಾರು ರಾಜ್ಯಗಳು ಆರೋಪಿಸಿದವು. ಅಸಮಾಧಾನ ವ್ಯಕ್ತಪಡಿಸಿದರು. ಮೋದಿ ಸರ್ಕಾರದ ಆಣತಿಯಲ್ಲಿದ್ದ ಎಫ್‌ಸಿಐ, ಅಕ್ಕಿ ಮಾರಾಟದ ಒಪ್ಪಂದವನ್ನ ಹಿಂಪಡೆದುಕೊಂಡಿತು.
ತನ್ನ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದ್ದ ಕೇಂದ್ರ ಸರ್ಕಾರ, ಮುಂಬರುವ ಮಳೆಗಾಲದಲ್ಲಿ ಸಮರ್ಪಕ ಮಳೆಯಾಗದೆ, ಮಾರುಕಟ್ಟೆಯಲ್ಲಿ ಅಕ್ಕಿ ಕೊರತೆ ಎದುರಾಗುವ ಸಾಧ್ಯತೆ ಇದೆ. ಅಕ್ಕಿ ಕೊರತೆಯಾದ್ರೆ, ಬೆಲೆ ಏರಿಕೆಯಾಗುತ್ತದೆ. ಹಾಗಾಗಿ, ಒಎಂಎಸ್‌ಎಸ್‌ನಿಂದ ರಾಜ್ಯಗಳಿಗೆ ಹೆಚ್ಚುವರಿ ಅಕ್ಕಿಯನ್ನ ಮಾರಾಟ ಮಾಡಲ್ಲ ಅಂತ ಹೇಳಿತ್ತು.
ಆದ್ರೂ, ರಾಜ್ಯ ಕಾಂಗ್ರೆಸ್ ಸರ್ಕಾರ, ಬೇರೆ ಯಾವುದಾದರೂ ರೀತಿಯಲ್ಲಿ ರಾಜ್ಯಕ್ಕೆ ಅಕ್ಕಿ ತರಬೇಕು ಅಂತ ಭಾರೀ ಹರಸಾಹಸ ಮಾಡಿತು. ಹೆಚ್ಚಾಗಿ ಭತ್ತ ಬೆಳೆಯುವ ಪಂಜಾಬ್, ಹರಿಯಾಣ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳ ಜೊತೆ ಮಾತುಕತೆ ನಡೆಸಿತು.
ರಾಜ್ಯ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರು ವಿಭಿನ್ನ ಏಜೆನ್ಸಿಗಳು ಮತ್ತು ಅಕ್ಕಿ ಗಿರಣಿದಾರರ ಜೊತೆಗೆ ಹತ್ತಾರು ಸಭೆಗಳನ್ನು ನಡೆಸಿದರು. ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಫೆಡರೇಶನ್‌ನಿಂದ ನೇರವಾಗಿ ಅಕ್ಕಿ ಖರೀದಿ ಮಾಡಬಹುದಾ ಅಂತೂ ವಿಚಾರಿಸಿದರು. ಆದರೆ, ಎಲ್ಲ ಫೆಡರೇಶನ್‌ಗಳು ಮೋದಿ ಸರ್ಕಾರವನ್ನ ಎದುರು ಹಾಕಿಕೊಂಡು ಅಕ್ಕಿ ಕೊಡೋದಕ್ಕೆ ನಿರಾಕರಿಸಿದವು.
ಅಕ್ಕಿ ಖರೀದಿಗಾಗಿ ನಾನಾ ರೀತಿಯಲ್ಲಿ ಹಲವು ಪ್ರಯತ್ನಗಳನ್ನ ನಡೆಸಿದ ರಾಜ್ಯ ಸರ್ಕಾರ, ಅಂತಿಮವಾಗಿ 5 ಕೆ.ಜಿ ಅಕ್ಕಿಯ ಬದಲಿಗೆ 170 ರೂ. ಕೊಡುವುದಾಗಿ ಘೋಷಿಸಿತು. ಕಳೆದೊಂದು ವರ್ಷದಿಂದ ಅಕ್ಕಿ ಬದಲು ಹಣವನ್ನು ಕೊಡ್ತಾ ಇದೆ.
ಆದರೆ, ಇದೆಲ್ಲದರ ನಡುವೆ ಗಮನಿಸಬೇಕಾದ ಎರಡು ಸಂಗತಿಗಳಿವೆ. ಒಂದು, ಕೇಂದ್ರದ ಬಳಿ ಅಗತ್ಯಕ್ಕಿಂತ 4 ಪಟ್ಟು ಹೆಚ್ಚು ಅಕ್ಕಿ ಇದೆ ಅನ್ನೋದು. ಮತ್ತೊಂದು, ಕೇಂದ್ರವೇ ನೇರವಾಗಿ ಜನರಿಗೆ ಅಕ್ಕಿ ಮಾರಾಟಕ್ಕೆ ಇಳಿದಿತ್ತು ಅನ್ನೋದು.
ಮಳೆಯಾಗದೆ, ಬೆಳೆ ಬಾರದೆ ಅಕ್ಕಿ ಕೊರತೆ ಉಂಟಾಗುತ್ತದೆ ಎಂದು ಯಾವ ಸರ್ಕಾರ ಅಂತ ಹೇಳಿತ್ತೋ, ಅದೇ ಸರ್ಕಾರದ ಬಳಿ ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಅಕ್ಕಿ ಇದೆ ಅಂತ ಈ ಹಿಂದೆಯೇ ಹಲವಾರು ವರದಿಗಳು ಬಹಿರಂಗ ಪಡಿಸಿದ್ದವು. ರಾಷ್ಟ್ರೀಯ ಆಹಾರ ಸುರಕ್ಷಣಾ ಕಾಯ್ದೆಯಡಿ ದೇಶದ ಜನರಿಗೆ ಅಕ್ಕಿ ಪೂರೈಕೆ ಮಾಡಲು ಎಫ್‌ಸಿಐನಲ್ಲಿ ಅಂದ್ರೆ, ಕೇಂದ್ರ ಸರ್ಕಾರದ ಬಳಿ 1.35 ಕೋಟಿ ಟನ್ ಅಕ್ಕಿ ಇರಬೇಕು. ಆದ್ರೆ, ಕೇಂದ್ರದ ಬಳಿ ಬರೋಬ್ಬರಿ 5 ಕೋಟಿ ಟನ್ ಅಕ್ಕಿ ಇತ್ತು. ಆದ್ರೂ, ಕೂಡ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಮಾರಾಟ ಮಾಡಲು ಎಫ್‌ಸಿಐಗೆ ಅವಕಾಶ ನೀಡಲಿಲ್ಲ.
ಮತ್ತೊಂದು ವಿಚಾರ, ಕೆ.ಜಿಗೆ 34 ರೂ. ಕೊಡ್ತಿವಿ ಎಂದು ರಾಜ್ಯ ಸರ್ಕಾರ ಹೇಳಿದ್ರೂ, ತಮ್ಮತ್ರ ಅಕ್ಕಿನೇ ಇಲ್ಲ ಅಂತ ಅಕ್ಕಿ ಕೊಡದೇಹೋದ ಕೇಂದ್ರ ಸರ್ಕಾರ, ಫೆಬ್ರವರಿ ತಿಂಗಳಲ್ಲಿ ‘ಭಾರತ್ ರೈಸ್’ ಯೋಜನೆಯನ್ನ ಜಾರಿಗೆ ತಂದು, ತಾನೇ ಅಕ್ಕಿ ಮಾರಾಟ ಮಾಡಲು ರಸ್ತೆಗಿಳಿದಿತ್ತು. ಯೋಜನೆಯಡಿ ಕೆ.ಜಿಗೆ 29 ರೂ.ನಂತೆ ಅಕ್ಕಿ ಮಾರಾಟ ಮಾಡೋದಕ್ಕೆ ಶುರು ಮಾಡಿತ್ತು.
ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಅಕ್ಕಿ ಮಾರಾಟವನ್ನು ಮುನ್ನೆಲೆಗೆ ತಂದು, ಪ್ರಚಾರಕ್ಕಾಗಿ ಬಿಜೆಪಿ ಸರ್ಕಾರ ಬಳಸಿಕೊಂಡಿತು. ಮಾತ್ರವಲ್ಲ, ತನ್ನ ಬಳಿ ಇದ್ದ ಹೆಚ್ಚುವರಿ ಅಕ್ಕಿಯನ್ನ ಮಾರಾಟ ಮಾಡಬೇಕಾದ ಅನಿವಾರ್ಹತೆ ಕೂಡ ಮೋದಿ ಸರ್ಕಾರಕ್ಕೆ ಇತ್ತು. ಯಾಕೆ ಅಂದ್ರೆ, ಪ್ರತಿ ಕ್ವಿಂಟಾಲ್ ಅಕ್ಕಿಯನ್ನು ಸಂಗ್ರಹಿಸಿ, ನಿರ್ವಹಣೆ ಮಾಡಲಿಕ್ಕೆ ಸರ್ಕಾರಕ್ಕೆ ವಾರ್ಷಿಕ 3,975 ರೂ. ವೆಚ್ಚ ಆಗುತ್ತದೆ. ಈ ವೆಚ್ಚ, ಸರ್ಕಾರಕ್ಕೆ ಅಧಿಕ ಹೊರೆ ಆಗಿತ್ತು. ಹಾಗಾಗಿಯೇ ‘ಭಾರತ್ ರೈಸ್’ ಯೋಜನೆಯನ್ನು ಜಾರಿಗೆ ತಂದಿತೇ ಹೊರತು, ಆಗಲೂ, ಒಎಂಎಸ್‌ಎಸ್ ಅಡಿಯಲ್ಲಿ ರಾಜ್ಯಗಳಿಗೆ ಅಕ್ಕಿ ಮಾರಾಟದ ಮೇಲಿನ ಹೇರಿದ್ದ ನಿರ್ಬಂಧವನ್ನ ತೆಗೆಯಲಿಲ್ಲ.
ಆದರೆ, ದೇಶದ ಜನರ ದುರದೃಷ್ಟವೋ ಏನೋ, ಭಾರತ್ ರೈಸ್ ಯೋಜನೆ ಅಡಿ ಎಲ್ಲರಿಗೂ ಅಕ್ಕಿ ಸಿಗಲೇ ಇಲ್ಲ. ಮಾತ್ರವಲ್ಲ, ಈ ಯೋಜನೆ ನಾಲ್ಕೇ ತಿಂಗಳಿಗೆ ಮಾಯ ಆಗೋಯ್ತು. ಗಮನಾರ್ಹ ಸಂಗತಿ ಅಂದ್ರೆ, ಭಾರತ್ ರೈಸ್ ಅಕ್ಕಿ ಮಾರಾಟದ ಬಹುತೇಕ ಮಳಿಗೆಗಳು ದೆಹಲಿಯ ಅಕ್ಕಪಕ್ಕದಲ್ಲೇ ಇದ್ದವು, ಅಲ್ಲೇ ಹೆಚ್ಚು ಅಕ್ಕಿ ಮಾರಾಟ ಆಯ್ತು. ಆದ್ರೆ, ಕರ್ನಾಟಕದ ಯಾವ ಮಳಿಗೆಯಲ್ಲೂ ಅಕ್ಕಿ ಸಿಗಲಿಲ್ಲ. ಒಂದಷ್ಟು ದಿನ ಬೆಂಗಳೂರಿನ ಕೆಲವೆಡೆ ಬಿಜೆಪಿಗರೇ ಆ ಅಕ್ಕಿಯನ್ನ ಮಾರಾಟ ಮಾಡಿದ್ದು ಬಿಟ್ಟರೆ, ರಾಜ್ಯದ ಬೇರೆಲ್ಲೂ ಭಾರತ್ ರೈಸ್ ಕಾಣಲಿಲ್ಲ.
ಈ ವರದಿ ಓದಿದ್ದೀರಾ?: ಗೋದಾಮಿನಲ್ಲಿ ಕೊಳೆಯುತ್ತಿರುವ 18 ಮಿಲಿಯನ್ ಟನ್ ಅಕ್ಕಿ: ಕೇಂದ್ರಕ್ಕೆ ರಾಜ್ಯದಿಂದ ಸರಣಿ ಪ್ರಶ್ನೆ
ಭಾರತ್ ರೈಸ್ ಯೋಜನೆ ಬಗ್ಗೆ ಮಾತನಾಡಿದ್ದ ಸಚಿವ ಮುನಿಯಪ್ಪ, ”ಕೇಂದ್ರ ಸರ್ಕಾರ ಪ್ರತಿ ಕೆಜಿಗೆ 38 ರೂ.ನಂತೆ ಅಕ್ಕಿ ಖರೀದಿಸಿದೆ. ಅದನ್ನು ಶಾಶ್ವತವಾಗಿ ಗೋದಾಮಿನಲ್ಲಿ ಇಡಲು ಸಾಧ್ಯವಿಲ್ಲ. ಹೀಗಾಗಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ನಮಗೆ 2 ಲಕ್ಷ ಟನ್‌ಗಳಿಂದ 2.5 ಲಕ್ಷ ಟನ್‌ಗಳವರೆಗೆ ಅಕ್ಕಿಯ ಅಗತ್ಯವಿದೆ. ಆದರೆ, ಅಕ್ಕಿ ಖರೀದಿ ಮೇಲಿನ ನಿಷೇಧದಿಂದಾಗಿ ಖರೀದಿಸಲಾಗುತ್ತಿಲ್ಲ” ಅಂತ ಹೇಳಿದ್ದರು.
ಬಾಯಿ ಮಾತಿಗೆ ಹತ್ತಾರು ಯೋಜನೆಗಳನ್ನ ಘೋಷಿಸಿ, ಅನುಷ್ಠಾನದಲ್ಲಿ ಕಾಣೆಯಾಗುವ ಮೋದಿ ಸರ್ಕಾರ, ಭಾರತ್ ರೈಸ್ ಯೋಜನೆಯ ಅನುಷ್ಠಾನದಲ್ಲೂ ಮಕಾಡೆ ಮಲಗಿದೆ. ಹೀಗಾಗಿ, ತನ್ನ ಗೋದಾಮಿನಲ್ಲಿ ಹೆಚ್ಚುವರಿ ಅಕ್ಕಿಯನ್ನು ಇಟ್ಟುಕೊಳ್ಳುವುದಕ್ಕೂ ಆಗದೆ ಇರುವ ಕೇಂದ್ರ ಸರ್ಕಾರ, ಈಗ ಒಎಂಎಸ್‌ಎಸ್ ಅಡಿಯಲ್ಲಿ ಅಕ್ಕಿ ಮಾರಾಟದ ಮೇಲೆ ಹೇರಿದ್ದ ನಿಷೇಧವನ್ನ ಹಿಂಪಡೆದುಕೊಂಡು, ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡೋದಕ್ಕೆ ಮುಂದಾಗುತ್ತಿದೆ ಅಂತ ವರದಿಯಾಗಿದೆ.
ಒಂದು ವೇಳೆ, ರಾಜ್ಯಗಳಿಗೆ ಹೆಚ್ಚುವರಿ ಅಕ್ಕಿಯನ್ನ ಮಾರಾಟದ ಮೇಲಿನ ನಿಷೇಧವನ್ನು ಕೇಂದ್ರ ರದ್ದು ಮಾಡಿದ್ರೆ, ಕರ್ನಾಟಕ ಸರ್ಕಾರ ಅನ್ನಭಾಗ್ಯ ಯೋಜನೆಗಾಗಿ ಹೆಚ್ಚುವರಿ ಅಕ್ಕಿಯನ್ನ ಖರೀದಿ ಮಾಡಬಹುದು. ರಾಜ್ಯದ ಪಡಿತರ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿಯನ್ನೇ ವಿತರಣೆ ಮಾಡಬಹುದು. ಬಡವರ ಹೊಟ್ಟೆ ತುಂಬಬಹುದು. ಮೋದಿ ಸರ್ಕಾರ ಅಕ್ಕಿ ಮಾರಾಟದ ವಿಚಾರದಲ್ಲಿ ಯಾವ ನಿರ್ಧಾರ ಮಾಡುತ್ತದೆ – ಕಾದು ನೋಡೋಣ…




