ಉಚ್ಚ ನ್ಯಾಯಾಲಯವೇನೋ ಸರ್ವೋಚ್ಚ ನ್ಯಾಯಾಲಯದ ತೀರ್ಪು (ಇಂದಿರಾ ಸಹಾನಿ vs ಭಾರತ ಒಕ್ಕೂಟ) ಅನುಸರಿಸಿ, ಈ ಮಧ್ಯಂತರ ಆದೇಶವನ್ನು ನೀಡಿದೆ. ಆದರೆ, ಆದೇಶವನ್ನು ಪಾಲಿಸಲಾಗದ ಇಕ್ಕಟ್ಟಿನಲ್ಲಿ ಸರ್ಕಾರ ಸಿಲುಕಿಕೊಂಡಿದೆ. ಜೊತೆಗೆ ಸರ್ಕಾರದ ಸ್ಥಿತಿಯನ್ನು ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ 'ರೋಗಿ ಬಯಸಿದ್ದು ಹಾಲು ಅನ್ನ; ವೈದ್ಯ ಹೇಳಿದ್ದು ಹಾಲು ಅನ್ನ' ಎಂಬಂತಾಗಿದೆ.
ಕರ್ನಾಟಕದ ಉಚ್ಚ ನ್ಯಾಯಾಲಯ ಮೊನ್ನೆಯಷ್ಟೇ(20.1.26), ಸರ್ವೋಚ್ಚ ನ್ಯಾಯಾಲಯ ವಿಧಿಸಿರುವ ಶೇಕಡ 50ರಷ್ಟಕ್ಕೆ ಕೋಟಾ ಮಿತಿಗೊಳಿಸಿ ನೇಮಕಾತಿ ಮಾಡಲು ಯಾವುದೇ ನಿರ್ಬಂಧವಿಲ್ಲ ಎಂದು ಮೌಖಿಕ ಆದೇಶ ನೀಡಿದ್ದಷ್ಟೇ ಅಲ್ಲ; ಶೇ. 56ಕ್ಕೆ ಮೀಸಲಾತಿ ಹೆಚ್ಚಿಸಿರುವ ಅನುಸಾರ ಹೊಸದಾಗಿ ಅಧಿಸೂಚಿಸಕೂಡದು ಎಂದು ಫರ್ಮಾನು ಹೊರಡಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯಿಸುವ ಹಾಗೆ ಜನಸಂಖ್ಯಾನುಸಾರ ಮೀಸಲಾತಿ ಕೋಟಾ ನಿಗದಿ ಪಡಿಸಬೇಕು ಎಂದು ಅಬ್ಬರಿಸಿದ ಪ್ರತಿಭಟನಾ ಪೂರ್ವಕ ಬೇಡಿಕೆಗೆ ಪೂರಕವಾಗಿ, ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಏಕ ಸದಸ್ಯ ಆಯೋಗವನ್ನು ರಚಿಸಿ, ಅದು ಸಲ್ಲಿಸಿದ ವರದಿ ಆಧರಿಸಿ, ಹಿಂದಿನ ಭಾಜಪ ಸರ್ಕಾರ ಮೀಸಲಾತಿ ಕೋಟಾವನ್ನು ಪರಿಶಿಷ್ಟ ಜಾತಿಗಳಿಗೆ ಶೇ.17ರಷ್ಟಕ್ಕೆ ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ.7ರಷ್ಟಕ್ಕೆ ಏರಿಸಿ ಆದೇಶ ಹೊರಡಿಸಿತ್ತು ಎಂಬುದು ಗತಿಸಿದ ವಿಷಯ.
ಹಾಗೆಯೇ ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿಗಳಿಗೆ ಅನ್ವಯಿಸುವ ಒಳ ಮೀಸಲಾತಿ(ಉಪವರ್ಗೀಕರಣ)ಯನ್ನೂ ವಿಂಗಡಿಸಿ ಸರ್ಕಾರ ಆದೇಶ ಹೊರಡಿಸಿದ್ದುದು ಕೂಡ ಸರಿಯಷ್ಟೇ.
ಶೇಕಡ 50ರಷ್ಟು ಮೀಸಲಾತಿ ಮಿತಿ ಮೀರಿ ಕೋಟಾ ನೀಡಿರುವುದನ್ನು ಪ್ರಶ್ನಿಸಿ ‘ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟ’ದ ಅಧ್ಯಕ್ಷ ಮಹೇಂದ್ರ ಕುಮಾರ್ ಮಿತ್ರ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಮೇಲಿನಂತೆ ತೀರ್ಪು ನೀಡಿದೆ.
ಇದನ್ನು ಓದಿದ್ದೀರಾ?: ಕಾಲೇಜು-ವಿವಿ ಕ್ಯಾಂಪಸ್‌ಗಳಲ್ಲಿ ಇಂಗ್ಲಿಷ್ ಭಾಷೆಯ ‘ಹೇರಿಕೆ’ ಸರಿಯೇ?
ಉಚ್ಚ ನ್ಯಾಯಾಲಯವೇನೋ ಸರ್ವೋಚ್ಚ ನ್ಯಾಯಾಲಯದ ತೀರ್ಪು (ಇಂದಿರಾ ಸಹಾನಿ vs ಭಾರತ ಒಕ್ಕೂಟ) ಅನುಸರಿಸಿ, ಈ ಮಧ್ಯಂತರ ಆದೇಶವನ್ನು ನೀಡಿದೆ. ಆದರೆ, ಆದೇಶವನ್ನು ಪಾಲಿಸಲಾಗದ ಇಕ್ಕಟ್ಟಿನಲ್ಲಿ ಸರ್ಕಾರ ಸಿಲುಕಿಕೊಂಡಿದೆ. ಜೊತೆಗೆ ಸರ್ಕಾರದ ಸ್ಥಿತಿಯನ್ನು ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ ‘ರೋಗಿ ಬಯಸಿದ್ದು ಹಾಲು ಅನ್ನ; ವೈದ್ಯ ಹೇಳಿದ್ದು ಹಾಲು ಅನ್ನ’ ಎಂಬಂತಾಗಿದೆ. ಕಳೆದ ಹಲವಾರು ವರ್ಷಗಳಿಂದ ಲಕ್ಷಾಂತರ ಹುದ್ದೆಗಳನ್ನು ತುಂಬಲಾಗದ ಸ್ಥಿತಿಯಲ್ಲಿರುವ ಸರ್ಕಾರ ತನ್ನ ರಾಜಕೀಯ ದ್ವಂದ್ವದ ಹಿನ್ನೆಲೆಯ ಗೊಂದಲದ ಅಧಿಸೂಚನೆ ಅಥವಾ ಆದೇಶವನ್ನು ಹೊರಡಿಸುತ್ತಾ ಬಂದಿದೆ. ನೇಮಕಾತಿ ಮಾಡಲಾಗದ ಹಿಂದಿನ ಉದ್ದೇಶ ಸರ್ಕಾರದ ಆರ್ಥಿಕ ಮುಗ್ಗಟ್ಟು. ಈ ಕಾರಣದಿಂದ ದೋಷಪೂರಿತ ಆದೇಶಗಳನ್ನು ಹೊರಡಿಸುವುದು ಮತ್ತು ಅವುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತೆ ಮಾಡಿ ತನ್ನ ಅಧಿಸೂಚನೆಗಳ ವಿರುದ್ಧ ನ್ಯಾಯಾಲಯದ ಆದೇಶ ಬರುವಂತೆ ನೋಡಿಕೊಳ್ಳುವುದು. ಇಂಥದ್ದನ್ನು ಸರ್ಕಾರ ಎಡಬಿಡದೆ ಮಾಡಿಕೊಂಡೇ ಬರುತ್ತಿದೆ.
ಉಚ್ಚ ನ್ಯಾಯಾಲಯದ ಈ ಮಧ್ಯಂತರ ಆದೇಶವನ್ನು ಪಾಲಿಸುವುದು ಕಡುಕಷ್ಟ ಹಾಗೂ ಬಿಸಿತುಪ್ಪ. ಅದಕ್ಕೆ ಸರ್ಕಾರದ ಮುಂದಿರುವ ಕಾರಣಗಳು- ನೇಮಕಾತಿಯನ್ನು ಇತ್ತ ಶೇ. 50ರ ಕೋಟಾವನ್ನು ಅನುಸರಿಸಿ ನೇಮಕಾತಿ ಮಾಡಲು ಸರ್ವೋಚ್ಚ ನ್ಯಾಯಾಲಯ ವಿಧಿಸಿರುವ ಮಿತಿಯ ಕಟ್ಟಾಜ್ಞೆ ಒಂದಾದರೇ; ಅತ್ತ ಶೇ.50ರ ಕೋಟಾ ಮಿತಿಯನ್ನು ಅನುಸರಿಸಿ, ನೇಮಕಾತಿ ಮಾಡಲು ಪರಿಶಿಷ್ಟವರ್ಗಗಳಿಂದ ಬರಬಹುದಾದ ತೀವ್ರ ವಿರೋಧ. ಒಂದು ಬಾರಿ ಕೋಟಾ ಹೆಚ್ಚಿಸಿ, ಮತ್ತೊಮ್ಮೆ ಸರಳವಾಗಿ ಇಳಿಸಲಾಗದ ಮಾತು. ಸರ್ಕಾರಕ್ಕಿದು ಉಭಯ ಸಂಕಟ.
ಯಾವುದೇ ರಾಜಕೀಯ ಒಳಸುಳಿಗಳಿಲ್ಲದೆ, ಹುದ್ದೆಗಳ ನೇಮಕಾತಿಗೆ ಸರ್ಕಾರ ಅವಕಾಶ ಕಲ್ಪಿಸಿಕೊಳ್ಳಬೇಕಾಗಿತ್ತು. ಸರ್ಕಾರ ಇಂಥ ಒಳಸುಳಿಗಳಿಗೆ ಒಳಗಾಗದಂತೆ ಋಜು ಮಾರ್ಗದಲ್ಲಿ, ಲಾಗಾಯ್ತಿನಿಂದಲೂ ನೇಮಕಾತಿ ಮಾಡಿಕೊಂಡು ಬಂದಿದ್ದಲ್ಲಿ, ಸರ್ಕಾರವೇ ಕೊಟ್ಟ ಅಂಕಿ ಅಂಶದಂತೆ 2 ಲಕ್ಷದ 85 ಸಾವಿರ ಹುದ್ದೆಗಳು ಖಾಲಿ ಬಿದ್ದಿರುತ್ತಿರಲಿಲ್ಲ. ಒಂದು ವೇಳೆ ನೇಮಕಾತಿ ಮಾಡಿಕೊಂಡು ಬಂದಿದ್ದಲ್ಲಿ, ಕನಿಷ್ಠವೆಂದರೂ 1 ಲಕ್ಷದ 42 1/2 ಸಾವಿರ ಹುದ್ದೆಗಳು ಮೀಸಲಾತಿ ಕೋಟಾದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ದಕ್ಕುತ್ತಿದ್ದವು. ನೇಮಕಾತಿಗೆ ಕ್ರಮ ಅನುಸರಿಸದೇ ಹುದ್ದೆಗಳನ್ನು ಖಾಲಿ ಬಿಟ್ಟಿರುವುದು ಸರ್ಕಾರಗಳ ಮೀಸಲಾತಿ ವಿರೋಧಿತನವನ್ನು ಎತ್ತಿ ತೋರಿಸುವುದಿಲ್ಲವೇ?
ಈ ಸಂದಿಗ್ಧದಿಂದ ಪಾರಾಗಲು ಸರ್ಕಾರಕ್ಕೆ ಒಂದೇ ಒಂದು ಅವಕಾಶವಿದೆ. ಆದರೆ ಸರ್ಕಾರಕ್ಕೆ ಯಾವುದೇ ದಾಕ್ಷಿಣ್ಯವಿಲ್ಲದ ದಿಟ್ಟತನವಿರಬೇಕಷ್ಟೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳೂ ಸೇರಿದಂತೆ, ಒಟ್ಟಾರೆ ಮೀಸಲಾತಿ ಕೋಟಾ ಶೇಕಡ 50ರಷ್ಟಿದೆ(ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಕೋಟಾ ಹೆಚ್ಚಿಸುವ ಮುನ್ನ). ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಹೆಚ್ಚಿಸಿರುವ ಮೀಸಲಾತಿ ಕೋಟಾವನ್ನು ಹಾಗೇ ಉಳಿಸಿಕೊಂಡು, ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಲು ಅವಕಾಶವಿದೆ. ಸರ್ಕಾರ ಮಾಡಬೇಕಾದ್ದು ಇಷ್ಟೇ. ಹಿಂದುಳಿದ ವರ್ಗಗಳಿಗೆ ನೀಡಿರುವ ಶೇ. 32ರಷ್ಟನ್ನು ಶೇ. 27ರಷ್ಟಕ್ಕೆ ಇಳಿಸಬೇಕು. ಹೀಗೆ ಇಳಿಸಿದಾಕ್ಷಣ, ಮೊದಲೇ ಸರ್ಕಾರಿ ಹುದ್ದೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವಿಲ್ಲದ ಅತಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತದೆ. ಇಂಥ ಅನ್ಯಾಯವನ್ನು ಹೋಗಲಾಡಿಸಬೇಕು ಎಂದರೆ- ನ್ಯಾಯಮೂರ್ತಿ ಒ. ಚಿನ್ನಪ್ಪ ರೆಡ್ಡಿ ಆಯೋಗ ಹಿಂದುಳಿದ ವರ್ಗಗಳು ಅಥವಾ ಜಾತಿಗಳು ಎಂದೂ ಪರಿಗಣಿಸದ, ಆದರೆ ಸರ್ಕಾರದ ಮರ್ಜಿಯಿಂದ ಹಿಂದುಳಿದ ವರ್ಗ ಎಂದು ಪರಿಗಣಿಸಿರುವ 3ಎ ಮತ್ತು 3ಬಿ ಪ್ರವರ್ಗಗಳನ್ನು ಸಂವಿಧಾನದ ವಿಧಿಗಳಾದ 15(4) ಮತ್ತು 16(4)ರ ಮಾನದಂಡಗಳಡಿಯಲ್ಲಿ ಪರಾಮರ್ಶಿಸಿ ಮೀಸಲಾತಿ ಪಟ್ಟಿಯಿಂದ ಹೊರಗಿಡಬೇಕು. ಈ ಪ್ರವರ್ಗಗಳಲ್ಲಿ ಸೇರಿರುವ ಎರಡೂ ಬಲಿಷ್ಠ ಜಾತಿಗಳ ಪುಣ್ಯ! ಅಂದು ಹಿಂದುಳಿದ ಅಮಾಯಕ ಜಾತಿಗಳಲ್ಲಿ ಯಾರೇ ಒಬ್ಬ ನ್ಯಾಯಾಲಯದ ಮೆಟ್ಟಿಲು ಹತ್ತಲಿಲ್ಲ. ಆ ಕ್ರಮದಲ್ಲಿ ಪರಾಮರ್ಶನೆಗೆ ಒಳಪಡಿಸಿದಲ್ಲಿ ಈ ಪ್ರವರ್ಗಗಳಲ್ಲಿ ಬರುವ ಜಾತಿಗಳು ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಹಜವಾಗಿ ಅವು ಸರ್ಕಾರದ ಹುದ್ದೆ ಮತ್ತು ನೇಮಕಾತಿಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಹೊಂದಿರುವುದರಿಂದ ಅನರ್ಹಗೊಳ್ಳುತ್ತವೆ. ಅಂಥಾ ಪರಾಮರ್ಶನೆಯಿಂದಾಗಿ ಆ ಪ್ರವರ್ಗಗಳಿಗೆ ಅಥವಾ ಜಾತಿಗಳಿಗೆ ಹಂಚಿಕೆ ಮಾಡಿರುವ ಶೇ. 9ರಷ್ಟು ಕೋಟಾ ಉಳಿಯುವುದು. ಹಾಗೆ ಉಳಿಯುವ ಶೇ.9ರಷ್ಟು ಕೋಟಾವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ. 6ರಷ್ಟನ್ನು ಹಂಚಿಕೆ ಮಾಡಿ, ಉಳಿದ ಶೇ.3ರಷ್ಟನ್ನು ಈಗಾಗಲೇ ತೀರಾ ಪ್ರಾತಿನಿಧ್ಯ ಕಡಿಮೆ ಇರುವ ಅಲೆಮಾರಿ ಮತ್ತು ಅರೆ ಅಲೆಮಾರಿಗಳು ಹೆಚ್ಚಿರುವ ಹಾಗೂ ಸಮರ್ಪಕ ಕೋಟಾವನ್ನೂ ನಿಗದಿ ಮಾಡದಿರುವ ಪ್ರವರ್ಗ-1 ಮತ್ತು ಪ್ರವರ್ಗ-2 ಬಿಗೆ ಸಮನಾಗಿ ಹಂಚಿಕೆ ಮಾಡುವುದು.

ಈ ಪ್ರಕ್ರಿಯೆಯಿಂದ ಹುದ್ದೆ ಮತ್ತು ನೇಮಕಗಳನ್ನು ಮಾಡಲು ಮಾತ್ರ ಸಾಧ್ಯವಿದೆ. ಈ ಕಾರ್ಯವಿಧಾನದಿಂದ ಹೊರಬರುವ ಪ್ರವರ್ಗ-3ಎ ಮತ್ತು 3ಬಿಯಲ್ಲಿರುವ, ಜಾತಿಗಳು ಸ್ವಯಂಚಾಲಿತವಾಗಿ(automatically) ಇಡಬ್ಲ್ಯೂಎಸ್ ಮೀಸಲಾತಿಯಲ್ಲಿ ಸ್ಥಾನ ಪಡೆಯುತ್ತವೆ. ಸದ್ಯ ಕರ್ನಾಟಕದಲ್ಲಿ ಇಡಬ್ಲ್ಯೂಎಸ್ ಮೀಸಲಾತಿ ಜಾರಿಯಲ್ಲಿಲ್ಲ. ಕಾರಣ, ಯಾವುದೇ ಮೀಸಲಾತಿ ಪಡೆಯದ ಕೈ ಬೆರಳೆಣಿಕೆಯಷ್ಟು ಜಾತಿಗಳು ಮಾತ್ರ ಉಳಿದುಕೊಂಡಿವೆ. ಅವು ಅತ್ಯಲ್ಪ ಸಂಖ್ಯೆಯಲ್ಲಿರುವುದರಿಂದ, ಕರ್ನಾಟಕದಲ್ಲಿ ಅದನ್ನು ಜಾರಿಗೆ ತಂದಿರುವುದಿಲ್ಲ. ಮೇಲೆ ಹೇಳಿರುವಂತೆ, ಪರಾಮರ್ಶನ ಕಾರಣದಿಂದ, ಹೊರಬರುವ ಪ್ರವರ್ಗಗಳೆರಡರಲ್ಲಿರುವ ಜಾತಿಗಳು ಯಾವುದೇ ಮೀಸಲಾತಿ ಪಡೆಯದ ಜಾತಿಗಳೊಡನೆ ಸೇರಿಕೊಂಡಲ್ಲಿ ಸಾಕಷ್ಟು ಜನಸಂಖ್ಯೆ ಹೊಂದಿರುವ ಗುಂಪಾಗುತ್ತದೆ. ಆದ್ದರಿಂದ ಸರ್ಕಾರ ಇಡಬ್ಲ್ಯೂಎಸ್ ಮೀಸಲಾತಿಯನ್ನು ಜಾರಿಗೆ ಕೊಟ್ಟು ಶೇಕಡ 10ರಷ್ಟು ಮೀಸಲಾತಿಯನ್ನು ಕೊಡಲು ಸಾಧ್ಯವಿದೆ. ಈ ವಿಷಯದಲ್ಲಿ ಸರ್ಕಾರ ವಿಮರ್ಶಾತ್ಮಕವಾಗಿ ಯೋಚನೆ ಮಾಡಿದಲ್ಲಿ ಅದು ಖಂಡಿತ ಸಾಧ್ಯವಿದೆ.
ಸರ್ಕಾರ ಈ ನಿಟ್ಟಿನಲ್ಲಿ ಸರಳ ಪೂರ್ವಕವಾಗಿ ಆಲೋಚಿಸಿದ್ದಲ್ಲಿ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಪರಿಹರಿಸಿಕೊಳ್ಳಲು ಒಂದವಕಾಶ. ಹೀಗೆ ಮಾಡುವುದರಿಂದ ಕರ್ನಾಟಕದಲ್ಲಿ ಯಾವುದೇ ಜಾತಿಯೂ ಮೀಸಲಾತಿಯಿಂದ ಹೊರಗುಳಿಯುವುದಿಲ್ಲ. ಸರ್ವೇಜನ ಸುಖಿನೋ ಭವಂತು!

ಕೆ.ಎನ್. ಲಿಂಗಪ್ಪ
ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.




