ಧಾರವಾಡದಲ್ಲಿ ನಡೆದ ‘ಕರ್ನಾಟಕ ಅಭಿವೃದ್ಧಿ ಯೋಜನೆ’ಗಳ (ಕೆಡಿಪಿ) ಪರಿಶೀಲನಾ ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಮತ್ತು ಕಾಂಗ್ರೆಸ್ ಎಂಎಲ್‌ಸಿ ಎಫ್‌ಹೆಚ್ ಜಕ್ಕಪ್ಪನವರ್ ನಡುವೆ ವಾಗ್ವಾದ ನಡೆದಿದೆ. ಈ ವೇಳೆ, ‘ನೀವು ಬಯಸಿದರೆ ಹೊರಡಬಹುದು’ ಎಂದು ಜಕ್ಕಪ್ಪನವರ್‌ಗೆ ಲಾಡ್ ಹೇಳಿದ್ದಾರೆ.
ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆತಯುವಾಗ ಎಂಎಲ್‌ಸಿ ಮತ್ತು ಸಚಿವರ ನಡುವೆ ವಾಗ್ವಾದ ನಡೆದಿದೆ. “ಧಾರವಾಡ ಜಿಲ್ಲೆಯಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಗಳನ್ನು ಸರ್ಕಾರವು ನಿರ್ಲಕ್ಷಿಸುತ್ತಿದೆ. ನಾನು ಎಸ್‌ಸಿ/ಎಸ್‌ಟಿ ಸಮುದಾಯಕ್ಕಾಗಿ ಮಾತ್ರ ಧ್ವನಿ ಎತ್ತುತ್ತಿದ್ದೇನೆ. ಅವರಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾತನಾಡಲು ನನಗೆ ಅವಕಾಶ ನೀಡುತ್ತಿಲ್ಲ’ ಎಂದು ಜಕ್ಕಪ್ಪನವರ್ ಆರೋಪಿಸಿದ್ದಾರೆ.
ಅವರ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಾಡ್, “ಎಲ್ಲ ಸದಸ್ಯರಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಸಾಕಷ್ಟು ಸಮಯವನ್ನು ನೀಡಲಾಗುತ್ತಿದೆ” ಎಂದರು. ಈ ವೇಳೆ, ಮಾತಿನ ಚಕಮಕಿ ನಡೆದಿದ್ದು, ಲಾಡ್ ಅವರು “ವಾದ ಮಾಡುವ ಅಗತ್ಯವಿಲ್ಲ. ಈ ರೀತಿ ಮಾತನಾಡಬೇಡಿ. ನೀವು ಸಭೆಯಿಂದ ಹೊರಹೋಗಲು ಬಯಸಿದರೆ, ನೀವು ಹೋಗಬಹುದು” ಎಂದು ಜಕ್ಕಪ್ಪನವರ್‌ಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಹಿರಿಯ ಅಧಿಕಾರಿಗಳು ಮತ್ತು ಪಕ್ಷದ ನಾಯಕರು ಮಧ್ಯಪ್ರವೇಶಿಸಿ ವಾಗ್ವಾದವನ್ನು ತಡೆದಿದ್ದಾರೆ ಎಂದು ತಿಳಿದುಬಂದಿದೆ.




