- ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲ ಯೋಜನೆ ಕುರಿತು ಸೂಕ್ತ ವೇದಿಕೆಗಳಲ್ಲಿ ಚರ್ಚೆ
- ಎರಡು ದಿನಗಳ ಬೆಂಗಳೂರು ಪ್ರವಾಸ ಕೈಗೊಂಡಿರುವ ನೆದರ್ಲ್ಯಾಂಡ್ಸ್ ಪ್ರಧಾನಿ
ಎರಡು ದಿನಗಳ ಬೆಂಗಳೂರು ಪ್ರವಾಸ ಕೈಗೊಂಡಿರುವ ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ, ಚರ್ಚ್ ಸ್ಟ್ರೀಟ್ನಲ್ಲಿ ಚಹಾ ಸವಿದು ಸಾರ್ವಜನಿಕರು ಹಾಗೂ ಮಾಧ್ಯಮದವರೊಂದಿಗೆ ಬೆರೆತರು.
ಬ್ರಿಗೇಡ್ ರಸ್ತೆಯಿಂದ ಕಾಲ್ನಡಿಗೆ ಮೂಲಕ ಚರ್ಚ್ ಸ್ಟ್ರೀಟಿನ ಚಾಯ್ ಪಾಯಿಂಟ್ಗೆ ಆಗಮಿಸಿದ ಡಚ್ ಪ್ರಧಾನಿ, ಮಸಾಲಾ ಚಹ ಖರೀದಿಸಿ ಸವಿದು, ಯುಪಿಐ ಮೂಲಕ ಹಣ ಪಾವತಿ ಮಾಡಿದರು.
ಚರ್ಚ್ ಸ್ಟ್ರೀಟಿನ ಬೇರಿ ಸರ್ಕಲ್ವರೆಗೆ ಕಾಲ್ನಡಿಗೆಯಲ್ಲಿಯೇ ಬಂದು, ತಕ್ಷಶಿಲಾ ಇನ್ಸ್ಟಿಟ್ಯೂಷನ್ ಗೋಡೆಯ ಮೇಲೆ ಭಾರತ ಹಾಗೂ ನೆದರ್ಲ್ಯಾಂಡ್ಸ್ ದ್ಯೋತಕವಾಗಿ ಬರೆಯಲಾಗಿರುವ ಸಿಂಹ( Mural)ದ ವರ್ಣಚಿತ್ರ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಡಿಜಿಟಲ್ ಪಾವತಿಯ ಯುಪಿಐ ವಿಧಾನವು ಸರಳ ಹಾಗೂ ಸುಲಭವಾಗಿದೆ. ಇಲ್ಲಿನ ಚರ್ಚ್ಸ್ಟ್ರೀಟಿನಲ್ಲಿ ಸಂಚರಿಸಿ ಚಹ ಸವಿದಿರುವುದು ಸಂತಸ ತಂದಿದೆ. ಕೆಳ ಮತ್ತು ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳ ಸಾಲ ಯೋಜನೆ ಕುರಿತು ಸೂಕ್ತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚಿಸಿ ಹಂತ ಹಂತವಾಗಿ ದೀರ್ಘಾವಧಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಜಿ20 ಯ ನವದೆಹಲಿ ಘೋಷಣೆಗೆ ತಮ್ಮ ಸಂಪೂರ್ಣ ಸಹಮತವಿದೆ ಎಂದರು.
ಸರಳ ಭದ್ರತೆಯ ನಡುವೆ ಯಾವುದೇ ಹೆಚ್ಚು ಅಂತರಗಳನ್ನಿಟ್ಟುಕೊಳ್ಳದೇ ಸಾರ್ವಜನಿಕರು ಹಾಗೂ ಮಾಧ್ಯಮದವರೊಂದಿಗೆ ಬೆರೆತ ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ, ಜನರ ಬಳಿ ತೆರಳಿ ಕೈ ಕುಲುಕಿದರು.
ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಂದ ಸಾರ್ವಜನಿಕರೊಂದಿಗೆ ಬೆರೆತು ತಾವೇ ಖುದ್ದಾಗಿ ಜನರ ಮೊಬೈಲುಗಳಲ್ಲಿ ಸೆಲ್ಫಿ ತೆಗೆದುಕೊಟ್ಟರು. ಶಾಸಕ ಎನ್. ಎ.ಹ್ಯಾರಿಸ್ ಮತ್ತಿತರ ಗಣ್ಯರು ಜೊತೆಗಿದ್ದರು.
ಸ್ವಾಗತಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್
ಸಿಲಿಕಾನ್ ಸಿಟಿಗೆ ಭೇಟಿ ನೀಡಿರುವ ರುಟ್ಟೆ ಅವರನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವ ಎಂಬಿ ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರವರು ಆತ್ಮೀಯವಾಗಿ ಸ್ವಾಗತಿಸಿದರು.
ದೆಹಲಿಯಿಂದ ಶೃಂಗಸಭೆಯ ಬಳಿಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಆಗಮಿಸಿದ ಮಾರ್ಕ್ ರುಟ್ಟೆಯವರಿಗೆ ಹೂಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು. ಬೆಂಗಳೂರಿನಲ್ಲಿ ಹೂಡಿಕೆ ವಿಚಾರವಾಗಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಹತ್ವದ ಸಭೆ ನಡೆಸಿದರು.





