ಸಂಸದ ಪ್ರತಾಪ್ ಸಿಂಹ ಅವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿಯಲ್ಲಿ ಅಕ್ರಮವಾಗಿ ಹಣ ಸಂಪಾದಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಬೆಂಗಳೂರಿನ 32ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಐಪಿಸಿ ಸೆಕ್ಷನ್ 499, 500 ಮತ್ತು 503ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದೆ.
ಪ್ರತಾಪ್ ಸಿಂಹ ಅವರು ಎಕ್ಸ್‌ಪ್ರೆಸ್ವವೇ ನಿರ್ಮಾಣದ ಸಮಯದಲ್ಲಿ ಅಕ್ರಮವಾಗಿ 60 ಕೋಟಿ ರೂ. ಸಂಪಾದಿಸಿದ್ದಾರೆ. ಆಗ ಹಣವನ್ನು ಕೊಡಗಿನ ಬೇನಾಮಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಅವರ ವಿರುದ್ಧ ಐಟಿ, ಇಡಿಗೆ ದೂರು ಸಲ್ಲಿಸುತ್ತೇನೆ ಎಂದು ಲಕ್ಷ್ಮಣ್ ಹೇಳಿದ್ದರು. ಅಲ್ಲದೆ, ಕಳೆದ ವರ್ಷ ಡಿಸೆಂಬರ್ 13ರಂದು ಇಬ್ಬರು ಸಂಸತ್‌ಗೆ ನುಗ್ಗಿದ್ದ ಘಟನೆಯಲ್ಲಿ ಪ್ರತಾಪ್ ಸಿಂಹ ಪಾತ್ರವಿದೆ. ಇಬ್ಬರು ಯುವಕರಿಗೆ ಪ್ರತಾಪ್ ಸಿಂಹ ತರಬೇತಿ ನೀಡಿದ್ದರು. ಅದರ ವಿಡಿಯೋ ನನ್ನ ಬಳಿಯಿದೆ. ಅದನ್ನು ಪೊಲೀಸರಿಗೆ ನೀಡುತ್ತೇನೆ ಎಂದೂ ಲಕ್ಷ್ಮಣ್ ಹೇಳಿದ್ದಾರೆ.
ಲಕ್ಷ್ಮಣ್ ವಿರುದ್ಧ ಸಂಸದ ಪ್ರತಾಪ್ ಸಿಂಹ ನ್ಯಾಯಾಲಯದಲ್ಲಿ ಮಾನನಷ್ಟದ ದೂರು ದಾಖಲಿಸಿದ್ದರು. ದೂರಿನಲ್ಲಿ, “ನನ್ನ ವಿರುದ್ಧ ಲಕ್ಷ್ಮಣ್ ಮಾಡಿರುವ ಆರೋಪ ಸಂಬಂಧ ವಿಡಿಯೋವನ್ನು ಪೊಲೀಸರಿಗೆ ನೀಡುವುದಾಗಿ ಹೇಳಿದ್ದರು. ಆದರೆ, ಈವರೆಗೆ ಯಾವುದೇ ವಿಡಿಯೋವನ್ನು ನೀಡಿಲ್ಲ. ನನ್ನ ವರುದ್ಧ ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ನನ್ನ ಬಗ್ಗೆ ಜನರಲ್ಲಿ ತಪ್ಪು ಭಾವಸೆ ಸೃಷ್ಟಿಸುತ್ತಾ, ತೇಜೋವಧೆ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದರು.
ದೂರಿನ ವಿಚಾರಣೆ ನಡೆಸಿರುವ ನ್ಯಾಯಾಲಯವು, ಲಕ್ಷ್ಮಣ್ ವಿರುದ್ಧದ ಆರೋಪಗಳಿಗೆ ಅರ್ಜಿದಾರರು ಪುರಾವೆಗಳನ್ನು ಒದಗಿಸಿದ್ದು, ಲಕ್ಷ್ಮಣ್ ವಿರುದ್ಧ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಾನೂನು ಪ್ರಕ್ರಿಯೆ ಆರಂಭಿಸುವುದು ಸೂಕ್ತವಾಗಿದೆ ಎಂದು ಹೇಳಿದೆ. ಪ್ರಕರಣ ದಾಖಲಿಸಲು ಸೂಚಿಸಿದೆ.




