ಬೇಡ್ತಿ-ವರದಾ ನದಿ ಜೋಡಣೆ- ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ಆಶಾಕಿರಣವಾಗುವ ಕನಸು ಬಿತ್ತುತ್ತಿದೆಯಾದರೂ, ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಮತ್ತು ಕರಾವಳಿ ಜನರ ಪಾಲಿಗೆ ಇದು ಕಂಟಕವಾಗಿ ಪರಿಣಮಿಸಲಿದೆ ಎನ್ನುವ ಆತಂಕವೂ ವ್ಯಕ್ತವಾಗುತ್ತಿದೆ.
ರಾಜ್ಯದ ಜಲರಾಜಕಾರಣದ ಇತಿಹಾಸದಲ್ಲಿ ‘ಬೇಡ್ತಿ-ವರದಾ ನದಿ ಜೋಡಣೆ’ ಎಂಬುದು ದಶಕಗಳಿಂದಲೂ ಬಗೆಹರಿಯದ ಒಗಟಾಗಿಯೇ ಉಳಿದಿದೆ. 1992ರಲ್ಲಿ ಜಿ ಎಸ್ ಪರಮಶಿವಯ್ಯ ವರದಿ ಮತ್ತು ಎನ್‌ಜಿಒ ಸಮಿತಿಗಳ ಪ್ರಸ್ತಾವನೆಯ ಮೂಲಕ ಮೊದಲು ಬೆಳಕಿಗೆ ಬಂದ ಈ ಯೋಜನೆಗೆ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮರುಜೀವ ನೀಡಿವೆ.
ಸುಮಾರು 33 ವರ್ಷಗಳ ಹಿಂದೆ ಮಲೆನಾಡಿನ ತೀವ್ರ ಪ್ರತಿರೋಧಕ್ಕೆ ಮಣಿದು ಅಂದಿನ ಸರ್ಕಾರ ಕೈಬಿಟ್ಟಿದ್ದ ಈ ಹಳೆಯ ಕಡತವನ್ನು ಈಗ ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ (NWDA) ಕೈಗೆತ್ತಿಕೊಂಡು ಹೊಸ ರೂಪ ನೀಡಿದೆ. ಅಂದಾಜು 10 ರಿಂದ 15 ಸಾವಿರ ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ತಯಾರಾಗಿರುವ ಈ ಹೊಸ ಡಿಪಿಆರ್, ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ಆಶಾಕಿರಣವಾಗುವ ಕನಸು ಬಿತ್ತುತ್ತಿದೆಯಾದರೂ, ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಮತ್ತು ಕರಾವಳಿಯ ಜನರ ಪಾಲಿಗೆ ಇದು ಕಂಟಕವಾಗಿ ಪರಿಣಮಿಸಲಿದೆ ಎನ್ನುವ ಆತಂಕವೂ ವ್ಯಕ್ತವಾಗುತ್ತಿದೆ.
ಯೋಜನೆಯ ಒಳನೋಟ: ಈ ಯೋಜನೆಯು ಮುಖ್ಯವಾಗಿ 3 ಹಂತದ ನೀರಿನ ತಿರುವು ಪ್ರಕ್ರಿಯೆಯನ್ನು ಒಳಗೊಂಡಿದೆ.
ಮೊದಲ ಹಂತ: ಶಿರಸಿಯ ಶಿರಾಲಬೈಲು ಗ್ರಾಮದ ಪಟ್ಟಣದ ಹಳ್ಳದಿಂದ ನೀರನ್ನು ಎತ್ತಿ ಸುಮಾರು 6.5 ಕಿ.ಮೀ ಉದ್ದದ ಸುರಂಗದ ಮೂಲಕ ಹುಳಗೋಳ ಗ್ರಾಮದ ಶಾಲ್ಮಲಾ ಹಳ್ಳಕ್ಕೆ ತರಲಾಗುತ್ತದೆ.
ಎರಡನೇ ಹಂತ: ಶಾಲ್ಮಲಾ ಹಳ್ಳದಿಂದ ಸಂಗ್ರಹವಾದ ನೀರನ್ನು ಮತ್ತೆ 6.7 ಕಿ.ಮೀ ಉದ್ದದ ಸುರಂಗದ ಮೂಲಕ ವರದಾ ನದಿಯ ಕಡೆಗೆ ಹರಿಸಲಾಗುತ್ತದೆ.
ಮೂರನೇ ಹಂತ: ಈ ಸುರಂಗಗಳು ಸೇರಿದಂತೆ ಒಟ್ಟು 18 ಕಿ.ಮೀ ದೂರದವರೆಗೆ ಪೈಪ್‌ಲೈನ್ ಮತ್ತು ಕಾಲುವೆಗಳ ಮೂಲಕ ನೀರನ್ನು ಸಾಗಿಸಿ ಹಾವೇರಿ ಜಿಲ್ಲೆಯ ವರದಾ ನದಿಗೆ ಸೇರಿಸಲಾಗುತ್ತದೆ.

ಈ ಯೋಜನೆಯಿಂದ ಬಾಧಿತವಾಗುವ ಪ್ರಮುಖ ಹಳ್ಳಿಗಳು:
ಶಿರಸಿ: ಶಿರಾಲಬೈಲು, ಹುಳಗೋಳ, ಪಟ್ಟಣ, ಶಾಲ್ಮಲಾ ನದಿ ತೀರದ ಗ್ರಾಮಗಳು.
ಯಲ್ಲಾಪುರ: ಸುರೆಮನೆ (ಇಲ್ಲಿ ಪ್ರಮುಖ ಬ್ಯಾರೇಜ್ ನಿರ್ಮಾಣವಾಗಲಿದೆ), ಮಾಗೋಡು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು.
ಮುಂಡಗೋಡ: ಮಳಗಿ ಗ್ರಾಮದ ಬಳಿ ಇರುವ ಧರ್ಮಾ ಜಲಾಶಯದ ವ್ಯಾಪ್ತಿಯ ಹಳ್ಳಿಗಳು.
ಹಾವೇರಿ ಜಿಲ್ಲೆ (ಸೇರ್ಪಡೆಗೊಳ್ಳುವ ಹಂತ): ಹಕ್ಕಲಮನೆ (ಇಲ್ಲಿ ಬೇಡ್ತಿ ನೀರು ವರದಾ ನದಿಯನ್ನು ಸೇರುತ್ತದೆ), ಶಿಗ್ಗಾಂವಿ ಮತ್ತು ಸವಣೂರು ತಾಲೂಕಿನ ಕೆಲವು ಭಾಗಗಳು.
ಯೋಜನೆಯ ಹಂತ:
ಹಂತ 1: ಶಿರಸಿಯ ಪಟ್ಟಣದ ಹಳ್ಳ ಮತ್ತು ಶಾಲ್ಮಲಾ ಹಳ್ಳಗಳಲ್ಲಿ ನೀರು ಸಂಗ್ರಹ.
ಹಂತ 2: ಲಿಫ್ಟ್ ಮತ್ತು ಸುರಂಗಗಳ ಮೂಲಕ ಮುಂಡಗೋಡಿನ ಧರ್ಮ ಜಲಾಶಯದ ಡ್ಯಾಂಗೆ ನೀರನ್ನು ತಿರುಗಿಸಿ ಹತ್ತಿರವಿರುವ ವರದಾ ನದಿಗೆ ಸೇರ್ಪಡಿಸುವುದು.
ಹಂತ 3: ವರದಾ ನದಿಯಿಂದ ಹಾವೇರಿ ಮೂಲಕ ಹರಿದು ಹೊಸಪೇಟೆಯ ತುಂಗಭದ್ರಾ ಡ್ಯಾಂ (ಪಂಪಾ ಸಾಗರ) ಸೇರ್ಪಡೆ.
ಹಂತ 4: ಅಂತಿಮವಾಗಿ ತುಂಗಭದ್ರಾ ಎಡದಂಡೆ ಕಾಲುವೆಯ ಮೂಲಕ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಒಣ ಭೂಮಿಗೆ ನೀರುಣಿಸುವ ಯೋಜನೆ.
DPR ಪ್ರಕಾರ ಈ ಸುರಂಗ ಮಾರ್ಗಗಳು ಹಾದುಹೋಗುವ ಅರಣ್ಯ ಪ್ರದೇಶವು ‘ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ’ (IUCN) ಗುರುತಿಸಿರುವ ಸಕ್ರಿಯ ಜೀವವೈವಿಧ್ಯ ವಲಯದಲ್ಲಿದೆ. ಇಲ್ಲಿ ಸುರಂಗ ಕೊರೆಯುವುದರಿಂದ ಅಂತರ್ಜಲದ ಮಟ್ಟ ಕುಸಿಯಬಹುದು ಮತ್ತು ಪಶ್ಚಿಮ ಘಟ್ಟದ ಭೂಕುಸಿತಕ್ಕೆ ಕಾರಣವಾಗಬಹುದು ಎಂಬುದು ಭೂವಿಜ್ಞಾನಿಗಳ ಆತಂಕ.
ತಾಂತ್ರಿಕವಾಗಿ ಈ ಯೋಜನೆಯು ಪಶ್ಚಿಮಕ್ಕೆ ಹರಿದು ಅರಬ್ಬೀ ಸಮುದ್ರ ಸೇರುವ ಬೇಡ್ತಿ ನದಿಯ ನೀರನ್ನು ಸುಮಾರು 123 ಮೀಟರ್ ಎತ್ತರಕ್ಕೆ ಪಂಪ್ ಮಾಡಿ, ಅದನ್ನು ಪೂರ್ವಕ್ಕೆ ಹರಿಯುವ ವರದಾ ನದಿಗೆ ಜೋಡಿಸುವ ಒಂದು ಸಾಹಸಮಯ ಪ್ರಯತ್ನವಾಗಿದೆ. ಯೋಜನೆಯ ನೀಲಿನಕ್ಷೆಯ ಪ್ರಕಾರ, ಬೇಡ್ತಿ ನದಿಯ ಉಪನದಿಗಳಾದ ಪಟ್ಟಣದ ಹಳ್ಳ ಮತ್ತು ಶಾಲ್ಮಲಾ ಹಳ್ಳಗಳಿಗೆ ಬ್ಯಾರೇಜ್ ನಿರ್ಮಿಸಿ ಅಲ್ಲಿಂದ 302 ಮಿಲಿಯನ್ ಕ್ಯೂಬಿಕ್ ಮೀಟರ್ ನೀರನ್ನು ತಿರುಗಿಸಲಾಗುತ್ತದೆ. ಜೊತೆಗೆ ಯಲ್ಲಾಪುರ ತಾಲೂಕಿನ ಸುರೆಮನೆ ಎಂಬಲ್ಲಿ ಬೇಡ್ತಿ ನದಿಗೆ ಅಡ್ಡಲಾಗಿ ಮತ್ತೊಂದು ಬ್ಯಾರೇಜ್ ಕಟ್ಟಿ 222 ಮಿಲಿಯನ್ ಕ್ಯೂಬಿಕ್ ಮೀಟರ್ ನೀರನ್ನು ಮುಂಡಗೋಡ ತಾಲೂಕಿನ ಧರ್ಮಾ ಜಲಾಶಯದ ಮೂಲಕ ವರದಾ ನದಿಗೆ ಸೇರಿಸಲಾಗುತ್ತದೆ.
ಹೀಗೆ ಒಟ್ಟಾರೆಯಾಗಿ 524 ಮಿಲಿಯನ್ ಕ್ಯೂಬಿಕ್ ಮೀಟರ್ (ಅಂದಾಜು 18.5 ಟಿಎಂಸಿ) ನೀರನ್ನು ತಿರುಗಿಸಿ, ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆಯ ಕೊನೆಯ ಭಾಗದ ರೈತರಿಗೆ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ವಾರ್ಷಿಕವಾಗಿ ಸುಮಾರು 61 ಮೆಗಾವ್ಯಾಟ್ ವಿದ್ಯುತ್ ಅಂದರೆ ಸರಿಸುಮಾರು 320 ಮಿಲಿಯನ್ ಯುನಿಟ್ ಶಕ್ತಿಯ ಅಗತ್ಯವಿದ್ದು, ಕೇವಲ ನೀರನ್ನು ಮೇಲೆತ್ತಲು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವ್ಯಯಿಸಬೇಕಾದ ಅನಿವಾರ್ಯತೆ ಇದೆ.

ಈ ಯೋಜನೆಯ ಪರವಾಗಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಾವೇರಿ, ಗದಗ ಮತ್ತು ರಾಯಚೂರು ಭಾಗದ ನಾಯಕರು ತಮ್ಮದೇ ಆದ ತರ್ಕವನ್ನು ಮಂಡಿಸುತ್ತಿದ್ದಾರೆ. ಬೇಡ್ತಿ ನದಿಯಲ್ಲಿ ಲಭ್ಯವಿರುವ 5877 ಮಿಲಿಯನ್ ಕ್ಯೂಬಿಕ್ ಮೀಟರ್ ನೀರಿನಲ್ಲಿ ಸರ್ಕಾರ ಕೇಳುತ್ತಿರುವುದು ಕೇವಲ 9 ಪ್ರತಿಶತ ಮಾತ್ರ ಎನ್ನುವುದು ಅವರ ವಾದ.
ಮಳೆಗಾಲದ ಅವಧಿಯಾದ ಜೂನ್‌ನಿಂದ ನವೆಂಬರ್ ತಿಂಗಳವರೆಗೆ ವ್ಯರ್ಥವಾಗಿ ಸಮುದ್ರ ಸೇರುವ ಹೆಚ್ಚುವರಿ ನೀರನ್ನು ಮಾತ್ರ ಬಳಸಿಕೊಳ್ಳುವುದರಿಂದ ಯಾರಿಗೂ ತೊಂದರೆಯಾಗದು ಎಂದೂ ಅವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಈ ಹಿಂದೆ ಪ್ರಸ್ತಾಪಿಸಿದಂತೆ ಇಲ್ಲಿ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸದೆ ಕೇವಲ ಸಣ್ಣ ಬ್ಯಾರೇಜ್‌ಗಳನ್ನು ಬಳಸುತ್ತಿರುವುದರಿಂದ ಅರಣ್ಯ ನಾಶವಾಗುವುದಿಲ್ಲ ಮತ್ತು ನದಿ ಸುತ್ತಮುತ್ತಲಿನ ಪ್ರದೇಶಗಳಿಗೆ ಯಾವುದೇ ಹಾನಿ ಆಗುವುದಿಲ್ಲ ಮತ್ತು ಈ ಯೋಜನೆಯಿಂದ ಬಯಲುಸೀಮೆಯ ಲಕ್ಷಾಂತರ ಹೆಕ್ಟೇರ್ ಒಣ ಭೂಮಿಗೆ ಸಂಜೀವಿನಿ ಸಿಕ್ಕಂತಾಗುತ್ತದೆ ಎಂಬುದು ಸರ್ಕಾರದ ನಿಲುವಾಗಿದೆ.
ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆಯ ವಿರುದ್ಧ ಭಾರಿ ಜನವಿರೋಧ ವ್ಯಕ್ತವಾಗಿದೆ. ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ವ್ಯಕ್ತವಾದ ಆಕ್ರೋಶವು ಯೋಜನೆಯ ಹವಾಮಾನ ದತ್ತಾಂಶಗಳನ್ನೇ ಪ್ರಶ್ನಿಸುತ್ತಿದೆ.
ಐಐಎಸ್‌ಸಿ ವಿಜ್ಞಾನಿಗಳು ಮತ್ತು ಪರಿಸರ ತಜ್ಞರ ಪ್ರಕಾರ, ಸರ್ಕಾರ ಬಳಸುತ್ತಿರುವ ಮಳೆಯ ಅಂಕಿ-ಅಂಶಗಳು 1980 ಮತ್ತು 90ರ ದಶಕದ ಹಳೆಯ ವರದಿಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಲೆನಾಡಿನಲ್ಲಿ ಮೊದಲಿನ ಹಾಗೆ ಮಳೆ ಬೀಳುತ್ತಿಲ್ಲ. ಸದ್ಯ ಮಳೆ ಕಡಿಮೆಯಾಗಿದ್ದು, ಜನವರಿ ವೇಳೆಗಾಗಲೇ ನದಿಗಳು ಬತ್ತುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನೀರೇ ಇಲ್ಲದ ನದಿಯಲ್ಲಿ 15,000 ಕೋಟಿ ರೂಪಾಯಿ ಹೂಡಿಕೆ ಮಾಡುವುದು ಆರ್ಥಿಕವಾಗಿ ಬೊಕ್ಕಸವನ್ನು ಬರಿದು ಮಾಡುವುದಷ್ಟೇ ಅಲ್ಲದೆ ತುಘಲಕ್ ನಿರ್ಧಾರವಾಗಲಿದೆ ಎಂದು ಹೋರಾಟಗಾರರು ಹೇಳುತ್ತಿದ್ದಾರೆ. ಜೊತೆಗೆ ಯೋಜನೆಯ ಅನುಷ್ಠಾನಕ್ಕಾಗಿ ಅಂದಾಜು 500 ಹೆಕ್ಟೇರ್ ದಟ್ಟಾರಣ್ಯ ನಾಶವಾಗಲಿದ್ದು, ಹಾಗೂ ಪ್ರಪಂಚದ ಎಲ್ಲೂ ಕಾಣ ಸಿಗದ ಅಪರೂಪದ ಜೀವವೈವಿಧ್ಯವು ಶಾಶ್ವತವಾಗಿ ಕಣ್ಮರೆಯಾಗಲಿದೆ. ಪರಿಸರದ ಜೊತೆಗೆ ಕರಾವಳಿಯ ಮೀನುಗಾರರ ಜೀವನದ ಮೇಲೂ ಈ ಯೋಜನೆ ಗಂಭೀರ ಪರಿಣಾಮ ಬೀರಲಿದೆ. ಗಂಗಾವಳಿ ನದಿಯ ಸಿಹಿನೀರಿನ ಮೀನುಗಾರಿಕೆ ನಂಬಿಕೊಂಡಿರುವ ಅಲ್ಲಿನ ಮೀನುಗಾರರ ಬದುಕು ಕೂಡ ಬೀದಿಗೆ ಬೀಳಲಿದೆ. ನದಿ ಸಮುದ್ರ ಸೇರುವ ಕ್ರಿಯೆಯನ್ನು ಇಂತಹ ಯೋಜನೆಗಳ ಮುಖಾಂತರ ನಿಲ್ಲಿಸಿದರೆ ಸಮುದ್ರಕ್ಕೆ ಸೇರುವ ಸಿಹಿನೀರಿನ ಹರಿವು ನಿಂತರೆ, ಸಮುದ್ರದ ಉಪ್ಪು ನೀರು ಭೂಮಿಯ ಒಳಭಾಗಕ್ಕೆ ನುಗ್ಗಿ ಅಂತರ್ಜಲವನ್ನು ಕಲುಷಿತಗೊಳಿಸುತ್ತದೆ ಎನ್ನುವುದು ಈ ವರ್ಗದ ತೀವ್ರ ಆತಂಕ.

ಸರ್ಕಾರಗಳ ವಾದ:
ಈ ಯೋಜನೆಯು ಕೇವಲ ಒಂದು ನೀರಾವರಿ ಯೋಜನೆಯಲ್ಲ, ಬದಲಾಗಿ ಉತ್ತರ ಕರ್ನಾಟಕದ ಲಕ್ಷಾಂತರ ಜನರ ಬದುಕನ್ನು ಬದಲಿಸುವ ‘ಜೀವನದಿ’ಯಾಗಿದೆ ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಾದ.
ಹಾವೇರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ದಶಕಗಳಿಂದ ಬರಗಾಲದ ಹೊಡೆತಕ್ಕೆ ಸಿಲುಕಿವೆ. ಇಲ್ಲಿನ ಲಕ್ಷಾಂತರ ಎಕರೆ ಒಣ ಭೂಮಿಗೆ ನೀರು ಸಿಕ್ಕರೆ, ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕರ್ ಅವಲಂಬಿಸುವ ಅನಿವಾರ್ಯತೆ ಇನ್ನು ಮುಂದೆ ಇರುವುದಿಲ್ಲ ಎಂಬುದು ಸರ್ಕಾರದ ನಂಬಿಕೆ. ಬೇಡ್ತಿ ನದಿಯಿಂದ ಪ್ರತಿ ವರ್ಷ 5,000 MCM ಗೂ ಹೆಚ್ಚು ನೀರು ಯಾವುದೇ ಬಳಕೆಯಿಲ್ಲದೆ ಸಮುದ್ರಕ್ಕೆ ಹರಿದು ಹೋಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದ ನೀರು ಸಮುದ್ರ ಸೇರಿ ವ್ಯರ್ಥವಾಗುವ ಬದಲು, ಅದನ್ನು ಬಾಯಾರಿದ ಬಯಲುಸೀಮೆಗೆ ತಿರುಗಿಸಿದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ. ನಾವು ಕೇಳುತ್ತಿರುವುದು ಸಮುದ್ರಕ್ಕೆ ಸೇರುವ ಒಟ್ಟು ನೀರಿನಲ್ಲಿ ಕೇವಲ ಒಂದು ಸಣ್ಣ ಭಾಗವನ್ನು ಮಾತ್ರ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.
ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ (ಪಂಪಾ ಸಾಗರ) ಭಾರೀ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ. ಇದರಿಂದಾಗಿ ರೈತರಿಗೆ ಸರಿಯಾಗಿ ನೀರು ತಲುಪುತ್ತಿಲ್ಲ. ಬೇಡ್ತಿ ನದಿಯಿಂದ ಹರಿಸುವ ಈ ಹೆಚ್ಚುವರಿ ನೀರು ಆ ಕೊರತೆಯನ್ನು ನೀಗಿಸಲು ಸಹಕಾರಿಯಾಗಲಿದೆ. 1992ರ ಪರಮಶಿವಯ್ಯ ವರದಿ ಪ್ರಕಾರ ದೊಡ್ಡ ಅಣೆಕಟ್ಟುಗಳನ್ನು ಕಟ್ಟಬೇಕಿತ್ತು, ಆದರೆ ಈಗಿನ ಡಿಪಿಆರ್ (DPR) ಪ್ರಕಾರ ಕೇವಲ ಸಣ್ಣ ಬ್ಯಾರೇಜ್‌ಗಳು ಮತ್ತು ವೆಂಟೆಡ್ ಡ್ಯಾಂಗಳನ್ನು ಮಾತ್ರ ನಿರ್ಮಿಸಲಾಗುವುದು. ಇದರಿಂದ ಯಾವುದೇ ದೊಡ್ಡ ಪ್ರಮಾಣದ ಅರಣ್ಯ ನಾಶವಾಗುವುದಿಲ್ಲ. ಅಲ್ಲದೆ, ನೀರನ್ನು ಸಂಗ್ರಹಿಸಿ ನಿಲ್ಲಿಸದೆ ನೇರವಾಗಿ ಹರಿಸುವುದರಿಂದ ಪರಿಸರಕ್ಕೂ ತೊಂದರೆಯಿಲ್ಲ ಎಂದು ಸರ್ಕಾರ ಹೇಳುತ್ತಿದೆ.
ಮಳೆಗಾಲದಲ್ಲಿ (ಜೂನ್‌ನಿಂದ ನವೆಂಬರ್) ಹೆಚ್ಚುವರಿಯಾಗಿ ಹರಿಯುವ ನೀರನ್ನು ಮಾತ್ರ ನಾವು ತೆಗೆದುಕೊಳ್ಳುತ್ತೇವೆ. ನದಿಯ ನೈಸರ್ಗಿಕ ಹರಿವಿಗೆ ಮತ್ತು ಮೀನುಗಾರಿಕೆಗೆ ಎಷ್ಟು ನೀರು ಬೇಕೋ ಅಷ್ಟು ನೀರನ್ನು ನದಿಯಲ್ಲೇ ಬಿಡಲಾಗುವುದು. ಆದ್ದರಿಂದ ಕರಾವಳಿಯ ಮೀನುಗಾರರಿಗಾಗಲೀ ಅಥವಾ ಪರಿಸರಕ್ಕಾಗಲೀ ಯಾವುದೇ ಹಾನಿಯಾಗುವುದಿಲ್ಲ ಎಂಬುದು ಸರ್ಕಾರದ ಸ್ಪಷ್ಟನೆ.
ಯೋಜನೆ ಕುರಿತು ಸಿದ್ದಾಪುರ ಹುಲ್ಕತ್ರಿ ನಿವಾಸಿ ದರ್ಶನ ಹರಿಕಂತ ಈದಿನಕ್ಕೆ ಪ್ರತಿಕ್ರಿಯಿಸಿ, “ಸರ್ಕಾರವು ಮಳೆಗಾಲದ ಹೆಚ್ಚುವರಿ ನೀರನ್ನು ಮಾತ್ರ ಬಳಸುತ್ತೇವೆ ಎಂದು ಹೇಳುತ್ತಿದೆ. ಆದರೆ ನದಿಯಲ್ಲಿ ಹರಿಯುವ ಪ್ರತಿಯೊಂದು ಹನಿ ನೀರಿಗೂ ತನ್ನದೇ ಆದ ಉದ್ದೇಶವಿರುತ್ತದೆ. ಆ ನೀರು ಸಮುದ್ರ ಸೇರುವ ಮೂಲಕ ಸಮುದ್ರದ ಉಪ್ಪಿನಂಶವನ್ನು ಸಮತೋಲನದಲ್ಲಿಡುತ್ತದೆ. ಆ ನೀರನ್ನು ನೀವು ತಡೆದರೆ ಕರಾವಳಿಯ ಅಂತರ್ಜಲ ವಿಷವಾಗುತ್ತದೆ. ಹಳೆಯ ಅಂಕಿ-ಅಂಶಗಳನ್ನು ಇಟ್ಟುಕೊಂಡು ಇಂತಹ ಬೃಹತ್ ಯೋಜನೆಗಳಿಗೆ ಮುಂದಾಗುವುದು ಸರಿಯಲ್ಲ. ತಜ್ಞರು ಮತ್ತು ಸ್ಥಳೀಯರ ಅಭಿಪ್ರಾಯಕ್ಕೆ ಬೆಲೆ ನೀಡಬೇಕು” ಎಂದರು.
ಇದನ್ನೂ ಓದಿ: ಶಿರಸಿ | ಅಂತರ ಜಿಲ್ಲಾ ಜಾನುವಾರು ಕಳ್ಳರ ಬಂಧನ; ಆರು ಆರೋಪಿಗಳು ಪೊಲೀಸರ ವಶಕ್ಕೆ
ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು, “ನದಿಗಳು ಕೇವಲ ನೀರಿನ ಮೂಲಗಳಲ್ಲ, ಅವು ಭಗವಂತನ ಸೃಷ್ಟಿಯ ಜೀವಿಗಳು. ಹರಿಯುವ ನದಿಗೆ ತನ್ನದೇ ಆದ ಸ್ವಾತಂತ್ರ್ಯವಿದೆ. ನದಿಗಳನ್ನು ದೇವತೆಯ ಸ್ಥಾನದಲ್ಲಿ ಕಾಣುವ ಸಂಸ್ಕೃತಿ ನಮ್ಮದು. ಮನುಷ್ಯರಿಗೆ ಬದುಕುವ ಹಕ್ಕಿರುವಂತೆ, ನದಿಗಳಿಗೂ ತಮ್ಮ ನೈಸರ್ಗಿಕ ಹಾದಿಯಲ್ಲಿ ಹರಿಯುವ ಹಕ್ಕಿದೆ. ನದಿಗಳಿಗೂ ‘ಬದುಕುವ ಸ್ವಾತಂತ್ರ್ಯ’ ನೀಡುವ ಕಾನೂನು ಜಾರಿಗೆ ಬರಬೇಕು. ಅವುಗಳನ್ನು ಕಟ್ಟಿ ಹಾಕುವುದು ಅಥವಾ ಬಲವಂತವಾಗಿ ತಿರುಗಿಸುವುದು ಪ್ರಕೃತಿ ವಿರೋಧಿ ಕೆಲಸ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದ್ಯ ಸರ್ಕಾರ ಇಷ್ಟೆಲ್ಲಾ ಭರವಸೆ ನೀಡುತ್ತಿದ್ದರೂ, ಸ್ಥಳೀಯ ರಾಜಕೀಯ ನಾಯಕರ ನಿಲುವು ಮತ್ತು ಬದ್ಧತೆ ಬೇರೆಯದ್ದೇ ಆಗಿದೆ. ಸ್ಥಳೀಯ ನಾಗರಿಕರ ಅಭಿಮತವೂ ಈ ಯೋಜನೆಯ ಪರವಾಗಿ ಇದ್ದಂತಿಲ್ಲ. ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ನಿಲುವಿಗಿಂತ ಹೆಚ್ಚಾಗಿ ತಮ್ಮ ಜಿಲ್ಲೆಯ ಜನರ ಪರವಾಗಿ ನಿಂತಿದ್ದಾರೆ. ಹೀಗಾಗಿ ಇದು ಕೇವಲ ಪಕ್ಷಗಳ ನಡುವಿನ ಹೋರಾಟವಾಗಿ ಉಳಿಯದೆ ‘ಪ್ರಾದೇಶಿಕ ಹಿತಾಸಕ್ತಿ’ಗಳ ನಡುವಿನ ದೊಡ್ಡ ಜಿದ್ದಾಜಿದ್ದಿಯಾಗಿ ಮಾರ್ಪಟ್ಟಿದೆ. ಸರ್ಕಾರವೂ ಜಿದ್ದಿಗೆ ಬೀಳದೆ, ಕೂಡಲೇ ಸಮಿತಿಯೊಂದನ್ನು ರಚಿಸಬೇಕಿದೆ. ಸಾರ್ವಜನಿಕರ, ಪರಿಸರ ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ.




