ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ದೇಶದಲ್ಲಿ ಈ ಹಿಂದಿಗಿಂತ ಅಧಿಕ ಗೋಮಾಂಸವನ್ನು ರಫ್ತು ಮಾಡಲಾಗುತ್ತಿದೆ. ನಮ್ಮ ದೇಶದ ಗೋಮಾಂಸ ರಫ್ತಿನಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ, ಬೆಂಗಳೂರು ವಿಶ್ವ ಗೋರಕ್ಷಾ ಮಹಾಪೀಠದ ದಯಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ತಾವು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಗೋಮಾಂಸ ರಫ್ತು ಮತ್ತು ಗೋಹತ್ಯೆ ನಿಷೇಧಿಸದ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದ ಮೋದಿ ಅವರು ಈಗ ಮೂರು ಬಾರಿ ಪ್ರಧಾನಿಯಾಗಿದ್ದಾರೆ. ಆದರೂ ಗೋಹತ್ಯೆಯನ್ನು ನಿಷೇಧ ಮಾಡಿಲ್ಲ. ಅಷ್ಟು ಮಾತ್ರವಲ್ಲದೆ ಅವರ ಅವಧಿಯಲ್ಲಿಯೇ ಮೊದಲಿಗಿಂತ ಅಧಿಕ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದೆ. ಆರ್‌ಎಸ್‌ಎಸ್ ಕೂಡಾ ಈ ವಿಚಾರದಲ್ಲಿ ಮಾತನಾಡುತ್ತಿಲ್ಲ” ಎಂದು ಟೀಕಿಸಿದರು.
ಇದನ್ನು ಓದಿದ್ದೀರಾ? ಗೋಮಾಂಸ ಸಾಗಾಟ | ಸುಲಿಗೆಕೋರರೂ ಸೇರಿ ಸುಲಿಗೆಗೊಳಗಾದವರೂ ಬಂಧನ!
“ದೇಶದಲ್ಲಿ ಪ್ರತಿದಿನ ಗೋವಂಶದ ಪ್ರಾಣಿಗಳನ್ನು ಹತ್ಯೆ ಮಾಡಿ ಅದರ ಮಾಂಸ, ಚರ್ಮ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದ್ದು, ಇದು ಕಳವಳಕಾರಿ. ಅಂಹಿಸೆ ತತ್ವ ಬೋಧಿಸುವ ನಾವು ಮಾಡಿ ಮಾಂಸ ರಫ್ತು ಮಾಡಿ ವಿಶ್ವವನ್ನೇ ಮಾಂಸಹಾರಿ ಮಾಡಲು ಮುಂದಾಗಿದ್ದೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದರೆ ಕೇಂದ್ರ ಸರ್ಕಾರ ಯಾಕೆ ಗೋಹತ್ಯೆ ನಿಷೇಧಿಸುತ್ತಿಲ್ಲ” ಎಂದು ಪ್ರಶ್ನಿಸಿದರು. ಹಾಗೆಯೇ ಪ್ರಧಾನಿ ಈಗಲಾದರೂ ಗೋಮಾಂಸ ರಫ್ತು ನಿಷೇಧಿಸಬೇಕು, ದೇಶವನ್ನು ಮಾಂಸ ರಫ್ತು ಮುಕ್ತ ದೇಶವನ್ನಾಗಿಸಬೇಕು ಎಂದು ಒತ್ತಾಯಿಸಿದರು.
ಗೋಮಾಂಸ ಸೇವನೆಯನ್ನು ರಾಜಕೀಯಗೊಳಿಸಿರುವ ಬಿಜೆಪಿ ಸರ್ಕಾರಗಳು ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಿಸಿದೆ. ಆದರೆ ದೇಶದಲ್ಲಿ ಗೋಮಾಂಸ ರಫ್ತು ಮಾತ್ರ ಹೆಚ್ಚಳವಾಗುತ್ತಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಗೋಮಾಂಸ ರಫ್ತು ಮಾಡುವ ದೇಶಗಳಲ್ಲಿ ಒಂದಾಗಿದ್ದು ಮೂರನೇ ಸ್ಥಾನದಲ್ಲಿದೆ.
ಎಮ್ಮೆ ಮಾಂಸ ರಫ್ತು 2024ರಿಂದ 2025ರ ವೇಳೆಗೆ ಶೇ.4ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಅಂದರೆ 1.65 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ರಫ್ತು ದಾಖಲಾಗುವ ಸಾಧ್ಯತೆಯಿದೆ. ಇದರಿಂದ ಕೇಂದ್ರ ಸರ್ಕಾರ ಉತ್ತಮ ಆದಾಯವನ್ನೂ ಗಳಿಸುತ್ತಿದೆ. ಹಣಕಾಸು ವರ್ಷ 2024-25ರಲ್ಲಿ $3.92 ಶತಕೋಟಿಗೂ ಹೆಚ್ಚು ಕೇಂದ್ರದ ಬೊಕ್ಕಸಕ್ಕೆ ಸೇರಿದೆ. ಆದರೆ ದೇಶದಲ್ಲಿ ಮಾತ್ರ ಬಿಜೆಪಿ ಆಹಾರದ ಹಕ್ಕಿಗೆ ಧಕ್ಕೆ ತಂದು ರಾಜಕೀಯ ಮಾಡುತ್ತಿರುವುದು ವಿಪಕ್ಷಗಳ ಟೀಕೆಗೆ ಕಾರಣವಾಗಿದೆ.





